ಕರ್ನಾಟಕ

karnataka

ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆ, ಶೌರ್ಯಭೂಮಿ (ಶಿಲ್ಪವನ) ಲೋಕಾರ್ಪಣೆಗೊಳಿಸಿದ ಸಿಎಂ ಸಿದ್ದರಾಮಯ್ಯ

By ETV Bharat Karnataka Team

Published : Jan 17, 2024, 3:22 PM IST

ಸಂಗೊಳ್ಳಿಯಲ್ಲಿ ರಾಯಣ್ಣ ಸೈನಿಕ ಶಾಲೆ ಹಾಗೂ ಶೌರ್ಯಭೂಮಿ (ಶಿಲ್ಪವನ)ಯನ್ನು ಸಿಎಂ ಸಿದ್ದರಾಮಯ್ಯ ಅವರು ಬುಧವಾರ ಲೋಕಾರ್ಪಣೆಗೊಳಿಸಿದರು.

ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ

ಬೆಳಗಾವಿ :ಬೈಲಹೊಂಗಲ ತಾಲೂಕಿನ ಸಂಗೊಳ್ಳಿಯಲ್ಲಿ ವಿಶಾಲವಾದ ಜಾಗದಲ್ಲಿ ನಿರ್ಮಿಸಲಾಗಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆ ಹಾಗೂ ರಾಯಣ್ಣನ ಕೆಚ್ಚೆದೆಯ ಬದುಕು ಅನಾವರಣಗೊಳಿಸುವ ಆಕರ್ಷಕ ಶಿಲ್ಪವನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಲೋಕಾರ್ಪಣೆಗೊಳಿಸಿದರು.

ಬೆಳಗಾವಿ ಜಿಲ್ಲಾಡಳಿತ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಆಶ್ರಯದಲ್ಲಿ ಲೋಕಾರ್ಪಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಶ್ರೀ ಕ್ಷೇತ್ರ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ, ಕಿತ್ತೂರು ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ, ಸಂಗೊಳ್ಳಿ ಹಿರೇಮಠದ ಗುರು ಸಿದ್ಧಲಿಂಗೇಶ್ವರ ಸಂಸ್ಥಾನದ ಗುರುಲಿಂಗ ಶಿವಾಚಾರ್ಯ ಸ್ವಾಮೀಜಿ ಮತ್ತಿತರರು ಉಪಸ್ಥಿತರಿದ್ದರು.

ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ, ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ಶಿವರಾಜ್ ತಂಗಡಗಿ, ನಗರಾಭಿವೃದ್ಧಿ ಇಲಾಖೆಯ ಸಚಿವರಾದ ಸುರೇಶ್ ಬಿ. ಎಸ್, ಸರ್ಕಾರಿ ಮುಖ್ಯ ಸಚೇತಕರಾದ ಅಶೋಕ ಪಟ್ಟಣ, ಬೈಲಹೊಂಗಲ ಶಾಸಕರಾದ ಮಹಾಂತೇಶ್ ಕೌಜಲಗಿ, ಶಾಸಕರಾದ ಆಸಿಫ್ ಸೇಠ್, ಗಣೇಶ್ ಹುಕ್ಕೇರಿ, ಬಾಬಾಸಾಹೇಬ್ ಪಾಟೀಲ, ಮಹೇಂದ್ರ ತಮ್ಮಣ್ಣವರ್, ವಿಶ್ವಾಸ್ ವೈದ್ಯ, ಮಾಜಿ ಸಚಿವರಾದ ಹೆಚ್. ವೈ ಮೇಟಿ, ಹೆಚ್. ಎಂ ರೇವಣ್ಣ ಸೇರಿದಂತೆ ಅನೇಕ‌ ಜನಪ್ರತಿನಿಧಿಗಳು ಉಪಸ್ಥಿತರಿದ್ದರು. ಬಳಿಕ ಸೈನಿಕ ಶಾಲೆಯ ವಿದ್ಯಾರ್ಥಿಗಳೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಛಾಯಾಚಿತ್ರ ತೆಗೆಸಿಕೊಂಡು ಶುಭ ಹಾರೈಸಿದರು.

ಸಂಗೊಳ್ಳಿ ರಾಯಣ್ಣ ಶೌರ್ಯಭೂಮಿ :ಸಂಗೊಳ್ಳಿ ರಾಯಣ್ಣ ಶೌರ್ಯಭೂಮಿಯಲ್ಲಿ ಕಿತ್ತೂರು ಸಂಸ್ಥಾನದಲ್ಲಿ ವೀರತನಕ್ಕೆ ಹೆಸರಾದ ರೋಗಣ್ಣವರ ಮನೆ, ಹುಲಿಯೊಂದಿಗೆ ಹೋರಾಡುತ್ತಿರುವ ರಾಯಣ್ಣನ ತಂದೆ ಭರಮಪ್ಪ: ಭರಮಪ್ಪನ ಸಾಹಸ ಮೆಚ್ಚಿ ದೊರೆ ಮಲ್ಲಸರ್ಜ ದೇಸಾಯಿ ರಕ್ತಮಾನ್ಯ ಭೂಮಿಯನ್ನು ನೀಡಿದ್ದ.

ಭರಮಪ್ಪ ಹಾಗೂ ಕೆಂಚಮ್ಮ ದಂಪತಿಗೆ ಜನಿಸಿದ ಮಗುವಿಗೆ ರಾಯಣ್ಣ ಎಂದು‌ ನಾಮಕರಣ ದೃಶ್ಯ, ಕುಸ್ತಿ ಕಣದಲ್ಲಿ ಆಡಿ ಗೆದ್ದ ತರುಣ ರಾಯಣ್ಣ; ಕುಸ್ತಿಯಲ್ಲಿ ಗದಗದ ರಾಯಣ್ಣನಿಗೆ ದೊರೆ ಖಡ್ಗ ನೀಡುವುದು; ಕಿತ್ತೂರು ರಾಣಿ ಚೆನ್ಮಮ್ಮನ ದರ್ಬಾರ್; ಬ್ರಿಟೀಷರೊಂದಿಗಿನ ಮೊದಲ ಆಂಗ್ಲೋ-ಕಿತ್ತೂರು ಯುದ್ಧ; ಹೀಗೆ ರಾಯಣ್ಣನ ಬಾಲ್ಯದಿಂದ ಹಿಡಿದು ಕೊನೆ ಗಳಿಗೆಯ ಹೋರಾಟದ ದೃಶ್ಯಗಳು, ಶಿಲ್ಪವನದಲ್ಲಿ ಜೀವ ಪಡೆದುಕೊಂಡಿರುವುದು ಗಮನ ಸೆಳೆದಿದೆ.

ಸಂಗೊಳ್ಳಿ ರಾಯಣ್ಣ ಉತ್ಸವ : ಕಣ್ಮನ ಸೆಳೆದ ಜಾನಪದ ಕಲಾತಂಡಗಳು- ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಸ್ಮರಣಾರ್ಥ ಜಿಲ್ಲಾಡಳಿತ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ತಾಲೂಕಿನ ಸಂಗೊಳ್ಳಿ ಗ್ರಾಮದಲ್ಲಿ ಬುಧವಾರ ನಡೆದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಉತ್ಸವ-2024, ಜಾನಪದ ಕಲಾಮೇಳ ಎಲ್ಲರ ಗಮನ ಸೆಳೆಯಿತು.

ಶಾಸಕ ಮಹಾಂತೇಶ ಕೌಜಲಗಿ ಜಾನಪದ ಕಲಾ‌ಮೇಳದ ಭವ್ಯ ಮೆರವಣಿಗೆಗೆ ಚಾಲನೆ ನೀಡಿದರು. ಗುರುಲಿಂಗ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು. ಈ ವೇಳೆ ಗ್ರಾಮ ಪಂಚಾಯತಿ ಅಧ್ಯಕ್ಷ ರೂಪಾ ಚಚಡಿ, ಉಪಾಧ್ಯಕ್ಷ ಫಕೀರಪ್ಪ ಕುರಿ, ಉಪವಿಭಾಗಾಧಿಕಾರಿ ಪ್ರಭಾವತಿ ಫಕೀರಪೂರ, ತಾಪಂ ಇಒ ಸುಭಾಷ ಸಂಪಗಾಂವಿ, ತಹಶೀಲ್ದಾರ್ ಸಚ್ಚಿದಾನಂದ ಕುಚನೂರ ಡೊಳ್ಳು ಬಾರಿಸಿದರು‌.

ಬ್ರಿಟಿಷರಿಗೆ ಸೆಡ್ಡು ಹೊಡೆದ ಶೂರ ರಾಯಣ್ಣನ ತ್ಯಾಗಬಲಿದಾನಗಳನ್ನು ಕಲಾಮೇಳ ನೆನಪಿಸಿತು. ಉತ್ಸವದ ಢಮರುಗಗಳು ಕಿತ್ತೂರು ಇತಿಹಾಸದ ರಣಕಹಳೆ ಮೊಳಗಿಸಿದವು. ಡೊಳ್ಳುಗಳು ಕ್ರಾಂತಿಯ ಧ್ವನಿಯನ್ನು ಪ್ರತಿಧ್ವನಿಸಿದವು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಕಲಾತಂಡಗಳನ್ನು ಗ್ರಾಮಸ್ಥರು ಬಿಡಿಸಿದ್ದ ಬಣ್ಣ ಬಣ್ಣದ ರಂಗೋಲಿ ಚಿತ್ರಗಳು ಸ್ವಾಗತಿಸಿದವು. ಪ್ರತಿಯೊಂದು ಬೀದಿಗಳು ತಳಿರು ತೋರಣಗಳಿಂದ ಸಿಂಗಾರಗೊಂಡಿದ್ದವು. ಕಲಾ ತಂಡಗಳಿಗೆ ರಾಗಿ ಅಂಬಲಿ, ಕುಡಿಯುವ ನೀರು ವಿತರಿಸಲಾಯಿತು. ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಡಿಜೆ ಸೌಂಡ್​ಗೆ ಯುವಕರು ಹೆಜ್ಜೆ ಹಾಕಿ ಸಂಭ್ರಮಿಸಿದರು.

ಸುರೇಬಾನ ಕವಿರತ್ನ ಕಾಳಿದಾಸ ಜಗ್ಗಲಗಿ ಮೇಳ, ರಾಮದುರ್ಗ ಶಾಖಾಬರಿ ಮಹಿಳಾ ಗೊಂಬೆ ಕುಣಿತ, ಕೊಣ್ಣೂರ ಬರಮಲಿಂಗೇಶ್ವರ ಮಹಿಳಾ ಡೊಳ್ಳು ಕುಣಿತ, ಗುಂಡೆನಟ್ಟಿ ಬಸವೇಶ್ವರ ಜಗ್ಗಲಗಿ ಮೇಳ, ಕಲ್ಲೋಳಿ ಗೂಳಪ್ಪ ವಿಜಯ ನಗರ ತಂಡದ ವೀರಗಾಸೆ, ಕಲ್ಲೋಳಿ ಮಹಾಂತೇಶ ಹೂಗಾರ ತಂಡದ ಸನಾದಿ ಮೇಳ, ಹಲ್ಯಾಳ ಶಶಿಧರ ಭಜಂತ್ರಿ ತಂಡದ ತಾಸೆ ವಾದನ ಮತ್ತು ಸನಾದಿ ಮೇಳ, ತುಮಕೂರು ಬಾನುಪ್ರಕಾಶ ತಂಡದ ನೀಲು ಕುದುರೆ ಗೊಂಬೆ ಕುಣಿತ, ನಿಟ್ಟೂರ ಸಂಗಮೇಶ ತಂಡದ ನಂದಿಧ್ವಜ, ಕೊಣ್ಣೂರ ಬೀರಲಿಂಗೇಶ್ವರ ತಂಡದ ಡೊಳ್ಳು ಕುಣಿತ, ಹಾಸನ ಸಣ್ಣ ಸ್ವಾಮಿ ಡೊಳ್ಳು ಕುಣಿತ, ದೇವಿರಮ್ಮ ತಂಡದ ಕಂಸಾಳೆ ನೃತ್ಯ, ಸಂಕನಕಟ್ಟಿ ಪರಮಾನಂದ ಕರಡಿಮಜಲು, ಅರಸೀಕೆರೆ ಜಯರಾಮ ತಂಡದ ನಂದಿಧ್ವಜ ಎಲ್ಲರನ್ನು ಆಕರ್ಷಿಸಿದವು.

ಇದನ್ನೂ ಓದಿ :ಪೊಲೀಸರಿಂದ ಕುವೆಂಪು ವಿರಚಿತ ಹಳೆಗನ್ನಡದ 'ಶ್ಮಶಾನ ಕುರುಕ್ಷೇತ್ರ' ನಾಟಕ ಪ್ರದರ್ಶನ

ABOUT THE AUTHOR

...view details