ಕರ್ನಾಟಕ

karnataka

ಚಿತ್ರದುರ್ಗದಲ್ಲಿ ದಿಢೀರ್​ ಮಳೆಗೆ ಬೆಳೆನಾಶ: ಕಾಟಾಚಾರಕ್ಕೆ ಬೆಳೆ ಸಮೀಕ್ಷೆ ನಡೆಸಿದ್ರಾ ಸಚಿವರು..?

By

Published : Jan 12, 2021, 12:37 PM IST

ಹಠಾತ್​ ಸುರಿದ ಮಳೆಯಿಂದಾಗಿ ಚಿತ್ರದುರ್ಗ ಜಿಲ್ಲೆಯಲ್ಲಿ ಸಾಕಷ್ಟು ಬೆಳೆಹಾನಿ ಉಂಟಾಗಿದೆ. ಈ ಹಿನ್ನೆಲೆ ಬೆಳೆಹಾನಿ ಪ್ರದೇಶವನ್ನು ವೀಕ್ಷಿಸಿ ರೈತರಿಗೆ ಪರಿಹಾರ ನೀಡಲು ಜಿಲ್ಲೆಗೆ ಆಗಮಿಸಿದ್ದ ಸಚಿವ ಆರ್​ ಅಶೋಕ್​ ಕಾಟಾಚಾರಕ್ಕೆ ಎಂಬಂತೆ ಬೆಳೆ ವೀಕ್ಷಣೆ ಮಾಡಿ ಹೋಗಿದ್ದಾರೆ ಎಂದು ರೈತರು ಬೇಸರ ಹೊರಹಾಕಿದ್ದಾರೆ.

crop loss in chitradurga due to heavy rain
ಅಕಾಲಿಕ ಮಳೆಗೆ ಬೆಳೆ ನಾಶ

ಚಿತ್ರದುರ್ಗ: ಕಳೆದ ಮೂರು ದಿನಗಳ ಹಿಂದೆ ಸುರಿದ ಏಕಾಏಕಿ ಮಳೆ ಬಯಲುಸೀಮೆ ನಾಡಿನ ರೈತರಿಗೆ ಸಂಕಷ್ಟ ತಂದೊಡ್ಡಿದೆ. ಈರುಳ್ಳಿ ಹಾಗೂ ಕಡಲೆ ಬೆಳೆ ಹಾನಿಗೊಳಗಾಗಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಈ ಹಿನ್ನೆಲೆ ಕಂಗಾಲಾಗಿದ್ದ ರೈತರಿಗೆ ಧೈರ್ಯ ತುಂಬಿ, ಹಾನಿಗೊಳಗಾದ ಬೆಳೆ ವೀಕ್ಷಿಸಿ ಪರಿಹಾರ ನೀಡಲು ರಾಜ್ಯ ಸರ್ಕಾರಕ್ಕೆ ಸೂಚಿಸಲು ಸಚಿವರು ಸಂತ್ರಸ್ತ ಗ್ರಾಮಗಳಿಗೆ ಭೇಟಿ ನೀಡಿದ್ರು. ಆದರೆ, ಭೇಟಿ ಸಮಯದಲ್ಲಿ ಸಚಿವರು ಕೇವಲ ರಾಜಕೀಯ ಜಂಜಾಟದಲ್ಲಿ ಮುಳುಗಿದರಾ? ಎಂಬ ಪ್ರಶ್ನೆ ಇದೀಗ ಸಾರ್ವಜನಿಕರಲ್ಲಿ ಉದ್ಭವಿಸಿದೆ.

ಅಕಾಲಿಕ ಮಳೆಗೆ ಬೆಳೆ ನಾಶ

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಬಬ್ಬೂರು ಹಾಗೂ ಐಮಂಗಲ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಗೆ ಬರುವ ವಿವಿಧ ಹಳ್ಳಿಗಳಿಗೆ ಕಂದಾಯ ಸಚಿವ ಆರ್ ಅಶೋಕ್ ಭೇಟಿ ನೀಡಿದರು. ಹಾನಿಗೊಳಗಾದ ಜಮೀನುಗಳ ಬದಿಯಲ್ಲಿ ನಿಂತು ಬೆಳೆ ವೀಕ್ಷಣೆ ಮಾಡುವುದನ್ನು ಕಂಡ ಸಾರ್ವಜನಿಕರು ಸಚಿವರು ಕಾಟಾಚಾರಕ್ಕಾಗಿ ಬೆಳೆ ಸಮೀಕ್ಷೆ ನಡೆಸುತ್ತಿದ್ದಾರೆ ಎಂದು ಮಾತನಾಡಿಕೊಂಡರು.

ಇತ್ತ ಕಡಲೆ ಹೊಲಕ್ಕೆ ಭೇಟಿ ನೀಡಿದ ಸಚಿವ ರೈತರಿಂದ ಸರಿಯಾದ ಮಾಹಿತಿ ಕೇಳದೆ, ಕೈಯಲ್ಲಿ ಒಂದೇ ಕಡಲೆ ಗಿಡ ಹಿಡಿದು ಅಳೆದು ತೂಗುವ ಲೆಕ್ಕಾಚಾರ ಮಾಡುವಂತಿತ್ತು. ನಂತರ ಚಿತ್ರದುರ್ಗ ತಾಲೂಕಿನ ಕಾಸವರಹಟ್ಟಿ ಗ್ರಾಮಕ್ಕೆ ತೆರಳಿದ ಸಚಿವರು ಎರಡು - ಮೂರು ರೈತರ ಜಮೀನುಗಳಿಗೆ ತೆರಳಿ ನಾಮಕೇವಾಸ್ತೆಗೆ ಎಂಬಂತೆ ರಸ್ತೆ ಬದಿಯಲ್ಲಿ ನಿಂತು ಬೆಳೆಯ ಹಾನಿಯ ಲೆಕ್ಕಾಚಾರ ಮಾಡಿದರು ಎಂದು ಜಿಲ್ಲೆಯ ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬೆಳೆ ವೀಕ್ಷಣೆಯ ಸಮಯದಲ್ಲೂ ರಾಜಕೀಯ ಲೆಕ್ಕಾಚಾರ:
ಕಾಸರಹಟ್ಟಿ ಗ್ರಾಮಕ್ಕೆ ತೆರಳಿದ ಸಚಿವ ಆರ್ ಅಶೋಕ್ , ಗ್ರಾಮಸ್ಥರ ಕಷ್ಟ ಆಲಿಸದೇ ಮರದ ಕಟ್ಟೆ ಮೇಲೆ ಕುಳಿತು ಸಚಿವ ಸಂಪುಟ ವಿಸ್ತರಣೆಯ ಕುರಿತು ಫೋನ್​ನಲ್ಲಿ ಮಾತನಾಡುತ್ತ ಬ್ಯುಸಿಯಾಗಿ ಬಿಟ್ರು.

ಕೇವಲ ನಾಲ್ಕು ಗಂಟೆಗಳಲ್ಲಿ ಜಿಲ್ಲೆಯ ಬೆಳೆ ಸಮೀಕ್ಷೆ ಮಾಡಿದ್ರಾ ಸಚಿವರು!

ಬೆಂಗಳೂರಿನಿಂದ ಬೆಳಗ್ಗೆ 11 ಗಂಟೆಗೆ ಹಿರಿಯೂರಿಗೆ ತಲುಪಿದ ಸಚಿವರು, ಬಳಿಕ ಗ್ರಾಮಸ್ಥರು ಬೆಳೆ ಹಾನಿ ವೀಕ್ಷಣೆಗೆ ಮುಂದಾದರು. ಕೇವಲ ನಾಲ್ಕೈದು ಗ್ರಾಮಗಳನ್ನು ಮಾತ್ರ ಆಯ್ಕೆ ಮಾಡಿಕೊಂಡಿರುವುದು ರೈತರಿಗೆ ಬೇಸರ ಉಂಟು ಮಾಡಿದೆ. ಸಮರ್ಪಕವಾಗಿ ನಷ್ಟದ ಪರಿಹಾರ ವಿತರಣೆಯಾಗುತ್ತಾ ಎಂಬ ಅನುಮಾನ ಜಿಲ್ಲೆಯ ರೈತರಲ್ಲಿದೆ.

ಅಧಿಕಾರಿಗಳ ಸಭೆಯಲ್ಲಿ ಫೋನ್ ಹಿಡಿದ ಸಚಿವರು:

ಬೆಳೆ ಸಮೀಕ್ಷೆ ನಡೆಸಿದ ಬಳಿಕ ಕಂದಾಯ ಸಚಿವ ಆರ್ ಅಶೋಕ್ ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಸಭೆಯ ಮಧ್ಯದಲ್ಲಿ ವಿದ್ಯುತ್ ಕೈಕೊಟ್ಟರೆ ಕೆಲಕಾಲ ಅಧಿಕಾರಿಗಳು ಹಾಗೂ ಸಚಿವರು ಮೌನಕ್ಕೆ ಶರಣಾದರು. ಸಭೆ ಪುನರಾರಂಭಗೊಂಡ ಕೆಲವೇ ನಿಮಿಷಗಳಲ್ಲಿ ಸಚಿವರಿಗೆ ಫೋನ್ ಕಾಲ್ ಬಂತು, ಸಭೆಯ ಮಧ್ಯದಲ್ಲಿ ಎದ್ದು, ಕುಳಿತು ಚೇರ್​ನ ಪಕ್ಕಕ್ಕೆ ಬಂದು ಫೋನ್ ಸಂಭಾಷಣೆಯಲ್ಲಿ ಮುಳುಗಿ ಬಿಟ್ರು. ಹೀಗಾಗಿ ಸಚಿವರ ಜಿಲ್ಲೆಯ ಪ್ರವಾಸ ರಾಜಕೀಯ ಲೆಕ್ಕಾಚಾರದ ಫೋನ್ ಸಂಭಾಷಣೆ ಸಿಮೀತವಾಯ್ತು ಎಂದು ಮಾತಾಡಿಕೊಳ್ಳುವಂತಾಯ್ತು.

ಸಭೆ ನಡೆಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಆರ್ ಅಶೋಕ್, ನಾಳೆ ಸಚಿವ ಸಂಪುಟದ ಪಟ್ಟಿ ಬಿಡುಗಡೆ ಹಿನ್ನೆಲೆ ಆಗಾಗ ಫೋನ್ ಕರೆಗಳು ಬಂದಿದ್ವು ಎಂದು ಹೇಳಿದ್ರು. ಇನ್ನು ಚಿತ್ರದುರ್ಗ ತಾಲೂಕಿನಲ್ಲಿ 360 ಹೆಕ್ಟರ್ ಪ್ರದೇಶದಲ್ಲಿ ಕಡಲೆ ಬೆಳೆ ಹಾನಿಯಾಗಿದ್ದು, ಈರುಳ್ಳಿ ಬೆಳೆ ಕೂಡ ಸಾಕಷ್ಟು ಹಾಳಾಗಿದೆ. ತಕ್ಷಣವೇ ಪರಿಹಾರ ಹಣ ನೀಡುವ ವಿಚಾರ ಸರ್ಕಾರದ ಮುಂದೆ ಇಡುತ್ತೇನೆ ಹಾಗೂ ಜಿಲ್ಲೆಯಲ್ಲಿ ಎಲ್ಲೆಲ್ಲಿ ಬೆಳೆಹಾನಿಯಾಗಿದೆ ಎಂಬುದನ್ನು ಸಮೀಕ್ಷೆ ನಡೆಸಿ ವರದಿ ನೀಡುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದ್ದೇನೆ ಎಂದರು.

ಇದನ್ನೂ ಓದಿ:ಇಂದು ರಾಜ್ಯಕ್ಕೆ 7.95 ಲಕ್ಷ ವಯಲ್ಸ್ ಕೋವಿಶೀಲ್ಡ್ ಲಸಿಕೆ: ಸಚಿವ ಡಾ.ಕೆ.ಸುಧಾಕರ್

ABOUT THE AUTHOR

...view details