ಕರ್ನಾಟಕ

karnataka

ದಾವಣಗೆರೆ ಕುಟುಂಬದ ಮೂವರ ಸಾವು ಪ್ರಕರಣ.. ಅಮೆರಿಕದಲ್ಲೇ ಅಂತ್ಯಸಂಸ್ಕಾರ ಮಾಡಲು ಕುಟುಂಬಸ್ಥರ ನಿರ್ಧಾರ

By ETV Bharat Karnataka Team

Published : Aug 26, 2023, 3:17 PM IST

Updated : Aug 26, 2023, 3:23 PM IST

Suspicious Death Of Davanagere Couple In America: ದಾವಣಗೆರೆ ಮೂಲದ ದಂಪತಿ ಹಾಗೂ ಮಗುವಿನ ಅಂತ್ಯಸಂಸ್ಕಾರವನ್ನು ಅಮೆರಿಕದಲ್ಲಿಯೇ ನೆರವೇರಿಸಲು ಮೃತರ ಕುಟುಂಬಸ್ಥರು ಸಿದ್ಧತೆ ನಡೆಸಿದ್ದಾರೆ.

Davangere based couple
Davangere based couple

ದಾವಣಗೆರೆ:ಅಮೆರಿಕದ ಮೇರಿ ಲ್ಯಾಂಡ್ ರಾಜ್ಯದ ಬಾಲ್ಟಿಮೋರ್‌ನಲ್ಲಿ ಇತ್ತೀಚೆಗೆ ನಿಗೂಢವಾಗಿ ಮೃತಪಟ್ಟ ದಾವಣಗೆರೆ ಮೂಲದ ದಂಪತಿ ಹಾಗೂ ಮಗುವಿನ ಅಂತ್ಯಸಂಸ್ಕಾರವನ್ನು ಅಲ್ಲಿಯೇ ನೆರವೇರಿಸಲು ಸಿದ್ಧತೆ ನಡೆಸಲಾಗಿದೆ. ಈಟಿವಿ ಭಾರತ ಜೊತೆ ದೂರವಾಣಿ ಮೂಲಕ ಮಾತನಾಡಿದ ಮೃತರ ಕುಟುಂಬಸ್ಥರು ಇಂದು ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಅಗಸ್ಟ್ 15 ರಂದು ಅಮೆರಿಕದ ನಿವಾಸದಲ್ಲಿ ಸಾಫ್ಟ್​ವೇರ್ ಇಂಜಿನಿಯರ್ ದಂಪತಿ ಯೋಗೇಶ್ ಹೊನ್ನಾಳ್, ಪ್ರತಿಭಾ ಹಾಗೂ ಪುತ್ರ ಯಶ್ ನಿಗೂಢವಾಗಿ ಮೃತಪಟ್ಟಿದ್ದರು. ಈ ಘಟನೆ ಅಗಸ್ಟ್ 18ಕ್ಕೆ ಬೆಳಕಿಗೆ ಬಂದಿತ್ತು. ಈ ಸಂಬಂಧ ಸಾಫ್ಟ್​ವೇರ್ ಇಂಜಿನಿಯರ್ ಯೋಗೇಶ್ ಹೊನ್ನಾಳ್ ಅವರ ತಾಯಿ, ಸಹೋದರ ಪುನೀತ್ ಹೊನ್ನಾಳ್‌ ಈಗಾಗಲೇ ಚೆನ್ನೈ ಮೂಲಕ ಅಮೆರಿಕಕ್ಕೆ ಪ್ರಯಾಣ ಬೆಳೆಸಿದ್ದಾರೆ. ಅವರು ಪುತ್ರ, ಸೊಸೆ ಹಾಗೂ ಮೊಮ್ಮಗನ ಅಂತ್ಯಸಂಸ್ಕಾರದಲ್ಲಿಂದು ಭಾಗಿಯಾಗಲಿದ್ದಾರೆ.

ದೂರವಾಣಿ ಮೂಲಕ ಈಟಿವಿ ಭಾರತಕ್ಕೆ ಮಾಹಿತಿ ನೀಡಿರುವ ಕುಟುಂಬದ ಸದಸ್ಯ ಸಂತೋಷ್ ಅವರು, ಮೃತ ಮೂವರ ಅಂತ್ಯಸಂಸ್ಕಾರವನ್ನು ಇಂದು (ಶನಿವಾರ) ನೆರವೇರಿಸಲು ನಿರ್ಧಾರ ಮಾಡಲಾಗಿದೆ. ಅಮೆರಿಕದ ಕಾಲಮಾನ ಪ್ರಕಾರ 2:00 ಗಂಟೆಗೆ ಅಂತ್ಯಸಂಸ್ಕಾರ ನೆರವೇರಿಸಲಾಗುತ್ತದೆ. ಭಾರತದ ಕಾಲಮಾನ ಪ್ರಕಾರ ಇಂದು ರಾತ್ರಿ 11:30ಕ್ಕೆ ಅಂತ್ಯಸಂಸ್ಕಾರ ನೆರವೇರಲಿದೆ ಎಂದಿದ್ದಾರೆ. ಅಲ್ಲದೇ ಇದೊಂದು ಆತ್ಮಹತ್ಯೆ ಪ್ರಕರಣವೆಂದು ಮಾಹಿತಿ ನೀಡಿರುವ ಅಮೆರಿಕದ ಮೇರಿ ಲ್ಯಾಂಡ್ ರಾಜ್ಯದ ಬಾಲ್ಟಿಮೋರ್‌ ಪೊಲೀಸರು, ಈ ಸಾಮೂಹಿಕ ಸಾವಿಗೆ ನಿರ್ದಿಷ್ಟ ಕಾರಣ ಮಾತ್ರ ತಿಳಿಸಿಲ್ಲ. ಅಂತ್ಯಸಂಸ್ಕಾರದ ಬಳಿಕವೇ ನಿಖರ ಕಾರಣ ತಿಳಿದು ಬರಬಹುದು ಎಂದಿದ್ದಾರೆ. ‌

ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾದ ಶಂಕೆ:ಮೃತ ಯೋಗೇಶ್ ಹೊನ್ನಾಳ್ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರೆಂದು ಬಾಲ್ಟಿಮೋರ್ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದು, ಮೊದಲು ಪತ್ನಿ ಪ್ರತಿಭಾ, ಪುತ್ರ ಯಶ್​ಗೆ ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ. ಬಳಿಕ ತಾನೂ ಸಾವಿಗೆ ಶರಣಾಗಿದ್ದಾರೆ ಎಂದು ವರದಿ ನೀಡಿರುವುದಾಗಿ ಅವರ ಕುಟುಂಬದ ಮೂಲಗಳು ತಿಳಿಸಿವೆ.

ಘಟನಾ ಸ್ಥಳದಲ್ಲಿ ಬಾಲ್ಟಿಮೋರ್ ಕೌಂಟಿ ಪೊಲೀಸರಿಗೆ ಡೆತ್ ನೋಟ್ ಸಿಕ್ಕಿದ್ದು, ಅದರಲ್ಲಿ ಏನಿತ್ತು ಎಂಬ ವಿಚಾರವನ್ನು ಇಲ್ಲಿತನಕ ಅವರು ಬಹಿರಂಗಪಡಿಸಿಲ್ಲ. ಅಂತ್ಯಸಂಸ್ಕಾರ ನಡೆದ ಬಳಿಕ ಮೃತನ ತಾಯಿ, ಸಹೋದರ ಅಲ್ಲಿನ ಪೊಲೀಸರ ಸಮಕ್ಷಮ ಭೇಟಿಯಾದ ಬಳಿಕವೇ ಈ ನಿಗೂಢ ಸಾವಿನ ಬಗ್ಗೆ ಸ್ಪಷ್ಟನೆ ಸಿಗಲಿದೆ.

ಇದನ್ನೂ ಓದಿ:ಅಮೆರಿಕದಲ್ಲಿ ದಾವಣಗೆರೆ ದಂಪತಿ ಸಾವು: ಮೃತದೇಹಗಳನ್ನು ಭಾರತಕ್ಕೆ ತರಲು ಪ್ರಯತ್ನ- ಜಿಲ್ಲಾಧಿಕಾರಿ

ಘಟನೆ ನಡೆದ ಬಳಿಕ ಈ ನಿಗೂಢ ಸಾವು ಪ್ರಕರಣ ವಿಚಾರವಾಗಿ ಪ್ರತಿಕ್ರಿಯಿಸಿದ್ದ ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಎಂ.ವಿ., ನಿರಂತರವಾಗಿ ಅಲ್ಲಿಯ ಕಾನ್ಸುಲೇಟ್ ಜನರಲ್ ಮತ್ತು ಡೆಪ್ಯುಟಿ ಕಾನ್ಸುಲೇಟ್ ಜನರಲ್ ಅಧಿಕಾರಿಗಳ ಜೊತೆಗೆ ಸಂಪರ್ಕದಲ್ಲಿದ್ದೇವೆ. ಮೃತದೇಹಗಳನ್ನು ಭಾರತಕ್ಕೆ ತರಲು ಪ್ರಯತ್ನ ಮಾಡಲಾಗುತ್ತಿದೆ ಎಂದಿದ್ದರು.

ಅಲ್ಲದೇ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದ ಮೃತ ಯೋಗೇಶ್ ಕುಟುಂಬಸ್ಥರು, ಮಗ, ಸೊಸೆ, ಮೊಮ್ಮಗನ ಪಾರ್ಥಿವ ಶರೀರವನ್ನು ತರಿಸಲು ವ್ಯವಸ್ಥೆ ಮಾಡುವಂತೆ ಮನವಿ ಮಾಡಿ ಕಣ್ಣೀರಿಟ್ಟಿದ್ದರು. ಈ ವೇಳೆ ಸಿಎಂ ಅಗತ್ಯ ನೆರವು ಒದಗಿಸುವುದಾಗಿ ಭರವಸೆ ನೀಡಿದ್ದರು. ಅಲ್ಲದೇ ಮೃತರ ಕುಟುಂಬಕ್ಕೆ ಸಾಂತ್ವನ ಸಹ ಹೇಳಿದ್ದರು.

ಇದನ್ನೂ ಓದಿ: ದಾವಣಗೆರೆ ಮೂಲದ ದಂಪತಿ, ಮಗು ಅಮೆರಿಕಾದಲ್ಲಿ ನಿಗೂಢ ಸಾವು: ಸ್ವದೇಶಕ್ಕೆ ಮೃತದೇಹ ತರಲು ಕೇಂದ್ರ ಸರ್ಕಾರಕ್ಕೆ ಕುಟುಂಬಸ್ಥರ ಮನವಿ

Last Updated : Aug 26, 2023, 3:23 PM IST

ABOUT THE AUTHOR

...view details