ಕರ್ನಾಟಕ

karnataka

ಪಟಾಕಿ ಡಿಜೆ ಸೌಂಡ್ ಗುಲಾಲ್ ನಿಷಿದ್ಧ.. ಹಾವೇರಿ ಸಿದ್ದಿವಿನಾಯಕ ಸಮಿತಿ ಗಣೇಶ ನಿಮಜ್ಜನ ಮೆರವಣಿಗೆಯೇ ವಿಭಿನ್ನ..

By ETV Bharat Karnataka Team

Published : Sep 30, 2023, 7:01 PM IST

Updated : Sep 30, 2023, 8:38 PM IST

ಹಾವೇರಿ ನಗರದ ಸಿದ್ದದೇವಪುರದ ಸಿದ್ದಿವಿನಾಯಕ ಉತ್ಸವ ಸಮಿತಿ 34 ವರ್ಷಗಳಿಂದ ಸಾರ್ವಜನಿಕ ಗಣಪತಿ ಪ್ರತಿಷ್ಟಾಪನೆ ಮಾಡುತ್ತಿದೆ. ಈ ವರ್ಷ ಗಣೇಶ ವಿಗ್ರಹದ ದರ್ಶನದ ಜೊತೆಗೆ ಚಂದ್ರಯಾನ- 03 ಪ್ರದರ್ಶನ ಸಹ ಏರ್ಪಡಿಸಿತ್ತು. ಸುಮಾರು 11 ದಿನಗಳ ಕಾಲ 25 ಸಾವಿರಕ್ಕೂ ಅಧಿಕ ಭಕ್ತರು ಉಚಿತವಾಗಿ ಚಂದ್ರಯಾನ-03 ಪ್ರಾತ್ಯಕ್ಷಿಕೆ ವೀಕ್ಷಿಸಿ ಸಂಘದ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

Haveri Ganesha procession is different
ಗಣೇಶ ನಿಮಜ್ಜನ ಮೆರವಣಿಗೆ

ಹಾವೇರಿ ಸಿದ್ದಿವಿನಾಯಕ ಸಮಿತಿ ಗಣೇಶ ನಿಮಜ್ಜನ ಮೆರವಣಿಗೆ

ಹಾವೇರಿ: ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಷ್ಠಾಪಿಸಿದ ಗಣೇಶ ವಿಸರ್ಜನೆ ಅಂದರೆ ಅಲ್ಲಿ ಸದ್ದು ಗದ್ದಲ ಇರಲೇಬೇಕು. ಡಿಜೆ ಸೌಂಡ್ ಜಗಮಗಿಸುವ ವಿದ್ಯುತ್ ದೀಪ, ಗುಲಾಲ ರಂಗು ಎದ್ದು ಕಾಣುತ್ತದೆ. ಪಟಾಕಿಗಳ ಅಬ್ಬರವಂತೂ ಹೇಳತಿರದು. ಆದರೆ, ಹಾವೇರಿ ನಗರದ ಸಿದ್ದದೇವಪುರದ ಸಿದ್ದಿವಿನಾಯಕ ಉತ್ಸವ ಸಮಿತಿಯೂ ವಿಭಿನ್ನವಾಗಿ ಸಾರ್ವಜನಿಕ ಗಣೇಶ ನಿಮಜ್ಜನ ನೆರವೇರಿಸಿ ಮನಸೆಳೆಯಿತು.

ಹೌದು.. ಸಿದ್ದದೇವಪುರದ ಸಿದ್ದಿವಿನಾಯಕ ಉತ್ಸವ ಸಮಿತಿ ಸದಸ್ಯರು ಗಣೇಶ ನಿಮಜ್ಜನವನ್ನು ಆನೆಯೊಂದಿಗೆ ,ಅರ್ಕೆಷ್ಟ್ರಾ, ಜಾಂಜ್ ಪದಕ, ಡೊಳ್ಳುಕುಣಿತ ಸೇರಿದಂತೆ ಜಾನಪದ ಕಲಾತಂಡಗಳೊಂದಿಗೆ ಹಾವೇರಿ ನಗರದಲ್ಲಿ ಬೃಹತ್​ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ಹಾವೇರಿ ಹುಕ್ಕೇರಿಮಠದಿಂದ ಬೆಳಗ್ಗೆ 10 ಗಂಟೆಗೆ ಮೆರವಣಿಗೆ ಆರಂಭವಾಗಿ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಸಂಜೆ 6 ಗಂಟೆಯವರೆಗೆ ನಗರದ ಎಲ್ಲ ಬೀದಿಗಳಲ್ಲೂ ಸಂಚರಿಸಿ ಮೆರವಣಿಗೆ ಸಮಾಪ್ತಿಗೊಂಡಿತು. ರಾತ್ರಿಯಾದರೇ ಎಲ್ಲರೂ ಮಲಗಿರುತ್ತಾರೆ ಹಗಲು ಮೆರವಣಿಗೆ ಮಾಡಿದ್ರೆ ಎಲ್ಲರೂ ನೋಡುತ್ತಾರೆ ಎಂಬ ಸದ್ಯುದ್ದೇಶದಿಂದ ಹಗಲು ಗಣೇಶ ವಿಸರ್ಜನೆ ಹಮ್ಮಿಕೊಳ್ಳುತ್ತೇವೆ ಎಂದು ಸಮಿತಿಯ ಸದಸ್ಯರು ಈಟಿವಿ ಭಾರತ್​ಗೆ ತಿಳಿಸಿದರು.

ಡಿಜೆ ಸೌಂಡ್, ಪಟಾಕಿ ಮನುಷ್ಯರಲ್ಲದೇ ಪ್ರಾಣಿಪಕ್ಷಿಗಳಿಗೂ ಸಹ ಮಾರಕ. ಹೀಗಾಗಿ ಅವುಗಳ ಬಳಕೆ ನಿಷಿದ್ಧ.ಗಣೇಶ ನಿಮಜ್ಜನಹಿಂದೂ ಸಂಪ್ರದಾಯದಂತೆ ಭಕ್ತಿ ಭಾವದಿಂದ ಮರೆವಣಿಗೆ ನೆರವೇರುತ್ತದೆ. ಸಿದ್ದದೇವಪುರದ ಸಿದ್ದಿವಿನಾಯಕನ ನಿಮಜ್ಜನ ಮೆರವಣಿಗೆ ನೋಡಲು ಹಾವೇರಿ ನಿವಾಸಿಗಳು ಕಾತರದಿಂದ ಕಾಯುತ್ತಾರೆ. ಗಣೇಶನ ಮೂರ್ತಿ ಮನೆ ಮುಂದೆ ಬರುತ್ತಿದ್ದಂತೆ ಹಣ್ಣುಕಾಯಿ ನೈವಿಧ್ಯೆ ಅರ್ಪಿಸಿ ಪೂಜೆ ಸಲ್ಲಿಸಿ ಭಕ್ತಿ ಮೆರೆದರು.

ಗಣೇಶ ನಿಮಜ್ಜನದಲ್ಲಿ ಚೆನ್ನಮಲ್ಲಿಕಾರ್ಜುನ ಶ್ರೀಗಳು:ಬಿಳಿ ಬಟ್ಟೆ ಟೊಪ್ಪಿಗೆ ಧರಿಸಿ ಕೇಸರಿ ಶಾಲು ಹಾಕಿಕೊಂಡು ಸಮಿತಿಯ ಸದಸ್ಯರು ಮೆರವಣಿಗೆಯಲ್ಲಿ ಪಾಲ್ಗೊಂಡು ಕಳೆ ತುಂಬಿದರು. ಹಾವೇರಿ ಬಣ್ಣದಮಠದ ಅಭಿನವ ಚೆನ್ನಮಲ್ಲಿಕಾರ್ಜುನ ಶ್ರೀಗಳು ಸಹ ಭಾಗವಹಿಸಿ ಗಮನ ಸೆಳೆದರು. ಪರಿಸರ ಸ್ನೇಹಿ ಹಿಂದೂ ಸಂಪ್ರದಾಯದ ಗಣೇಶ ನಿಮಜ್ಜನಕ್ಕೆ ಶ್ರೀಗಳು ಮೆಚ್ಚುಗೆ ವ್ಯಕ್ತಪಡಿಸಿದರು.

ಸಮಿತಿ ಸದಸ್ಯರಿಗೆ ಭೋಜನ ವ್ಯವಸ್ಥೆ: ನಗರದ ಪ್ರಮುಖ ಬೀದಿಗಳಲ್ಲಿ ಗಣೇಶನ ನಿಮಜ್ಜನ ಮೆರವಣಿಗೆ ನಡೆಯುತ್ತಿದ್ದ ವೇಳೆ ಸಮಿತಿಯ ಸದಸ್ಯರಿಗೆ ಕೆಲ ಸಂಘಟನೆಗಳು ಭೋಜನದ ವ್ಯವಸ್ಥೆ ಮಾಡಿದ್ದವು. ನಗರದಲ್ಲಿ ಮೆರವಣಿಗೆ ಮಾಡಿದ ನಂತರ ಹಾವೇರಿ ಸಮೀಪದ ಕರ್ಜಗಿಯ ವರದಾ ನದಿಯಲ್ಲಿ ಗಣೇಶನನ್ನ ಶಾಸ್ತ್ರೋಕ್ತವಾಗಿ ನಿಮಜ್ಜನ ಮಾಡಲಾಯಿತು.

34 ವರ್ಷಗಳಿಂದ ಗಣಪತಿ ಸ್ಥಾಪನೆ:ಸಿದ್ದಿವಿನಾಯಕ ಉತ್ಸವ ಸಮಿತಿ ಕಳೆದ 34 ವರ್ಷಗಳಿಂದ ಸಾರ್ವಜನಿಕ ಗಣಪತಿ ಸ್ಥಾಪನೆ ಮಾಡುತ್ತ ಬಂದಿದೆ. ಮೂವತ್ನಾಲ್ಕು ವರ್ಷಗಳಿಂದ ಮಣ್ಣಿನ ಗಣಪತಿ ಸ್ಥಾಪನೆ ಮಾಡಿದ್ದು ಸಂಘದ ಹೆಗ್ಗಳಿಕೆ.ಅಲ್ಲದೇ ಪರಿಸರ ಪ್ರೇಮಿ ಬಣ್ಣಗಳನ್ನು ಮಾತ್ರ ಸಮಿತಿ ಬಳಸುತ್ತಾ ಬಂದಿದೆ. ಈ ವರ್ಷ ಗಣೇಶ ವಿಗ್ರಹದ ದರ್ಶನದ ಜೊತೆಗೆ ಚಂದ್ರಯಾನ- 03 ಪ್ರದರ್ಶನ ಸಹ ಏರ್ಪಡಿಸಲಾಗಿತ್ತು. ಸುಮಾರು 11 ದಿನಗಳ ಕಾಲ 25 ಸಾವಿರಕ್ಕೂ ಅಧಿಕ ಭಕ್ತರು ಉಚಿತವಾಗಿ ಚಂದ್ರಯಾನ-03 ಪ್ರಾತ್ಯಕ್ಷಿಕೆ ವೀಕ್ಷಿಸಿ ಸಂಘದ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಇದನ್ನೂ ಓದಿ:ಬೆಳಗಾವಿಯಲ್ಲಿ ಇತಿಹಾಸ ಬರೆದ ಗಣೇಶೋತ್ಸವ: ಸತತ 30 ಗಂಟೆಗಳ ಕಾಲ ನಡೆದ ನಿಮಜ್ಜನ ಮೆರವಣಿಗೆ

Last Updated : Sep 30, 2023, 8:38 PM IST

ABOUT THE AUTHOR

...view details