ಕರ್ನಾಟಕ

karnataka

ಅನುಮಾನದ ಗುಮ್ಮ.. ವಿಚ್ಛೇದಿತ ಪತ್ನಿ ಹತ್ಯೆಗೆ ನಾಡ ಪಿಸ್ತೂಲು ಖರೀದಿಸಿದ್ದ ವ್ಯಕ್ತಿಯ ಬಂಧನ

By

Published : Jun 17, 2023, 8:40 PM IST

Updated : Jun 17, 2023, 11:04 PM IST

ವಿಚ್ಛೇದಿತ ಪತ್ನಿಯನ್ನು ಹತ್ಯೆ ಮಾಡಲು ನಾಡ ಪಿಸ್ತೂಲ್​ ಖರೀದಿ ಮಾಡಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

man-arrested-for-buying-a-pistol-to-kill-his-wife-in-chikkodi
ಹೆಂಡತಿ ಹತ್ಯೆ ಮಾಡಲೆಂದು ನಾಡ ಪಿಸ್ತೂಲು ಖರೀದಿಸಿದ್ದ ವ್ಯಕ್ತಿಯ ಬಂಧನ

ಚಿಕ್ಕೋಡಿ :ಕಳೆದ 15 ದಿನಗಳ ಹಿಂದೆಯಷ್ಟೇ ಡಿವೋರ್ಸ್​ ನೀಡಿದ್ದ ವ್ಯಕ್ತಿ ವಿಚ್ಛೇದಿತ ಹೆಂಡತಿಯನ್ನು ಕೊಲೆ ಮಾಡಲು ಮಹಾರಾಷ್ಟ್ರದಲ್ಲಿ ನಾಡ ಪಿಸ್ತೂಲು ಖರೀದಿಸಿದ್ದ. ಈ ವ್ಯಕ್ತಿಯನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಬಂಧಿತನನ್ನು ಚಿಕ್ಕೋಡಿ ಪಟ್ಟಣದ ನಿವಾಸಿ ಸಚಿನ್ ಬಾಬಾ ಸಾಹೇಬ್ ರಾಯಮಾನೆ ಎಂದು ಗುರುತಿಸಲಾಗಿದೆ.

ಬಂಧಿತ ಆರೋಪಿ ಸಚಿನ್​​ ಕಳೆದ 15 ದಿನಗಳ ಹಿಂದೆಯಷ್ಟೇ ತನ್ನ ಪತ್ನಿ ಹರ್ಷಿತಾಗೆ ವಿಚ್ಛೇದನ ನೀಡಿದ್ದ. ತನ್ನ ಹೆಂಡತಿಗೆ ಬೇರೊಬ್ಬರ ಜೊತೆ ಸಂಬಂಧ ಇದೆ ಎಂದು ಶಂಕಿಸಿದ್ದ ಆರೋಪಿ ಪತ್ನಿಯನ್ನು ಕೊಲೆಗೈಯಲು ಸಂಚು ರೂಪಿಸಿದ್ದ ಎಂದು ತಿಳಿದುಬಂದಿದೆ.

ಆರೋಪಿಯು ತನ್ನ ಯೋಜನೆಯಂತೆ ಪತ್ನಿಯನ್ನು ಹತ್ಯೆ ಮಾಡಲು ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಮೀರಜ್ ತಾಲೂಕಿನ ಕುಪವಾಡ ಗ್ರಾಮದಲ್ಲಿ ನಾಡ ಪಿಸ್ತೂಲ್ ಖರೀದಿ ಮಾಡಿದ್ದ. ಬಳಿಕ ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದ ಆರೋಪಿಯನ್ನು ಹಿಡಿದು ವಿಚಾರಣೆ ನಡೆಸಿದ ಮೀರಜ್​ ರೈಲ್ವೆ ಪೊಲೀಸರಿಗೆ ಆರೋಪಿ ಬಳಿ ಪಿಸ್ತೂಲು​​ ಇರುವುದು ಗೊತ್ತಾಗಿದೆ. ಬಳಿಕ ಗಾಂಧಿ ಚೌಕ್ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಆರೋಪಿಯು ಹರ್ಷಿತಾಳನ್ನು ಹತ್ಯೆ ಮಾಡಲು ರಿವಾಲ್ವರ್ ಖರೀದಿಸಿದ್ದಾಗಿ ಹೇಳಿದ್ದಾನೆ ಎಂದು ಸಾಂಗ್ಲಿ ಎಸ್ಪಿ ಬಸವರಾಜ ತೇಲಿ ಮಾಹಿತಿ ನೀಡಿದರು.

ಇನ್ನೊಂದೆಡೆ ಆರೋಪಿ ಸಚಿನ್ ಪತ್ನಿ ಹರ್ಷಿತಾ ಕೂಡ ಚಿಕ್ಕೋಡಿ ಪೊಲೀಸರಿಗೆ ದೂರು ನೀಡಿದ್ದಾರೆ. ತನಗೆ ರಕ್ಷಣೆ ನೀಡುವಂತೆ ಹಾಗೂ ತನಗೆ ಏನಾದರೂ ತೊಂದರೆ ಆದರೆ ಅದಕ್ಕೆ ಮಾಜಿ ಪತಿ ಸಚಿನ್ ಕಾರಣ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಮೀರಜ್‌ನ ಗಾಂಧಿ ಚೌಕ್ ಹಾಗೂ ಚಿಕ್ಕೋಡಿ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.

ರಾಮನಗರದಲ್ಲಿ ಶೀಲ ಶಂಕಿಸಿ ಪತ್ನಿಯ ಹತ್ಯೆ :ವ್ಯಕ್ತಿಯೊಬ್ಬ ಪತ್ನಿಯನ್ನು ಮಕ್ಕಳೆದುರೇ ದೊಣ್ಣೆಯಿಂದ ಹೊಡೆದು ಬರ್ಬರವಾಗಿ ಕೊಲೆಗೈದಿರುವ ಘಟನೆ ಕನಕಪುರ ತಾಲೂಕಿನ ಹೊಸಕೋಟೆ ಗ್ರಾಮದಲ್ಲಿ ನಡೆದಿದೆ. ಅಂಬಿಕಾ ಕೊಲೆಯಾದ ಮಹಿಳೆ. ರಾಮನಗರದ ಹಳೆಬೀದಿ ನೀಲಕಂಠೇಶ್ವರ ಬಡಾವಣೆ ನಿವಾಸಿ ಮುತ್ತುರಾಜು ಕೊಲೆಗೈದ ಆರೋಪಿ.

ಕೌಟುಂಬಿಕ ಕಲಹದಿಂದ ಬೇಸತ್ತ ಅಂಬಿಕಾ ತನ್ನ ತವರು ಮನೆ ಹೊಸಕೋಟೆಗೆ ತೆರಳಿದ್ದರು. ಈ ವೇಳೆ ಪತ್ನಿಯನ್ನು ನೋಡುವ ನೆಪದಲ್ಲಿ ಅಲ್ಲಿಗೆ ಬಂದಿದ್ದ ಆರೋಪಿ ಮುತ್ತುರಾಜು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಬೈಕ್‍ನಲ್ಲಿ ಕೂರಿಸಿಕೊಂಡು ಊರಿಗೆ ಬರುತ್ತಿದ್ದ. ಮಾರ್ಗಮಧ್ಯೆ ಹೊಸಕೋಟೆ ಗ್ರಾಮದ ಹೊರವಲಯದಲ್ಲಿ ಬೈಕ್ ನಿಲ್ಲಿಸಿ ಇಬ್ಬರಿಗೂ ಜಗಳ ಪ್ರಾರಂಭವಾಗಿದೆ.

ಈ ವೇಳೆ ಮುತ್ತುರಾಜ್ ಅಂಬಿಕಾರನ್ನು ದೊಣ್ಣೆಯಿಂದ ಹೊಡೆದು ಹತ್ಯೆಗೈದಿದ್ದಾನೆ. ಪ್ರಕರಣ ಸಂಬಂಧ ಪೊಲೀಸರು ಆರೋಪಿ ಮುತ್ತುರಾಜ್‍ನನ್ನು ವಶಕ್ಕೆ ಪಡೆದಿದ್ದಾರೆ. ಕನಕಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ :Kalaburagi crime: ಹೆಡ್ ಕಾನ್​ಸ್ಟೇಬಲ್​ ಹತ್ಯೆ ಪ್ರಕರಣ.. ಪ್ರಮುಖ‌ ಆರೋಪಿ ಕಾಲಿಗೆ‌ ಪೊಲೀಸರಿಂದ ಗುಂಡೇಟು

Last Updated :Jun 17, 2023, 11:04 PM IST

ABOUT THE AUTHOR

...view details