ಕರ್ನಾಟಕ

karnataka

ಶೇ.25 ರಷ್ಟು ಆನ್​ಲೈನ್ ಕ್ಲಾಸ್ ಶಾಶ್ವತ ಮುಂದುವರಿಕೆಗೆ ಚಿಂತನೆ: ರಾಜೀವ್ ಗಾಂಧಿ ವಿವಿ ಕುಲಪತಿ

By

Published : May 15, 2022, 9:06 AM IST

Updated : May 15, 2022, 12:09 PM IST

ವಿದ್ಯಾರ್ಥಿಗಳು ಗುಣಮಟ್ಟದ ಕಲಿಕೆಯಿಂದ ಹೊರಗುಳಿಯಬಾರದೆಂದು ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ನುರಿತ ತಜ್ಞರಿಂದ ಶೇ.25 ಆನ್​ಲೈನ್ ಕ್ಲಾಸ್​ಗಳನ್ನು ಶಾಶ್ವತವಾಗಿ ಮುಂದುವರೆಸುವ ಚಿಂತನೆ ಇದ್ದು, ಶೀಘ್ರದಲ್ಲೇ ಇದು ಇತ್ಯರ್ಥವಾಗಲಿದೆ ಎಂದು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ಸಂಸ್ಥೆಯ ಕುಲಪತಿ ಡಾ.ಎಂ.ಕೆ.ರಮೇಶ್ ಹೇಳಿದ್ದಾರೆ.

ಸಿಮ್ಸ್ ಘಟಿಕೋತ್ಸವ
ಸಿಮ್ಸ್ ಘಟಿಕೋತ್ಸವ

ಚಾಮರಾಜನಗರ: ಸಿಮ್ಸ್ ಘಟಿಕೋತ್ಸವದಲ್ಲಿ ಮಾತನಾಡಿದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ಸಂಸ್ಥೆಯ ಕುಲಪತಿ ಡಾ.ಎಂ.ಕೆ.ರಮೇಶ್, ವಿದ್ಯಾರ್ಥಿಗಳು ಗುಣಮಟ್ಟದ ಕಲಿಕೆಯಿಂದ ಹೊರಗುಳಿಯಬಾರದೆಂದು ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ನುರಿತ ತಜ್ಞರಿಂದ ಶೇ.25 ಆನ್​ಲೈನ್ ಕ್ಲಾಸ್​ಗಳನ್ನು ಶಾಶ್ವತವಾಗಿ ಮುಂದುವರೆಸುವ ಚಿಂತನೆ ಇದ್ದು, ಶೀಘ್ರದಲ್ಲೇ ಇತ್ಯರ್ಥವಾಗಲಿದೆ. ದೇಶಕ್ಕೆ ಸಂಶೋಧನಾ ಕ್ಷೇತ್ರದ ಮಹತ್ವ ಅರಿವಾಗಿದೆ, ತಂತ್ರಜ್ಞಾನದ ಬಳಕೆಯ ಅನಿವಾರ್ಯತೆಯೂ ಸೃಷ್ಟಿಯಾಗಿದೆ, ಆನ್​ಲೈನ್ ಕ್ಲಾಸ್ ಎಂಬ ಹೊಸ ಮಾದರಿ ಪರಿಚಯವಾಗಿದೆ ಎಂದು ಅಭಿಪ್ರಾಯಪಟ್ಟರು.

ಸಿಮ್ಸ್ ಘಟಿಕೋತ್ಸವ ಕಾರ್ಯಕ್ರಮ

ವೈದ್ಯ ಪದವಿ ಪಡೆದ ವಿದ್ಯಾರ್ಥಿಗಳು ಕನಿಷ್ಠ ಕರ್ತವ್ಯ ಅವಧಿಯಲ್ಲಾದರೂ ನಿಷ್ಠೆ, ಪ್ರಾಮಾಣಿಕತೆಯಿಂದ ಕೆಲಸ‌ ಮಾಡಬೇಕು. ಯಾಕಾದರೂ ವೈದ್ಯನಾದೆನೋ ಎಂದುಕೊಳ್ಳುವವರು ಬಲವಂತದಿಂದ ವೃತ್ತಿ ಮಾಡದೆ ಬೇರೆ ವೃತ್ತಿಗಳನ್ನು ಕಂಡುಕೊಳ್ಳಬೇಕು, ವೈದ್ಯರ ನಿರ್ಲಕ್ಷ್ಯದಿಂದ ರೋಗಿಗಳ ನರಳಾಟ, ಪರದಾಟವನ್ನು ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ ಎಂದು ಪದವಿ ಪಡೆದ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ರೋಗಿ ಬಳಿ ಹಣ ಪಡೆಯುವುದು ಪಾಪದ ಕೆಲಸ:ವಿಜಿಕೆಕೆ ಸಂಸ್ಥಾಪಕ, ಪದ್ಮಶ್ರೀ ಪುರಸ್ಕೃತ ಡಾ.ಸುದರ್ಶನ್ ಮಾತನಾಡಿ, ಆಸ್ಪತ್ರೆಗಳು ದೇವಾಲಯಕ್ಕೆ ಸಮ, ಓರ್ವನನ್ನು ಹೇಗೆ ಬದುಕಿಸಬಹುದೆಂದು ಕಲಿಯುವ ಆರಾಧನಾ ಸ್ಥಳ ಎಂಬುದನ್ನು ವೈದ್ಯರು ಮರೆಯಬಾರದು, ರೋಗಿಗಳಿಂದ ಹಣ ಪಡೆಯುವುದು ಪಾಪದ ಕೆಲಸ. ಅದೇ ರೀತಿ ಸರ್ಕಾರವೂ ಕೂಡ ವೈದ್ಯರಿಗೆ ಕೊಡುತ್ತಿರುವ ವೇತನವನ್ನು ಹೆಚ್ಚಿಸಬೇಕು, ಈಗ ನೀಡುತ್ತಿರುವುದು ಅತ್ಯಲ್ಪ ಎಂದು ಒತ್ತಾಯಿಸಿದರು.

ಸಿಮ್ಸ್ ಘಟಿಕೋತ್ಸವ ಕಾರ್ಯಕ್ರಮ

ವೈದ್ಯರಾಗಿ ಹೊರಬಂದ 138 ಮಂದಿ:2016ರಲ್ಲಿ ಆರಂಭಗೊಂಡಿದ್ದ ವೈದ್ಯಕೀಯ ಕಾಲೇಜಿನ ಮೊದಲ ಬ್ಯಾಚ್‌ನ 145 ವಿದ್ಯಾರ್ಥಿಗಳಲ್ಲಿ ಐದು ವರ್ಷದ ಎಂಬಿಬಿಎಸ್ ಕೋರ್ಸ್‌ ಹಾಗೂ ಒಂದು ವರ್ಷದ ಹೌಸ್‌ ಸರ್ಜನ್‌ ಅವಧಿಯನ್ನು ಪೂರ್ಣಗೊಳಿಸಿ 138 ಮಂದಿ ವೈದ್ಯ ಪದವಿ ಪಡೆದರು. ಅಂತಿಮ ವರ್ಷದ ಪರೀಕ್ಷೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕಡೂರಿನ ಡಾ.ಮೋನಿಶಾ ಶೇ 77.2 ಅಂಕ ಗಳಿಸಿ ಕಾಲೇಜಿಗೆ ಮೊದಲ ರ‍್ಯಾಂಕ್‌ ಪಡೆದಿದ್ದಾರೆ. ಶೇ 76ರಷ್ಟು ಅಂಕ ಗಳಿಸಿರುವ ಬೆಂಗಳೂರಿನ ಡಾ.ಆಸ್ತಾ ಅರೋರಾ ಎರಡನೇ ರ‍್ಯಾಂಕ್‌ ಹಾಗೂ ಶೇ. 75.2ರಷ್ಟು ಅಂಕ ಪಡೆದಿರುವ ಮೈಸೂರಿನ ಡಾ.ಸಚಿನ್‌ ಮೂರನೇ ರ‍್ಯಾಂಕ್‌ ಗಳಿಸಿದ್ದಾರೆ.

138 ಮಂದಿಯಲ್ಲಿ ಮೂವರು ಉನ್ನತ ಶ್ರೇಣಿಯಲ್ಲಿ, 58 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಹಾಗೂ 77 ಮಂದಿ ದ್ವಿತೀಯ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾರೆ. ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನ ಸಂಸ್ಥೆಯ ಕುಲಪತಿ ಡಾ.ಎಂ.ಕೆ.ರಮೇಶ್, ನಿಮ್ಹಾನ್ಸ್‌ನ ಮಾಜಿ ನಿರ್ದೇಶಕ, ಡಾ.ಬಿ.ಎನ್.ಗಂಗಾಧರ, ವಿಜಿಕೆಕೆ ಸಂಸ್ಥಾಪಕ ಡಾ.ಎಚ್.ಆರ್.ಸುದರ್ಶನ್ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ‌ ಮಾಡಿದರು.

ಇದನ್ನೂ ಓದಿ:RSS ಕಚೇರಿಯಲ್ಲಿ ಸಿಎಂ, ಬಿಜೆಪಿ ನಾಯಕರ ಸುದೀರ್ಘ ಸಭೆ: ಅಭ್ಯರ್ಥಿ ಆಯ್ಕೆ ಚರ್ಚೆ

Last Updated : May 15, 2022, 12:09 PM IST

ABOUT THE AUTHOR

...view details