ಕರ್ನಾಟಕ

karnataka

ಬ್ಯಾಡಗಿ ಮಾರುಕಟ್ಟೆಗೆ ಹೆಚ್ಚಿದ ಮೆಣಸಿನಕಾಯಿ ಆವಕ; ದರ ಕುಸಿತದಿಂದ ರೈತರಿಗೆ ಸಂಕಷ್ಟ

By ETV Bharat Karnataka Team

Published : Jan 4, 2024, 10:25 PM IST

Updated : Jan 5, 2024, 2:26 PM IST

ಬರದ ನಡುವೆಯೂ ಬ್ಯಾಡಗಿಯ ಮಾರುಕಟ್ಟೆಗೆ ಹೆಚ್ಚು ಮೆಣಸಿನಕಾಯಿ ಪೂರೈಕೆಯಾಗಿದೆ. ಪರಿಣಾಮ ಮೆಣಸಿನಕಾಯಿ ದರ ಕಡಿಮೆಯಾಗಿದೆ.

Etv Bharat
Etv Bharat

ಮೆಣಸಿನಕಾಯಿ ದರ ಕುಸಿತದಿಂದ ರೈತರಿಗೆ ಸಂಕಷ್ಟ

ಹಾವೇರಿ :ರಾಜ್ಯದಲ್ಲಿ ಮುಂಗಾರು ಮತ್ತು ಹಿಂಗಾರು ಮಳೆ ಕೈಕೊಟ್ಟಿರುವುದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಜ್ಯದಲ್ಲಿ ಬರದ ಪರಿಸ್ಥಿತಿಯಿದ್ದು, ಪರಿಹಾರ ನೀಡುವಂತೆ ರೈತರು ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ. ಇನ್ನೊಂದೆಡೆ ಮಳೆ ಕೈ ಕೊಟ್ಟರೂ ಜಿಲ್ಲೆಯ ಬ್ಯಾಡಗಿಯಲ್ಲಿರುವ ಮೆಣಸಿಕಾಯಿ ಮಾರುಕಟ್ಟೆಗೆ ಪೂರೈಕೆ ಹೆಚ್ಚಳವಾಗಿದೆ. ಇದರಿಂದ ಮೆಣಸಿನಕಾಯಿ ದರ ಇಳಿಕೆಯಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ವರ್ತಕರ ಸಂಘದ ಅಧ್ಯಕ್ಷ ಸುರೇಶ್​ ಗೌಡ ಪಾಟೀಲ್​, ವರ್ಷದಿಂದ ವರ್ಷಕ್ಕೆ ಮೆಣಸಿನಕಾಯಿ ಬೆಳೆಯುವ ರೈತರ ಸಂಖ್ಯೆ ಹೆಚ್ಚಾಗುತ್ತಿದೆ. ಜೊತೆಗೆ ಹೆಚ್ಚಿನ ಪ್ರದೇಶದಲ್ಲಿ ಮೆಣಸಿನಕಾಯಿಯನ್ನು ಬೆಳೆಯಲಾಗುತ್ತಿದೆ. ಕಳೆದ ವರ್ಷ ಬೆಳೆದ ಮೆಣಸಿನಕಾಯಿಯನ್ನು ಕೋಲ್ಡ್ ಸ್ಟೋರೇಜ್​ನಲ್ಲಿ ಸಂಗ್ರಹಿಸಿಟ್ಟು ಈ ಬಾರಿ ಮಾರಾಟಕ್ಕೆ ತರುತ್ತಿದ್ದಾರೆ. ಕಳೆದ ವರ್ಷ ಅಧಿಕ ಮಳೆಯಿಂದಾಗಿ ಮೆಣಸಿನಕಾಯಿ ಇಳುವರಿ ಮತ್ತು ಗುಣಮಟ್ಟ ಕಡಿಮೆಯಾಗಿತ್ತು. ಈ ಬಾರಿ ಹೆಚ್ಚು ಬಿಸಿಲು ಇದ್ದ ಕಾರಣ ಕಡಿಮೆ ಇಳುವರಿ ಬಂದರೂ ಉತ್ತಮ ಗುಣಮಟ್ಟದ ಬೆಳೆ ಬಂದಿದೆ. ಇದರಿಂದಾಗಿ ಮೆಣಸಿನ ಮಾರುಕಟ್ಟೆ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಎಂದು ಹೇಳಿದರು.

ಬ್ಯಾಡಗಿ ಮೆಣಸಿನ ದರ ಇಳಿಕೆ :ವಾರದಿಂದ ವಾರಕ್ಕೆ ಮೆಣಸಿನಕಾಯಿ ಪೂರೈಕೆ ಅಧಿಕವಾಗುತ್ತಿದೆ. ಇದರಿಂದ ಮೆಣಸಿನಕಾಯಿ ಬೆಲೆ ಇಳಿಕೆಯಾಗುತ್ತಿದೆ. ಪ್ರಸ್ತುತ ಗುರುವಾರದ ಮಾರುಕಟ್ಟೆಗೆ ಸುಮಾರು 93 ಸಾವಿರ ಚೀಲ ಮೆಣಸಿನಕಾಯಿ ಆವಕವಾಗಿದೆ. ಮಾರುಕಟ್ಟೆಗೆ ಮೆಣಸಿನಕಾಯಿಯಲ್ಲಿ ಬ್ಯಾಡಗಿ ಡಬ್ಬಿ ತಳಿ ಸುಮಾರು 20 ಸಾವಿರ ಚೀಲ ಬಂದಿದೆ. ಸಂಕ್ರಾಂತಿ ನಂತರ ಮಾರುಕಟ್ಟೆ ಸ್ಥಿರತೆ ಉಂಟಾಗುತ್ತದೆ ಎಂದರು.

ಕಳೆದ ವರ್ಷಕ್ಕೆ ಹೋಲಿಸಿದರೆ ಬ್ಯಾಡಗಿ ಡಬ್ಬಿ ಮೆಣಸಿನಕಾಯಿ ದರ ಪ್ರತಿ ಕ್ವಿಂಟಾಲ್​ಗೆ 15 ಸಾವಿರಕ್ಕೆ ಇಳಿಕೆಯಾಗಿದೆ. ಬೇರೆ ತಳಿಯ ಮೆಣಸಿನಕಾಯಿ ದರ ಕ್ವಿಂಟಾಲ್‌ಗೆ 7 ಸಾವಿರ ರೂಗೆ ಇಳಿಕೆಯಾಗಿದೆ. ಸಂಕ್ರಾಂತಿ ನಂತರ ಮಾರುಕಟ್ಟೆಗೆ ಸುಮಾರು ಎರಡೂವರೆ ಲಕ್ಷದಿಂದ ಮೂರು ಲಕ್ಷ ಚೀಲದವರೆಗೆ ಆವಕವಾಗುವ ಸಾಧ್ಯತೆ ಇದೆ ಎಂದು ಸುರೇಶಗೌಡ ತಿಳಿಸಿದರು.

ವರ್ತಕ ರಾಜು ಮೊರಗೇರಿ ಮಾತನಾಡಿ, ಗುಜರಾತಿನ ಗೊಂಡಾಲ ತಳಿಯ ಮೆಣಸಿನಕಾಯಿ ರಾಜ್ಯದಲ್ಲಿ ಬೆಳೆಯುವ 2043 ತಳಿಗೆ ಹೋಲಿಕೆಯಾಗುತ್ತಿರುವ ಕಾರಣ ಬ್ಯಾಡಗಿ ಮೆಣಸಿನಕಾಯಿ ದರ ಇಳಿಕೆಯಾಗಿದೆ. ಇದರಿಂದ ಬ್ಯಾಡಗಿ ಮೆಣಸಿನಕಾಯಿ ದರ ಪ್ರತಿ ಕ್ವಿಂಟಾಲ್​ಗೆ 50 ಸಾವಿರದಿಂದ 30 ಸಾವಿರಕ್ಕೆ ಕುಸಿದಿದೆ. ಗೊಂಡಾಲ ತಳಿಯ ಮೆಣಸಿನಕಾಯಿ ದರ ಕ್ವಿಂಟಾಲ್‌ಗೆ 20 ಸಾವಿರಕ್ಕೆ ಕುಸಿದಿದೆ. ಹೋಟೆಲ್ ಉದ್ಯಮಿಗಳು ಮಧ್ಯವರ್ತಿಗಳು ಇದನ್ನು ಹೆಚ್ಚು ಅವಲಂಬಿಸಿರುವುದರಿಂದ ಮೆಣಸಿನಕಾಯಿ ದರ ಕುಸಿತ ಕಂಡಿದೆ ಎಂದು ಮಾಹಿತಿ ನೀಡಿದರು.

ಸಂಕ್ರಾಂತಿ ನಂತರ ಬಳ್ಳಾರಿ, ಕಲಬುರಗಿ, ರಾಯಚೂರು, ಆದೋನಿ, ಮಂತ್ರಾಲಯ ಮತ್ತು ಯಮ್ಮಿಗೆನೂರು ಭಾಗಗಳಿಂದ ಬ್ಯಾಡಗಿ ಮೆಣಸಿನಕಾಯಿ
ಮಾರುಕಟ್ಟೆಗೆ ಬರುತ್ತದೆ. ಈ ವೇಳೆ ಮೆಣಸಿನಕಾಯಿ ದರ ಕುಸಿಯದಿದ್ದರೆ ರೈತರಿಗೆ ಅನುಕೂಲವಾಗುತ್ತದೆ. ಕಳೆದ ವರ್ಷ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ಎರಡು ಸಾವಿರ ಕೋಟಿ ರೂಪಾಯಿ ವಹಿವಾಟು ನಡೆದಿತ್ತು. ಈ ವರ್ಷ ಅದಕ್ಕಿಂತ ಹೆಚ್ಚು ವಹಿವಾಟು ನಡೆಯುವ ಸಾಧ್ಯತೆ ಇದೆ. ಕಳೆದ ವರ್ಷ ರೈತರಿಗೆ ಸ್ವಲ್ಪಮಟ್ಟಿನ ನಷ್ಟವಾಗಿತ್ತು. ಆದರೆ ಈ ವರ್ಷ ನಷ್ಟವಾಗುವ ಸಾಧ್ಯತೆ ಕಡಿಮೆ ಇದೆ ಎಂದು ಹೇಳಿದರು.

ಇದನ್ನೂ ಓದಿ :ಸುಳ್ಯ: ಅಕ್ರಮ ಸಕ್ರಮ ಹಳೆ ಸಮಿತಿ ರದ್ದು, ನೂತನ ಸಮಿತಿ ರಚನೆ

Last Updated :Jan 5, 2024, 2:26 PM IST

ABOUT THE AUTHOR

...view details