ಕರ್ನಾಟಕ

karnataka

ಗದಗದಲ್ಲಿ ಕೆ.ಹೆಚ್. ಪಾಟೀಲ್​ ಕ್ರಿಕೆಟ್​ ಲೀಗ್​ಗೆ ಚಾಲನೆ ನೀಡಿದ ಅಜಿಂಕ್ಯ ರಹಾನೆ

By

Published : Feb 12, 2023, 2:07 PM IST

Updated : Feb 12, 2023, 4:24 PM IST

ಭಾರತ ಕ್ರಿಕೆಟ್​ ತಂಡದ ಮಾಜಿ ನಾಯಕ ಅಜಿಂಕ್ಯ ರಹಾನೆ ಗದಗಕ್ಕೆ ಆಗಮಿಸಿದ್ದು, ಕೆ.ಹೆಚ್.ಪಾಟೀಲ್​ ಕ್ರಿಕೆಟ್​ ಲೀಗ್​ಗೆ ಚಾಲನೆ ನೀಡಿದ್ದಾರೆ.

cricketer-ajinkya-rahane-launched-cricket-league-in-gadag
ಗದಗದಲ್ಲಿ ಕೆಹೆಚ್​ ಪಾಟೀಲ್​ ಕ್ರಿಕೆಟ್​ ಲೀಗ್​ಗೆ ಚಾಲನೆ ನೀಡಿದ ಅಜಿಂಕ್ಯ ರಹಾನೆ

ಗದಗದಲ್ಲಿ ಕೆ.ಹೆಚ್. ಪಾಟೀಲ್​ ಕ್ರಿಕೆಟ್​ ಲೀಗ್​ಗೆ ಚಾಲನೆ ನೀಡಿದ ಅಜಿಂಕ್ಯ ರಹಾನೆ

ಗದಗ: ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಐಪಿಎಲ್ ಮಾದರಿಯ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾವಳಿ ಆಯೋಜನೆ ಮಾಡಲಾಗಿದೆ. ಕೆ.ಹೆಚ್.ಪಾಟೀಲ್​ ಕ್ರಿಕೆಟ್​ ಲೀಗ್​ಗೆ ಚಾಲನೆ ನೀಡಲು ಭಾರತ ತಂಡದ ಮಾಜಿ ನಾಯಕ ಅಜಿಂಕ್ಯ ರಹಾನೆ ಆಗಮಿಸಿದ್ದರು. ಶನಿವಾರ ಸಂಜೆ ನಗರದ ವಿಡಿಎಸ್ ಮೈದಾನದಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ರಹಾನೆ, ಬಲೂನು ಹಾರಿ ಬಿಡುವ ಮೂಲಕ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ಕೊಟ್ಟರು.

ಉದ್ಘಾಟನೆ ಬಳಿಕ ಮಾತನಾಡಿದ ಅವರು, "ಕ್ರಿಕೆಟ್ ಒಂದು ಅತ್ಯುತ್ತಮ ಆಟವಾಗಿದ್ದು, ಯುವಕರು ತಮ್ಮಲ್ಲಿರುವ ಪ್ರತಿಭೆ ಮತ್ತು ಸಾಮರ್ಥ್ಯ ತೋರ್ಪಡಿಸುವ ಮೂಲಕ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಬೇಕು. ಗದಗ ನಗರಕ್ಕೆ ಆಗಮಿಸಿರುವುದು ಬಹಳ ಸಂತಸ ತಂದಿದೆ. ಇಲ್ಲಿಯೂ ಸಾಕಷ್ಟು ಪ್ರತಿಭೆಗಳಿದ್ದು, ಶಾಸಕ ಹೆಚ್.ಕೆ‌.ಪಾಟೀಲ್​ ಅವರು ಆಟಗಾರರಿಗೆ ಉತ್ತಮ ವೇದಿಕೆ ಒದಗಿಸಿಕೊಟ್ಟಿದ್ದಾರೆ. ಅದನ್ನು ಎಲ್ಲರೂ ಸದುಪಯೋಗ ಮಾಡಿಕೊಳ್ಳಬೇಕು" ಎಂದು ಸಲಹೆ ನೀಡಿದರು.

"ನಾನು ಕ್ರಿಕೆಟ್​​ನಿಂದ ಸಾಕಷ್ಟು ಕಲಿತಿರುವೆ. ಈಗಲೂ ಹೊಸದನ್ನು ಕಲಿಯುತ್ತಲೇ ಇದ್ದೇನೆ. ನಮ್ಮ ಹಿಂದಿನ ದಿನಮಾನಗಳನ್ನು ನಾವು ಯಾವತ್ತೂ ಮರೆಯಬಾರದು. ನಾವು ಎಲ್ಲಿಂದ ಬಂದಿದ್ದೇವೆ ಎಂಬುದನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ನಾನು ಈ ಮಟ್ಟಕ್ಕೆ ಬರಲು ಮುಖ್ಯ ಕಾರಣ ಕ್ರಿಕೆಟ್" ಎನ್ನುತ್ತ ಯುವ ಕ್ರೀಡಾಪಟುಗಳಿಗೆ ಪ್ರೋತ್ಸಾಹ ತುಂಬಿದರು.

ಶಾಸಕ ಹೆಚ್.ಕೆ.ಪಾಟೀಲ್ ಮಾತನಾಡಿ, "ಯುವ ಪ್ರತಿಭೆಗಳಿಗೆ ಇದೊಂದು ಉತ್ತಮ ಅವಕಾಶ. ನಗರದಲ್ಲಿ ಇಂತಹದೊಂದು ಅವಕಾಶ ಮಾಡಿಕೊಟ್ಟಿದ್ದು, ಅದನ್ನು ಬಳಸಿಕೊಳ್ಳಬೇಕು. ಯುವ ಆಟಗಾರರನ್ನು ಕಂಡುಕೊಳ್ಳುವುದು ಈ ಕ್ರಿಕೆಟ್ ಲೀಗ್​ನ ಪ್ರಮುಖ ಉದ್ದೇಶ. ನಮ್ಮ ಗದಗದಲ್ಲಿರುವ ಪ್ರತಿಭಾನ್ವಿತ ಕ್ರೀಡಾಪಟುಗಳು ರಾಷ್ಟ್ರೀಯ ಮಟ್ಟದಲ್ಲಿ ಪಾಲ್ಗೊಳ್ಳುವಂತಾಗಬೇಕು" ಎಂದು ಹಾರೈಸಿದರು.

ಗೆದ್ದವರಿಗೆ ಭರ್ಜರಿ ಬಹುಮಾನ:ನಿನ್ನೆಯಿಂದ ಪಂದ್ಯಗಳು ಆರಂಭಗೊಂಡಿವೆ. ಒಂದು ತಿಂಗಳ ಕಾಲ ಐಪಿಎಲ್ ಮಾದರಿಯಲ್ಲಿ ನಡೆಯುವ ಈ ಟೂರ್ನಿಯಲ್ಲಿ ಒಟ್ಟು 14 ತಂಡಗಳು ಭಾಗವಹಿಸಿವೆ. ಕೆ.ಹೆಚ್.ಪಾಟೀಲ್ ಕ್ರಿಕೆಟ್ ಲೀಗ್​​ನಲ್ಲಿ ಮೊದಲ ಬಹುಮಾನ 2 ಲಕ್ಷ 50 ಸಾವಿರ ರೂ ಮತ್ತು ಟ್ರೋಫಿ, ಎರಡನೇ ಬಹುಮಾನವಾಗಿ 1 ಲಕ್ಷ 50 ಲಕ್ಷ ರೂ. ಹಾಗೂ ಟ್ರೋಫಿ ನೀಡಲಾಗುತ್ತಿದೆ. ಸರಣಿ ಪುರುಷೋತ್ತಮ ಆಟಗಾರನಿಗೆ 15 ಸಾವಿರ ಹಾಗೂ ಟ್ರೋಫಿ, ಬೆಸ್ಟ್ ಬ್ಯಾಟರ್​​ಗೆ​ 10 ಸಾವಿರ ರೂ., ಬೆಸ್ಟ್ ಬೌಲರ್​​ಗೆ 10 ಸಾವಿರ ರೂ. ಬಹುಮಾನ ಇರಲಿದೆ.

ಬ್ಯಾಟ್​ ಬೀಸಿದ ರಹಾನೆ:ಇದೇ ವೇಳೆ ಕ್ರಿಕೆಟರ್​ ಅಜಿಂಕ್ಯ ರಹಾನೆ ಕೆಲಕಾಲ ಬ್ಯಾಟ್​ ಬೀಸುವ ಮೂಲಕ ನೆರೆದಿದ್ದ ಸಾವಿರಾರು ಅಭಿಮಾನಿಗಳನ್ನು ರಂಜಿಸಿದರು. ಅಲ್ಲದೆ, ತಮ್ಮ ನೆಚ್ಚಿನ ಕ್ರಿಕೆಟರ್​ ಜೊತೆ ಸೆಲ್ಫಿ ಹಾಗೂ ಫೋಟೋ ಕ್ಲಿಕ್ಕಿಸಿಕೊಳ್ಳಲು ಅಭಿಮಾನಿಗಳು ಮುಗಿಬಿದ್ದರು.

ಇದೇ ಸಂದರ್ಭದಲ್ಲಿ ಅಜಿಂಕ್ಯ ರಹಾನೆ ಅವರನ್ನು ಸನ್ಮಾನಿಸಲಾಯಿತು. ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಡಿ.ಆರ್.ಪಾಟೀಲ್, ಕಾಂಗ್ರೆಸ್ ಮುಖಂಡ ಮಹೇಂದ್ರ ಸಿಂಘೇ, ಮುಂಬೈ ಸ್ಪೋರ್ಟ್ಸ್ ಕನ್ಸಲ್ಟಂಟ್ ಅಖಿಲ್ ರಾನಡೆ, ಮಾಜಿ ಸಂಸದ ಐ.ಜಿ.ಸನದಿ ಸೇರಿದಂತೆ ಹಲವರು ಭಾಗಿಯಾಗಿದ್ದರು.

ಇದನ್ನೂ ಓದಿ:ಐಸಿಸಿ ಮಹಿಳಾ ಟಿ20 ವಿಶ್ವಕಪ್‌: ಇಂದು ಭಾರತ-ಪಾಕಿಸ್ತಾನ ಸೆಣಸಾಟ

Last Updated :Feb 12, 2023, 4:24 PM IST

ABOUT THE AUTHOR

...view details