ದಾವಣಗೆರೆ:ಬಿಜೆಪಿಗೆ ವೀರಶೈವ ಮತಗಳು ಕೈಬಿಡುತ್ತವೆ ಎಂಬ ಆತಂಕ ಇಲ್ಲ, ಕಳೆದ ಚುನಾವಣೆಗಳಿಗೆ ಹೋಲಿಸಿದ್ರೆ ಅದರ ಸರಾಸರಿ ಹೆಚ್ಚಾಗುತ್ತೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು. ದಾವಣಗೆರೆಯಲ್ಲಿ ಮಾತನಾಡಿದ ಅವರು, ಲಿಂಗಾಯತ ಮತಗಳ ಸರಾಸರಿ ಪ್ರಮಾಣ ಈ ಬಾರಿ ಹೆಚ್ಚಾಗುತ್ತೆ, ಸವದಿ ಶೆಟ್ಟರ್ ಹೋಗಿರುವುದರಿಂದ ಲಿಂಗಾಯತ ಮತ ಸರಾಸರಿಯಲ್ಲಿ ಯಾವುದೇ ವ್ಯತ್ಯಾಸ ಆಗುವುದಿಲ್ಲ ಎಂದರು.
ಲಿಂಗಾಯತ ಮುಖ್ಯಮಂತ್ರಿಗಳು ಭ್ರಷ್ಟರು ಎಂಬ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಹೇಳಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿದೆ, ಅವರು ಹೇಳಿಕೆ ನಾವು ತಿರುಚಿಲ್ಲ. ರಾಹುಲ್ ಗಾಂಧಿಯವರು ಕರ್ನಾಟಕಕ್ಕೆ ಬಂದಷ್ಟು ಬಿಜೆಪಿಗೆ ಲಾಭ, ರಾಹುಲ್ ಗಾಂಧಿಯವರು ಹೋದ ಕಡೆಯೆಲ್ಲೆಲ್ಲಾ ಅದು ಸಾಬೀತಾಗಿದೆ, ರಾಹುಲ್ ಗಾಂಧಿ ನಿನ್ನೆ ಕೂಡಲಸಂಗಮಕ್ಕೆ ಹೋಗಿದ್ದು ತೋರಿಕೆಗಾಗಿ ವಿಭೂತಿ ಹಚ್ಚಿದ್ದಾರೆ ಎಂದು ವ್ಯಂಗ್ಯವಾಡಿದರು.
ವೀರಶೈವ ಮತಗಳು ಕೈಬಿಡುತ್ತದೆ ಎಂಬ ಆತಂಕ ಇಲ್ಲ ಅದರ ಸರಾಸರಿ ಹೆಚ್ಚಾಗುತ್ತದೆ. ಈ ಬಾರಿ 19 ರಿಂದ 30 ವರ್ಷದ ಯುವಕರು ಬಿಜೆಪಿ ಪಕ್ಷದ ಪರವಾಗಿದ್ದಾರೆ. ಹೊಸ ಬದಲಾವಣೆ ಬಯಸಿ ಯುವಕರು ಬಿಜೆಪಿ ಕಡೆ ಬರುತ್ತಿದ್ದಾರೆ ಎಂದು ಹೇಳಿದರು. ಇನ್ನು ಮುಂದಿನ ಸಿಎಂ ಬಸವರಾಜ್ ಬೊಮ್ಮಾಯಿ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕೂಸು ಹುಟ್ಟುವುದಕ್ಕೆ ಮುಂಚೆ ಕುಲಾವಿ ಹೊಲಿಸುವುದು ಸರಿಯಲ್ಲ. ಫಲಿತಾಂಶ ಬಂದ ಬಳಿಕ ಪಕ್ಷದ ವರಿಷ್ಠರು ನಿರ್ಧಾರ ತೆಗದುಕೊಳ್ಳುತ್ತಾರೆ ಎಂದರು.