ಕರ್ನಾಟಕ

karnataka

ಯಾವುದೇ ಧರ್ಮವನ್ನು ಅತಿಯಾಗಿ ಓಲೈಸದೆ ಅನುದಾನವನ್ನು ಸಮಾನವಾಗಿ ಹಂಚಿ: ಯಡಿಯೂರಪ್ಪ

By ETV Bharat Karnataka Team

Published : Dec 24, 2023, 10:04 PM IST

ವೀರಶೈವ-ಲಿಂಗಾಯತ ಮಹಾಅಧಿವೇಶನದಲ್ಲಿ ಮಾತನಾಡಿದ ಬಿ.ಎಸ್‌.ಯಡಿಯೂರಪ್ಪ, ಸರ್ಕಾರ ಒಂದು ಸಮುದಾಯದ ಓಲೈಕೆ ಮಾಡುತ್ತಿರುವುದು ಸರಿಯಲ್ಲ ಎಂದು ಹೇಳಿದರು.

BS Yediyurappa
BS Yediyurappa

ದಾವಣಗೆರೆ:ಯಾವುದೇ ಧರ್ಮವನ್ನು ಅತಿಯಾಗಿ ಓಲೈಸದೇ ಲಭ್ಯವಿರುವ ಅನುದಾನವನ್ನು ಎಲ್ಲರಿಗೂ ಸಮಾನವಾಗಿ ಹಂಚಬೇಕು ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. 24ನೇ ವೀರಶೈವ ಲಿಂಗಾಯತ ಮಹಾ ಅಧಿವೇಶನದ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ವೀರಶೈವ ಸಮಾಜವನ್ನು ಒಂದುಗೂಡಿಸಬೇಕೆಂದು ಶಾಮನೂರು ಶಿವಶಂಕರಪ್ಪ ವಿಶೇಷ ಶ್ರಮ ಹಾಕಿದ್ದಾರೆ. ಒಳಪಂಗಡದ ಗುದ್ದಾಟದಿಂದ ಹೊರಬಂದು ನಾವೆಲ್ಲಾ ಒಗ್ಗೂಡಬೇಕು. ಆಗ ಮಾತ್ರ ಲಿಂಗಾಯತ ಸಮಾಜದ ಅಭಿವೃದ್ಧಿ ಸಾಧ್ಯವಿದೆ. ವೀರಶೈವ ಸಮಾಜ ಬಹಳ ಶಕ್ತಿವಂತ ಸಮಾಜ. ಇತರ ಸಮಾಜಗಳನ್ನೂ ಒಟ್ಟಿಗೆ ತೆಗೆದುಕೊಂಡು ಹೋಗಬೇಕು. ವೀರಶೈವ ಸಮಾಜವನ್ನು ಒಬಿಸಿ ಪಟ್ಟಿಗೆ ಸೇರಿಸಲು ಸಂಪೂರ್ಣ ಸಹಕಾರ ಕೊಡುತ್ತೇನೆ ಎಂದು ಹೇಳಿದರು.

ನಮ್ಮ ಸರ್ಕಾರ ಇದ್ದಾಗ ಶರಣ ಪರಂಪರೆಯನ್ನು ಬೆಂಬಲಿಸುವ ಕೆಲಸವಾಗಿದೆ. 12ನೇ ಶತಮಾನದ ಬಸವಣ್ಣ ಚಳುವಳಿ ವಿಶ್ವದಾದ್ಯಂತ ಪಸರಿಸುವಂತೆ ಮಾಡಿದ್ದೆವು. ಪಂಚಪೀಠಗಳು, ವಿರಕ್ತ ಮಠಗಳನ್ನು ಜೊತೆಯಲ್ಲಿ ತೆಗೆದುಕೊಂಡು ಹೋಗುತ್ತಿದ್ದೆವು. ಲಿಂಗಾಯತ ಮಠಗಳು ಅನ್ನ, ಅಕ್ಷರದಾಸೋಹ ನೀಡುತ್ತಿದ್ದವು. ಅದಕ್ಕಾಗಿ ಮಠಗಳಿಗೆ ಯಾವುದೇ ಹಿಂಜರಿಕೆ ಇಲ್ಲದೆ ಅನುದಾನ ಕೊಟ್ಟೆ ಎಂದರು.

ಶಿವಶಂಕರಪ್ಪನವರ ನಿರ್ಣಯಗಳಿಗೆ ನನ್ನ ಬೆಂಬಲ-ಲಕ್ಷ್ಮೀ ಹೆಬ್ಬಾಳ್ಕರ್: ಶಾಮನೂರು ಶಿವಶಂಕರಪ್ಪನವರು ಮಂಡಿಸಿರುವ 8 ನಿರ್ಣಯಗಳಿಗೆ ನನ್ನ ಸಂಪೂರ್ಣವಾದ ಬೆಂಬಲವಿದೆ ಎಂದು ಮಹಿಳಾ ಮತ್ತು ಮಕ್ಕಳ‌ ಕಲ್ಯಾಣ ಖಾತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದರು. ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಸವಣ್ಣನವರ ವಂಶಸ್ಥರು ಎಂದು ಹೇಳಿಕೊಳ್ಳುವುದಕ್ಕೆ‌ ನನಗೆ ಖುಷಿ ಆಗುತ್ತದೆ. ನಮ್ಮ ಅನೇಕ ಒಳಪಂಗಡಗಳು ಒಂದಾಗುವ ಕಾಲ ಬಂದಿದೆ. ಇದು ಶಕ್ತಿ ಪ್ರದರ್ಶನವಲ್ಲ, ನಾವು ಒಂದಾಗಬೇಕಾಗಿರುವುದು ನಮ್ಮ ಮಕ್ಕಳ ಭವಿಷ್ಯಕ್ಕೆ. ಲಿಂಗಾಯತ ಮಹಾಸಭಾದ ಎಲ್ಲಾ ನಿರ್ಣಯಗಳ‌ ಜೊತೆ ನಾವಿರುತ್ತೇವೆ ಎಂದರು.

ಇದನ್ನೂ ಓದಿ:ಬಿಜೆಪಿಯವರು ಗೋಡ್ಸೆ ಅನುಯಾಯಿಗಳು, ಅವರಿಂದ ಏನೂ ನಿರೀಕ್ಷಿಸಲಾಗದು: ಬಿ‌.ಕೆ‌.ಹರಿಪ್ರಸಾದ್

ABOUT THE AUTHOR

...view details