ಕರ್ನಾಟಕ

karnataka

ಚಿಕ್ಕಮಗಳೂರು: ಅಕಾಲಿಕ ಮಳೆಗೆ ಕಾಫಿ ಬೆಳೆ ನಾಶ, ಬೆಳೆಗಾರರು ಕಂಗಾಲು

By ETV Bharat Karnataka Team

Published : Jan 5, 2024, 10:08 PM IST

Updated : Jan 5, 2024, 10:41 PM IST

ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗ ಮೂಡಿಗೆರೆ ತಾಲೂಕಿನಾದ್ಯಂತ ಅರೇಬಿಕಾ ಕಾಫಿ ಕೊಯ್ಲು ಆರಂಭವಾಗಿದೆ. ಅಕಾಲಿಕ ಮಳೆಯಿಂದ ಕಾಫಿ ಹಣ್ಣು ನೀರಿನಿಂದ ತೊಯ್ದು ಕೊಳೆಯುತ್ತಿದ್ದು, ಬೆಳೆಗಾರರನ್ನು ಸಂಕಷ್ಟಕ್ಕೀಡು ಮಾಡಿದೆ.

Coffee crop destroyed by untimely rains
ಅಕಾಲಿಕ ಮಳೆಗೆ ಕಾಫಿ ಬೆಳೆ ನಾಶ

ಚಿಕ್ಕಮಗಳೂರು ಜಿಲ್ಲೆಯಲ್ಲಿ ಎರಡು ದಿನಗಳಿಂದ ನಿರಂತರ ಮಳೆ ಸುರಿಯುತ್ತಿದೆ.

ಚಿಕ್ಕಮಗಳೂರು:ಕಳೆದ ಎರಡು ದಿನಗಳಿಂದ ಜಿಲ್ಲೆಯ ಮಲೆನಾಡು ಭಾಗದಲ್ಲಿ ಸುರಿಯುತ್ತಿರುವ ಅಕಾಲಿಕ ಮಳೆ ಕಾಫಿ ಬೆಳೆಗಾರರನ್ನು ಸಂಕಷ್ಟಕ್ಕೀಡು ಮಾಡಿದೆ. ಜನಜೀವನವೂ ಅಸ್ತವ್ಯಸ್ತಗೊಂಡಿದೆ. ಮೂಡಿಗೆರೆ ತಾಲೂಕಿನಲ್ಲಿ ಮೂಡಿಗೆರೆ, ಕೊಟ್ಟಿಗೆಹಾರ, ಬಣಕಲ್, ಬಾಳೂರ ಸೇರಿದಂತೆ ವಿವಿಧೆಡೆ ಕಾಫಿ ಬೆಳೆ ನೆಲಕ್ಕೆ ಬಿದ್ದು ನಾಶವಾಗುತ್ತಿದೆ. ಕೊಯ್ಲು ಸಮಯದಲ್ಲಿ ಮಳೆ ಬೀಳುತ್ತಿರುವುದು ಬೆಳೆನಾಶಕ್ಕೆ ಕಾರಣವಾಗಿದೆ.

ಹಗಲು ರಾತ್ರಿ ಎಡಬಿಡದೆ ಮಳೆ ಬೀಳುತ್ತಿರುವುದರಿಂದ ವಾಹನ ಸಂಚಾರಕ್ಕೂ ಅಡಚಣೆ ಉಂಟಾಗುತ್ತಿದೆ. ಒಂದೆಡೆ ಮೈ ಕೊರೆಯುವ ಚಳಿ ಮತ್ತೊಂದೆಡೆ ದಟ್ಟ ಮಂಜು ಬೀಳುತ್ತಿದೆ. ವಾಹನ ಸವಾರರು ಭಯದಿಂದ ವಾಹನ ಚಾಲನೆ ಮಾಡಬೇಕಾಗಿದೆ.

ಕಾಫಿ ಕೊಯ್ಲು ಆರಂಭ:ಮೂಡಿಗೆರೆ ತಾಲೂಕಿನಾದ್ಯಂತ ಅರೇಬಿಕಾ ಕಾಫಿ ಕೊಯ್ಲು ಆರಂಭವಾಗಿದೆ. ರೊಬಸ್ಟಾ ಕಾಫಿಯೂ ಹಣ್ಣಾಗಿದ್ದು, ರೈತರು ಕೊಯ್ಲು ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಮಳೆ ಸುರಿಯುತ್ತಿರುವುದರಿಂದ ಹಣ್ಣು ಗಿಡದಿಂದ ನೆಲಕ್ಕುದುರುತ್ತಿದೆ. ಮಳೆಗೆ ನೆಲಕ್ಕೆ ಬಿದ್ದ ಕಾಫಿ ಹಣ್ಣನ್ನು ಬೆಳೆಗಾರರು ಆರಿಸುವಂತಾಗಿದೆ. ಹವಾಮಾನ ವೈಪರೀತ್ಯದಿಂದ ಕೃಷಿಕರು ನಷ್ಟ ಅನುಭವಿಸುವಂತಾಗಿದೆ. ಭತ್ತದ ಕಟಾವು ಡಿಸೆಂಬರ್, ಜನವರಿಯಲ್ಲಿ ಮುಗಿಯಬೇಕಿತ್ತು. ಮಳೆಯಿಂದ ಕೊಯ್ಲು ವಿಳಂಬವಾಗಿ ರೈತರು ನಷ್ಟ ಅನುಭವಿಸಬೇಕಾಗಿದೆ.

ಮನೆಯಿಂದ ಹೊರಬಾರದ ಸ್ಥಿತಿ:ಮಳೆಯಿಂದಾಗಿ ಮಹಿಳೆಯರು ಮಕ್ಕಳು ಹಾಗೂ ವೃದ್ಧರು ಮನೆಯಿಂದ ಹೊರಬಾರದಂತಾಗಿದೆ. ಇನ್ನೊಂದೆಡೆ ರೈತರು ಮತ್ತು ಬೆಳೆಗಾರರು ಬೆಳೆದಿದ್ದ ಅಲ್ಪ ಸ್ವಲ್ಪ ಬೆಳೆಯೂ ಮಣ್ಣು ಪಾಲಾಗುತ್ತಿದೆ. ಕೈಗೆ ಬಂದ ತುತ್ತು ಬಾಯಿಗೆ ಬಾರದ ಪರಿಸ್ಥಿತಿ ರೈತರದ್ದು.

ನಷ್ಟ ಸಮೀಕ್ಷೆಗೆ ಒತ್ತಾಯ:ಕಾಫಿ ಮಂಡಳಿ ಮಾಜಿ ಸದಸ್ಯ ಡಿ.ಎಂ.ವಿಜಯ್ 'ಈಟಿವಿ ಭಾರತ'ದೊಂದಿಗೆ ಮಾತನಾಡಿ, "ಅಕಾಲಿಕ ಮಳೆಯಿಂದಾಗಿ ಜಿಲ್ಲೆಯಲ್ಲಿ ಸಾವಿರಾರು ಕೋಟಿ ರೂ ನಷ್ಟ ಸಂಭವಿಸಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಮಿತಿ ರಚಿಸಿ ಅಕಾಲಿಕ ಮಳೆಯಿಂದ ಆಗಿರುವ ನಷ್ಟದ ಸಮೀಕ್ಷೆ ನಡೆಸಬೇಕು. ಕಾಫಿ ಬೆಳೆಗಾರರಿಗೆ ಸೂಕ್ತ ಪರಿಹಾರ ನೀಡಬೇಕು. ಬೆಳೆಗಾರರಿಗೆ ಮಾರಕವಾಗಿರುವ ಸರ್ಫೇಸಿ ಕಾಯ್ದೆಯನ್ನು ಕೂಡಲೇ ರದ್ದುಪಡಿಸಬೇಕು" ಎಂದು ಆಗ್ರಹಿಸಿದರು.

ಇದನ್ನೂಓದಿ:ಕೊನೆಗೂ ಗ್ರಾಮಕ್ಕೆ ಬಂತು ಸರ್ಕಾರಿ ಬಸ್: ಪೂಜೆ ಸಲ್ಲಿಸಿ ಸ್ವಾಗತಿಸಿದ ಗ್ರಾಮಸ್ಥರು

Last Updated :Jan 5, 2024, 10:41 PM IST

ABOUT THE AUTHOR

...view details