ಕರ್ನಾಟಕ

karnataka

ಶೀಘ್ರವೇ ವಿಶ್ವ ಕನ್ನಡ ಸಮ್ಮೇಳನ.. ರಾಜಕೀಯಕ್ಕಾಗಿ ಗಡಿ ಸಮಸ್ಯೆ ಸೃಷ್ಟಿ: ಮಹಾರಾಷ್ಟ್ರಕ್ಕೆ ಸಿಎಂ ಬೊಮ್ಮಾಯಿ ಟಾಂಗ್​

By

Published : Dec 28, 2022, 7:21 AM IST

ಬೆಳಗಾವಿಯಲ್ಲಿ ಕನ್ನಡ ರಂಗಮಂದಿರ ಉದ್ಘಾಟನೆ - ಶೀಘ್ರದಲ್ಲಿ ವಿಶ್ವ ಕನ್ನಡ ಸಮ್ಮೇಳನ ಆಯೋಜನೆ - ರಾಜಕೀಯಕ್ಕಾಗಿ ಮಹಾರಾಷ್ಟ್ರದಿಂದ ಗಡಿ ಸಮಸ್ಯೆ ಸೃಷ್ಟಿ - ಕರ್ನಾಟಕ ಎಂದೂ ಗಡಿ ಸಮಸ್ಯೆ ಸೃಷ್ಟಿಸಿಲ್ಲ - ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

Basavaraj Bommai
ಬಸವರಾಜ ಬೊಮ್ಮಾಯಿ

ಬೆಳಗಾವಿ ಕನ್ನಡ ರಂಗಮಂದಿರ ಉದ್ಘಾಟನೆ ಬಳಿಕ ಮಾತನಾಡಿದ ಬಸವರಾಜ ಬೊಮ್ಮಾಯಿ

ಬೆಳಗಾವಿ: ರಾಜಕೀಯ ಕಾರಣಕ್ಕಾಗಿ ಮಹಾರಾಷ್ಟ್ರದಲ್ಲಿ ಗಡಿ ಸಮಸ್ಯೆ ಸೃಷ್ಟಿ ಮಾಡಲಾಗುತ್ತಿದೆ. ಕರ್ನಾಟಕ ಎಂದೂ ಗಡಿ ಸಮಸ್ಯೆ ಸೃಷ್ಟಿಸಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಬೆಳಗಾವಿ ಕನ್ನಡ ಭವನ ಕ್ಷೇಮಾಭಿವೃದ್ಧಿ ಸಂಘದ ಕನ್ನಡ ಭವನ ರಂಗಮಂದಿರವನ್ನು ಉದ್ಘಾಟಿಸಿ ಬಳಿಕ ಮಾತನಾಡಿದ ಅವರು, ಕನ್ನಡದಲ್ಲಿ ಪ್ರಾಮಾಣಿಕತೆ, ಒಳ್ಳೆಯತನವಿದೆ. ಕನ್ನಡದ ಸಾಕ್ಷಿ ಪ್ರಜ್ಞೆ ಹಾಗೂ ಮಾನವೀಯತೆಯಿಂದ ಕೂಡಿರುವಂತಹದ್ದು. ನಮ್ಮ ಪುರಂದರದಾಸರು, ಅಲ್ಲಮಪ್ರಭು, ಬಸವಣ್ಣ, ಅವರಿಂದ ಹರಿದುಬರುವ ಜ್ಞಾನದ ಭಂಡಾರ ಕನ್ನಡಿಗರಲ್ಲಿ ಬೆಳೆದಿದೆ. ಹಿಂದಿನವರು ಇದನ್ನು ನಮಗೆ ಕೊಟ್ಟಿದ್ದಾರೆ. ಇದನ್ನು ಇನ್ನಷ್ಟು ಉತ್ಕೃಷ್ಟಗೊಳಿಸುವುದು ನಮ್ಮ ಕರ್ತವ್ಯ ಎಂದರು.

ಗಡಿ ಭಾಗದ ಅಭಿವೃದ್ಧಿ:ಗಡಿ ಭಾಗದ ಶಾಲೆಗಳ ಅಭಿವೃದ್ಧಿ ಬಗ್ಗೆ ಎಲ್ಲಾ ವ್ಯವಸ್ಥೆ ಕಲ್ಪಿಸಲಾಗುವುದು. ಗಡಿಯಾಚೆಗಿನ ಕನ್ನಡ ಶಾಲೆಗಳ ಬಗ್ಗೆಯೂ ಸಂಪೂರ್ಣ ಕಾಳಜಿ ವಹಿಸಲಾಗುವುದು. ಈಗಾಗಲೇ 100 ಕೋಟಿ ರೂ.ಗಳನ್ನು ಗಡಿ ಭಾಗದ ಅಭಿವೃದ್ಧಿಗೆ ನೀಡಲಾಗಿದೆ. ಕೆಲವೇ ದಿನಗಲ್ಲಿ ಗಡಿ ಭಾಗದಲ್ಲಿ ಏನಾಗಬೇಕೆಂದು ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು, ಸೂಚಿಸಿದರೆ ಅದನ್ನು ಅನುಷ್ಠಾನಕ್ಕೆ ತರಲಾಗುವುದು ಎಂದು ಹೇಳಿದರು.

ಸ್ವರ್ಗದ ದರ್ಶನ:ಗಡಿಯಾಚೆ ಇತ್ಯರ್ಥವಾದ ವಿಚಾರದಲ್ಲಿ ಸಮಸ್ಯೆ ಉಂಟಾಗಿದೆ. ರಾಜಕೀಯವಾಗಿ ಗಡಿಯಾಚೆ ಸಮಸ್ಯೆ ಪ್ರಾರಂಭಿಸಿದ್ದಾರೆ. ಕರ್ನಾಟಕದಲ್ಲಿ ಯಾವತ್ತೂ ಹಾಗೆ ಮಾಡಿಲ್ಲ. ಕನ್ನಡಕ್ಕಾಗಿ ಗಟ್ಟಿಯಾಗಿ ಎದ್ದು ನಿಲುವುದು ಮತ್ತು ಕನ್ನಡಿಗರನ್ನು ಸದಾ ಕಾಲ ರಕ್ಷಣೆ ಮಾಡಿಕೊಂಡು ಬಂದಿದ್ದೇವೆ. ಯಾರೂ ಅರ್ಜಿ ಕೊಟ್ಟು ಹುಟ್ಟಲು ಸಾಧ್ಯವಿಲ್ಲ. ಕನ್ನಡ ನಾಡಿನಲ್ಲಿ ಹುಟ್ಟಿದವರು ಕನ್ನಡಿಗರೇ. ಇದು ಕಟು ಸತ್ಯ. ಸತ್ಯದ ಮಾರ್ಗ ಅನುಸರಿಸಿದಾಗ ಸ್ವರ್ಗದ ದರ್ಶನವಾಗುತ್ತದೆ. ಕನ್ನಡವೇ ಸತ್ಯ, ಕನ್ನಡವೇ ನಿತ್ಯ ಎನ್ನುವುದನ್ನು ಅಕ್ಷರಶಃ ಪಾಲನೆ ಮಾಡಬೇಕು ಎಂದರು.

ಕನ್ನಡಕ್ಕೆ ಅಂತರ್ಗತ ಶಕ್ತಿ:ಕನ್ನಡ ದಿನನಿತ್ಯ ಬಳಕೆ ಮಾಡಿದರೆ ಉಳಿಯುತ್ತದೆ. ಕನ್ನಡಕ್ಕೆ ಅಂತರ್ಗತ ಶಕ್ತಿ ಇದೆ. ಕನ್ನಡವನ್ನು ಅಳಿಸಲು ಈ ಭೂಮಿಯ ಮೇಲಿನ ಯಾವುದೇ ಶಕ್ತಿಗೂ ಸಾಧ್ಯವಿಲ್ಲ. ನಮ್ಮದು ಶಕ್ತಿ ಶಾಲಿ ಭಾಷೆ. ಹಿನ್ನಡೆಯಾದ್ರೆ ಅದು ನಮ್ಮಿಂದಾಗಬೇಕು, ಕನ್ನಡ ಭಾಷೆಯ ಶಕ್ತಿ ಬಳಕೆ ಮಾಡಿದರೆ ಕನ್ನಡವೂ ಬೆಳೆದು ನಾವೂ ಬೆಳೆಯುತ್ತೇವೆ. ಕನ್ನಡ ಭಾಷೆಗೆ ಆತಂಕವಿಲ್ಲ. ಕನ್ನಡ ಶ್ರೀಮಂತ ಭಾಷೆಯಾಗಿದ್ದು, ಬಳಸಿದಷ್ಟೂ ನಮ್ಮನ್ನು ಶಕ್ತಿ ಶಾಲಿಯಾಗಿಸುತ್ತದೆ. ಸಕಾರಾತ್ಮಕವಾಗಿ ಮುಂದುವರೆದಾಗ ನಮಗೆ ಹಾಗೂ ಕನ್ನಡಕ್ಕೆ ಉತ್ತಮ ಭವಿಷ್ಯವಿದೆ. ಸಾಧನೆ ಕನ್ನಡದಿಂದ ಇದೆ ಎಂದು ಮರೆಯಬೇಡಿ ಅಂದರು.

ವಿಶ್ವ ಕನ್ನಡ ಸಮ್ಮೇಳನ :ಈ ಹಿಂದೆ ಬೆಳಗಾವಿಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಹಾಗೂ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ ಅತ್ಯಂತ ಯಶಸ್ವಿಯಾಗಿ ನಡೆಸಲಾಗಿದೆ. ಶೀಘ್ರದಲ್ಲಿ ವಿಶ್ವ ಕನ್ನಡ ಸಮ್ಮೇಳನ ಆಯೋಜಿಸಲಾಗುವುದು. ರಂಗಮಂದಿರದ ಬಾಕಿಯಿರುವ ಕೆಲಸಗಳಿಗೆ ಅಗತ್ಯ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಇದೇ ವೇಳೆ ತಿಳಿಸಿದರು.

ಇದನ್ನೂ ಓದಿ:'ಗಡಿ ಕನ್ನಡಿಗರ ರಕ್ಷಿಸಿ..' ಬೊಮ್ಮಾಯಿ ಕಾಲಿಗೆ ನಮಸ್ಕರಿಸಿ ಜತ್ತ ಕನ್ನಡಿಗರ ಮನವಿ

ಸಂಸ್ಕೃತಿ ಮತ್ತು ಭಾಷೆಗೆ ನಿಕಟ ಸಂಬಂಧವಿದೆ : ಬೆಳಗಾವಿಯಲ್ಲಿ ಇಷ್ಟು ಸುಸಜ್ಜಿತ ಕನ್ನಡ ಭವನ ನಿರ್ಮಾಣ ಮಾಡಿರುವುದು ಈ ಭಾಗದಲ್ಲಿ ಕನ್ನಡಕ್ಕೆ ಮತ್ತಷ್ಟು ಮಹತ್ವ ಬಂದಂತಾಗಿದೆ. ಸಂಸ್ಕೃತಿ ಮತ್ತು ಭಾಷೆಗೆ ಬಹ‌ಳ ನಿಕಟ ಸಂಬಂಧ ಇದೆ. ನಾವು ಕನ್ನಡಿಗರು ಅತಿಥಿಗಳನ್ನು ಸ್ವಾಗತಿಸುವ, ಉಪಚರಿಸುವ ರೀತಿ ಎಲ್ಲವೂ ನಮ್ಮ ಸಂಸ್ಕೃತಿಯನ್ನು ಬಿಂಬಿಸುತ್ತದೆ. ಭಗವಂತ ಮನುಷ್ಯನಿಗೆ ಬುದ್ಧಿ ಕೊಟ್ಟಿದ್ದಾನೆ. ಭಾಷೆ ಇಡೀ ಮನುಕುಲದಲ್ಲಿ ಮಹತ್ವದ ಪಾತ್ರ ವಹಿಸಿದೆ. ಮನುಷ್ಯನಿಗೆ ಅಭಿವ್ಯಕ್ತಪಡಿಸಲು ಭಾಷೆ ಮುಖ್ಯವಾಗಿದೆ. ಮನಸ್ಸುಗಳನ್ನು ಒಗ್ಗೂಡಿಸುವ, ತತ್ವಾದರ್ಶಗಳನ್ನು, ದೇಶಭಕ್ತಿಯನ್ನು ಜೋಡಿಸಲು ಭಾಷೆ ಮುಖ್ಯವಾಗುತ್ತದೆ ಎಂದರು.

ಕನ್ನಡ ಶ್ರೀಮಂತ ಭಾಷೆ:ರಾಷ್ಟ್ರಕವಿ ಕುವೆಂಪು ಬರೆದ ನಾಡಗೀತೆ ಕೇಳಿದರೆ ಸಾಕಷ್ಟು ಅರ್ಥಗರ್ಭಿತವಾಗಿದೆ. ಕನ್ನಡ ಶ್ರೀಮಂತವಾದ ಭಾಷೆಯಾಗಿಸಲು ಸಾಹಿತಿಗಳು ಮಹತ್ತರ ಕೊಡುಗೆ ನೀಡಿದ್ದಾರೆ. ಕನ್ನಡ ಅತ್ಯಂತ ಪ್ರಾಚೀನ ಭಾಷೆ. ಅತಿ‌ಹೆಚ್ಚು ಜ್ಞಾನಪೀಠ ಪ್ರಶಸ್ತಿಗಳು ಕನ್ನಡಕ್ಕೆ ಬಂದಿವೆ. ಹಳೆ ಕನ್ನಡ, ನುಡಿಗನ್ನಡ, ಜಾನಪದ ಕನ್ನಡವಿರುವಂತೆ ಕನ್ನಡ ಸಾಹಿತ್ಯದಲ್ಲಿಯೂ ಅನೇಕ ವಿಧಗಳಿವೆ. ವಚನ ಸಾಹಿತ್ಯ ತತ್ವ ತಾತ್ವಿಕತೆಯನ್ನು ನೀಡಿದೆ. ವಚನ ಸಾಹಿತ್ಯ, ದಾಸ ಸಾಹಿತ್ಯ ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಿದೆ. ಈ ಸಾಹಿತ್ಯಗಳನ್ನು ಇಡೀ ದೇಶದ ಜನರಿಗೆ ತಿಳಿಸಬೇಕಿದೆ. ಸಂಕುಚಿತ ಮನೋಭಾವದಿಂದ ಹೊರ ಬರಬೇಕು. ಸ್ವಾತಂತ್ರ್ಯ ಬಂದಾಗ ಇಂಗ್ಲಿಷ್ ವ್ಯಾಮೋಹ ಹೆಚ್ಚಾಗಿತ್ತು‌‌. ಬೇರೆ ಭಾಷೆ ಕಲಿಯಬೇಕು. ಆದರೆ, ನಮ್ಮತನ ಬಿಟ್ಟು ಕೊಡಬಾರದು. ಕನ್ನಡ ನಮ್ಮ ಅಸ್ಮಿತೆ. ಕನ್ನಡ ಭಾಷೆಯಿಂದ ನಾವು ಗುರುತಿಸಲ್ಪಡುತ್ತೇವೆ ಎಂದರು.

ಇದನ್ನೂ ಓದಿ:ಮಹಾರಾಷ್ಟ್ರ ಗಡಿ ವಿವಾದ ಖಂಡಿಸಿ, ರಾಜ್ಯದ ಹಿತ ರಕ್ಷಣೆ ರಕ್ಷಣೆಗಾಗಿ ವಿಧಾನಸಭೆಯಲ್ಲಿ ಸರ್ವಾನುಮತದ ನಿರ್ಣಯ ಅಂಗೀಕಾರ

ಈ ವೇಳೆ ಜಗದ್ಗುರು ತೋಂಟದ ಸಿದ್ಧರಾಮ ಸ್ವಾಮೀಜಿ, ಸಚಿವ ಗೋವಿಂದ ಕಾರಜೋಳ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ್ ಜೋಶಿ, ಹಿರಿಯ ಕಲಾವಿದೆ ಗಿರಿಜಾ ಲೋಕೇಶ್, ಸಂಸದೆ ಮಂಗಳಾ ಅಂಗಡಿ, ಮಾಜಿ ಸಂಸದರು ಹಾಗೂ ಕೆಎಲ್​ಇ ಸಂಸ್ಥೆ ಅಧ್ಯಕ್ಷ ಪ್ರಭಾಕರ ಕೋರೆ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ABOUT THE AUTHOR

...view details