ಕರ್ನಾಟಕ

karnataka

ಗುಡ್ಡ ಕುಸಿಯುವ ಭೀತಿ: ಕುಕ್ಕೆ ಸುಬ್ರಹ್ಮಣ್ಯದ 8 ಕುಟುಂಬಗಳು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ

By

Published : Jul 10, 2023, 8:13 PM IST

ಕಡಬ ತಾಲೂಕು ಆಡಳಿತದ ಸೂಚನೆಯಂತೆ ಕುಕ್ಕೆ ಸುಬ್ರಹ್ಮಣ್ಯ ಗ್ರಾಮದ ನೂಚಿಲ ಎಂಬಲ್ಲಿರುವ 8 ಕುಟುಂಬಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.

Kukke Subrahmanya
ಕುಕ್ಕೆ ಸುಬ್ರಹ್ಮಣ್ಯ ಗ್ರಾಮದ ನೂಚಿಲ

ಸುಬ್ರಹ್ಮಣ್ಯ(ದಕ್ಷಿಣ ಕನ್ನಡ):ಗುಡ್ಡ ಕುಸಿಯುವ ಭೀತಿ ಹಿನ್ನೆಲೆ ಕುಕ್ಕೆ ಸುಬ್ರಹ್ಮಣ್ಯ ಗ್ರಾಮದ ನೂಚಿಲ ಎಂಬಲ್ಲಿರುವ 8 ಕುಟುಂಬಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಕಡಬ ತಾಲೂಕು ಆಡಳಿತ ಸೂಚಿಸಿತ್ತು. ಅದರಂತೆ ಈ ಕುಟುಂಬಗಳಿಗೆ ನೋಟಿಸ್ ಜಾರಿ ಮಾಡಲಾಗಿತ್ತು. ಜು. 8ರಂದು ಇವರನ್ನು ಸ್ಥಳಾಂತರಿಸಲಾಗಿದೆ ಎಂದು ತಿಳಿದು ಬಂದಿದೆ.

ಆದಿ ಸುಬ್ರಹ್ಮಣ್ಯ ದೇವಸ್ಥಾನ ಬಳಿಯ ನೂಚಿಲ ಗುಡ್ಡದ ಬುಡದಲ್ಲೇ ಮಣ್ಣು ಸಮತಟ್ಟು ಮಾಡಿ ಈ ಪ್ರದೇಶದಲ್ಲಿ 8 ಕುಟುಂಬಗಳು ಮನೆ ಕಟ್ಟಿಕೊಂಡು ವಾಸವಾಗಿದ್ದವು. ಕಳೆದ ಕೆಲ ದಿನಗಳಿಂದ ಸುರಿದ ಧಾರಾಕಾರ ಮಳೆ ಹಿನ್ನೆಲೆ ಗುಡ್ಡ ಕುಸಿದು ಬೀಳುವ ಅಪಾಯ ಹೆಚ್ಚಾಗಿದೆ. ಈ ಹಿನ್ನೆಲೆ ಇಲ್ಲಿರುವ ಕುಟುಂಬಗಳನ್ನು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಅಭಯ ಪ್ರವಾಸಿ ಮಂದಿರದಲ್ಲಿ ತೆರೆಯಲಾದ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಭಾರಿ ಗಾಳಿ, ಮಳೆ: ದ.ಕ. ಜಿಲ್ಲೆಯಲ್ಲಿ 380 ಜನರು ಸುರಕ್ಷಿತ ಸ್ಥಳಕ್ಕೆ

ಗೀತಾ ಸತೀಶ್ ನೂಚಿಲ, ಪದ್ಮಯ್ಯ ನೂಚಿಲ, ದುಗ್ಗಣ್ಣ ನೂಚಿಲ, ದಿನೇಶ್ ನೂಚಿಲ, ಶೋಭಾ ಭಾಸ್ಕರ ನೂಚಿಲ, ದೇವಕಿ ಬಾಲಕೃಷ್ಣ, ಶೋಭಾ ಪ್ರಮೋದ್ ಕುಮಾರ್‌ ಹಾಗೂ ಬಿ.ಎನ್‌. ರಾಧಾಕೃಷ್ಣ ಎಂಬವರ ಮನೆಗಳನ್ನು ಸ್ಥಳಾಂತರ ಮಾಡಲಾಗಿದೆ. ಕಡಬ ತಹಶೀಲ್ದಾರ್ ಈ ಕುಟುಂಬಗಳಿಗೆ ಜು. 7ರಂದು ನೋಟಿಸ್ ಜಾರಿ ಮಾಡಿದ್ದರು. ತಕ್ಷಣವೇ ಮನೆಗಳಿಂದ ತೆರವಾಗಿ ಬೇರೆ ಕಡೆ ವಾಸ್ತವ್ಯ ಹೂಡಬೇಕು ಅಥವಾ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಗೊಳ್ಳಬೇಕು. ತಪ್ಪಿದಲ್ಲಿ ವಿಪತ್ತು ನಿರ್ವಹಣಾ ಕಾಯಿದೆಯಡಿ ಮನೆ ಖಾಲಿ ಮಾಡಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದರು. ಅಲ್ಲದೇ ಮಳೆಗಾಲ ಮುಗಿಯುವವರೆಗೆ ಈ ಮನೆಗಳನ್ನು ಬಳಸದಂತೆಯೂ ಸೂಚನೆ ನೀಡಿದ್ದರು.

ಕಳೆದ ವರ್ಷ ಇಲ್ಲಿಗೆ ಸಮೀಪದ ಪರ್ವತ ಮುಖಿ ಎಂಬಲ್ಲಿ ಗುಡ್ಡ ಕುಸಿದು ಇಬ್ಬರು ಮಕ್ಕಳು ಸಾವನ್ನಪ್ಪಿದ್ದರು. ನೂಚಿಲ ಗುಡ್ಡ ಎನ್ನುವ ಬೆಟ್ಟ ಪ್ರದೇಶ ಇದಾಗಿದ್ದು, ಇದರ ಬುಡದಲ್ಲೇ ಈ ಮನೆಗಳಿವೆ. ಧಾರಾಕಾರ ಮಳೆಯಾಗುತ್ತಿರುವ ಹಿನ್ನೆಲೆ ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿತ್ತು. ಅಪಾಯಕಾರಿ ಸನ್ನಿವೇಶದ ವರದಿ ನೀಡಿದ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕಡಬ ತಹಶೀಲ್ದಾರ್ ರಮೇಶ್ ಬಾಬು ತಿಳಿಸಿದ್ದಾರೆ.

ಇದನ್ನೂ ಓದಿ:ಮಳೆ ಆತಂಕ: ಮುಂಜಾಗ್ರತೆಯಾಗಿ ಗಂಟು-ಮೂಟೆ ಕಟ್ಟುತ್ತಿದ್ದಾರೆ ಸೂಕ್ಷ್ಮ ಪ್ರದೇಶದ ನಿವಾಸಿಗಳು!

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ ಅವಾಂತರ:ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆ ಸುರಿಯುತ್ತಿದೆ. ಕೆಲವೆಡೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಮಳೆ ಪರಿಣಾಮವಾಗಿ ಮೃತಪಟ್ಟವರ ಸಂಖ್ಯೆ 4ಕ್ಕೆ ಏರಿಕೆಯಾಗಿದೆ. ಓರ್ವ ವ್ಯಕ್ತಿ ನೀರುಪಾಲಾಗಿದ್ದು, ಶೋಧ ಕಾರ್ಯ ನಡೆಯುತ್ತಿದೆ. ಜು.7ರಂದು ಬೆಳಗಿನ ಜಾವ ಬಂಟ್ವಾಳ ತಾಲೂಕಿನ ನಂದಾವರ ಎಂಬಲ್ಲಿ ಭೂಕುಸಿತ ಸಂಭವಿಸಿತ್ತು. ಮಣ್ಣು ಬಿದ್ದು ಮನೆ ಹಾನಿಗೊಳಗಾಗಿತ್ತು. ಮನೆಯೊಳಗೆ ಸಿಲುಕಿದ್ದವರ ಪೈಕಿ ಗಂಭೀರವಾಗಿ ಗಾಯಗೊಂಡ ಝರೀನಾ (49) ಎಂಬವರನ್ನು ರಕ್ಷಿಸಿ ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಅವರು ಸಾವನ್ನಪ್ಪಿದ್ದರು.

ಇದನ್ನೂ ಓದಿ:ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ ಅವಾಂತರ: ಭೂಕುಸಿತದಿಂದ ಮಹಿಳೆ ಸಾವು - 80 ಮನೆ ಜಲಾವೃತ!

ABOUT THE AUTHOR

...view details