ಕರ್ನಾಟಕ

karnataka

ಕಲಬುರಗಿ: ಪಿಎಂ ಮಿತ್ರ ಮೆಗಾ ಟೆಕ್ಸ್​ಟೈಲ್ ಪಾರ್ಕ್‌ ಕಾಮಗಾರಿಗೆ ಚಾಲನೆ ನೀಡಿದ ಸಿಎಂ​​

By

Published : Mar 29, 2023, 8:13 AM IST

ಲಕ್ಷಾಂತರ ಕೈಗಳಿಗೆ ಉದ್ಯೋಗ ಕಲ್ಪಿಸಬಹುದಾದ 'ಪಿಎಂ ಮಿತ್ರ ಮೆಗಾ ಟೆಕ್ಸ್​ಟೈಲ್ ಪಾರ್ಕ್' ನಿರ್ಮಾಣ ಕಾಮಗಾರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು.

CM Bommai launches PM Mitra Mega Textile Park
ಮೆಗಾ ಟೆಕ್ಸ್​ಟೈಲ್ ಪಾರ್ಕ್ ನಿರ್ಮಾಣ ಕಾಮಗಾರಿಗೆ ಸಿಎಂ ಚಾಲನೆ

ಮೆಗಾ ಟೆಕ್ಸ್​ಟೈಲ್ ಪಾರ್ಕ್ ನಿರ್ಮಾಣ ಕಾಮಗಾರಿಗೆ ಸಿಎಂ ಚಾಲನೆ

ಕಲಬುರಗಿ: ವಿಧಾನಸಭೆ ಚುನಾವಣೆಗೂ ಮುನ್ನ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತವರು ಕ್ಷೇತ್ರದಲ್ಲಿ ಅಭಿವೃದ್ಧಿ ಮೂಲಕ ಕಾಂಗ್ರೆಸ್​ ಪಕ್ಷವನ್ನು ಕಟ್ಟಿ ಹಾಕಲು ಮುಂದಾಗಿರುವ ಬಿಜೆಪಿ 'ಪ್ರಧಾನಿ ಮೋದಿ ಮೆಗಾ ಟೆಕ್ಸ್​ಟೈಲ್ ಪಾರ್ಕ್' ಕಾಮಗಾರಿಗೆ ಮಂಗಳವಾರ ಚಾಲನೆ ಕೊಟ್ಟಿದೆ. ಪ್ರತಿ ವರ್ಷ ಈ ಭಾಗದಿಂದ ದುಡಿಯಲು ದೂರದ ಮುಂಬೈ, ಹೈದರಾಬಾದ್, ಪುಣೆ ಸೇರಿದಂತೆ ವಿವಿಧೆಡೆ ಗುಳೆ ಹೋಗುವ ಜನರ ಕೈಗಳಿಗೆ ಉದ್ಯೋಗ ನೀಡಲೆಂದು ಪಿಎಂ ಮಿತ್ರ ಯೋಜನೆಯಡಿ ಕಲಬುರಗಿ ಸೇರಿದಂತೆ ದೇಶದ ಏಳು ಕಡೆಗಳಲ್ಲಿ ಮೆಗಾ ಟೆಕ್ಸ್​ಟೈಲ್ ಪಾರ್ಕ್‌ ಸ್ಥಾಪನೆಗೆ ಕೇಂದ್ರ ಈಗಾಗಲೇ ಮಂಜೂರಾತಿ ನೀಡಿದೆ. ಅದರಂತೆ ಕಲಬುರಗಿ ‌ನಗರದ ಪಿಡಿಎ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ಸಮಾರಂಭದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಮೆಗಾ ಟೆಕ್ಸ್​ಟೈಲ್ ಪಾರ್ಕ್ ನಿರ್ಮಾಣ ಕೆಲಸಕ್ಕೆ ಚಾಲನೆ ಕೊಟ್ಟರು.

ಕಲಬುರಗಿ ತಾಲೂಕಿನ ಹೊನ್ನಕಿರಣಗಿ ಗ್ರಾಮದ ಬಳಿ ಒಂದು ಸಾವಿರ ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಲಿರುವ ಟೆಕ್ಸ್​ಟೈಲ್ ಪಾರ್ಕ್​ನಲ್ಲಿ 2 ಸಾವಿರ ಕೋಟಿ ರೂಪಾಯಿಗೂ ಅಧಿಕ ಬಂಡವಾಳ ಹೂಡಿಕೆ ಮಾಡಲು ಉದ್ದಿಮೆದಾರರು ಮುಂದೆ ಬಂದಿದ್ದಾರೆ. ಪಾರ್ಕ್‌ ಸ್ಥಾಪನೆಯಾದ ನಂತರ 10 ಸಾವಿರ ಕೋಟಿಗೂ ಅಧಿಕ ಬಂಡವಾಳ ಹೂಡಿಕೆಯಾಗುವ ನಿರೀಕ್ಷೆಯಿದೆ. ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, "ಕಲಬುರಗಿ ಜಿಲ್ಲೆಗೆ ಟೆಕ್ಸ್​ಟೈಲ್ ಪಾರ್ಕ್ ತರಲು ಸಾಕಷ್ಟು ಪ್ರಯತ್ನ‌ಪಟ್ಟಿದ್ದೇನೆ. ಪ್ರಧಾನಿಗಳ ಆಶೀರ್ವಾದದಿಂದ ಜಿಲ್ಲೆಗೆ ಟೆಕ್ಸ್​ಟೈಲ್ ಪಾರ್ಕ್ ಸಿಕ್ಕಿದೆ. ಅದಕ್ಕಾಗಿ ಪ್ರಧಾನಿ ಮೋದಿ ಅವರಿಗೆ ವಿಶೇಷ ಧನ್ಯವಾದ" ಎಂದು ಹೇಳಿದರು.

7 ಕಡೆ ಟೆಕ್ಸ್​ಟೈಲ್ ಪಾರ್ಕ್:ಬಳಿಕ ಮಾತನಾಡಿದ ಸಚಿವ ಮುರುಗೇಶ್ ನಿರಾಣಿ, "ಈ ಭಾಗದಲ್ಲಿ 31 ಲಕ್ಷ ಟನ್ ಹತ್ತಿ ಉತ್ಪಾದನೆ ಮಾಡುತ್ತಿದ್ದು, ಇನ್ನು ಮುಂದೆ ಹೊರ ರಾಜ್ಯಗಳಿಗೆ ಹತ್ತಿ ರಫ್ತು ಮಾಡುವುದು ತಪ್ಪುತ್ತದೆ. ದೇಶದಲ್ಲಿ ಏಳು ಟೆಕ್ಸ್​ಟೈಲ್ ಪಾರ್ಕ್​ಗಳಿಗೆ ಮಂಜೂರಾತಿ ಸಿಕ್ಕಿದೆ. ಕರ್ನಾಟಕದಲ್ಲಿ ಟೆಕ್ಸ್​ಟೈಲ್ ಪಾರ್ಕ್ ನಿರ್ಮಾಣಕ್ಕೆ ಸಿಎಂ ಚಾಲನೆ ನೀಡಿದ್ದು ಸಂತಸ ತಂದಿದೆ" ಎಂದರು.

ವಲಸೆ ತಡೆಗೆ ಕ್ರಮ: "ಕಲಬುರಗಿ ಹಿಂದುಳಿದ ಪ್ರದೇಶ. ಪ್ರತಿ ವರ್ಷ ಇಲ್ಲಿಂದ ಉದ್ಯೋಗ ಅರಸಿ ಗೋವಾ, ಬೆಂಗಳೂರು, ಮುಂಬೈ ಕಡೆ ವಲಸೆ ಹೊರಡುವವರ ಸಂಖ್ಯೆ ಹೆಚ್ಚಿದೆ. ಅಲ್ಲಿ ಕಟ್ಟಡ ನಿರ್ಮಾಣದಂತಹ ಕೆಲಸದಲ್ಲಿ ಮಕ್ಕಳೊಂದಿಗೆ ಜೀವನ ಕಟ್ಟಿಕೊಳ್ಳಲು ಜನ ಹೆಣಗಾಡುತ್ತಾರೆ. ಆದರೆ ಟೆಕ್ಸ್​ಟೈಲ್ ಪಾರ್ಕ್ ಪ್ರಾರಂಭದಿಂದ ವಲಸೆ ತಡೆಯಬಹುದು. ಇದು ಇಲ್ಲಿನ ಜನರ ಬದುಕಿಗೆ ಭದ್ರತೆ ಒದಗಿಸುವ ಮತ್ತು ಲಕ್ಷಾಂತರ ಜನರ ಬದುಕು ಬದಲಾಯಿಸಲಿದೆ" ಎಂದು ಹೇಳಿದರು.

10 ಸಾವಿರ ಕೋಟಿ ರೂ. ಹೂಡಿಕೆ: "ದೇಶಾದ್ಯಂತ 12 ರಾಜ್ಯಗಳಿಂದ ಟೆಕ್ಸ್​ಟೈಲ್ ಪಾರ್ಕ್ ಸ್ಥಾಪನೆಗೆ ಪ್ರಸ್ತಾವನೆ ಬಂದಿದೆ. ಈ ಪೈಕಿ ಕಲಬುರಗಿ ಸೇರಿದಂತೆ 7 ಕಡೆ ಸ್ಥಾಪಿಸಲು ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅನುಮೋದಿಸಿದೆ. ಕೇಂದ್ರದಿಂದ ಈ 7 ಟೆಕ್ಸ್​ಟೈಲ್ ಪಾರ್ಕ್‍ಗಳಿಗೆ ತಲಾ 800 ಕೋಟಿ ರೂ. ಗಳಂತೆ 2027-28ರ ವರೆಗೆ ಒಟ್ಟಾರೆ 4,400 ಕೋಟಿ ರೂ. ಮೂಲಸೌಕರ್ಯ ಅಭಿವೃದ್ಧಿಗೆ ನೀಡಲಾಗುತ್ತದೆ. ಕಲಬುರಗಿಯಲ್ಲಿ 10 ಸಾವಿರ ಕೋಟಿ ರೂ. ಹೂಡಿಕೆಯ ನಿರೀಕ್ಷೆಯಿದೆ. ಇದರಿಂದ ಪ್ರತ್ಯಕ್ಷ ಮತ್ತು ಪರೋಕ್ಷ 3 ಲಕ್ಷ ಉದ್ಯೋಗ ಸ್ಥಳೀಯರಿಗೆ ಸಿಗಲಿದೆ" ಎಂದು ಕೇಂದ್ರದ ರೈಲ್ವೆ ಮತ್ತು ಜವಳಿ ಖಾತೆ ರಾಜ್ಯ ಸಚಿವೆ ದರ್ಶನ ವಿ. ಜರ್ದೋಶ್ ಹೇಳಿದರು.

1,900 ಕೋಟಿ ರೂ. ಹೂಡಿಕೆಗೆ ಒಪ್ಪಂದ: ಶಾಹಿ ಎಕ್ಸ್‌ಪೋರ್ಟ್ ಮತ್ತು ಹೀಮತ್‍ಸಿಂಗ್ಕಾ ಸೈಡ್ ಲಿ. ಕಂಪನಿ ತಲಾ 500 ಕೋಟಿ ರೂ., ಟೆಕ್ಸ್‌ಪೋರ್ಟ್ ಇಂಡಸ್ಟ್ರಿ, ಕೆ.ಪಿ.ಆರ್.ಮಿಲ್ಸ್ ಲಿ. ಹಾಗೂ ಪ್ರತಿಭಾ ಸಿಂಟೆಕ್ಸ್ ಕಂಪನಿ ತಲಾ 200 ಕೋಟಿ ರೂ., ಗೋಕುಲ ದಾಸ್ ಎಕ್ಸ್‌ಪೋರ್ಟ್ ಮತ್ತು ಇಂಡಿಯನ್ ಡಿಸೈನ್ಸ್ ಕಂಪನಿ ತಲಾ 100 ಕೋಟಿ ರೂ. ಹಾಗೂ ಸೂರ್ಯವಂಶಿ ಪ್ರೈ.ಲಿ ಮತ್ತು ಸೋನಲ್ ಅಪ್ಪಾರೆಲ್ಸ್ ಲಿ. ಕಂಪನಿ ತಲಾ 50 ಕೋಟಿ ರೂ. ಹೂಡಿಕೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮಕ್ಷಮದಲ್ಲಿ ಇಲಾಖೆಯ ಅಧಿಕಾರಿಗಳೊಂದಿಗೆ ಎಂಓಯು(ಪ್ರಸ್ತಾವಿತ ತಿಳುವಳಿಕೆಯ ಒಪ್ಪಂದ) ವಿನಿಮಯ ಮಾಡಿಕೊಂಡರು.

ಇದನ್ನೂ ಓದಿ:ಮಾರ್ಚ್ 25, 26ರಂದು ನಮ್ಮ ಬೆಂಗಳೂರು ಹಬ್ಬ: ಕಲೆ, ಸಿನಿಮಾ, ಆಹಾರ ಮೇಳ ಆಯೋಜನೆ

ABOUT THE AUTHOR

...view details