ಕರ್ನಾಟಕ

karnataka

ಹಾವೇರಿ ನಗರದಲ್ಲಿ 25ಕ್ಕೂ ಹೆಚ್ಚು ಗಣೇಶ ಮೂರ್ತಿ ಸ್ಥಾಪನೆ; ಅದ್ಧೂರಿ ಆಚರಣೆ

By ETV Bharat Karnataka Team

Published : Sep 22, 2023, 9:04 AM IST

ಹಾವೇರಿ ನಗರದಲ್ಲಿ ಸುಮಾರು 25ಕ್ಕೂ ಅಧಿಕ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿ ಸ್ಥಾಪನೆ ಮಾಡಲಾಗಿದೆ.

ganesha chathurthi celebration in haveri
ಹಾವೇರಿಯಲ್ಲಿ 25ಕ್ಕೂ ಹೆಚ್ಚು ಗಣೇಶ ಮೂರ್ತಿ ಸ್ಥಾಪನೆ; ಅದ್ಧೂರಿ ಹಬ್ಬ ಆಚರಣೆ

ಹಾವೇರಿ ನಗರದಲ್ಲಿ 25ಕ್ಕೂ ಹೆಚ್ಚು ಗಣೇಶ ಮೂರ್ತಿ ಸ್ಥಾಪನೆ; ಅದ್ಧೂರಿ ಆಚರಣೆ

ಹಾವೇರಿ:ಏಲಕ್ಕಿ ನಗರಿ ಹಾವೇರಿಯಲ್ಲಿ ಗಣೇಶ ಚತುರ್ಥಿ ಹಬ್ಬ ಜೋರಾಗಿದೆ. 25ಕ್ಕೂ ಅಧಿಕ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿ ಸ್ಥಾಪನೆ ಮಾಡಲಾಗಿದೆ. ಒಂದೊಂದು ಗಣಪತಿಯೂ ಒಂದೊಂದು ರೀತಿಯ ಆಕರ್ಷಣೆ. ಹೂವಿನ ಅಲಂಕಾರದಲ್ಲಿ ವಿಘ್ನವಿನಾಶಕ ಕಂಗೊಳಿಸುತ್ತಿದ್ದಾನೆ. ಸಂಜೆಯಾಗುತ್ತಿದ್ದಂತೆ ಭಕ್ತರು ಆಗಮಿಸಿ ವಕ್ರತುಂಡನ ದರ್ಶನ ಪಡೆಯುತ್ತಿದ್ದಾರೆ.

'ಹಾವೇರಿ ಕಾ ರಾಜಾ':ಹಾವೇರಿಯ ಸುಭಾಸ ಸರ್ಕಲ್‌ನಲ್ಲಿ ಹಾವೇರಿ ಕಾ ರಾಜಾ ಗಣಪತಿ ಸ್ಥಾಪಿಸಲಾಗಿದೆ. ಸವದತ್ತಿ ಯಲ್ಲಮ್ಮ ಮುಡಿಯಲ್ಲಿ ಹೊಂದಿರುವ ವಿನಾಯಕನಿಗೆ ಲಕ್ಷ್ಮಿ ಗಣಪತಿ ಎಂದು ಕರೆಯಲಾಗುತ್ತದೆ. ಪ್ರತಿ ವರ್ಷ ಮಹಾರಾಜ ರೂಪದಲ್ಲಿ ಗಣೇಶ ವಿಗ್ರಹ ಸ್ಥಾಪಿಸುತ್ತಾ ಬರಲಾಗಿದೆ. ಪ್ರಸ್ತುತ ವರ್ಷವೂ ಕೂಡ ಮಹಾರಾಜ ಗಣಪತಿ ಸ್ಥಾಪಿಸಲಾಗಿದ್ದು, ಗಣಪನ ಕಿರೀಟದಲ್ಲಿ ಲಕ್ಷ್ಮಿಯನ್ನು ಇರಿಸಲಾಗಿದೆ. ಗಣೇಶನ ಅಕ್ಕಪಕ್ಕದಲ್ಲಿ ಗರುಡ ದೇವನಿದ್ದರೆ, ಕಾಲುಗಳ ಹತ್ತಿರ ಸಿಂಹಗಳಿವೆ. ಗಣಪತಿ ವಾಹನ ಮೂಷಿಕ ಕೈ ಮುಗಿದುಕೊಂಡು ನಿಂತಿದ್ದು, ಹಾವೇರಿ ಕಾ ರಾಜಾ ಗಣಪತಿ ಭಕ್ತರನ್ನು ಕೈಬೀಸಿ ಕರೆಯುತ್ತಿದೆ.

"ಸುಭಾಸ ಸರ್ಕಲ್‌ನಲ್ಲಿ ಕಳೆದ 30 ವರ್ಷಗಳಿಂದ ಗಣೇಶ ಮೂರ್ತಿ ಸ್ಥಾಪಿಸುತ್ತಾ ಬರಲಾಗಿದೆ. ಕಳೆದ 10 ವರ್ಷಗಳಿಂದ ಸುಮಾರು 14ಕ್ಕೂ ಹೆಚ್ಚು ಅಡಿಯ ಗಣಪತಿ ಸ್ಥಾಪಿಸಲಾಗಿದೆ. ಅಲ್ಲದೇ, ಈ ಗಣಪತಿಯು ಹಾವೇರಿ ಕಾ ರಾಜಾ ಎಂದು ಕರೆಯಲ್ಪಡುತ್ತದೆ. ಹಾವೇರಿಯ ಎಲ್ಲಾ ಸಾರ್ವಜನಿಕ ಗಣಪತಿ ಸಮಿತಿಗಳ ಸಹಕಾರ ನಮ್ಮ ಮೇಲಿದೆ" ಎನ್ನುತ್ತಾರೆ ಗಣಪತಿ ಸ್ಥಾಪನೆ ಮಾಡಿರುವ ಮಂಜುನಾಥ್.

ಇದನ್ನೂ ಓದಿ:ಕೋಲಾರದ ಗಣೇಶೋತ್ಸವಕ್ಕೆ ಬಂದ ನಟ ಧ್ರುವ ಸರ್ಜಾ.. ಅಭಿಮಾನಿಗಳ ಹರ್ಷೋದ್ಗಾರ - ವಿಡಿಯೋ

ಶಿರಡಿ ಸಾಯಿಬಾಬಾ ಗಣಪ: ಹಾವೇರಿಯ ಅಶ್ವಿನಿ ನಗರದಲ್ಲಿ ಸ್ಥಾಪಿಸಿರುವ ಶಿರಡಿ ಸಾಯಿಬಾಬ ರೂಪದಲ್ಲಿರುವ ಗಣೇಶ ಭಕ್ತರ ಕಣ್ಮನ ಸೆಳೆಯುತ್ತಿದೆ. ಅಶ್ವಿನಿ ನಗರದಲ್ಲಿ ಕಳೆದ ತಿಂಗಳು ಶಿರಡಿ ಸಾಯಿಬಾಬಾ ದೇವಸ್ಥಾನ ನಿರ್ಮಿಸಲಾಗಿದೆ. ಅದರ ಅಂಗವಾಗಿ ಈ ಬಾರಿ ಶಿರಡಿ ಸಾಯಿಬಾಬಾ ರೂಪದಲ್ಲಿ ಗಣೇಶ ಮೂರ್ತಿ ಸ್ಥಾಪಿಸಲಾಗಿದೆ. ಶಿರಡಿ ಸಾಯಿಬಾಬ ಮಂಟಪ ನಿರ್ಮಿಸಲಾಗಿದೆ. ಭಕ್ತರು ಪಕ್ಕದಲ್ಲಿರುವ ಶಿರಡಿ ಸಾಯಿಬಾಬಾನ ದರ್ಶನ ಪಡೆದು, ನಂತರ ಶಿರಡಿ ಸಾಯಿಬಾಬಾ ರೂಪದಲ್ಲಿರುವ ಗಣೇಶನನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.

ಇನ್ನು ಹಿಂದೂ ಮಹಾಸಭಾ ಸ್ಥಾಪಿಸಿರುವ ಆಂಜನೇಯನ ಜೊತೆಯ ಗಣಪ ವಿರಾಜಮಾನವಾಗಿದೆ. ಗಣೇಶ ಮೂರ್ತಿ ಮತ್ತು ಆಂಜನೇಯ ಮೂರ್ತಿಗಳು ಭಕ್ತರನ್ನು ಆಕರ್ಷಿಸುತ್ತಿವೆ. ಅಂಬೇಡ್ಕರ್​ ವೃತ್ತದಲ್ಲಿ ಗಣೇಶನು ತನಗೆ ಇಷ್ಟವಾದ ಪುಷ್ಪಗಳಲ್ಲಿ ಒಂದಾದ ದಾಸವಾಳ ಹೂಗಳಲ್ಲಿ ಅಲಂಕೃತಗೊಂಡಿದ್ದಾನೆ.

ಸಿದ್ದದೇವಪುರದಲ್ಲಿ 15 ಅಡಿ ಎತ್ತರದ ಗಣಪತಿ ಸ್ಥಾಪಿಸಲಾಗಿದೆ. ಕೊಲ್ಕತ್ತಾ ಮತ್ತು ಶಿವಮೊಗ್ಗ ಕಲಾವಿದರು ಈ ಗಣೇಶ ಮೂರ್ತಿ ರಚಿಸಿದ್ದು, ವಿಘ್ನ ವಿನಾಯಕನ ಕಣ್ತುಂಬಿಕೊಳ್ಳಲು ಭಕ್ತ ಸಾಗರವೇ ಹರಿದುಬರುತ್ತಿದೆ. ಅಲ್ಲದೇ, ಈ ವರ್ಷ ಚಂದ್ರಯಾನ 3 ಉಡ್ಡಯನದ ಪ್ರಾತ್ಯಕ್ಷಿಕತೆ ಏರ್ಪಡಿಸಲಾಗಿದ್ದು, ಜನರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ.

ಗಾಂಧಿ ವೃತ್ತದಲ್ಲಿ ಗಣೇಶ, ಗೌಳಿಗಲ್ಲಿ ಗಣೇಶ, ಯಾಲಕ್ಕಿ ಗಣೇಶ ಮತ್ತು ಬಸವೇಶ್ವರನಗರದಲ್ಲಿ ಸ್ಥಾಪಿಸಿರುವ ಗಣೇಶ ಮೂರ್ತಿಗಳು ಗಮನ ಸೆಳೆಯುತ್ತಿವೆ. ಹಾವೇರಿ ನಗರದ 25ಕ್ಕೂ ಅಧಿಕ ಸಾರ್ವಜನಿಕ ಸ್ಥಳಗಳಲ್ಲಿ ಬೃಹತ್ ಗಣೇಶ ಮೂರ್ತಿಗಳನ್ನು ಸ್ಥಾಪಿಸಲಾಗಿದೆ. ಕೆಲವು ಗಣೇಶ ಮೂರ್ತಿಗಳನ್ನು ಐದು ದಿನ ಕೆಲವೊಂದು 9 ದಿನ ಮತ್ತೆ ಕೆಲ ಮೂರ್ತಿಗಳನ್ನು 11 ದಿನಗಳ ನಂತರ ನಿಮಜ್ಜನೆ ಮಾಡಲಾಗುತ್ತದೆ. ಗಣೇಶ ಹಬ್ಬದ ಅಂಗವಾಗಿ ಕೆಲವು ಸಂಘಗಳು ಭಕ್ತರಿಗೆ ಅನ್ನಪ್ರಸಾದ ವ್ಯವಸ್ಥೆ ಮಾಡುತ್ತಿವೆ.

ಇದನ್ನೂ ಓದಿ:ಹುಬ್ಬಳ್ಳಿಯಲ್ಲಿ ಅದ್ಧೂರಿಯಾಗಿ ನಡೆದ ಈದ್ಗಾ ಮೈದಾನದ ಗಣೇಶ ನಿಮಜ್ಜನ ಮೆರವಣಿಗೆ

ABOUT THE AUTHOR

...view details