ಕರ್ನಾಟಕ

karnataka

ಸಚಿವೆಯಾಗಿ ದಾಖಲೆ ಸೃಷ್ಟಿಸಿದ ಲಕ್ಷ್ಮಿ  ಹೆಬ್ಬಾಳ್ಕರ್!

By

Published : May 29, 2023, 2:03 PM IST

Updated : May 29, 2023, 4:09 PM IST

ಇದುವರೆಗೆ ಬೆಳಗಾವಿ ಕ್ಷೇತ್ರದಲ್ಲಿ ಶಾಸಕರಾಗಿ ಗೆದ್ದವರ ಪಕ್ಷ ಅಧಿಕಾರಕ್ಕೆ ಬಂದರೂ ಯಾರೊಬ್ಬರಿಗೂ ಸಚಿವ ಸ್ಥಾನ ಸಿಕ್ಕಿರಲಿಲ್ಲ.

Minister Lakshmi Hebbalkar
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​

ಸಚಿವೆಯಾಗಿ ದಾಖಲೆ ಸೃಷ್ಟಿಸಿದ ಲಕ್ಷ್ಮೀ ಹೆಬ್ಬಾಳ್ಕರ್!

ಬೆಳಗಾವಿ: ಬೆಳಗಾವಿ ಗ್ರಾಮೀಣ ವಿಧಾನಸಭಾ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಸಚಿವರಾಗಿ ಪ್ರಮಾಣವಚನ ಸ್ವೀಕರಿಸುವ ಮೂಲಕ ಬೆಳಗಾವಿ ತಾಲೂಕಿನ ಇತಿಹಾಸದಲ್ಲೇ ಮೊದಲ ಮಂತ್ರಿಯಾದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಸಂಪುಟ ದರ್ಜೆ ಸಚಿವೆಯಾಗಿರುವ ಲಕ್ಷ್ಮಿ ಹೆಬ್ಬಾಳ್ಕರ್ ಹೊಸ ದಾಖಲೆ ಬರೆದಿದ್ದಾರೆ. ಈವರೆಗೆ ಬೆಳಗಾವಿ ತಾಲೂಕಿನಿಂದ ಆರಿಸಿ ಹೋದ ಯಾವೊಬ್ಬ ಶಾಸಕರಿಗೂ ಕೂಡ ಮಂತ್ರಿ ಸ್ಥಾನ ಒಲಿದು ಬಂದಿರಲಿಲ್ಲ. ಆದರೆ ಹೆಬ್ಬಾಳ್ಕರ್ ಇಂತಹ ಅಪರೂಪದ ದಾಖಲೆಗೆ ಪಾತ್ರರಾಗಿದ್ದಾರೆ.

ಬೆಳಗಾವಿ ತಾಲೂಕಿನಲ್ಲಿ ಸದ್ಯ ಬೆಳಗಾವಿ ಉತ್ತರ, ದಕ್ಷಿಣ ಮತ್ತು ಗ್ರಾಮೀಣ ಹೀಗೆ ಮೂರು ಕ್ಷೇತ್ರಗಳಿವೆ. 2008 ಕ್ಕೂ ಮೊದಲು ಈ ಕ್ಷೇತ್ರಗಳು ಅಸ್ತಿತ್ವದಲ್ಲಿ ಇರಲಿಲ್ಲ. ಆಗ ಹಿರೇಬಾಗೇವಾಡಿ, ಉಚಗಾಂವ, ಬೆಳಗಾವಿ ಸಿಟಿ ವಿಧಾನಸಭೆ ಕ್ಷೇತ್ರಗಳಿದ್ದವು. 2008 ರಲ್ಲಿ ಕ್ಷೇತ್ರ ಪುನರ್ ವಿಂಗಡಣೆ ಮಾಡಿದ ಬಳಿಕ ಉತ್ತರ, ದಕ್ಷಿಣ, ಗ್ರಾಮೀಣ ಕ್ಷೇತ್ರಗಳು ಅಸ್ತಿತ್ವಕ್ಕೆ ಬಂದಿವೆ.

ಬೆಳಗಾವಿ ತಾಲೂಕು ಈ ಮೊದಲು ಎಂಇಎಸ್​ ಭದ್ರಕೋಟೆಯಾಗಿತ್ತು. ಎಂಇಎಸ್​ನಿಂದ ಸ್ಪರ್ಧಿಸಿದ್ದ ಅಭ್ಯರ್ಥಿಗಳೇ ಗೆಲುವು ಸಾಧಿಸುತ್ತಾ ಬಂದಿದ್ದರು. ರಾಷ್ಟ್ರೀಯ ಪಕ್ಷಗಳಿಗೆ ಗೆಲುವು ಕಷ್ಟಸಾಧ್ಯವಾಗಿತ್ತು. ಯಾವಾಗ ಬೆಳಗಾವಿ ಜಿಲ್ಲೆಯ ಬೇರೆ ಬೇರೆ ತಾಲೂಕುಗಳ ಹಳ್ಳಿಗಳ ಜನರು ಉದ್ಯೋಗ ಅರಸಿ ಬೆಳಗಾವಿ ನಗರಕ್ಕೆ ಬರಲು ಶುರು ಮಾಡಿದರೋ ಆಗ ಬೆಳಗಾವಿಯಲ್ಲಿ ಕನ್ನಡ ಗಟ್ಟಿಯಾಗುತ್ತಾ ಹೋಯಿತು.

ಮಂತ್ರಿ ಸ್ಥಾ‌ನ ತಪ್ಪಿಸಿಕೊಂಡಿದ್ದ ಘಟಾನುಘಟಿಗಳು:ಹಿರೇಬಾಗೇವಾಡಿ ಕ್ಷೇತ್ರದಿಂದ ಒಟ್ಟು ಮೂರು‌ ಬಾರಿ ಆರಿಸಿ ಬಂದಿದ್ದ ಜನತಾ ಪರಿವಾರದ ಎಸ್.ಸಿ. ಮಾಳಗಿ, ಒಮ್ಮೆ ಹಿರೇಬಾಗೇವಾಡಿ, ಮೂರು ಬಾರಿ ಬೆಳಗಾವಿ ದಕ್ಷಿಣ ಕ್ಷೇತ್ರದಿಂದ ಗೆದ್ದಿರುವ ಅಭಯ ಪಾಟೀಲ, ಬೆಳಗಾವಿ ನಗರದಿಂದ ಎರಡು ಬಾರಿ ಗೆಲುವು ಸಾಧಿಸಿದ್ದ ರಮೇಶ ಕುಡಚಿ, ಬೆಳಗಾವಿ ಉತ್ತರ ಕ್ಷೇತ್ರದಿಂದ ಎರಡು ಬಾರಿ ಗೆದ್ದಿದ್ದ ಫಿರೋಜ್ ಸೇಠ್ ಅವರು ತಾವು ಪ್ರತಿನಿಧಿಸುತ್ತಿದ್ದ ಪಕ್ಷ ಅಧಿಕಾರಕ್ಕೆ ಬಂದರೂ ಮಂತ್ರಿಯಾಗುವ ಯೋಗ ಕೂಡಿ ಬಂದಿರಲಿಲ್ಲ.

ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮನೋಹರ ಕಡೋಲ್ಕರ್ ಆರಿಸಿ ಬಂದಿದ್ದರು. ಇವರನ್ನು ಹೊರತು ಪಡಿಸಿ ಈ ಮೂರು ಕ್ಷೇತ್ರಗಳಲ್ಲಿ ಎಂಇಎಸ್ ಅಭ್ಯರ್ಥಿಗಳೇ ಗೆಲುವು ಸಾಧಿಸುತ್ತಾ ಬಂದಿದ್ದರು. ಆದರೆ ಈಗ ಎಂಇಎಸ್ ಅಭ್ಯರ್ಥಿಗಳು ಸ್ಪರ್ಧಿಸಿದ್ದ ಜಿಲ್ಲೆಯ ಆರು ಕ್ಷೇತ್ರಗಳಲ್ಲಿ ಸೋತು ಸುಣ್ಣವಾಗಿದ್ದಾರೆ. ಎರಡನೇ ಬಾರಿ ದಾಖಲೆ ಅಂತರದಲ್ಲಿ ಗೆದ್ದು ಶಾಸಕಿ ಆಗಿರುವ ಲಕ್ಷ್ಮಿ ಹೆಬ್ಬಾಳ್ಕರ್ ತಮ್ಮ ಪ್ರಭಾವ ಬಳಸಿ ಮಂತ್ರಿ ಆಗುವ ಮೂಲಕ ಬೆಳಗಾವಿ ತಾಲೂಕಿಗೆ ಸಚಿವ ಸ್ಥಾನ ಸಿಗುವಂತೆ ಮಾಡಿದ್ದಾರೆ.

ಈ ಸಂಬಂಧ ಈಟಿವಿ ಭಾರತ ಜೊತೆಗೆ ಮಾತನಾಡಿದ ಹಿರಿಯ ಕನ್ನಡ ಹೋರಾಟಗಾರರಾದ ಅಶೋಕ ಚಂದರಗಿ ಅವರು, ರಾಜ್ಯ ಸಚಿವ ಸಂಪುಟ ಸೇರಿರುವ ಏಕೈಕ ಮಹಿಳಾ ಪ್ರತಿನಿಧಿ ಲಕ್ಷ್ಮಿ ಹೆಬ್ಬಾಳ್ಕರ್ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. 1956ರಲ್ಲಿ ಕರ್ನಾಟಕ ರಾಜ್ಯ ಅಸ್ತಿತ್ವಕ್ಕೆ ಬಂದ ನಂತರ, ಬೆಳಗಾವಿ ತಾಲೂಕಿನಿಂದ ಯಾರೂ ಮಂತ್ರಿ ಆಗಿರಲಿಲ್ಲ.

1957ರ ನಂತರ ಎಂಇಎಸ್ ಅಭ್ಯರ್ಥಿಗಳೇ ಗೆಲ್ಲುತ್ತಿದ್ದರು. 1999ರ ಬಳಿಕ ಎಂಇಎಸ್ ಸೋತು ಸುಣ್ಣವಾಗಿದೆ. ಬಿಜೆಪಿ-ಕಾಂಗ್ರೆಸ್ ಯಾರೇ ಆರಿಸಿ ಬಂದಿದ್ದರೂ, ಬೆಳಗಾವಿ ತಾಲೂಕಿಗೆ ಈವರೆಗೆ ಪ್ರಾತಿನಿಧ್ಯ ಸಿಕ್ಕಿರಲಿಲ್ಲ. ಈಗ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸಚಿವರಾಗಿದ್ದು ಬೆಳಗಾವಿ ತಾಲೂಕಿನ ಜನತೆಗೆ ಅಭಿಮಾನದ ಸಂಗತಿಯಾಗಿದೆ ಎಂದು ವಿವರಿಸಿದರು.

ಇದನ್ನೂ ಓದಿ:ಸಚಿವರಾಗಿ ಬೆಳಗಾವಿಗೆ ಬಂದಿಳಿದ ಸತೀಶ್ ಜಾರಕಿಹೊಳಿ, ಲಕ್ಷ್ಮಿ ಹೆಬ್ಬಾಳ್ಕರ್​; ಬೆಂಬಲಿಗರಿಂದ ಅದ್ಧೂರಿ ಸ್ವಾಗತ

Last Updated : May 29, 2023, 4:09 PM IST

ABOUT THE AUTHOR

...view details