ಕರ್ನಾಟಕ

karnataka

ಮೂವರು ಡಿಸಿಎಂ ಆಯ್ಕೆ ವಿಚಾರ ಹೈಕಮಾಂಡ್ ಮುಂದೆ ಇಲ್ಲ: ಪ್ರಿಯಾಂಕ್ ಖರ್ಗೆ

By ETV Bharat Karnataka Team

Published : Sep 16, 2023, 3:40 PM IST

Updated : Sep 16, 2023, 5:22 PM IST

ಸಾಮಾಜಿಕ ಜಾಲತಾಣದಲ್ಲಿ ಸುಳ್ಳಿನ ಕಂತೆಗಳು ಹರಿದಾಡಬಾರದು ಎಂದು ಕಾನೂನು ತರಲು ಯೋಚಿಸಿದ್ದೇವೆ ಎಂದು ಸಚಿವ ಪ್ರಿಯಾಂಕ್​ ಖರ್ಗೆ ತಿಳಿಸಿದರು.

minister-priyank-kharge-reaction-on-minister-rajanna-statement
ಮೂವರು ಡಿಸಿಎಂ ಆಯ್ಕೆ ವಿಚಾರ ಹೈಕಮಾಂಡ್ ಮುಂದೆ ಇಲ್ಲ: ಪ್ರಿಯಾಂಕ್ ಖರ್ಗೆ

ಸಚಿವ ಪ್ರಿಯಾಂಕ್​ ಖರ್ಗೆ

ಕಲಬುರಗಿ: ಮೂವರು ಡಿಸಿಎಂ ಆಯ್ಕೆ ವಿಚಾರ ಕಾಂಗ್ರೆಸ್​ ಹೈಕಮಾಂಡ್ ಮುಂದೆ ಇಲ್ಲ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್​ ಖರ್ಗೆ ಹೇಳಿದರು. ನಗರದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೂರು ಜನ ಉಪಮುಖ್ಯಮಂತ್ರಿಗಳನ್ನು ಮಾಡಬೇಕು ಎನ್ನುವ ಸಚಿವ ರಾಜಣ್ಣ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ಅದು ರಾಜಣ್ಣ ಅವರ ವೈಯಕ್ತಿಕ ಅಭಿಪ್ರಾಯವಾಗಿದೆ. ಎಲ್ಲರಿಗೂ ಹೈಕಮಾಂಡ್ ಮುಂದೆ ತಮ್ಮ ಅಭಿಪ್ರಾಯ ಹೇಳಲು ಸ್ವಾತಂತ್ರ್ಯವಿದೆ. ಹೀಗಾಗಿ, ಮೂವರು ಡಿಸಿಎಂ ಅಂತಾದರೂ ಹೇಳಲಿ ಐವರು ಡಿಸಿಎಂ ಅಂತಾದರೂ ಹೇಳಲಿ, ಅದು ಅವರಿಗೆ ಬಿಟ್ಟದ್ದು. ಆದರೆ ನನಗೆ ಗೊತ್ತಿರುವ ಮಾಹಿತಿಯ ಪ್ರಕಾರ ಹೈಕಮಾಂಡ್ ಮುಂದೆ ಇಂತಹ ಯಾವುದೇ ಪ್ರಸ್ತಾವನೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ಕೇಂದ್ರಿಯ ವಿವಿಯಲ್ಲಿ ವಿವೇಕಾನಂದರಿಗೆ ಅವಮಾನ ವಿಚಾರ ಕುರಿತು ಮಾತನಾಡಿ, ಕೇಂದ್ರಿಯ ವಿವಿ ವಿದ್ಯಾಭ್ಯಾಸ ಬಿಟ್ಟು ಎಲ್ಲಾ ಮಾಡ್ತಿದೆ. ನಾನು ಆದಷ್ಟು ಬೇಗ ವಿವಿಗೆ ಭೇಟಿ ನೀಡ್ತೇನೆ. ಸೆಂಟ್ರಲ್ ವಿವಿಯಲ್ಲಿ ಕಲಬುರಗಿಗಿಂತ ಹೆಚ್ಚು ರಾಜಕೀಯ ನಡೆದಿದೆ. ವಿವಿಯವರು ಕೇಂದ್ರಕ್ಕೆ ಸಂಬಂಧ ಇದ್ದಿವಿ ಎಂದು ಅಂದುಕೊಂಡಿರಬಹುದು. ಆದರೆ ರಾಜ್ಯ ಸರ್ಕಾರ ಅದಕ್ಕೆ ಸಾಕಷ್ಟು ಸೌಲಭ್ಯಗಳನ್ನು ಕೊಟ್ಟಿದೆ. ನಾನು ಒಂದು ಸಾರಿ ಹೇಳಿದ್ದೆ, ಆದರೂ ತಿದ್ದುಕೊಂಡಿಲ್ಲ ಎಂದರು.

ಇನ್ನೊಂದು ಸಾರಿ ತಿಳಿ ಹೇಳ್ತೆನೆ. ಸೆಂಟ್ರಲ್ ವಿವಿಯಲ್ಲಿ ಆರ್​ಎಸ್​ಎಸ್ ಕಚೇರಿ ತೆರಯೋದಕ್ಕೆ ಬಿಡೋದಿಲ್ಲ. ನಮ್ಮ ಮಕ್ಕಳಿಗೆ ಒಳ್ಳೆ ವಿದ್ಯಾಭ್ಯಾಸ ಕೊಡೋದಕ್ಕೆ ವಿವಿ ತರಿಸಿರೋದು ಹೊರತು ಆರ್​ಎಸ್​ಎಸ್​ ಕಚೇರಿ ಸಲುವಾಗಿ ಅಲ್ಲ. ಯಾವ್ಯಾವ ಉದ್ದೇಶಗಳಿಗೆ ಸಂಸ್ಥೆ ತೆರೆದಿದೆ. ಅದನ್ನು ಪಾಲನೆ ಮಾಡಲಿ. ಪೊಲೀಸ್ ಠಾಣೆಯಲ್ಲಿ ಕೇಸರಿ ಶಾಲು ಹಾಕಿಕೊಂಡಿದ್ದಾರೆ. ಶಾಖೆಗಳು ಕಳೆದ ಒಂಭತ್ತು ವರ್ಷಗಳಲ್ಲಿ ಬಹಳಷ್ಟು ತೆರೆದಿವೆ. ಆರ್​ಎಸ್​ಎಸ್​ ತತ್ವ ನಂಬಿ ಯಾರು ಉದ್ಧಾರ ಆಗಿದ್ದಾರೆ?. ಆರ್​ಎಸ್​ಎಸ್ ತತ್ವದ ಬಗ್ಗೆ ಮಾತಾಡೋದಕ್ಕೆ ನಾನೇನು ಹೇದರೋದಿಲ್ಲ. ಆರ್​ಎಸ್​ಎಸ್​ ತತ್ವದಿಂದ ದೇಶ ಉದ್ಧಾರ ಆಗೋದಿಲ್ಲ ಎಂದು ಸಚಿವ ಖರ್ಗೆ ವಾಗ್ದಾಳಿ ನಡೆಸಿದರು.

ಸಾಮಾಜಿಕ ಜಾಲತಾಣದಲ್ಲಿ ಸುಳ್ಳಿನ ಕಂತೆಗಳು ಹರಿದಾಡಬಾರದು ಎಂದು ಕಾನೂನು ತರಲು ಯೋಚಿಸಿದ್ದೇವೆ. ನಾವೇನು ಮೋದಿ, ಅಮಿತ್ ಶಾ ತರಹ ರಾತ್ರೋರಾತ್ರಿ ಕದ್ದು ಮುಚ್ಚಿ ಜಾರಿಗೆ ತರ್ತಿಲ್ಲ. ಇದರಿಂದ ಬಿಜೆಪಿಯವರು ವಾಕ್ ಸ್ವಾತಂತ್ರ್ಯ ಹೋಗುತ್ತೆ ಅಂತಿದ್ದಾರೆ. ಸುಳ್ಳು ಸುದ್ದಿಗೆ ಕಡಿವಾಣ ಹಾಕೋದನ್ನು ಮಾಧ್ಯಗಳು ಸ್ವಾಗತ ಮಾಡುತ್ತಿವೆ. ಆದರೆ ಬಿಜೆಪಿಗೆ ಯಾಕೆ ಆತಂಕ ಕಾಡುತ್ತಿದೆ?. ಬಿಜೆಪಿಯವರ ಬಳಿ ಸುಳ್ಳಿನ ಸುದ್ದಿಯ ಫ್ಯಾಕ್ಟರಿ ಇದೆಯಾ?. ನಾವು ರಾತ್ರೋರಾತ್ರಿ ಕಾನೂನು ತರ್ತಿಲ್ಲ. ಎಲ್ಲರ ಸಲಹೆ ಸಹ ಕೇಳಿದ್ದಿವಿ. ಬಿಜೆಪಿಯವರಿಗೆ ಯಾಕೆ ಆತಂಕ ಆಗ್ತಿದೆಯೋ?. ನಿಮ್ಮವರು ಯಾರಾದ್ರೂ ಜೈಲಿಗೆ ಹೋಗ್ತಾರೆ ಅಂತ ಭಯಾನಾ? ಎಂದು ಪ್ರಿಯಾಂಕ್​ ಖರ್ಗೆ ಪ್ರಶ್ನಿಸಿದರು.

ಚೈತ್ರಾ ಕುಂದಾಪುರ ಗ್ಯಾಂಗ್ ಬಂಧನ ಪ್ರಕರಣದ ಕುರಿತು ಮಾತನಾಡಿ, ಎಲ್ಲಾರು ಯಾಕೆ ಕುಮಾರ ಕೃಪಾದಿಂದಲೇ ಆಪರೇಟ್ ಆಗಿರೋದು?. ಇದೇ ಚೈತ್ರಾ ಕುಂದಾಪುರ ಆರಗ ಜ್ಞಾನೇಂದ್ರ ಅವರ ಕ್ಷೇತ್ರದಲ್ಲಿ ಅಬ್ಬರದ ಭಾಷಣ ಮಾಡಿದ್ದರು. ಚುನಾವಣೆಯಲ್ಲಿ ಸ್ಟಾರ್ ಕ್ಯಾಂಪೇನರ್ ಆಗಿದ್ದರು ಎಂದು ಅವರು ವ್ಯಂಗ್ಯವಾಡಿದರು.

ಇದನ್ನೂ ಓದಿ:'ಗ್ಯಾರಂಟಿಗಳನ್ನು ಕೊಟ್ಟೆವೆಂದು ಬೀಗುತ್ತಿರುವ ಕಾಂಗ್ರೆಸ್ ಸರ್ಕಾರಕ್ಕೆ ರೈತನ ಬದುಕಿಗೆ ಗ್ಯಾರಂಟಿ ಕೊಡಲು ಸಾಧ್ಯವಿಲ್ಲವೇ?': ಹೆಚ್​ಡಿಕೆ ಪ್ರಶ್ನೆ

Last Updated : Sep 16, 2023, 5:22 PM IST

ABOUT THE AUTHOR

...view details