ಕರ್ನಾಟಕ

karnataka

ಮಂಗಳೂರು: ದೈವಸ್ಥಾನಕ್ಕೆ ನುಗ್ಗಿ ಕಳ್ಳತನಕ್ಕೆ ಯತ್ನಿಸಿದ್ದ ಆರೋಪಿ ಬಂಧನ

By

Published : Oct 22, 2021, 9:30 PM IST

ಕರ್ಕೇರ ಮೂಲಸ್ಥಾನದ ದೈವಸ್ಥಾನದಲ್ಲಿ ಕಳ್ಳತನಕ್ಕೆ ಯತ್ನಿಸಿ, ದೇವರ ವಿಗ್ರಹ ಒಡೆದು ಹಾಕಿದ್ದ ಆರೋಪಿಯನ್ನು ಪಣಂಬೂರು ಪೊಲೀಸರು ಬಂಧಿಸಿದ್ದಾರೆ.

ದೈವಸ್ಥಾನಕ್ಕೆ ನುಗ್ಗಿ ಕಳ್ಳತನಕ್ಕೆ ಯತ್ನಿಸಿದ್ದ ಆರೋಪಿ ಬಂಧನ
ದೈವಸ್ಥಾನಕ್ಕೆ ನುಗ್ಗಿ ಕಳ್ಳತನಕ್ಕೆ ಯತ್ನಿಸಿದ್ದ ಆರೋಪಿ ಬಂಧನ

ಮಂಗಳೂರು: ನಗರದ ಬೈಕಂಪಾಡಿಯ ಕೈಗಾರಿಕಾ ಪ್ರದೇಶದ ಮುಖ್ಯ ರಸ್ತೆಯಲ್ಲಿರುವ ಕರ್ಕೇರ ಮೂಲಸ್ಥಾನದ ದೈವಸ್ಥಾನದಲ್ಲಿ ನಡೆದಿರುವ ಕಳ್ಳತನ ಯತ್ನ ಹಾಗೂ ವಿಗ್ರಹಗಳನ್ನು ಒಡೆದು ಹಾಕಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಕುಳಾಯಿ ನಿವಾಸಿ ರೋಹಿತಾಶ್ವ ಬಂಧಿತ ಆರೋಪಿಯಾಗಿದ್ದಾನೆ.

ಆರೋಪಿ‌ ರೋಹಿತಾಶ್ವ ಬೈಕಂಪಾಡಿಯಲ್ಲಿ ಕಳೆದ ಹಲವಾರು ವರ್ಷಗಳಿಂದ ಕೂಲಿ ಕೆಲಸ ಮಾಡುತ್ತಿದ್ದ. ಈತ ದೈವಸ್ಥಾನದಲ್ಲಿ ನಗ - ನಾಣ್ಯದ ಆಸೆಗೆ ಕಳವು ಮಾಡಲು ಮುಂದಾಗಿದ್ದ. ಆದರೆ, ಯಾವುದೇ ಮೌಲ್ಯಯುತ ವಸ್ತುಗಳು ದೊರೆಯದಿರುವ ಹಿನ್ನೆಲೆ ಅಲ್ಲಿನ ವಿಗ್ರಹಗಳನ್ನು ಭಗ್ನಗೊಳಿಸಲು ಯತ್ನಿಸಿದ್ದಾನೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.

ಕಳ್ಳತನ ಮಾಡಲು ದೈವಸ್ಥಾನಕ್ಕೆ ನುಗ್ಗಿರುವ ಆರೋಪಿಯು ಕಾಣಿಕೆ ಡಬ್ಬಿ ಮತ್ತು ಕಚೇರಿ ಒಳಗಿರುವ ಕಪಾಟು ಒಡೆದು ಹುಡುಕಾಡಿದ್ದಾನೆ. ಆದರೆ, ಏನೂ ದೊರಕದಿದ್ದಾಗ ಹತಾಶಗೊಂಡು ಅಲ್ಲಿದ್ದ ಶಿವಲಿಂಗ, ನಾಗದೇವರ ಮೂರ್ತಿಗಳನ್ನು ಹೊರಗಡೆ ಎತ್ತಿ ಹಾಕಿ ಭಗ್ನಗೊಳಿಸಿದ್ದ ಎನ್ನಲಾಗಿದೆ.

ಈ ಸಂಬಂಧ ಅಕ್ಟೋಬರ್ 17 ರಂದು ಪಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ತನಿಖೆ ನಡೆಸಿರುವ ಪೊಲೀಸರು ಆರೋಪಿಯನ್ನು ಬಂಧಿಸಿ ಅಕ್ಟೋಬರ್ 21 ರಂದು ನ್ಯಾಯಾಲಕ್ಕೆ ಹಾಜರುಪಡಿಸಿದ್ದಾರೆ. ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

ABOUT THE AUTHOR

...view details