ಕರ್ನಾಟಕ

karnataka

ಪ್ರವಾಸಿಗರನ್ನು ಕೈಬೀಸಿ ಕರೆಯುವ ಚಾರ್ಮಾಡಿ ಘಾಟಿ.. ಎಚ್ಚರ ತಪ್ಪಿದ್ರೆ ಅಪಾಯ ಕಟ್ಟಿಟ್ಟ ಬುತ್ತಿ

By

Published : Jul 1, 2021, 7:15 PM IST

ಮುಂಗಾರು ಮಳೆಯ ಸಿಂಚನದಿಂದ ಪಶ್ಚಿಮ ಘಟ್ಟದ ಚಾರ್ಮಾಡಿ ಘಾಟಿ ಕಳೆಗಟ್ಟಿದೆ. ಈ ಪ್ರಕೃತಿ ಸೌಂದರ್ಯವನ್ನ ಆಸ್ವಾದಿಸಲು ಪ್ರವಾಸಿಗರು ಬರುತ್ತಿದ್ದಾರೆ. ಆದ್ರೆ ಪ್ರವಾಸಿಗರ ಮೋಜು-ಮಸ್ತಿಯೀಗ ಆತಂಕಕ್ಕೆ ಕಾರಣವಾಗಿದೆ. ಕೊಂಚ ಎಚ್ಚರ ತಪ್ಪಿದ್ರೂ ಅಪಾಯಕ್ಕೆ ಸಿಲುಕುವ ಸಾಧ್ಯತೆಯಿದೆ.

charmadi gha
ಚಾರ್ಮಾಡಿ ಘಾಟ್

ಚಿಕ್ಕಮಗಳೂರು: ಚಿಕ್ಕಮಗಳೂರೆಂದ್ರೆ ಸಾಕು, ಅಲ್ಲಿನ ಪ್ರಕೃತಿ ಸೌಂದರ್ಯದ ರಾಶಿ ಕಣ್ಮುಂದೆ ಬರುತ್ತೆ. ಅದ್ರಲ್ಲೂ ಚಾರ್ಮಾಡಿ ಘಾಟ್​​ಗೆ ಮನಸೋಲದವ್ರೇ ಇಲ್ಲ. ಈ ಮಾರ್ಗದಲ್ಲಿ ಸಂಚರಿಸೋ ಪ್ರಯಾಣಿಕರು ಒಮ್ಮೆ ನಿಂತು ಪ್ರಕೃತಿ ಸೌಂದರ್ಯವನ್ನ ಆಸ್ವಾದಿಸುತ್ತಾರೆ. ಚಾರ್ಮಾಡಿಯ ಸೊಬಗನ್ನು ಕಣ್ತುಂಬಿಕೊಳ್ಳಲೆಂದೇ ಅದೆಷ್ಟೋ ಮಂದಿ ಬಂದು ಹೋಗ್ತಾರೆ. ಪ್ರವಾಸಿಗರ ಮೋಜು-ಮಸ್ತಿ ಎಲ್ಲಿ ಅಪಾಯ ತಂದೊಡ್ಡುತ್ತದೆಯೋ ಎನ್ನುವ ಆತಂಕ ಎದುರಾಗಿದೆ.

ಪ್ರವಾಸಿಗರನ್ನು ಕೈಬೀಸಿ ಕರೆಯುವ ಚಾರ್ಮಾಡಿ ಘಾಟ್ - ಎಚ್ಚರ ಅಪಾಯ ಕಟ್ಟಿಟ್ಟ ಬುತ್ತಿ!

ಮುಂಗಾರು ಸಿಂಚನವಾದಾಗ ಚಾರ್ಮಾಡಿಯ ಪಯಣ ಎಂಥವರಿಗೂ ರೋಮಾಂಚನ ಅನಿಸುತ್ತೆ. ಆದ್ರೆ ಇಲ್ಲಿನ ಕಲ್ಲುಬಂಡೆಗಳ ಮೇಲೇರಿ ಫೋಟೋ, ಸೆಲ್ಫಿ ಕ್ಲಿಕ್ಕಿಸಿಕೊಳ್ತಿರೋದೇ ಜನರನ್ನು ನೋಡಿದ್ರೆ ಅಪಾಯಕ್ಕೆ ಆಹ್ವಾನ ನೀಡುವಂತಿದೆ.

ಚಾರ್ಮಾಡಿ ಘಾಟಿಯ ನಡುವೆ ಸಿಗುವ ಬಂಡೆಗಳ ಮೇಲೆ ಹೋಗಿ ಕೆಲವರು ಪ್ರಾಣ ಕಳೆದುಕೊಂಡಿದ್ದಾರೆ. ಅತಿ ಎತ್ತರದಿಂದ ಕಾಲು ಜಾರಿ ಬಿದ್ದು ಕೈ-ಕಾಲು ಕಳೆದುಕೊಂಡವ್ರೂ ಇದ್ದಾರೆ. ಸಾಲದಕ್ಕೆ ಸದಾ ನೀರು ಹರಿಯುವ ಜಾಗಕ್ಕೆ ಕಾಲಿಟ್ಟು ಜಾರಿಬಿದ್ದು ಮುಖ-ಮುಸುಡಿ ಜಜ್ಜಿಸಿಕೊಂಡವರು ಇದ್ದಾರೆ. ಆದರೂ, ಪ್ರವಾಸಿಗರ ಆಟ ಮಾತ್ರ ನಿಂತಿಲ್ಲ. ಫೋಟೋ, ಸೆಲ್ಫಿಯಿಂದಾಗ್ತಿರೋ ಅನಾಹುತಗಳ ಬಗ್ಗೆ ನೂರಾರು ಸುದ್ದಿಗಳು ಕೇಳಿಬರ್ತಿದ್ರೂ ಯುವಜನತೆ ಮಾತ್ರ ಆಧುನಿಕ ತಂತ್ರಜ್ಞಾನದ ಮೋಜಿನಿಂದ ಹೊರಬಂದಿಲ್ಲ.

ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸಲು ಹೋಗಿ ಅಪಾಯಕ್ಕೆ ಆಹ್ವಾನ ನೀಡದಿದ್ದರೆ ಸಾಕು. ಈ ಬಗ್ಗೆ ಜಿಲ್ಲಾಡಳಿತ, ಪೊಲೀಸ್​​ ಇಲಾಖೆ ಮತ್ತಷ್ಟು ಕ್ರಮ ಕೈಗೊಂಡು, ಸಂಭವಿಸಬಹುದಾದ ಅಪಾಯ ತಪ್ಪಿಸಬೇಕಿದೆ.

ABOUT THE AUTHOR

...view details