ಕರ್ನಾಟಕ

karnataka

ಕೆಲಸದಾತನ ನಂಬಿ ಮೋಸಹೋದ ಮಾಲೀಕ: ಮನೆಯಲ್ಲಿದ್ದ ಲಕ್ಷಾಂತರ ಮೌಲ್ಯದ ನಗ, ನಗದು ಮಾಯ

By ETV Bharat Karnataka Team

Published : Oct 24, 2023, 9:46 PM IST

ಮಾಲೀಕನ ನಂಬಿಕೆ ಗಳಿಸಿದ್ದ ಕೆಲಸದಾತನೇ ಮನೆಯಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ಹಣ ಕದ್ದು ಪರಾರಿಯಾಗಿರುವ ಘಟನೆ ಬಂಟ್ವಾಳದಲ್ಲಿ ನಡೆದಿದೆ.

Theft in the owner house by the housekeeper in Bantwal
ಲಕ್ಷಾಂತರ ರೂ ಕಳವು ಪ್ರಕರಣ

ಬಂಟ್ವಾಳ: ಹೆಸರಾಂತ ಬಿಲ್ಡರ್‌ವೋರ್ವರ ಮನೆಯಲ್ಲಿ ಕೆಲಸಕ್ಕಿದ್ದ ವ್ಯಕ್ತಿಯೋರ್ವ ಲಕ್ಷಾಂತರ ರೂ ಮೌಲ್ಯದ ನಗ ಹಾಗೂ ನಗದು ಕಳವು ಮಾಡಿ ಪರಾರಿಯಾಗಿರುವ ಘಟನೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಫರಂಗಿಪೇಟೆ ಎಂಬಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಪುದು ಗ್ರಾಮದ ಕೋಡಿಮಜಲು ನಿವಾಸಿ ಇಮಾದ್ ಬಿಲ್ಡರ್ ಮಾಲೀಕ ಮೊಹಮ್ಮದ್ ಝಫರುಲ್ಲಾ ಎಂಬವರ ಮನೆಯ ಕಪಾಟಿನೊಳಗೆ ಇರಿಸಲಾಗಿದ್ದ ಲಕ್ಷಾಂತರ ಬೆಲೆ ಬಾಳುವ ಚಿನ್ನಾಭರಣಸಹಿತ ಲಕ್ಷಾಂತರ ರೂ ಹಣವನ್ನು ಮನೆಯ ಕೆಲಸದಾತನೇ ಕದ್ದುಕೊಂಡು ಹೋಗಿರುವುದಾಗಿ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಸುಮಾರು 2,75,0000 ರೂ ಹಾಗೂ 4,96,000 ಮೌಲ್ಯದ ವಿವಿಧ ಬಗೆಯ ಚಿನ್ನಾಭರಣಗಳನ್ನು ಕಳವು ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

ಇಮಾದ್ ಬಿಲ್ಡರ್ ಮಾಲೀಕ ಮೊಹಮ್ಮದ್ ಝಫರುಲ್ಲಾ ಎಂಬವರ ಜತೆ ಸುಮಾರು 8 ತಿಂಗಳ ಹಿಂದೆ ಕಟ್ಟಡ ಕಾಮಗಾರಿಯ ಕೆಲಸಕ್ಕೆ ಮಂಜೇಶ್ವರ ಮೂಲದ ಆಲಿ ಎಂಬಾತ ಸೇರಿದ್ದ. ಆತನಿಗೆ ಫರಂಗಿಪೇಟೆ ಎಂಬಲ್ಲಿನ ಹುಡುಗಿಯೊಂದಿಗೆ ವಿವಾಹವಾಗಿದ್ದು, ಮಾಲೀಕರ ಜತೆ ಹೆಚ್ಚಿನ ವಿಶ್ವಾಸ ಹೊಂದಿದ್ದ. ಈ ಕಾರಣಕ್ಕಾಗಿ ಸಹಾಯಕನಾಗಿ ದುಡಿಯುತ್ತಿದ್ದ ಆಲಿಯಲ್ಲಿ ಮನೆಗೆ ಅಗತ್ಯ ಸಾಮಗ್ರಿಗಳನ್ನು ಕಳುಹಿಸಿಕೊಡುತ್ತಿದ್ದರು. ಆದರೆ ಈತನ ಮೇಲಿರಿಸಿದ್ದ ಅತಿಯಾದ ವಿಶ್ವಾಸ ಮಾಲೀಕರಿಗೆ ಮುಳುವಾಗಿ ಪರಿಣಮಿಸಿದೆ.

ಅ.18 ರಂದು ಮನೆ ಮಂದಿ ಎಲ್ಲರೂ ಮನೆಗೆ ಬೀಗ ಹಾಕಿ ಮಂಗಳಾದೇವಿ, ಜಪ್ಪುವಿನಲ್ಲಿರುವ ತಮ್ಮ ಸಹೋದರನ ಮನೆಗೆ ಹೋಗಿದ್ದರು. ಮನೆಗೆ ಬೀಗ ಹಾಕಿ, ಕೀಯನ್ನು ಆಲಿ ಕೈಯಲ್ಲಿ ನೀಡಿದ್ದರು. ಬಳಿಕ 19ರಂದು ಕಟ್ಟಡ ಕಾಮಗಾರಿಯ ವಿಚಾರಕ್ಕೆ ಮಾಲೀಕ ಮೊಹಮ್ಮದ್ ಅವರು ಈತನಿಗೆ ಪೋನ್ ಮಾಡಿದಾಗ ಪೋನ್ ಸ್ವಿಚ್ ಆಫ್ ಆಗಿತ್ತು. ಆದರೆ ಫೋನ್ ಸ್ವಿಚ್ ಆಫ್ ಆಗಿರುವ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡಿರದ ಮಾಲೀಕ ಮರುದಿನ 20 ರಂದು ಅಗತ್ಯ ಕೆಲಸವೊಂದರ ನಿಮಿತ್ತ ಬೆಂಗಳೂರಿಗೆ ತೆರಳಿದ್ದರು.

ಬೆಂಗಳೂರಿಗೆ ತೆರಳಿದ ಬಳಿಕ ಅಲ್ಲಿಂದ ಕರೆ ಮಾಡಿದಾಗಲೂ ಆತನ ಮೊಬೈಲ್ ಸ್ವಿಚ್​ ಆಫ್ ಆಗಿತ್ತು. ಅ.23 ರಂದು ಊರಿಗೆ ವಾಪಸ್ಸಾದ ಇವರು ರಾತ್ರಿ ಸುಮಾರು 8 ಗಂಟೆಗೆ ಮನೆಗೆ ಹೋಗಿ ನೋಡಿದಾಗ ಮನೆಯ ಬಾಗಿಲು ಹಾಕಿಕೊಂಡಿತ್ತು. ಕೀ ಕೊಡುವಂತೆ ಕೇಳಲು ಮತ್ತೆ ಕರೆ ಮಾಡಿದಾಗಲೂ ಸ್ವಿಚ್​ ಆಫ್ ಎಂದೇ ಬಂದಿತ್ತು. ಸಂಶಯಗೊಂಡು ಮನೆಯ ಹಿಂಬದಿ ಕಿಟಕಿಯಲ್ಲಿ ನೋಡಿದಾಗ ಕೋಣೆ ಬಾಗಿಲು ತೆರೆದುಕೊಂಡಿದ್ದು, ಕಪಾಟಿನ ಲಾಕರ್ ಮುರಿದು ಅದರಲ್ಲಿ ಇದ್ದ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿತ್ತು.

ಕೂಡಲೇ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿ, ಪೊಲೀಸ್ ಸಮಕ್ಷಮದಲ್ಲಿ ಮನೆಯ ಬಾಗಿಲು ಮುರಿದು ಒಳಗೆ ಹೋಗಿ ನೋಡಿದಾಗ ಮೊಹಮ್ಮದ್ ಅವರು ಕಪಾಟಿನಲ್ಲಿರಿಸಲಾಗಿದ್ದ 25,00,000 ಲಕ್ಷ ರೂ ಹಾಗೂ ಅವರ ತಂದೆಯ ಕಪಾಟಿನಲ್ಲಿರಿಸಲಾಗಿದ್ದ 2,50,000 ಲಕ್ಷ ರೂ. ಹಾಗೂ 4,96,000 ಲಕ್ಷ ರೂ ಮೌಲ್ಯದ 24 ಗ್ರಾಂ ತೂಕದ ಬ್ರೇಸ್​ಲೈಟ್, 16 ಗ್ರಾಂ ತೂಕದ ಎರಡು ಚಿನ್ನದ ಉಂಗುರ, 40 ಗ್ರಾಂ ತೂಕದ ಚಿನ್ನದ ಬಲೆಗಳು, 8 ಗ್ರಾಂ ತೂಕದ ಚಿನ್ನದ ಬೆಂಡೋಲೆ, 32 ಗ್ರಾಂ ತೂಕದ ಚಿನ್ನದ ಮಾಲೆ, 4 ಗ್ರಾಂ ತೂಕದ ಚಿನ್ನದ ಸರ ಕಳವಾಗಿತ್ತು. ಘಟನೆ ನಡೆದ ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಇನ್​ಸ್ಪೆಕ್ಟರ್ ಶಿವಕುಮಾರ್, ಎಸ್​ಐ ಹರೀಶ್ ಹಾಗೂ ಬೆರಳಚ್ಚು ತಜ್ಞರು, ಶ್ವಾನದಳದವರು ಆಗಮಿಸಿ ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ:ಬೆಂಗಳೂರು: ಉದ್ಯಮಿ ಅಪಹರಣ ಪ್ರಕರಣ ಸುಖಾಂತ್ಯ; ₹50 ಲಕ್ಷಕ್ಕೆ ಬೇಡಿಕೆ ನಾಲ್ವರ ಬಂಧನ

ABOUT THE AUTHOR

...view details