ಕರ್ನಾಟಕ

karnataka

Tomato price: ಟೊಮೆಟೊ ಬೆಳೆದು ಕೋಟ್ಯಾಧಿಪತಿಯಾದ ರೈತ.. ಅದೃಷ್ಟ ಅಂದ್ರೆ ಇದು...

By

Published : Aug 5, 2023, 10:47 PM IST

Updated : Aug 5, 2023, 11:02 PM IST

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕು ಯಕ್ಸಂಬಾ ಗ್ರಾಮದ ರೈತ ಸಾಗರ ಗೋಪಾಲ ಮಗದುಮ್‌ ಟೊಮೆಟೊ ಬೆಳೆದು ಈಗ ಕೋಟ್ಯಾಧಿಪತಿ ಆಗಿದ್ದಾರೆ. ಸ್ವಂತ ಎರಡು ಎಕರೆ, ಪಕ್ಕದ ರೈತರ ಏಳು ಎಕರೆ ಜಮೀನನ್ನು ಗೇಣಿ ಪಡೆದು ಒಟ್ಟು 9 ಎಕರೆಯಲ್ಲಿ ಟೊಮೆಟೊ ಬೆಳೆದಿದ್ದಾರೆ.

Farmer Sagar Gopal Magadum spoke to reporters.
ಸುದ್ದಿಗಾರರೊಂದಿಗೆ ರೈತ ಸಾಗರ ಗೋಪಾಲ ಮಗದುಮ್‌ ಮಾತನಾಡಿದರು.

ಟೊಮೆಟೊ ಬೆಳೆದು ಕೋಟ್ಯಾಧಿಪತಿಯಾದ ರೈತ

ಚಿಕ್ಕೋಡಿ (ಬೆಳಗಾವಿ): ಯಾರ ಅದೃಷ್ಟ ಹೇಗೆ ಬದಲಾಗುತ್ತದೆ ಎಂದು ಹೇಳುವುದು ಕಷ್ಟಸಾಧ್ಯ. ಆದ್ರೆ ಅದೃಷ್ಟ ಖುಲಾಯಿಸಿತು ಅಂದ್ರೆ ಕಷ್ಟ ಕಾರ್ಪಣ್ಯಗಳಿಂದ ಮುಕ್ತನಾಗಿ ತಾನು ಜೀವಿಸುವಷ್ಟು ಕಾಲ ಐಷಾರಾಮಿ ಜೀವನ ಸಾಗಿಸಬಹುದು ಎನ್ನುವುದಕ್ಕೆ ಇಲ್ಲೊಬ್ಬ ರೈತರೊಬ್ಬರು ತಾಜಾ ಉದಾಹರಣೆ. ಸದ್ಯ ಟೊಮೆಟೊಗೆ ಚಿನ್ನದ ಬೆಲೆ ಇದ್ದು, ಅದೃಷ್ಟ ರೈತನ ಕೈ ಹಿಡಿದಿದೆ.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಗ್ರಾಮದ ರೈತ ಸಾಗರ ಗೋಪಾಲ ಮಗದುಮ್‌ ಎಂಬುವರು ಒಂಬತ್ತು ಎಕರೆ ಪ್ರದೇಶದಲ್ಲಿ ಟೊಮೆಟೊ ಬೆಳೆದು ಈಗ ಕೋಟ್ಯಾಧಿಪತಿ ಆಗಿದ್ದಾರೆ. ತಮ್ಮ ಸ್ವಂತ ಜಮೀನು ಎರಡು ಎಕರೆ ಹಾಗೂ ಪಕ್ಕದ ರೈತರ ಏಳು ಎಕರೆ ಜಮೀನನ್ನು ಗೇಣಿ ಪಡೆದು ಒಟ್ಟು 9 ಎಕರೆ ಪ್ರದೇಶದಲ್ಲಿ ಟೊಮೆಟೊ ಬೆಳೆದು ಜಿಲ್ಲೆಯ ಮಾದರಿ ರೈತನಾಗಿ ಎಲ್ಲರ ಗಮನ ಸೆಳೆದಿದ್ದಾರೆ.

ಮೂಲತಃ ಪಕ್ಕದ ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಉಮನವಾಡಿಯ ಗ್ರಾಮ ಇವರ ಊರು. ಆದರೆ ಕಳೆದ 30 ವರ್ಷಗಳಿಂದ ಯಕ್ಸಂಬಾ ಪಟ್ಟಣದಲ್ಲಿ ವಾಸವಿದ್ದು ಪ್ರತಿ ವರ್ಷವೂ ವಿವಿಧ ಬೆಳೆಗಳನ್ನು ಬೆಳೆಯುತ್ತ ಜೀವನ ಕಟ್ಟಿಕೊಂಡಿದ್ದಾರೆ. ಈ ವರ್ಷ ಒಂಬತ್ತು ಎಕರೆ ಪ್ರದೇಶದಲ್ಲಿ ಟೊಮೆಟೊ ಬೆಳೆ ಬೆಳೆದು ಕೋಟ್ಯಂತರ ರೂಪಾಯಿ ಲಾಭ ಪಡೆಯಲಿದ್ದಾರೆ. ಎಕರೆಗೆ ಟನ್​ಗಟ್ಟಲೇ ಇಳುವರಿ ಬಂದು ಅತ್ಯುತ್ತಮ ದರ ಸಿಕ್ಕಿದೆ. ಟೊಮೆಟೊ ಬೆಳೆಯಿಂದ ಬಂಪರ್ ಲಾಭ ಕೈಗೆ ಸಿಕ್ಕಿದ್ದು ರೈತನ ಮೊಗದಲ್ಲಿ ಮಂದಹಾಸದ ಜೊತೆಗೆ ಸಂತೃಪ್ತಿ ಎದ್ದು ಕಾಣುತ್ತಿದೆ.

ಸದ್ಯ ದೇಶಾದ್ಯಂತ ಟೊಮೆಟೊಗೆ ಬಂಪರ್ ಬೆಲೆ ಸಿಗುತ್ತಿದೆ. ಇನ್ನೂ ಒಂದು ತಿಂಗಳು ದರ ಏರಿಕೆ ಇಳಿಯುವ ಲಕ್ಷಣಗಳು ಕಾಣುತ್ತಿಲ್ಲ. ರೈತರ ಹೊಲಕ್ಕೆ ದಲ್ಲಾಳಿಗಳು ಬಂದು ಟೊಮೆಟೊ ಖರೀದಿಸಿ ಒಯ್ಯುತ್ತಿದ್ದಾರೆ. ಈಗಾಗಲೇ ಅರ್ಧ ಕೊಯ್ಲು ಆಗಿದೆ, ಇನ್ನೂ ಅರ್ಧ ಕೊಯ್ಲು ಬಾಕಿ ಉಳಿದಿದ್ದು ಉತ್ತಮ ಆದಾಯದ ನಿರೀಕ್ಷೆಯಲ್ಲಿ ರೈತ ಮಗದುಮ್‌ ಇದ್ದಾರೆ.

ಗೋವಾ ದೆಹಲಿಯಲ್ಲಿ ಹೈಬ್ರಿಡ್ ಟೊಮೆಟೊಗೆ ಬೇಡಿಕೆ..ಹೈಬ್ರಿಡ್‌ ಟೊಮೆಟೊಗೆ ದೆಹಲಿ ಹಾಗೂ ಗೋವಾದಲ್ಲಿ ಹೆಚ್ಚು ಬೇಡಿಕೆ ಇದೆ. ದಿಲ್ಲಿಯ ವ್ಯಾಪಾರಿಗಳು ನೇರ ರೈತರೊಂದಿಗೆ ನೇರ ಸಂಪರ್ಕ ಸಾಧಿಸಿ, ವಾಹನಗಳಲ್ಲಿ ಬಂದು ಟೊಮೆಟೊ ಖರೀದಿಸುತ್ತಾರೆ. ಸದ್ಯ ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಟೊಮೆಟೊ ದರ ಪ್ರತಿ ಕೆಜಿಗೆ 160 ರೂ. ರಿಂದ 180ರೂ. ಇದೆ. ದೆಹಲಿ, ಗೋವಾದ ವ್ಯಾಪಾರಿಗಳು ಪ್ರತಿ ಕೆಜಿಗೆ ನಮ್ಮ ಟೊಮೆಟೊವನ್ನು 110 ರೂ.ಗಳಂತೆ ಖರೀದಿಸುತ್ತಾರೆ. ಸಾಗಣೆ, ಕಾರ್ಮಿಕರ ವೆಚ್ಚದ ನಮಗೆ ಯಾವುದೇ ಸಂಬಂಧವಿಲ್ಲ. ಹೀಗಾಗಿ ಸ್ಥಳೀಯ ಮಾರುಕಟ್ಟೆಗಿಂತಲೂ ಉತ್ತಮ ದರ ಈ ವ್ಯಾಪಾರಿಗಳಿಂದ ಸಿಕ್ಕಿದೆ.

ಈಗಾಗಲೇ ಐದನೇ ಬಾರಿ ಕಟಿಂಗ್ ಮಾಡಲಾಗಿದೆ. ಇನ್ನೂ ಆರು ಬಾರಿ ಫಸಲು ಬರುತ್ತದೆ. ಇವತ್ತಿಗೆ ಎಲ್ಲ ಖರ್ಚು,ಕಮೀಷನ್ ತೆಗೆದು ನಮಗೆ ಒಂದು ಕೋಟಿ ರೂಪಾಯಿ ಆದಾಯ ಬಂದಿದೆ. ಇನ್ನೂ ಒಂದು ಕೋಟಿ ರೂಪಾಯಿ ಬರುವ ನಿರೀಕ್ಷೆಯಲ್ಲಿ ಇದ್ದೇವೆ ಎನ್ನುತ್ತಾರೆ ಸಾಗರ ಮಗದುಮ್.

ಆದರೆ ಮಳೆಗಾಲದಲ್ಲಿ ದೂಧ್​ಗಂಗಾ ,ವೇದಾವತಿ, ಕೃಷ್ಣಾ ನದಿ ಪ್ರವಾಹದಿಂದ ಬೆಳೆ ನಾಶವಾಗಿ ಕಂಗೆಟ್ಟಿರುವ ಚಿಕ್ಕೋಡಿ,ನಿಪ್ಪಾಣಿ ನದಿಪಾತ್ರದ ರೈತರು ತರಕಾರಿ ಬೆಳೆ ಬೆಳೆಯುವುದು ಹಾಗೂ ಹೈನುಗಾರಿಕೆ ಮಾಡಲು ಹಿಂಜರಿಯುತ್ತಿದ್ದಾಗ, ಆದರೆ ಮಗದುಮ್ ಯಾವುದಕ್ಕೂ ಹೆದರದೇ ಪ್ರತಿವರ್ಷದಂತೆ ಟೊಮೆಟೊ ಬೆಳೆದು ಬಂಪರ್ ಲಾಭ ಪಡೆದಿರುವ ಬಗ್ಗೆ ಹೊಗಳಿಕೆ ಮಾತುಗಳು ರೈತ ವಲಯದಲ್ಲಿ ಕೇಳಿಬರುತ್ತಿವೆ.

ಇದನ್ನೂ ಓದಿ:ಟೊಮೆಟೊಗೆ ಬಂಪರ್ ಬೆಲೆ.. ಆನಂದದಲ್ಲಿ ತೇಲುತ್ತಿರುವ ಚಿಕ್ಕಮಗಳೂರು ಜಿಲ್ಲೆಯ ರೈತರು

Last Updated : Aug 5, 2023, 11:02 PM IST

ABOUT THE AUTHOR

...view details