ETV Bharat / state

ಸುಳ್ಯ: ಅಕ್ರಮ ಸಕ್ರಮ ಹಳೆ ಸಮಿತಿ ರದ್ದು, ನೂತನ ಸಮಿತಿ ರಚನೆ

author img

By ETV Bharat Karnataka Team

Published : Jan 4, 2024, 6:52 PM IST

ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಈಗಾಗಲೇ ಇದ್ದ ಅಕ್ರಮ ಸಕ್ರಮೀಕರಣ ಸಮಿತಿಯನ್ನು ರದ್ದುಗೊಳಿಸಿ ನೂತನ ಸಮಿತಿಯನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

govt-appointed-new-akrama-sakrama-committee-in-sulya
ಸುಳ್ಯ: ಅಕ್ರಮ ಸಕ್ರಮ ಹಳೆ ಸಮಿತಿ ರದ್ದು, ನೂತನ ಸಮಿತಿ ರಚನೆ

ಸುಳ್ಯ (ದಕ್ಷಿಣಕನ್ನಡ) : ಸುಳ್ಯ ವಿಧಾನಸಭಾ ಕ್ಷೇತ್ರದ ಬಗರ್ ಹುಕುಂ ಸಾಗುವಳಿ ಅಕ್ರಮ ಸಕ್ರಮೀಕರಣ ಸಮಿತಿಯನ್ನು ರದ್ದುಗೊಳಿಸಿ ಅಧ್ಯಕ್ಷರು ಮತ್ತು ನೂತನ ಸದಸ್ಯರನ್ನು ನೇಮಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಸಮಿತಿಯ ಅಧ್ಯಕ್ಷರಾಗಿ ಶಾಸಕಿ ಭಾಗೀರಥಿ ಮುರುಳ್ಯ, ಸದಸ್ಯರುಗಳಾಗಿ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ಕೋಲ್ಚಾರ್, ಕಡಬ ಕಾಂಗ್ರೆಸ್ ನಾಯಕರಾದ ಪಿ.ಪಿ.ವರ್ಗೀಸ್ ಹಾಗೂ ಹೆಚ್. ಆದಂ ಅವರನ್ನು ಸರ್ಕಾರ ನೇಮಿಸಿದೆ.

ಇದಕ್ಕೂ ಹಿಂದೆ ಸರ್ಕಾರ ರಚಿಸಿದ್ದ ಸಮಿತಿಯಲ್ಲಿ ಅಧ್ಯಕ್ಷರಾಗಿ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಕು. ಭಾಗೀರಥಿ ಮುರುಳ್ಯ, ಸದಸ್ಯರಾಗಿ ಬಿಜೆಪಿ ಮಂಡಲ ಸಮಿತಿ ಪ್ರಧಾನ ಕಾರ್ಯದರ್ಶಿ ರಾಕೇಶ್ ರೈ ಕೆಡೆಂಜಿ, ಅರಂತೋಡಿನ ಬಿಜೆಪಿ ನಾಯಕಿ ಶ್ರೀಮತಿ ಭಾರತಿ ಪುರುಷೋತ್ತಮ, ನ್ಯಾಯವಾದಿ ಜಗದೀಶ್ ಡಿ.ಪಿ.ಯವರನ್ನು ನೇಮಿಸಲಾಗಿತ್ತು. ಬಳಿಕ ಕಾಂಗ್ರೆಸ್ ಮುಖಂಡರು ಜಿಲ್ಲಾ ಉಸ್ತುವಾರಿ ಸಚಿವರನ್ನು ಸಂಪರ್ಕಿಸಿ ಈ ಆದೇಶಕ್ಕೆ ತಡೆ ನೀಡುವಂತೆ ಕೋರಿ ಕಾಂಗ್ರೆಸ್ ಬೆಂಬಲಿತ ಸದಸ್ಯರನ್ನು ನೇಮಿಸುವಂತೆ ಒತ್ತಾಯಿಸಿದ್ದರು.

ಅಕ್ರಮ ಸಕ್ರಮ ಸಮಿತಿಗೆ ಸದಸ್ಯರ ಹೆಸರುಗಳನ್ನು ಸೂಚಿಸುವಂತೆ ಸರಕಾರದಿಂದ ತಹಶೀಲ್ದಾರರಿಗೆ ಸುತ್ತೋಲೆ ಬಂದಿತ್ತು. ಅದರಂತೆ ಸುಳ್ಯ, ಕಡಬ, ಪುತ್ತೂರು ಮತ್ತಿತರ ತಾಲೂಕುಗಳ ತಹಶೀಲ್ದಾರರಿಗೂ ಸುತ್ತೋಲೆ ಬಂದಿತ್ತು. ಈ ಸಂಬಂಧ ಕಡಬ ತಹಶೀಲ್ದಾರ್​ ಶಾಸಕಿ ಭಾಗೀರಥಿ ಮುರುಳ್ಯರವರೊಡನೆ ಸಮಾಲೋಚನೆ ನಡೆಸಿ ರಾಜ್ಯ ಸರಕಾರಕ್ಕೆ ಸದಸ್ಯರ ಪಟ್ಟಿಯನ್ನು ಕಳುಹಿಸಿದ್ದರು. ಕಾಂಗ್ರೆಸ್ಸಿಗರು ಪಟ್ಟಿ ಕಳುಹಿಸುವಾಗ ತಡವಾಗಿದ್ದು, ಕಡಬ ತಹಶೀಲ್ದಾರ್ ಕಳುಹಿಸಿದ ಪಟ್ಟಿ ಅಂತಿಮಗೊಂಡಿತ್ತು ಎಂದು ಹೇಳಲಾಗಿದೆ.

ಇದೀಗ 18.12.2023ರ ಅಧಿಸೂಚನೆ ಅನ್ವಯ ಕರ್ನಾಟಕ ಭೂ ಕಂದಾಯ ಅಧಿನಿಯಮ, 1964ರ ಪ್ರಕರಣ 94ಎ(1) ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ವಿಧಾನಸಭಾ ಕ್ಷೇತ್ರದ ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿಯನ್ನು ಈ ಕೂಡಲೇ ಜಾರಿಗೆ ಬರುವಂತೆ ಮುಂದಿನ ಆದೇಶದವರೆಗೆ ಈ ಕೆಳಕಂಡಂತೆ ರಚಿಸಲಾಗಿದೆ ಎಂದು ಸರ್ಕಾರ ಆದೇಶದಲ್ಲಿ ತಿಳಿಸಲಾಗಿದೆ. ಶಾಸಕಿ ಭಾಗೀರಥಿ ಮುರುಳ್ಯ - ಅಧ್ಯಕ್ಷರು, ಸದಸ್ಯರು - ಶ್ರೀ ಹೆಚ್.ಆದಂ, ಶ್ರೀಮತಿ ಗೀತಾ ಕೋಲ್ಚಾರು, ಶ್ರೀ ಪಿ.ಪಿ. ವರ್ಗೀಸ್, ತಾಲ್ಲೂಕಿನ ತಹಶೀಲ್ದಾ‌ರ್‌ ಅವರನ್ನು ಕಾರ್ಯದರ್ಶಿಯನ್ನಾಗಿ ಆಯ್ಕೆ ಮಾಡಿ ಸರ್ಕಾರ ಅಧಿಸೂಚನೆ ಹೊರಡಿಸಿದೆ.

ಇದನ್ನೂ ಓದಿ : ಸುಳ್ಯದಲ್ಲಿ ಬಿಜೆಪಿಗೆ ಒಲಿದ ಅಕ್ರಮ ಸಕ್ರಮ ಸಮಿತಿ: ಕಾಂಗ್ರೆಸ್ ವಲಯದಲ್ಲಿ ಆಕ್ರೋಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.