ಕರ್ನಾಟಕ

karnataka

ಚನ್ನರಾಯಪಟ್ಟಣದಲ್ಲಿ ಹಾಡಹಗಲೇ ರೌಡಿಶೀಟರ್​ ಕೊಲೆ: ರಾಜ್ಯದ ವಿವಿಧೆಡೆ ಪ್ರತ್ಯೇಕ ಅಪಘಾತಗಳಲ್ಲಿ ನಾಲ್ವರ ಸಾವು

By

Published : Jul 4, 2023, 8:30 PM IST

Updated : Jul 4, 2023, 9:20 PM IST

ಹಾಸನ ಜಿಲ್ಲೆ ಚನ್ನರಾಯಪಟ್ಟಣದಲ್ಲಿ 6 ಮಂದಿ ದುಷ್ಕರ್ಮಿಗಳು ಒಬ್ಬ ರೌಡಿಶೀಟರ್​ನನ್ನು ಹಾಡಹಗಲೇ ಮಾರಕಾಸ್ತ್ರಗಳಿಂದ ಕೊಲೆಗೈದು ಪರಾರಿಯಾಗಿದ್ದಾರೆ. ಇನ್ನು ನಂಜನಗೂಡು ತಾಲೂಕು ಬದನವಾಳು ಗ್ರಾಮದಲ್ಲಿ ಬಸ್ ಓವರ್​ಟೇಕ್ ಮಾಡಲು ಹೋಗಿ ಇಬ್ಬರು ಬೈಕ್ ಸವಾರರು ಸಾವಿಗೀಡಾಗಿದ್ದಾರೆ. ಹೊಸಕೋಟೆಯ ದೇವನಗುಂದಿ ಕ್ರಾಸ್ ಬಳಿ ನಡೆದ ಅಪಘಾತದಲ್ಲಿ ಶಿಕ್ಷಕಿಯೊಬ್ಬರು ಮೃತಪಟ್ಟಿದ್ದಾರೆ. ಸಕ್ರೆಬೈಲು ತಿರುವಿನಲ್ಲಿ ಕಾರುಗಳ ಮುಖಾಮುಖಿ ಡಿಕ್ಕಿಯಾದ ಪರಿಣಾಮ ವ್ಯಕ್ತಿಯೊಬ್ಬ ಮೃತಪಟ್ಟಿದ್ದಾನೆ.

Investigate by the police
ಹಾಡಹಗಲೇ ರೌಡಿಶೀಟರ್​ ಕೊಲೆ,ಪೊಲೀಸ್​ರಿಂದ ವಿಚಾರಣೆ

ಹಾಸನ:6 ಮಂದಿ ದುಷ್ಕರ್ಮಿಗಳು ಒಬ್ಬ ರೌಡಿಶೀಟರ್​ನನ್ನು ಹಾಡಹಗಲೇ ಮನಸೋ ಇಚ್ಚೆ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿರುವ ಘಟನೆ ಹಾಸನ ಜಿಲ್ಲೆ ಚನ್ನರಾಯಪಟ್ಟಣದಲ್ಲಿ ಜರುಗಿದೆ. ಮಾಸ್ತಿಗೌಡ @ಮಾಸ್ತಿ ಕೊಲೆಯಾದ ರೌಡಿ ಶೀಟರ್. ಮೂಲತಃ ಚನ್ನರಾಯಪಟ್ಟಣದ ಹೊನ್ನಮಾರನಹಲ್ಲಿ ಗ್ರಾಮದವ ಎಂದು ಗುರುತಿಸಲಾಗಿದೆ.

ಮಾಸ್ತಿಗೌಡ @ಮಾಸ್ತಿ ಇವತ್ತು ಹೊನ್ನ ಮಾರನಹಳ್ಳಿಯಿಂದ ಚನ್ನರಾಯಪಟ್ಟಣದ ಖಾಸಗಿ ಟೈಲ್ಸ್ ಮುಳುಗಿ ಅಂಗಡಿಗೆ ಭೇಟಿ ನೀಡಿ ವಾಪಸ್ ರಸ್ತೆ ದಾಟುತ್ತಿದ್ದ. ಈ ವೇಳೆ ದ್ವಿಚಕ್ರ ವಾಹನ ಮತ್ತು ಕಾರಿನಲ್ಲಿ ಬಂದ ಸುಮಾರು 6 ಮಂದಿ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಮನಸೋ ಇಚ್ಚೆ ಕೊಚ್ಚಿ ಪರಾರಿಯಾಗಿದ್ದಾರೆ. ಕೇವಲ ಹತ್ತು ನಿಮಿಷದಲ್ಲಿ ಈ ಕೊಲೆ ನಡೆದಿದೆ.

ಚನ್ನರಾಯಪಟ್ಟಣದ ಬಸ್ ನಿಲ್ದಾಣದ ಅನತಿ ದೂರದ ಬಿಎಂ ರಸ್ತೆಯ ಸಾರ್ವಜನಿಕ ಸ್ಥಳದಲ್ಲಿ ಕೊಲೆ ನಡೆದಿರುವುದು ಚನ್ನರಾಯಪಟ್ಟಣ ಜನರನ್ನು ಬೆಚ್ಚಿ ಬೀಳಿಸಿದೆ. ಈ ಹಿಂದೆ ರೌಡಿಶೀಟರ್ ಯಾಚೇನಹಳ್ಳಿ ಚೇತುವನ್ನು ಕೊಲೆ ಮಾಡಲು ಪ್ರಯತ್ನಪಟ್ಟು ವಿಫಲವಾಗಿದ್ದ ಬಳಿಕ ಆತನ ಕಡೆಯವರೇ ಇಂದು ಮಾಸ್ತಿಗೌಡ @ ಮಸ್ತಿಯನ್ನ ಕೊಲೆ ಮಾಡಿರಬಹುದು ಎಂಬ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಚನ್ನರಾಯಪಟ್ಟಣ ನಗರ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಗಳನ್ನು ಬಂಧಿಸಲು ಮೂರು ತಂಡಗಳನ್ನು ರಚಿಸಲಾಗಿದೆ.

ಬೈಕ್ ಅಪಘಾತದಲ್ಲಿ ಪ್ರಜ್ವಲ್, ಮಹದೇವಸ್ವಾಮಿ ಸಾವು

ಬೈಕ್ ಸವಾರರು ಸಾವು : ಬಸ್ ಓವರ್ ಟೇಕ್ ಮಾಡಲು ಹೋಗಿ ಎರಡು ಬೈಕ್​ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಬದನವಾಳು ಗ್ರಾಮದಲ್ಲಿ ನಡೆದಿದೆ. ಚಾಮರಾಜನಗರ ತಾಲೂಕಿನ ಕಾಳನಹುಂಡಿ ಗ್ರಾಮದ ಮಹದೇವಸ್ವಾಮಿ(40) ಹಾಗೂ ಕೆ.ಆರ್.ನಗರ ತಾಲೂಕಿನ ಚಂದಗಾಲ ಗ್ರಾಮದ ಪ್ರಜ್ವಲ್(30) ಮೃತ ದುರ್ದೈವಿಗಳು.

ನಂಜನಗೂಡು - ಚಾಮರಾಜನಗರ ರಾಷ್ಟ್ರೀಯ ಹೆದ್ದಾರಿ ಬದನವಾಳು ಗ್ರಾಮದ ರಸ್ತೆಯಲ್ಲಿ ಪ್ರಜ್ವಲ್ ಬಸ್ ಓವರ್ ಟೇಕ್ ಮಾಡಲು ಹೋಗಿ ಚಾಮರಾಜನಗರದಿಂದ ನಂಜನಗೂಡಿಗೆ ಬರುತ್ತಿದ್ದ ಮಹದೇವಸ್ವಾಮಿ ಬೈಕ್​ಗೆ ಡಿಕ್ಕಿ ಹೊಡೆದಿದ್ದಾನೆ. ಅಪಘಾತದಲ್ಲಿ ಇಬ್ಬರು ಬೈಕ್ ಸವಾರರು ತೀವ್ರ ಗಾಯಗೊಂಡಿದ್ದರಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ತಕ್ಷಣ ಸ್ಥಳಕ್ಕೆ ಆಗಮಿಸಿದ ಕವಲಂದೆ ಠಾಣೆಯ ಪೊಲೀಸರು ಅಪಘಾತವನ್ನು ಪರಿಶೀಲಿಸಿ, ಶವವನ್ನು ಮರಣೋತ್ತರ ಪರೀಕ್ಷೆಗೆ ನಂಜನಗೂಡು ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದರು. ಆಸ್ಪತ್ರೆಯಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

ಶಿಕ್ಷಕಿ ವೇದಾವತಿ

ಬೈಕ್-ಲಾರಿ ಮುಖಾಮುಖಿ ಡಿಕ್ಕಿಯಿಂದ ಶಿಕ್ಷಕಿ ಸಾವು:ಬೈಕ್​ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನದಲ್ಲಿದ್ದ ಶಿಕ್ಷಕಿಯೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಬೆಂಗಳೂರು ಗ್ರಾಮಾಂತರ ಹೊಸಕೋಟೆ ತಾಲೂಕಿನ ದೇವನಗುಂದಿ ಕ್ರಾಸ್ ಬಳಿ ಸಂಭವಿಸಿದೆ. ಹೊಸಕೋಟೆ ತಾಲೂಕಿನ ವಾಗಟ ಗ್ರಾಮದ ಶಿಕ್ಷಕಿ ವೇದಾವತಿ (35) ಮೃತ ದುರ್ದೈವಿ. ವಾಗಟ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವೇದಾವತಿ ಶಿಕ್ಷಕಿಯಾಗಿ ಕೆಲಸ ಮಾಡ್ತಿದ್ದು, ಇಂದು ಬೆಳಗ್ಗೆ ಶಾಲೆಗೆ‌‌ ಎಂದಿನಂತೆ ಹೋಗ್ತಿದ್ದರು. ಈ ವೇಳೆ ಲಾರಿ ಬೈಕ್​ಗೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಈ ಅವಘಡ ಸಂಭವಿಸಿದೆ. ಸ್ಥಳಕ್ಕೆ ಹೊಸಕೋಟೆ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಇನ್ನೂ ಲಾರಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸಕ್ರೆಬೈಲು ತಿರುವಿನಲ್ಲಿ ಕಾರು-ಮುಖಾಮುಖಿ ಡಿಕ್ಕಿ:ಶಿವಮೊಗ್ಗ ತಾಲೂಕು ಸಕ್ರೆಬೈಲ್ ಆನೆ ಬಿಡಾರದ ಬಳಿ ಮಂಗಳವಾರ ಸಂಜೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮತ್ತೊಬ್ಬ ವ್ಯಕ್ತಿ ಮೃತಪಟ್ಟಿದ್ದಾನೆ. ಖಾಸಗಿ ಬಸ್​ಗೆ ಶಿವಮೊಗ್ಗದ ಕಡೆಯಿಂದ ತೆರಳುತ್ತಿದ್ದ ಕಾರೊಂದು ಡಿಕ್ಕಿ ಹೊಡೆದಿದೆ. ಪರಿಣಾಮ ಕಾರಿನಲ್ಲಿದ್ದ ಚಾಲಕ ಸ್ಥಳದಲ್ಲಿಯೇ ಸಾವನ್ನಪ್ಪಿದರೆ, ಮೂವರಿಗೆ ಗಂಭೀರ ಗಾಯಗಳಾಗಿವೆ. ಡಿಕ್ಕಿ ಹೊಡೆದ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ನುಜ್ಜುಗುಜ್ಜಾಗಿದೆ. ಇನ್ನು ಖಾಸಗಿ ಬಸ್ ರಸ್ತೆಯ ಇನ್ನೊಂದು ಪಕ್ಕಕ್ಕೆ ಸರಿದು ನಿಂತಿದೆ. ಸಕ್ರೆಬೈಲು ಆನೆ ಕ್ಯಾಂಪ್​ಗೂ ಮೊದಲು ಸಿಗುವ ಫಿಶ್ ಹೋಟೆಲ್​ನ ಸಮೀಪ ಘಟನೆ ಸಂಭವಿಸಿದೆ. ಈ ಕುರಿತು ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂಓದಿ:Watch video: ಮಹಾರಾಷ್ಟ್ರ- ಮಧ್ಯಪ್ರದೇಶ ಗಡಿಯಲ್ಲಿ ಭೀಕರ ರಸ್ತೆ ಅಪಘಾತ.. ಸಿಸಿಟಿವಿಯಲ್ಲಿ ದೃಶ್ಯ ಸೆರೆ..

Last Updated : Jul 4, 2023, 9:20 PM IST

ABOUT THE AUTHOR

...view details