ETV Bharat / state

'ಗಡಿ ಕನ್ನಡಿಗರ ರಕ್ಷಿಸಿ..' ಬೊಮ್ಮಾಯಿ ಕಾಲಿಗೆ ನಮಸ್ಕರಿಸಿ ಜತ್ತ ಕನ್ನಡಿಗರ ಮನವಿ

author img

By

Published : Dec 27, 2022, 9:28 PM IST

Updated : Dec 27, 2022, 9:38 PM IST

ಮಹಾರಾಷ್ಟ್ರ ಸರ್ಕಾರವು ತನ್ನ ಅಧಿವೇಶನದಲ್ಲಿ ಬೆಳಗಾವಿ ವಿಚಾರವಾಗಿ ಖಂಡನಾ ನಿರ್ಣಯ ಮಾಡಿದೆ. ಈ ಸಂದರ್ಭದಲ್ಲಿ ನಮ್ಮ ಭೂಮಿಯನ್ನು ಹಿಂಪಡೆದುಕೊಳ್ಳುತ್ತೇವೆ ಎಂದು ಹೇಳಿದ್ದು, ಇದಕ್ಕೆ ಸಿಎಂ ಬೊಮ್ಮಾಯಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

bommai-talked-about-border-issue
ಬಸವರಾಜ ಬೊಮ್ಮಾಯಿ

ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ

ಬೆಳಗಾವಿ: ಮಹಾರಾಷ್ಟ್ರದಲ್ಲಿ ನೆಲೆಸಿರುವ ಗಡಿ ಕನ್ನಡಿಗರ ರಕ್ಷಣೆ ಮಾಡಿ, ಹಿತ ಕಾಪಾಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕಾಲಿಗೆ ನಮಸ್ಕರಿಸಿ ಜತ್ತ ಕನ್ನಡಿಗರು ಮನವಿ ಮಾಡಿದ್ದಾರೆ. ನಗರದಲ್ಲಿ ಕನ್ನಡ ರಂಗಮಂದಿರ ಸಭಾಭವನ ಉದ್ಘಾಟನೆ ಸಮಯದಲ್ಲಿ ಗಡಿ ಕನ್ನಡಿಗರು ಹೀಗೆ ಮನವಿ ಮಾಡಿದರು.

ಮಹಾರಾಷ್ಟ್ರ ಸರ್ಕಾರ ಕನ್ನಡಿಗರಾದ ನಮ್ಮನ್ನು ನಿರ್ಲಕ್ಷಿಸುತ್ತಿದೆ. ನೀವಾದ್ರೂ ನಮ್ಮ ಮನವಿಗೆ ಸ್ಪಂದಿಸಿ. ನಮಗೆ ಯಾವುದೇ ಸೌಲಭ್ಯ ಕಲ್ಪಿಸದೇ ಮಹಾ ಸರ್ಕಾರ ಅನ್ಯಾಯ ಮಾಡುತ್ತಿದೆ. ಮಹಾರಾಷ್ಟ್ರದಲ್ಲಿ ಕನ್ನಡ ಭಾಷೆಯಲ್ಲಿ ವ್ಯಾಸಂಗ ಮಾಡುವ ಮಕ್ಕಳಿಗೆ ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸಿ ಹೊರರಾಜ್ಯ ಕನ್ನಡಿಗರ ಮಕ್ಕಳಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ 5 ಸಾವಿರ ಕೋಟಿ ಠೇವಣಿ ಯೋಜನೆ ರೂಪಿಸುವಂತೆ ಒತ್ತಾಯಿಸಿದ್ದಾರೆ.

ಮಹಾರಾಷ್ಟ್ರದಲ್ಲಿ ಕನ್ನಡ ಭಾಷಾ ಶಿಕ್ಷಕರ ನೇಮಕಾತಿಗೆ ಅಲ್ಲಿನ ಸರ್ಕಾರ ಗಮನ ಹರಿಸುತ್ತಿಲ್ಲ. ದಯವಿಟ್ಟು ಗಡಿ ಕನ್ನಡ ಶಾಲೆಗಳಿಗೆ ಕನ್ನಡ ಶಾಲೆ ಶಿಕ್ಷಕರನ್ನು ನೇಮಿಸಿ. ಮಹಾರಾಷ್ಟ್ರ ಸಾಂಗ್ಲಿ ಜಿಲ್ಲೆಯ ಜತ್ತ ತಾಲೂಕಿನ ಐದಕ್ಕೂ ಅಧಿಕ ಗ್ರಾಮಗಳ ಜನರು ಸಿಎಂ ಭೇಟಿಯಾದರು.

ಗಡಿ ವಿಚಾರದಲ್ಲಿ ರಾಜ್ಯ ಸರ್ಕಾರ ನಿಲುವಳಿ ಮಂಡಿಸಿದ ಬೆನ್ನಲ್ಲೇ, ಮಹಾರಾಷ್ಟ್ರ ಸರ್ಕಾರ ಕೂಡಾ ಇಂದು ಅಧಿವೇಶನದಲ್ಲಿ ಖಂಡನಾ ನಿರ್ಣಯ ಮಂಡಿಸಿದೆ. ಅಲ್ಲದೇ ನಮ್ಮ ಭೂಮಿಯನ್ನು ಹಿಂಪಡೆದುಕೊಳ್ಳುತ್ತೇವೆ ಎಂದು ಹೇಳಿಕೆ ನೀಡಿದೆ. ಇದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಖಂಡನೆ ವ್ಯಕ್ತಪಡಿಸಿದ್ದಾರೆ. ಅಧಿವೇಶನದಲ್ಲಿ ಭಾಗವಹಿಸಿದ ನಂತರ ಮಾತನಾಡಿದ ಅವರು, ರಾಜ್ಯ ಪುನರ್‌ರಚನಾ ಕಾಯ್ದೆಯಾಗಿ ಗಡಿ ವಿಚಾರ 1956ರಲ್ಲಿ ಮುಗಿದಿದೆ. ಎರಡೂ ರಾಜ್ಯದಲ್ಲಿ ಜನರು ನೆಮ್ಮದಿಯಿಂದ ಇದ್ದಾರೆ. ರಾಜಕಾರಣಕ್ಕಾಗಿ ಮಹಾರಾಷ್ಟ್ರದವರೂ ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ. ನಾವು ನಮ್ಮ ನಿಲುವಿನಲ್ಲಿ ಸ್ಪಷ್ಟವಾಗಿದ್ದೇವೆ, ಕರ್ನಾಟಕ ಯಾವುದೇ ಒಂದು ಇಂಚು ಭೂಮಿಯನ್ನು ಕೊಡುವ ಪ್ರಶ್ನೆಯೇ ಇಲ್ಲ. ಗಡಿಯಿಂದ ಆಚೆ ಇರುವ ಕನ್ನಡಿಗರ ರಕ್ಷಣೆ ಮಾಡುವುದಕ್ಕೆ ಸರ್ಕಾರ ಬದ್ಧವಾಗಿದೆ. ಗಡಿ ವಿವಾದ ವಿಚಾರಣೆ ಸುಪ್ರೀಂ ಕೋರ್ಟಿನಲ್ಲಿದ್ದರೂ ಮಹಾರಾಷ್ಟ್ರ ಈ ರೀತಿ ಹೇಳಿಕೆ ನೀಡುತ್ತಿದೆ. ಒಕ್ಕೂಟದ ವ್ಯವಸ್ಥೆಗೆ ಮಹಾರಾಷ್ಟ್ರ ಧಕ್ಕೆ ತರುತ್ತಿದೆ ಎಂದರು.

ಇದನ್ನೂ ಓದಿ: ಶಾಸಕರ ಹಕ್ಕುಚ್ಯುತಿ ಉಲ್ಲಂಘನೆ ವಿಚಾರ: ವಿಧಾನಸಭೆಯಲ್ಲಿ ಬಿಸಿ ಬಿಸಿ ಚರ್ಚೆ

Last Updated : Dec 27, 2022, 9:38 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.