ETV Bharat / state

ಟೊಮೆಟೊಗೆ ಬಂಪರ್ ಬೆಲೆ.. ಆನಂದದಲ್ಲಿ ತೇಲುತ್ತಿರುವ ಚಿಕ್ಕಮಗಳೂರು ಜಿಲ್ಲೆಯ ರೈತರು

author img

By

Published : Aug 2, 2023, 10:38 PM IST

Updated : Aug 2, 2023, 10:44 PM IST

ದೆಹಲಿ ರಾಜಸ್ಥಾನ ಗುಜರಾತ್ ಪಶ್ಚಿಮ ಬಂಗಾಳ ರಾಜ್ಯಗಳಿಗೆ ಚಿಕ್ಕಮಗಳೂರು ಜಿಲ್ಲೆಯಿಂದ ಟೊಮೆಟೊ ರಫ್ತು ಆಗುತ್ತಿದ್ದು, ದಿನದಿಂದ ದಿನಕ್ಕೆ ಬೇಡಿಕೆಯೂ ಹೆಚ್ಚಾಗುತ್ತಿದೆ. ಬೇಡಿಕೆ ಹೆಚ್ಚಾದ ಹಿನ್ನೆಲೆ ಟೊಮೆಟೊಗೆ ಉತ್ತಮ ಬೆಲೆ ಬರುತ್ತಿದ್ದು, ಜಿಲ್ಲೆಯ ರೈತರ ಕೈತುಂಬ ಹಣ ಎಣಿಸುತ್ತಿದ್ದಾರೆ.

Chikmagalur city APMC market
ಚಿಕ್ಕಮಗಳೂರು ನಗರದ ಎಪಿಎಂಸಿ ಮಾರುಕಟ್ಟೆ

ಚಿಕ್ಕಮಗಳೂರು ನಗರದ ಎಪಿಎಂಸಿ ಮಾರುಕಟ್ಟೆ

ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಬಯಲು ಸೀಮೆ ಭಾಗದಲ್ಲಿ ಟೊಮೆಟೊ ಬೆಳೆಯುವ ರೈತರಿಗೆ ಇದೀಗ ಶುಕ್ರದೆಸೆ ಆರಂಭವಾಗಿದೆ. ಕಳೆದ 20 ವರ್ಷಗಳಿಂದ ಟೊಮೆಟೊ ಬೆಳೆಯನ್ನು ಬೆಳೆದು ಸಾಲದ ಸುಳಿಯಲ್ಲಿ ಸಿಲುಕಿಕೊಳ್ಳುತ್ತಿದ್ದ ರೈತರಿಗೆ ಈ ಬಾರಿ ಬಂಪರ್ ಬೆಲೆ ಸಿಗುತ್ತಿದೆ.

ಇತ್ತೀಚೆಗೆ ರಾಜ್ಯದಲ್ಲಿ ಟೊಮೆಟೊ ದರ ನಿರಂತರ ಏರಿಕೆಯಾಗುತ್ತಿದೆ. ಎಪಿಎಂಸಿ ಮಾರುಕಟ್ಟೆಯಲ್ಲಿ ಒಂದು ಕೆ ಜಿಗೆ 160 ರಿಂದ 180 ರೂ. ದಾಟಿದೆ. ಚಿಕ್ಕಮಗಳೂರು ನಗರದ ಎಪಿಎಂಸಿ ಟೊಮೆಟೊ ಮಂಡಿಗೆ ಜಿಲ್ಲೆ ಮತ್ತು ಅಕ್ಕಪಕ್ಕದ ಜಿಲ್ಲೆಗಳಿಂದ ರೈತರು ಮತ್ತು ವ್ಯಾಪಾರಿಗಳು ತಂದಿದ್ದ ಟೊಮೆಟೊವನ್ನು ಬೆಳಗ್ಗೆ ಹರಾಜು ಮಾಡಲಾಯಿತು.

25 ಕೆಜಿ ಬಾಕ್ಸ್​​​ 2500 ರಿಂದ 4600 ರೂ. ಗೆ ಹರಾಜು: ಇಂದು 15 ಸಾವಿರ ಬಾಕ್ಸ್ ಟೊಮೆಟೊ ಮಾರುಕಟ್ಟೆಗೆ ಬಂದಿತ್ತು. ನಿನ್ನೆ 5 ಸಾವಿರ ಬಾಕ್ಸ್ ಬಂದಿದ್ದು, ನಾಳೆ 20 ಸಾವಿರ ಬಾಕ್ಸ್ ಟೊಮೊಟೊ ಬರಲಿದೆ. ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ಟೊಮೆಟೊ ಹರಾಜು ಪ್ರಕ್ರಿಯೆ ನಡೆಯಿತು. 25 ಕೆಜಿ ಬಾಕ್ಸ್ ಟೊಮೆಟೊ 2500 ರಿಂದ 4600 ರೂ. ಗೆ ಹರಾಜು ಆಗಿದೆ. ಕೆ.ಜಿ. 160 ರಿಂದ 180 ರೂಪಾಯಿ ವ್ಯಾಪಾರ ಆಗಿದೆ.

ದರ ಏರಿಕೆ ಬಗ್ಗೆ ಮಾತಾಡಿದ ವ್ಯಾಪಾರಿ ಹರೀಶ್ ಟೊಮೆಟೊ ದರ ಕಡಿಮೆ ಯಾಗಲು ಕನಿಷ್ಠ ಇನ್ನೂ ಒಂದು ತಿಂಗಳು ಬೇಕಾಗಲಿದೆ. ಮಹಾರಾಷ್ಟ್ರ ಸೇರಿದಂತೆ ಇತರೆಡೆ ಇರುವ ಟೊಮೆಟೊ ಬೆಳೆ ಮಾರುಕಟ್ಟೆಗೆ ಬಂದರೆ ದರ ಕಡಿಮೆಯಾಗಲಿದೆ. ಬಯಲು ಸೀಮೆ ಭಾಗವಾದ ಅಂತಘಟ್ಟ ಮೂಲದ ಕುಮಾರಪ್ಪ ಎಂಬ ರೈತನಿಗೆ ಬಂಪರ್ ಬೆಲೆ ಸಿಕ್ಕಿದೆ. 3 ಲಕ್ಷ ಬಂಡವಾಳ ಹಾಕಿದ ರೈತ ಕುಮಾರಪ್ಪ 30 ಲಕ್ಷ ರೂಪಾಯಿ ಲಾಭ ಗಳಿಸಿ ಖುಷಿಯಲ್ಲಿದ್ದಾನೆ.

ಬೇರೆ ರಾಜ್ಯಗಳಿಗೆ ಜಿಲ್ಲೆಯ ಟೊಮೆಟೊ ರಫ್ತು: ಜಿಲ್ಲೆಯ ಟೊಮೆಟೊ ಹೊರ ರಾಜ್ಯಗಳಿಗೆ ಸರಬರಾಜು ಆಗುತ್ತಿದೆ. ದೆಹಲಿ, ರಾಜಸ್ಥಾನ, ಗುಜರಾತ್, ಪಶ್ಚಿಮ ಬಂಗಾಳ ರಾಜ್ಯಕ್ಕೆ ಚಿಕ್ಕಮಗಳೂರು ಜಿಲ್ಲೆಯಿಂದ ಟೊಮೆಟೊ ರಫ್ತು ಆಗುತ್ತಿದ್ದು, ದಿನದಿಂದ ದಿನಕ್ಕೆ ಟೊಮೆಟೊ ಬೇಡಿಕೆಯೂ ಹೆಚ್ಚಾಗುತ್ತಿದೆ. ಬೇಡಿಕೆ ಹೆಚ್ಚಾದ ಹಿನ್ನೆಲೆ ಟೊಮೆಟೊಗೆ ಉತ್ತಮ ಬೆಲೆ ಬರುತ್ತಿದ್ದು, ರೈತರು ಕೈತುಂಬ ಹಣ ಎಣಿಸುತ್ತಿದ್ದಾರೆ.

ಎಪಿಎಂಸಿ ಮಾರುಕಟ್ಟೆಯಲ್ಲಿ ರೈತ ಸಮ್ಮುಖದಲ್ಲಿ ಟೊಮೆಟೊ ಹರಾಜು ಪ್ರಕ್ರಿಯೆ ನಡೆಯುತ್ತಿರುವುದು ಮತ್ತೊಂದು ವಿಶೇಷ ಆಗಿದೆ. ರೈತರು ಟೊಮೆಟೊ ಬೆಳೆಯನ್ನು ಕೊಳೆಯದಂತೆ ಆರೈಕೆ ಮಾಡುತ್ತಿದ್ದು, ಮಾರುಕಟ್ಟೆಗೆ ತಕ್ಕಂತೆ ಟೊಮೆಟೊವನ್ನು ಕೊಯ್ಲು ಮಾಡುತ್ತಿದ್ದಾರೆ. ಟೊಮೆಟೊ ಬೆಳೆ ಮಾತ್ರ ಬಂಗಾರದ ಬೆಳೆಯಾಗಿ ಈ ವರ್ಷ ರೈತರಿಗೆ ಅದೃಷ್ಟ ತಂದಿದೆ.

ಇದನ್ನೂಓದಿ: Tomato Price: 30 ಕೆಜಿ ಟೊಮೆಟೊ ಬಾಕ್ಸ್ ಮಾರಿದ್ರೆ 1 ಗ್ರಾಂ ಚಿನ್ನ ಖರೀದಿಸಬಹುದೆಂದ ರೈತರು!

Last Updated : Aug 2, 2023, 10:44 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.