ಕರ್ನಾಟಕ

karnataka

ಬೆಲೆ ಕುಸಿತ: ಕಾಫಿನಾಡಿನ ರೈತರ ಕಣ್ಣಲ್ಲಿ ನೀರು ತರಿಸಿದ ಈರುಳ್ಳಿ

By

Published : Oct 14, 2021, 6:45 PM IST

onion farmers in distress as price falls
ಈರುಳ್ಳಿ ಬೆಳೆಗಾರರು ಕಂಗಾಲು

ಈರುಳ್ಳಿ ಬೆಲೆ ಕುಸಿತ ಹಿನ್ನೆಲೆ ಕಾಫಿನಾಡಿನ ಈರುಳ್ಳಿ ಬೆಳೆಗಾರರು ನಷ್ಟ ಅನುಭವಿಸುವಂತಾಗಿದೆ. ರೈತರ ಪರಿಸ್ಥಿತಿ ಕಂಡು ಕಡೂರಿನ ಮಾಜಿ ಶಾಸಕ ವೈ.ಎಸ್.ವಿ.ದತ್ತ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ಚಿಕ್ಕಮಗಳೂರು:ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಈರುಳ್ಳಿ ಬೆಳೆಗಾರರೆಲ್ಲ ಕಣ್ಣೀರಲ್ಲಿ ಕೈತೊಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ವ್ಯಾಪಾರಸ್ಥರಿಲ್ಲದೇ ತುಂಬಿಟ್ಟಿರೋ ಚೀಲದಲ್ಲೇ ಈರುಳ್ಳಿ ಕೊಳೆಯುತ್ತಿದ್ದು, ರೈತರು ಕಂಗಾಲಾಗಿದ್ದಾರೆ.

ಈರುಳ್ಳಿ ಬೆಳೆಗಾರರು ಕಂಗಾಲು

ಕಡೂರು ತಾಲೂಕಿನ ಚೌಳಹಿರಿಯೂರು, ಹಿರೇನಲ್ಲೂರು, ಗಿರಿಯಾಪುರ ಸೇರಿದಂತೆ ಹತ್ತಾರು ಹಳ್ಳಿಗಳಲ್ಲಿ ರೈತರು ಈರುಳ್ಳಿ ಬೆಳೆದಿದ್ದಾರೆ. ಇಲ್ಲಿನ ಮಣ್ಣು, ಹವಾಗುಣಕ್ಕೆ ತಕ್ಕಂತೆ ಈರುಳ್ಳಿ ಸೂಕ್ತ ಬೆಳೆ ಎಂದು ಈರುಳ್ಳಿಯನ್ನೇ ಹೆಚ್ಚಾಗಿ ಬೆಳೆಯುತ್ತಾರೆ. ಇಲ್ಲಿನ ರೈತರೇ ಬಿತ್ತನೆ ಬೀಜ ಮಾಡಿಕೊಳ್ತಾರೆ. ಮಳೆಯೂ ಆಗ್ತಿತ್ತು, ಬೆಳೆಯೂ ಬರ್ತಿತ್ತು.

ಆದರೆ, ಈ ವರ್ಷ ಕೆಲವರು ಬಿತ್ತನೆ ಬೀಜಗಳನ್ನ ಉತ್ತರ ಕರ್ನಾಟಕದಿಂದ ತಂದು ಬಿತ್ತನೆ ಮಾಡಿದ್ದಾರೆ. ಕಳಪೆ ಬೀಜವಾಗಿರೋದ್ರಿಂದ ಇಳುವರಿಯೂ ಇಲ್ಲ. ಈ ಮಧ್ಯೆ ಬೆಲೆ ಪಾತಾಳಕ್ಕೆ ಕುಸಿದಿದ್ದು ಕೇಳೋರಿಲ್ಲ. ಕ್ವಿಂಟಾಲ್ ಈರುಳ್ಳಿಯನ್ನ 100 ರೂಪಾಯಿಗೆ ಕೇಳುತ್ತಾರೆ. ಈರುಳ್ಳಿಯನ್ನ ಬೇರ್ಪಡಿಸಿ, ಚೀಲಕ್ಕೆ ತುಂಬುವಷ್ಟರಲ್ಲಿ 140 ರೂಪಾಯಿ ಖರ್ಚಾಗುತ್ತೆ. ಇಲ್ಲಿಂದ ಬೆಂಗಳೂರು ವರೆಗೂ ಹೋಗಿ ಬಸ್ ಚಾರ್ಜ್‍ಗೆ ಹಣ ತಂದಿದ್ದೇವೆ.ನಮ್ಮ ನೋವನ್ನ ಕೇಳೋರಿಲ್ಲ ಎಂದು ನೋವು ತೋಡಿಕೊಂಡಿದ್ದಾರೆ.

ರೈತರ ಪರಿಸ್ಥಿತಿ ಕಂಡು ಕಡೂರಿನ ಮಾಜಿ ಶಾಸಕ ವೈ.ಎಸ್.ವಿ.ದತ್ತ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಇಲ್ಲಿವರೆಗೆ ಹೇಗೋ ವ್ಯಾಪಾರಸ್ಥರೇ ಹೊಲಕ್ಕೆ ಬಂದು ಹೆಚ್ಚು - ಕಮ್ಮಿ ದರಕ್ಕೆ ಈರುಳ್ಳಿ ಖರೀದಿ ಮಾಡ್ತಿದ್ರು. ಆದರೆ, ಕೇಂದ್ರ ಸರ್ಕಾರ ಎಪಿಎಂಸಿ ಕಾಯ್ದೆ ಜಾರಿಗೆ ತಂದಿದ್ದೇ ತಂದಿದ್ದು, ರೈತರಿಗೆ ಮರಣ ಶಾಸನ ಬರೆದಂತಾಗಿದೆ. ಈ ಕಾಯ್ದೆಯಿಂದ ರೈತರಿಗೆ ನೇರವಾಗಿ ಹಣ ಸಿಗುತ್ತೆ ಅಂತೀರಲ್ಲ ಸ್ವಾಮಿ, ಇಲ್ಲಿನ ರೈತರ ಪರಿಸ್ಥಿತಿ ನೋಡಿ ಈರುಳ್ಳಿ, ರಾಗಿ, ಆಲೂಗಡ್ಡೆ ಕೇಳೋರಿಲ್ಲ ಎಂದು ವೈ.ಎಸ್.ವಿ.ದತ್ತ ಸರ್ಕಾರ ವಿರುದ್ಧ ವ್ಯಂಗ್ಯವಾಡಿದ್ದಾರೆ.

ಸ್ವಲ್ಪ ಮಳೆಯಾಗಿದೆ ಅಂತ ನಮ್ಮ ಕಡೂರು ತಾಲೂಕನ್ನು ಬರಪೀಡಿತ ಪ್ರದೇಶದಿಂದ ಕೈ ಬಿಡಲಾಗಿದೆ. ನಾನಂತೂ ರೈತರ ಪರ ಇದ್ದೇನೆ. ಇನ್ನೂ ಕೆಲವೇ ದಿನಗಳಲ್ಲಿ ಕಡೂರು ತಾಲೂಕಿನಲ್ಲಿ ಬೃಹತ್ ಹೋರಾಟ ಮಾಡುತ್ತೇವೆ. ದತ್ತ ರೈತರ ವಿಚಾರದಲ್ಲಿ ಯಾವತ್ತೂ ರಾಜಕೀಯ ಮಾಡಲ್ಲ. ರೈತರು ಬರಲಿ, ಬಿಡಲಿ ಹೋರಾಟ ಮಾತ್ರ ಮಾಡೇ ಮಾಡ್ತೀನಿ ಅಂತ ಕೇಂದ್ರ - ರಾಜ್ಯ ಸರ್ಕಾರದ ವಿರುದ್ಧ ಗರಂ ಆಗಿದ್ದಾರೆ.

ಇನ್ನು ಈವರೆಗೂ ಯಾವ ಅಧಿಕಾರಿಯೂ ಬಂದು ರೈತರ ನೋವನ್ನ ಕೇಳಿಲ್ಲ. ಇನ್ನಾದ್ರೂ ಸರ್ಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಇತ್ತ ಗಮನ ಹರಿಸಿ ನೊಂದವರ ನೆರವಿಗೆ ಬರ್ತಾರ ಕಾದು ನೋಡ್ಬೇಕು.

ABOUT THE AUTHOR

...view details