ಕರ್ನಾಟಕ

karnataka

ಬಿಜೆಪಿಯ ಹೀನಾಯ ಸ್ಥಿತಿಗೆ ಕಾರಣ ಯಾರೆಂದು ಜೋಶಿಯವರನ್ನು ಕೇಳಿ: ಬಿ.ಕೆ.ಹರಿಪ್ರಸಾದ್

By ETV Bharat Karnataka Team

Published : Dec 24, 2023, 10:55 PM IST

ಪ್ರಲ್ಹಾದ್ ಜೋಶಿ ನನ್ನ ಬಗ್ಗೆ ಮಾತನಾಡುವುದರಿಂದ ಅವರಿಗೆ ಲೋಕಸಭೆ ಚುನಾವಣೆಗೆ ಟಿಕೆಟ್​ ಸಿಗುವುದಾದರೆ ಮಾತನಾಡಲಿ ಎಂದು ಕಾಂಗ್ರೆಸ್​ ಮುಖಂಡ ಬಿ.ಕೆ.ಹರಿಪ್ರಸಾದ್​ ವ್ಯಂಗ್ಯವಾಡಿದರು.

congress-leader-bk-hariprasad-talks-in-haveri
ಬಿ.ಕೆ ಹರಿಪ್ರಸಾದ್​

ಬಿಜೆಪಿಯ ಹೀನಾಯ ಸ್ಥಿತಿಗೆ ಕಾರಣ ಯಾರೆಂದು ಜೋಶಿಯವರನ್ನು ಕೇಳಿ: ಬಿ.ಕೆ.ಹರಿಪ್ರಸಾದ್

ಹಾವೇರಿ: ರಾಜ್ಯದಲ್ಲಿ ಸಿಎಂ ಆಗಲು ಶತಪ್ರಯತ್ನಿಸಿ, ಎಲ್ಲವನ್ನೂ ಅಲ್ಲೋಲ ಕಲ್ಲೋಲ ಮಾಡಿ ಬಿಜೆಪಿಯ ಹೀನಾಯ ಸ್ಥಿತಿಗೆ ಯಾರು ಕಾರಣ ಎಂಬುದನ್ನು ಪ್ರಲ್ಹಾದ್ ಜೋಶಿಯವರ ಬಳಿಯೇ ಕೇಳಿ ಎಂದು ಕಾಂಗ್ರೆಸ್​ ಮುಖಂಡ ಬಿ.ಕೆ.ಹರಿಪ್ರಸಾದ್​ ವ್ಯಂಗ್ಯವಾಡಿದರು.

ಹಾವೇರಿಯಲ್ಲಿಂದು ಮಾತನಾಡಿದ ಅವರು, "ಕಾಂಗ್ರೆಸ್‌ನಲ್ಲಿ ನನ್ನ ಸ್ಥಾನದ ಬಗ್ಗೆ ಅವರು ಚಿಂತೆ ಮಾಡುವುದು ಬೇಡ. ಕಾಂಗ್ರೆಸ್ ಸರ್ವೋಚ್ಚ ನೀತಿ ನಿರೂಪಣಾ ಸಮಿತಿಯ 52 ಸದಸ್ಯರಲ್ಲಿ ನಾನೂ ಒಬ್ಬ. ನನ್ನ ಬಗ್ಗೆ ಮಾತನಾಡುವ ಪ್ರಲ್ಹಾದ್ ಜೋಶಿ ಕರ್ನಾಟಕದ ಬಗ್ಗೆ ಒಂದು ದಿನವಾದರೂ ಮಾತನಾಡಿದ್ದಾರೆಯೇ ಎಂದು ಪ್ರಶ್ನಿಸಿದರು.

"ಮಹದಾಯಿ ವಿಚಾರ ಬಗ್ಗೆ ಚುನಾವಣೆ ಬಂದಾಗ ಮಾತನಾಡುವ ಪ್ರಲ್ಹಾದ್ ಜೋಶಿ ರಾಜ್ಯಕ್ಕೆ ನೀರು ಬಿಟ್ಟಿದ್ದಾರಾ ಎಂಬ ಬಗ್ಗೆ ಮೊದಲು ಮಾತನಾಡಲಿ. ಆ ನಂತರ ನನ್ನ ಸ್ಥಾನದ ಬಗ್ಗೆ ಚಿಂತಿಸಲಿ. ಒಂದು ವೇಳೆ ಅವರಿಗೆ ನನ್ನ ಬಗ್ಗೆ ಈ ರೀತಿ ಮಾತನಾಡುವುದರಿಂದ ಲೋಕಸಭೆಗೆ ಸ್ಫರ್ಧಿಸುವ ಅವಕಾಶ ಸಿಗುತ್ತೆ ಎಂದಾದರೆ ಮಾತನಾಡಿಕೊಳ್ಳಲಿ" ಎಂದು ತಿರುಗೇಟು ನೀಡಿದರು.

"ಜೋಶಿ ದೇಶದಲ್ಲಿರುವ ಎಲ್ಲವನ್ನೂ ನೋಡಿದ್ದಾರೆ. ಕಾಂಗ್ರೆಸ್​ನಲ್ಲಿ ನಾನು ಸರ್ವೋಚ್ಚ ನೀತಿ ನಿರೂಪಣಾ ಸಮಿತಿ ಸದಸ್ಯನಾಗಿದ್ದೇನೆ. ಕೆಲ ಸಂಸದರು ಬಿಜೆಪಿಯಲ್ಲಿ ಈಗಾಗಲೇ ಮಾರ್ಗದರ್ಶಕ ಮಂಡಳಿಗೆ ಹೋಗಿ ನಾವು ಸ್ಪರ್ಧಿಸುವುದಿಲ್ಲ ಎಂದು ತಿಳಿಸುತ್ತಿದ್ದಾರೆ. ಸಂಸದ ಶಿವಕುಮಾರ್ ಉದಾಸಿ, ಸದಾನಂದ ಗೌಡ, ನಾರಾಯಣ ಗೌಡ ಸ್ಪರ್ಧಿಸುವುದಿಲ್ಲ ಎನ್ನುತ್ತಿದ್ದಾರೆ. ಇನ್ನೂ ನನ್ನ ಬಗ್ಗೆ ಈ ರೀತಿ ಹೇಳಿಕೆ ನೀಡುವ ಮೂಲಕ ಪ್ರಲ್ಹಾದ್ ಜೋಶಿ ಟಿಕೆಟ್ ಪಡೆಯುವುದಾದರೆ ತುಂಬಾ ಸಂತೋಷ" ಎಂದರು.

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪ್ರತಿಕ್ರಿಯೆ ಬಗ್ಗೆ ಮಾತನಾಡಿದ ಹರಿಪ್ರಸಾದ್, "ಲಾರ್ಡ್ ಮೌಂಟ್ ಬ್ಯಾಟನ್ ಅನುಯಾಯಿ ಎಂದಿದ್ದಾರೆ. ಅವರ ಬಗ್ಗೆ ಸಂಪೂರ್ಣ ಇತಿಹಾಸವಿದೆ. ಯಾರು ಬ್ರಿಟೀಷರ ಗುಲಾಮರಾಗಿದ್ದರು ಎಂಬುದು ಗೊತ್ತಾಗುತ್ತದೆ. ಶೋಭಕ್ಕ ಇತಿಹಾಸ ತಿಳಿದು ಮಾತನಾಡಲಿ. ಅದನ್ನು ಬಿಟ್ಟು ವಾಟ್ಸ್‌ಆ್ಯಪ್ ಯುನಿವರ್ಸಿಟಿ ನೋಡಿ ಮಾತನಾಡಬಾರದು" ಎಂದು ಹೇಳಿದರು.

"ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನನ್ನ ಹೇಳಿಕೆಗೆ ಪ್ರತಿಕ್ರಿಯೆ ನೀಡುವ ಬದಲು ಮೊದಲು ಬಸನಗೌಡ ಪಾಟೀಲ್ ಯತ್ನಾಳ್ ಪ್ರಶ್ನೆಗೆ ಉತ್ತರ ನೀಡಲಿ. ಇದರಿಂದ ಬಿಜೆಪಿ ಮತ್ತು ಜನಸಾಮಾನ್ಯರು ನೆಮ್ಮದಿಯಿಂದ ಇರುತ್ತಾರೆ. ಯತ್ನಾಳ್ ಪ್ರಶ್ನೆಗೆ ಉತ್ತರ ನೀಡದವರು ನಮ್ಮ ಹೇಳಿಕೆಗೆ ಪ್ರತಿಕ್ರಿಯೆ ನೀಡುತ್ತಿದ್ದಾರೆ. ನಮ್ಮ ಹೋರಾಟ ಸೈದ್ಧಾಂತಿಕ ಹೋರಾಟ. ಮಾತನಾಡುವ ಧೈರ್ಯವಿದ್ದರೆ ಮಾತನಾಡಲಿ. ಅದಕ್ಕೆ ನಾನು ಉತ್ತರ ನೀಡುತ್ತೇನೆ" ಎಂದು ಗುಡುಗಿದರು.

"ನಾನು ಭಾರತ ಸ್ವಾತಂತ್ರ ಹೋರಾಟ ಕುರಿತಂತೆ ಮಾತನಾಡುವಾಗ ಸುಮಾರು 7 ಲಕ್ಷ ಜನ ಸ್ವಾತಂತ್ರ ಹೋರಾಟಗಾರರಿದ್ದರು. ಅವರಲ್ಲಿ ಪ್ರಾಣ ಆಸ್ತಿಪಾಸ್ತಿ ಕಳೆದುಕೊಂಡ ಕುಟುಂಬಗಳಿವೆ ಎಂದು ಹೇಳಿದ್ದೆ. ರವಿಕುಮಾರ್ ಅದರಲ್ಲಿ ಜನಸಂಘದ ಸದಸ್ಯರು ಇದ್ದರು ಎಂದಿದ್ದಾರೆ. ಜನಸಂಘ ಹುಟ್ಟಿದ್ದೆ 1951ರಲ್ಲಿ. ಅದು ಹೇಗೆ ಸ್ವಾತಂತ್ರ ಹೋರಾಟದಲ್ಲಿ ಜನಸಂಘದವರು ಇದ್ದರು" ಎಂದು ಪ್ರಶ್ನಿಸಿದರು.

"ಸ್ವಾತಂತ್ರ ಹೋರಾಟ ನಡೆಯುವಾಗ ಎಲ್ಲಿಯೂ ಜನಸಂಘ ಇರಲಿಲ್ಲ. ದೇಶದ ಇತಿಹಾಸದ ಬಗ್ಗೆ ಸರಿಯಾಗಿ ತಿಳಿದುಕೊಳ್ಳದೆ ವಾಟ್ಸ್‌ಆ್ಯಪ್​ ವಿಶ್ವವಿದ್ಯಾಲಯದ ಕಥೆಗಳನ್ನು ಜನರ ಮುಂದೆ ಹೇಳುವುದು ಸರಿಯಲ್ಲ" ಎಂದರು.

ಇದನ್ನೂ ಓದಿ:ಭಾರತ ಜಗತ್ತಿನ ದೊಡ್ಡಣ್ಣನಾಗುವ ಬದಲು ಹಿರಿಯಣ್ಣನಾಗಬೇಕಿದೆ: ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ

ABOUT THE AUTHOR

...view details