ಕರ್ನಾಟಕ

karnataka

ಬೆಳ್ತಂಗಡಿ: ತೀವ್ರ ಹೊಟ್ಟೆ ನೋವಿನಿಂದ ಬಳಲಿ ಸಾವನ್ನಪ್ಪಿದ ಗೆಳತಿಯರು

By

Published : Apr 7, 2023, 7:25 AM IST

ತೀವ್ರ ಹೊಟ್ಟೆ ನೋವಿನಿಂದ ಬಳಲಿ ಸಾವನ್ನಪ್ಪಿದ ಸ್ನೇಹಿತೆಯರು - ಧರ್ಮಸ್ಥಳ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲು.

Young women died
ರಕ್ಷಿತಾ ಹಾಗೂ ಲಾವಣ್ಯ

ಬೆಳ್ತಂಗಡಿ(ದಕ್ಷಿಣ ಕನ್ನಡ):ತೀವ್ರ ಹೊಟ್ಟೆ ನೋವಿನಿಂದ ಬಳಲಿ ಸ್ನೇಹಿತೆಯರಿಬ್ಬರು ಅಸಹಜ ರೀತಿಯಲ್ಲಿ ಸಾವನ್ನಪ್ಪಿದ ಘಟನೆ ನಿನ್ನೆ(ಏ.6) ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ಪಟ್ರಮೆಯಲ್ಲಿ ನಡೆದಿದೆ. ಮೃತ ಯುವತಿಯರು ಬೆಳ್ತಂಗಡಿ ತಾಲೂಕಿನ ಪಟ್ರಮೆ ಗ್ರಾಮದ ಪಟ್ಟೂರಿನ ಬಾಬು ಹಾಗೂ ಗೀತಾ ದಂಪತಿ ಪುತ್ರಿ ರಕ್ಷಿತಾ (22) ಹಾಗೂ ಆಕೆಯ ನೆರೆಮನೆಯ ಶ್ರೀನಿವಾಸ ಆಚಾರಿ ಹಾಗೂ ಪಾರ್ವತಿ ದಂಪತಿ ಪುತ್ರಿ ಲಾವಣ್ಯ (20) ಎಂದು ಗುರುತಿಸಲಾಗಿದೆ.

ಇವರಿಬ್ಬರು ಕಳೆದೊಂದು ವರ್ಷದಿಂದ ಅನಾರು ಹಾಗೂ ಮುಂಡೂರು ಪಳಿಕೆ - ಉಪ್ಪಾರ ಪಳಿಕೆ ವಲಯದ ಸೇವಾ ನಿರತೆಯರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಇಬ್ಬರು ಉತ್ತಮ ಸ್ನೇಹಿತೆಯಾಗಿದ್ದರು. ಕಳೆದ ಭಾನುವಾರ ರಕ್ಷಿತಾ ಹಾಗೂ ಲಾವಣ್ಯ ಇಬ್ಬರಿಗೂ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ಮನೆಯವರು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಿಸದೇ ಇಬ್ಬರೂ ಗುರುವಾರ(ಏ.6) ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಹೊಟ್ಟೆ ನೋವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ವೈದ್ಯಕೀಯ ಪರೀಕ್ಷೆಯ ವರದಿ ನಂತರವೇ ಕಾರಣ ತಿಳಿದು ಬರಬೇಕಿದೆ. ಸ್ಥಳಕ್ಕೆ ಧರ್ಮಸ್ಥಳ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಗೆಳತಿಯರಿಬ್ಬರು ಒಂದೇ ದಿನ ಹೊಟ್ಟೆ ನೋವಿನಿಂದ ಸಾವಿನಪ್ಪಿರುವುದು ಸಾರ್ವಜನಿಕರಲ್ಲಿ ಸಂಶಯಕ್ಕೆ ಕಾರಣವಾಗಿದೆ.

ಇದನ್ನೂ ಓದಿ:ಕೌಟುಂಬಿಕ ಕಲಹ: ಆತ್ಮಹತ್ಯೆಗೆ ಶರಣಾದ ದಂಪತಿ

ಇಬ್ಬರು ಭಕ್ತರ ಸಾವು:ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಗೋಲಗೇರಿ ಗ್ರಾಮದಲ್ಲಿಂದು ನಡೆಯುತ್ತಿದ್ದ ಗೋಲ್ಲಾಳೇಶ್ವರ ರಥೋತ್ಸವದಲ್ಲಿ ನಡೆದ ಅವಘಡದಲ್ಲಿ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಮೃತನನ್ನು ಸಾಹೇಬ ಪಟೇಲ(ಮುದುಕಣ್ಣ) ಖಾಜಾಪಟೇಲ ಕಾಚಾಪೂರ(55) ಎಂದು ಗುರುತಿಸಲಾಗಿದೆ. ಇವರು ತಮ್ಮ 18ನೇ ವಯಸ್ಸಿನಿಂದಲೂ ತೇರಿಗೆ ಕಳಶ ಮತ್ತು ಕೊಡೆ ಕಟ್ಟುತ್ತಿದ್ದರು. ಆದರೆ ಈ ಘಟನೆಯಲ್ಲಿ ಕೈಯಲ್ಲಿದ್ದ ಹಗ್ಗ ಕೊಸರಿದ ಕಾರಣ ರಥದಿಂದ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ. ರಥೋತ್ಸವದಲ್ಲಿ ಪಾಲ್ಗೊಂಡಿದ್ದ ಜನರ ಮೇಲೆ ಅವರು ಬಿದ್ದರು. ಇದೇ ಸಂದರ್ಭದಲ್ಲಿ ಓರ್ವ ವ್ಯಕ್ತಿಯ ಕಾಲು ಮುರಿದಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ:ದಾವಣಗೆರೆ: ರಾತ್ರಿ ಮನೆ ಮುಂದೆ‌ ಮಲಗಿದ್ದ ವೃದ್ದನ ಹತ್ಯೆ

ರಥದ ಚಕ್ರಕ್ಕೆ ಸಿಲುಕಿದ ಭಕ್ತ ಸಾವು:ಬಸರಕೋಡ ಪವಾಡ ಬಸವೇಶ್ವರ ಜಾತ್ರೋತ್ಸವದ ನಿಮಿತ್ತ ಸಂಜೆ ರಥೋತ್ಸವ ಜರುಗುತ್ತಿದ್ದ ವೇಳೆ ಗ್ರಾಮಸ್ಥ ನಾಗಪ್ಪ ಯಲ್ಲಪ್ಪ ವಣಕ್ಯಾಳ (24) ಎಂಬಾತ ರಥಕ್ಕೆ ಕಟ್ಟಿದ್ದ ಹಗ್ಗ ಹಿಡಿದು ಆಯತಪ್ಪಿ ಜಾರಿ ಬಿದ್ದಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಆತನನ್ನು ಅಕ್ಕಪಕ್ಕದಲ್ಲಿದ್ದ ಜನರು, ಪೊಲೀಸರು ತಾಲೂಕಾಸ್ಪತ್ರೆಗೆ ದಾಖಲಿಸಿದ್ದರು. ಚಕ್ರ ಹರಿದಿದ್ದರಿಂದ ತೀವ್ರವಾಗಿ ಗಾಯಗೊಂಡಿದ್ದ ಆತ ಬಾಗಲಕೋಟೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ. ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸ್ಥಳಕ್ಕೆ ಪಿಎಸ್​ಐ ಆರೀಫ್ ಮುಶಾಪುರಿ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ:ವಿಜಯಪುರ: ಗೋಲ್ಲಾಳೇಶ್ವರ, ಬಸವೇಶ್ವರ ರಥೋತ್ಸವದಲ್ಲಿ ಇಬ್ಬರು ಭಕ್ತರ ಸಾವು

ABOUT THE AUTHOR

...view details