ಕರ್ನಾಟಕ

karnataka

ಬಂಟ್ವಾಳದಲ್ಲಿ 100 ರೂಪಾಯಿ ವಿಚಾರಕ್ಕೆ ಗಂಡ-ಹೆಂಡತಿ ಜಗಳ: ಪತಿಯ ಕೊಲೆಯಲ್ಲಿ ಅಂತ್ಯ

By

Published : Feb 23, 2022, 9:02 PM IST

ಕೇಶವ ಪೂಜಾರಿ ತಿಂಗಳ ಸಂಪಾದನೆಯನ್ನು ತಂದು ಹೆಂಡತಿಗೆ ಕೊಟ್ಟು ಅದರಲ್ಲಿ ನೂರು ರೂಪಾಯಿ ಕೊಡುವಂತೆ ಕೇಳುತ್ತಾನೆ. ಅದಕ್ಕೆ ಕೇಶವನ ಹೆಂಡತಿ ಪ್ರೇಮಾ ಅವರು ಈ ವಿಚಾರವನ್ನು ತನ್ನ ಅಣ್ಣ ಅಶೋಕ್​ನಿಗೆ ಹೇಳುತ್ತಾರೆ. ಅಶೋಕ್​ ಕೇಶವನಿಗೆ ಹೊಡೆದ ಪರಿಣಾಮ ಆತ ಸಾವನ್ನಪ್ಪಿದ್ದಾರೆ.

keshava poojari
ಕೇಶವ ಪೂಜಾರಿ

ಬಂಟ್ವಾಳ(ದಕ್ಷಿಣ ಕನ್ನಡ): ನೂರು ರೂಪಾಯಿ ವಿಚಾರವಾಗಿ ಗಂಡ-ಹೆಂಡತಿ ಮಧ್ಯೆ ಉಂಟಾದ ವೈಮನಸ್ಸಿನಿಂದಾಗಿ ತನ್ನ ಬಾವನಿಂದಲೇ ಹಲ್ಲೆಗೊಳಗಾದ ವ್ಯಕ್ತಿ ಸಾವನ್ನಪ್ಪಿದ್ದು, ಆರೋಪಿಯನ್ನು ಬಂಟ್ವಾಳ ಪೊಲೀಸರು ಬಂಧಿಸಿದ್ದಾರೆ. ಬಂಟ್ವಾಳ ತಾಲೂಕಿನ ತೆಂಕಕಜೆಕಾರು ಗ್ರಾಮದ ಬರಮೇಲು ನಿವಾಸಿ ಕೇಶವ ಪೂಜಾರಿ(47)ಕೊಲೆಯಾದವರು. ಅವರ ಬಾವ ಮಣಿನಾಲ್ಕೂರು ಗ್ರಾಮದ ಅಶೋಕ್ ಯಾನೆ ಚಂದಪ್ಪ (45) ಪೂಜಾರಿ ಬಂಧಿತ ಆರೋಪಿ.

ಕೇಶವ ಪೂಜಾರಿ ಮಂಗಳೂರಿನ ಹೋಟೆಲ್‌ನಲ್ಲಿ ಅಡುಗೆ ಕೆಲಸ ಮಾಡುತ್ತಿದ್ದು, ಕಳೆದ ಜ.31ರಂದು ಮನೆಗೆ ಬಂದ ಅವರು ಸಂಬಳದ ಹಣವನ್ನು ಪತ್ನಿ ಪ್ರೇಮಾ ಅವರಲ್ಲಿ ನೀಡಿದ್ದಾರೆ. ಬಳಿಕ ನೂರು ರೂಪಾಯಿ ಕೇಳಿದ್ದಾರೆ. ಇದೇ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆ ಉಂಟಾಗಿತ್ತು. ಪ್ರೇಮಾ ಅವರು ಈ ವಿಚಾರವನ್ನು ತನ್ನ ಅಣ್ಣ ಅಶೋಕ್ ಯಾನೆ ಚಂದಪ್ಪ ಪೂಜಾರಿಗೆ ತಿಳಿಸಿದ್ದಾರೆ. ಮನೆಗೆ ಬಂದ ಅಶೋಕ್ ಅವರು ಕೇಶವ ಪೂಜಾರಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು ಎನ್ನಲಾಗ್ತಿದೆ.

ಗಂಭೀರ ಗಾಯಗೊಂಡಿದ್ದ ಕೇಶವ ಪೂಜಾರಿಗೆ ವಿಪರೀತ ಎದೆನೋವು ಕಾಣಿಸಿಕೊಂಡಿತ್ತು. ತತ್‌ಕ್ಷಣ ಅವರನ್ನು ತಾಯಿ ಲೀಲಾ ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಔಷಧಿ ಪಡೆದು, ಪುಂಜಾಲಕಟ್ಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಬಳಿಕ ಕೇಶವ ಪೂಜಾರಿ ಅವರಿಗೆ ಫೆ.8ರಂದು ತೀವ್ರ ಅನಾರೋಗ್ಯ ಕಾಣಿಸಿಕೊಂಡಿತ್ತು. ಮನೆಮಂದಿ ಅವರನ್ನು ಬಂಟ್ವಾಳ ಆಸ್ಪತ್ರೆಗೆ ಸಾಗಿಸುವಾಗ ದಾರಿ ಮಧ್ಯೆ ಸಾವನ್ನಪ್ಪಿದ್ದಾರೆ.

ಘಟನೆ ಬಗ್ಗೆ ನೆರೆಹೊರೆಯವರು ಬೆಳ್ತಂಗಡಿ ಸರ್ಕಲ್ ಇನ್ಸ್‌ಪೆಕ್ಟರ್ ಶಿವಕುಮಾರ್ ಅವರಿಗೆ ಮಾಹಿತಿ ನೀಡಿದ್ದಾರೆ. ಅವರು ಪುಂಜಾಲಕಟ್ಟೆ ಪೊಲೀಸರಿಗೆ ಮಾಹಿತಿ ನೀಡಿ ಶವಪರೀಕ್ಷೆ ಮಾಡಿಸಲು ಸೂಚಿಸಿದ್ದಾರೆ. ಅದರಂತೆ ದೇರಳಕಟ್ಟೆಯ ಕೆ.ಎಸ್.ಹೆಗ್ಡೆ ಆಸ್ಪತ್ರೆಯಲ್ಲಿ ಮೃತದೇಹದ ಶವಪರೀಕ್ಷೆ ಮಾಡಿಸಿದಾಗ ಹಲ್ಲೆಯಿಂದ ಗಂಭೀರ ಗಾಯಗೊಂಡು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಪ್ರಕರಣ ದಾಖಲಿಸಿಕೊಂಡ ಸಿಐ ಶಿವಕುಮಾರ್ ಮತ್ತು ತಂಡ ಆರೋಪಿಯನ್ನು ಫೆ.21ರಂದು ಮಂಗಳೂರಿನ ಬಜಪೆ ವ್ಯಾಪ್ತಿಯ ಹೋಟೆಲ್‌ನಲ್ಲಿ ಬಂಧಿಸಿದ್ದಾರೆ. ಬಳಿಕ ಆರೋಪಿಯನ್ನು ಪುಂಜಾಲಕಟ್ಟೆ ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದು, ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಇದನ್ನೂ ಓದಿ:ಹೈದರಾಬಾದ್​ನಲ್ಲಿ ಗೋವುಗಳ ಅಕ್ರಮ ಸಾಗಾಟ ಅಡ್ಡಿಪಡಿಸಿದವರ ಮೇಲೆ ಹಲ್ಲೆ, ಪೊಲೀಸರ ಲಾಠಿಚಾರ್ಜ್​

TAGGED:

ABOUT THE AUTHOR

...view details