ಕರ್ನಾಟಕ

karnataka

ಇದು ನಮ್ಮ ಮನೆ, ನೆಂಟರು ಬಂದರೆಂದು ಬೇರೆ ಫಾರ್ಮ್‌ಹೌಸ್, ಗೆಸ್ಟ್ ಹೌಸ್ ಹೋಗಿ ಮಲಗಲ್ಲ: ಪ್ರೀತಂಗೌಡ

By ETV Bharat Karnataka Team

Published : Oct 6, 2023, 1:20 PM IST

ಪ್ರೀತಂಗೌಡ ಸೇರಿ ಕೆಲ ಬಿಜೆಪಿಗರು ಕಾಂಗ್ರೆಸ್​ ಸೇರ್ಪಡೆಯಾಗಲಿದ್ದಾರೆ ಎಂಬ ಮಾಧ್ಯಮದವರ ಪ್ರಶ್ನೆಗೆ ಸ್ವತಃ ಅವರೇ ಪ್ರತಿಕ್ರಿಯಿಸಿದ್ದಾರೆ.

ಪ್ರೀತಂಗೌಡ ಸ್ಪಷ್ಟನೆ
ಪ್ರೀತಂಗೌಡ ಸ್ಪಷ್ಟನೆ

ಬಿಜೆಪಿ ಮಾಜಿ ಶಾಸಕ ಪ್ರೀತಂಗೌಡ

ಹಾಸನ: ನಾನು ರಾಜಕಾರಣಕ್ಕೆ ಬಂದಿರುವುದು ತತ್ತ್ವ ಸಿದ್ಧಾಂತದ ಆಧಾರದ ಮೇಲೆ. ಅಂದು ನಾನು ಚುನಾವಣೆಗೆ ಇಳಿದಾಗ ನಮ್ಮ ಬಳಿ ಇದ್ದದ್ದು ಕೇವಲ 6 ಸಾವಿರ ವೋಟುಗಳು ಮಾತ್ರ. ಇಂದು ನಮ್ಮ ಕಾರ್ಯಕರ್ತರಿಂದ 78 ಸಾವಿರಕ್ಕೆ ಹೋಗಿದ್ದೇವೆ. ಇದನ್ನು ಬಿಟ್ಟು 4 ಸಾವಿರ ವೋಟು ಪಡೆದ ಪಕ್ಷಕ್ಕೆ ಹೋಗ್ತಾರಾ? ಎನ್ನುವ ಮೂಲಕ ನಾನು ಬಿಜೆಪಿಯಲ್ಲಿಯೇ ಇರುತ್ತೇನೆಯೇ ಹೊರತು ಕಾಂಗ್ರೆಸ್​ಗೆ ಹೋಗುವುದಿಲ್ಲ ಎಂದು ಬಿಜೆಪಿ ಮಾಜಿ ಶಾಸಕ ಪ್ರೀತಂಗೌಡ ಸ್ಪಷ್ಟಪಡಿಸಿದರು.

ಪ್ರೀತಂಗೌಡ ಸೇರಿದಂತೆ ಕೆಲವು ಬಿಜೆಪಿಗರು ಕಾಂಗ್ರೆಸ್​ ಸೇರಲಿದ್ದಾರೆ ಎಂಬ ಮಾಧ್ಯಮದವರ ಪ್ರಶ್ನೆಗೆ ನಗರದಲ್ಲಿ ಗುರುವಾರ ಪ್ರತಿಕ್ರಿಯಿಸಿದ ಅವರು, ನಾವೇ ಮನೆ ಕಟ್ಟಿ, ಬಣ್ಣ ಹೊಡೆದು ಗೃಹಪ್ರವೇಶ ಮಾಡಿ, ಬೇರೆ ಹೊಸ ಮನೆ ಕಟ್ಟುವ ಅವಶ್ಯಕತೆ ಏನಿದೆ?. ನೆಂಟರು ಬಂದರು ಎಂದು ಹೇಳಿ ಬೇರೆ ಫಾರ್ಮ್‌ಹೌಸ್, ಗೆಸ್ಟ್ ಹೌಸ್​ಗೆ ಹೋಗಿ ಮಲಗಲ್ಲ. ನಮ್ಮ ಮನೆ ಯಜಮಾನಿಕೆ ಮಾಡಲು ಕಾರ್ಯಕರ್ತರಿದ್ದಾರೆ. ನರೇಂದ್ರ ಮೋದಿ ಅವರು ಮತ್ತೆ ಪ್ರಧಾನಿ ಆಗಬೇಕು ಎಂಬ ಕನಸು ಕಟ್ಟಿಕೊಂಡು ಓಡಾಡುತ್ತಿರುವವರಲ್ಲಿ ನಾನು ಮೊದಲಿಗ. ನಾವು ಬೇರೆ ಯಾವುದೇ ಪಕ್ಷಕ್ಕೆ ಹೋಗುವವರಲ್ಲ. ಕಾಂಗ್ರೆಸ್​ನಿಂದಲೇ ನಮ್ಮ ಪಕ್ಷಕ್ಕೆ ಬರುವವರಿದ್ದಾರೆ. ಆದರೆ, ಆ ಬಗ್ಗೆ ಸದ್ಯಕ್ಕೆ ಯಾವುದೇ ಮಾತುಕತೆ ಆಗಿಲ್ಲ. ಮುಂದಿನ ದಿನಗಳಲ್ಲಿ ಬಿಜೆಪಿ ಗೆಲ್ಲುವ ದೃಷ್ಟಿಯಿಂದ ಹಾಸನ ಲೋಕಸಭಾ ಕ್ಷೇತ್ರದಲ್ಲಿ ಸ್ಥಳೀಯವಾಗಿ ಕಾಂಗ್ರೆಸ್ ನಾಯಕರನ್ನು ಕರೆತರುವ ಪ್ರಯತ್ನ ಮಾಡುತ್ತೇವೆ ಎಂದರು.

ಶಿವಮೊಗ್ಗ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ರಾಮಲಿಂಗಾರೆಡ್ಡಿ ಹೇಳಿಕೆಗೆ ಪ್ರತಿಕ್ರಿಯಿಸಿ, ಅವರ ಹೇಳಿಕೆಯನ್ನು ಖಂಡಿಸುವೆ. ಶಿವಮೊಗ್ಗದಲ್ಲಿ ಪದೇ ಪದೆ ಶಾಂತಿ ಕದಡುವ ಕೆಲಸವಾಗುತ್ತಿದೆ. ಯಾರು ಮಂತ್ರಿಗಳಿಗೆ ಫೀಡ್‌ಬ್ಯಾಕ್ ಕೊಡ್ತಾರೋ, ಅವರ ಮನಸ್ಥಿತಿ ಏನಿದೆಯೋ ಗೊತ್ತಿಲ್ಲ. ನಿಮಗೂ ಮಕ್ಕಳು, ಮೊಮ್ಮಕ್ಕಳು, ಮುಂದಿನ ಪೀಳಿಗೆ ಇದೆ. ಅವರಿಗೆ ಸಮಾಜ ಒಳ್ಳೆಯ ರೀತಿ ಇರಬೇಕೆಂದರೆ ಈ ರೀತಿಯ ಮನಸ್ಥಿತಿ ಇರುವ ವ್ಯಕ್ತಿಗಳು ಯಾವುದೇ ಧರ್ಮದಲ್ಲಿದ್ದರೂ ಸಹಿಸುವ ಕೆಲಸ ಮಾಡಬಾರದು. ಪರಿಸ್ಥಿತಿಯನ್ನು ತಿಳಿಗೊಳಿಸುವ ಬದಲು ಅವರಿಗೆ ಕ್ಲೀನ್ ಚಿಟ್ ಕೊಡುವ ಕೆಲಸ ಮಾಡುತ್ತಿರುವುದು ದುರಂತ ಎಂದು ಆಕ್ರೋಶ ಹೊರ ಹಾಕಿದರು.

ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್ ನಾಯಕರ ರಾಜಕೀಯ ಬದುಕು ಸುಲಭವಿಲ್ಲ. ಜೆಡಿಎಸ್ ಮೈತ್ರಿ ಬಯಸಿ ಬಿಜೆಪಿ ಮನೆಗೆ ಬಂದವರು ಅವರು, ತಾವು ಕೊಟ್ಟಿದ್ದನ್ನು ತಿನ್ನಬೇಕು. ಇಲ್ಲ ಸಲ್ಲದಕ್ಕೆಲ್ಲ ಬೇಡಿಕೆ ಇಡಬಾರದು. ಜೆಡಿಎಸ್ ತಮ್ಮ ಮನೆಗೆ ಬಂದಿರುವುದರಿಂದ ಕೊಂಚ ಸಹಾಯವಾಗುತ್ತದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಹಾಸನ ಕ್ಷೇತ್ರದಿಂದ ಎನ್​​ಡಿಎ ಅಭ್ಯರ್ಥಿಯೇ ಸ್ಪರ್ಧಿಸೋದು. ಕ್ಷೇತ್ರ ತಮಗೆ ಸಿಗುತ್ತದೆ ಎಂಬ ನಿರೀಕ್ಷೆಯನ್ನು ಜೆಡಿಎಸ್ ಇಟ್ಟುಕೊಳ್ಳೋದು ಬೇಡ. ಬಿಜೆಪಿ - ಜೆಡಿಎಸ್ ಮೈತ್ರಿ ಒಂದು ದೀರ್ಘಾವಧಿಯ ಒಪ್ಪಂದವಾಗಿದ್ದರಿಂದ ಬಿಜೆಪಿ ಅಭ್ಯರ್ಥಿಗೆ ಬೆಂಬಲ ನೀಡಿ ಪ್ರಚಾರ ಮಾಡುವ ಅನಿವಾರ್ಯತೆ ಇರುತ್ತೆ. ಅದು ಅವರಿಗೂ ಗೊತ್ತಿದೆ ಎಂದರು.

ಇದನ್ನೂ ಓದಿ:'ಒಮ್ಮೆ ಕಿಡಿ ಹೊತ್ತಿದರೆ ಶಾಂತಿ ಬೇಗ ಸಿಗುವುದಿಲ್ಲ, ಮಣಿಪುರವೇ ಇದಕ್ಕೆ ಸಾಕ್ಷಿ': ರಾಜಕಾರಿಣಿಗಳಿಗೆ ಪೇಜಾವರ ಸ್ವಾಮೀಜಿ ಎಚ್ಚರಿಕೆ

ABOUT THE AUTHOR

...view details