ಕಲಬುರಗಿ : ಮರಳು ಸಾಗಣೆ ಟ್ಯಾಕ್ಟರ್ ಹರಿಸಿ ಹೆಡ್ ಕಾನ್ಸ್ಟೇಬಲ್ ಹತ್ಯೆ ಮಾಡಿದ ಪ್ರಕರಣದ ಪ್ರಮುಖ ಆರೋಪಿಯ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ. ಆರೋಪಿ ಸಾಯಿಬಣ್ಣಾ ಕರಜಗಿ ಗುಂಡೇಟಿಗೆ ಒಳಗಾದ ವ್ಯಕ್ತಿ ಎಂದು ತಿಳಿದುಬಂದಿದೆ.
ಜೂನ್ 15ರಂದು ಹೆಡ್ ಕಾನ್ಸ್ಟೇಬಲ್ ಮಯೂರ್ ಚೌಹಾನ್ (51) ಜೇವರ್ಗಿ ಎಂಬವರನ್ನು ತಾಲೂಕಿನ ಹುಲ್ಲೂರ್ ಚೆಕ್‌ಪೋಸ್ಟ್ ಬಳಿ ಟ್ರ್ಯಾಕ್ಟರ್ ಹರಿಸಿ ಹತ್ಯೆ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ರ್ಯಾಕ್ಟರ್ ಚಾಲಕ ಸಿದ್ದಪ್ಪ ಹಾಗೂ ಸಾಯಿಬಣ್ಣ ಕರಜಗಿ ವಿರುದ್ಧ ಕೊಲೆ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಪೊಲೀಸರು ಸಿದ್ದಪ್ಪನನ್ನು ಈಗಾಗಲೇ ಬಂಧಿಸಿದ್ದರು. ಆದರೆ ಮತ್ತೋರ್ವ ಆರೋಪಿ ಸಾಯಿಬಣ್ಣ ಕರಜಗಿ ಘಟನೆ ನಂತರ ತಲೆಮರೆಸಿಕೊಂಡಿದ್ದ.
ಇಂದು ವಿಜಯಪುರ ಜಿಲ್ಲೆಯ ಅಲಮೇಲ ಎಂಬಲ್ಲಿ ಸಾಯಿಬಣ್ಣ ಕರಜಗಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಳಿಕ ಅಲ್ಲಿಂದ ಆರೋಪಿಯನ್ನು ಬಂಧಿಸಿ ವಾಹನದಲ್ಲಿ ಕರೆ ತರಲಾಗುತಿತ್ತು. ಈ ವೇಳೆ ಜೇರಟಗಿ ಮಂದೇವಾಲ ಮಾರ್ಗಮಧ್ಯೆ ಮೂತ್ರ ವಿಸರ್ಜನೆಗೆ ಪೊಲೀಸರು ವಾಹನವನ್ನು ನಿಲ್ಲಿಸಿದ್ದಾರೆ. ಈ ವೇಳೆ ಆರೋಪಿ ಪೊಲೀಸರ ಮೇಲೆಯೇ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದಾನೆ. ಆಗ ಜೇವರ್ಗಿ ಪಿಎಸ್ಐ ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗುವಂತೆ ಸೂಚಿಸಿದ್ದಾರೆ. ಆದರೂ ಆರೋಪಿ ಬೆದರದಾಗ ಆತ್ಮ ರಕ್ಷಣೆಗಾಗಿ ಪಿಎಸ್ಐ ಆರೋಪಿ ಕಾಲಿಗೆ ಗುಂಡು ಹಾರಿಸಿದ್ದಾರೆ. ಸದ್ಯ ಆರೋಪಿಯನ್ನು ಕಲಬುಗಿರುವ ಜಿಮ್ಸ್ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಕಲಬುರಗಿ ಜಿಮ್ಸ್ ಆಸ್ಪತ್ರೆಯಲ್ಲಿ ಪ್ರತಿಕ್ರಿಯಿಸಿದ ಎಸ್ಪಿ ಇಶಾ ಪಂತ್ , ಹೆಡ್ ಕಾನ್ಸಟೇಬಲ್ ಹತ್ಯೆ ಪ್ರಕರಣ ಪ್ರಮುಖ ಆರೋಪಿ ಟ್ರಾಕ್ಟರ್ ಮಾಲೀಕ ಸಾಯಬಣ್ಣಾ ಕರಜಗಿ ಅವರನ್ನು ಬಂಧಿಸಲಾಗಿದೆ. ಆರೋಪಿ ಸಾಯಬಣ್ಣಾ ರೌಡಿ ಶೀಟರ್ ಆಗಿದ್ದಾನೆ. ಜೇವರ್ಗಿ ಠಾಣೆಯಲ್ಲಿ ಆರೋಪಿ ವಿರುದ್ಧ ಈಗಾಗಲೇ ಮೂರು ಪ್ರಕರಣಗಳು ದಾಖಲಾಗಿವೆ. ಈ ಹಿಂದೆ ಆರೋಪಿ ಸಾಯಬಣ್ಣಾ ಕರಜಗಿ ಸಹೋದರ ಸಿದ್ದಣ್ಣಾ ಬಂಧಿಸಲಾಗಿತ್ತು. ಆರೋಪಿ ಸಿದ್ದಣ್ಣಾ ಮತ್ತು ಸಾಯಿಬಣ್ಣಾ ಇಬ್ಬರು ಸಹೋದರರು. ಹೆಡ್ ಕಾನ್ಸಟೇಬಲ್ ಹತ್ಯೆ ಬಳಿಕ ಆರೋಪಿ ಸಾಯಬಣ್ಣಾ ಬೈಕ್ ಏರಿ ಪರಾರಿಯಾಗಿದ್ದ.
ಬಳಿಕ ವಿಜಯಪುರ ಜಿಲ್ಲೆಯ ಆಲಮೇಲ್ ನ ಜಮೀನೊಂದರಲ್ಲಿ ತಲೆಮರೆಸಿಕೊಂಡಿದ್ದ ಗೊತ್ತಾಗಿದೆ. ಖಚಿತ ಮಾಹಿತಿ ಮೇರೆಗೆ ಇಂದು ಆಲಮೇಲ್ ನಲ್ಲಿ ಆರೋಪಿ ಸಾಯಬಣ್ಣಾ ಬಂಧಿಸಲಾಗಿದೆ. ಬಂಧಿಸಿ ಕರೆ ತರುವಾಗ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾನೆ. ಯಡ್ರಾಮಿ ಪಿಎಸ್ ಐ ಬಸವರಾಜ ಚಿತ್ತಕೋಟೆ ಮೇಲೆ ಚಾಕುವಿನಿಂದ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಯಡ್ರಾಮಿ ಪಿಎಸ್ ಐ ಬಸವರಾಜ ಚಿತ್ತಕೋಟೆ ಕೈ ಮತ್ತು ಹೊಟ್ಟೆ ಭಾಗಕ್ಕೆ ಗಾಯಗಳಾಗಿವೆ. ಈ ವೇಳೆ ಜೇವರ್ಗಿ ಪಿಎಸ್ ಐ ಸಂಗಮೇಶ ಅಂಗಡಿ ಗಾಳಿಯಲ್ಲಿ ಗುಂಡು ಹಾರಿಸಿ ಬೆದರಿಸಿದರು. ಆದರೆ ಆರೋಪಿ ದಾಳಿ ಮುಂದುವರೆಸಿದಾಗ ಆರೋಪಿ ಕಾಲಿಗೆ ಪಿಎಸ್ ಐ ಸಂಗಮೇಶ ಗುಂಡು ಹೊಡೆದಿದ್ದಾರೆ. ಗಾಯಾಳು ಪಿಎಸ್ ಐ ಬಸವರಾಜ ಚಿತ್ತಕೋಟೆ ಅವರನ್ನು ಕಲಬುರಗಿ ನಗರದ ಬಸವೇಶ್ವರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ ಎಂದು ಹೇಳಿದರು.
ಘಟನೆ ವಿವರ : ಭೀಮಾ ನದಿಯಲ್ಲಿನ ಅಕ್ರಮ ಮರಳು ಸಾಗಣೆ ತಡೆಯಲು ಹುಲ್ಲೂರ್ ಬಳಿ ಚೆಕ್ ಪೋಸ್ಟ್ ಹಾಕಲಾಗಿತ್ತು. ಈ ವೇಳೆ ನೆಲೋಗಿ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಮಯೂರ್ ಚೌಹಾಣ್ ಎಂಬವರು ರಾತ್ರಿ ಮರಳು ವಾಹನ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಆರೋಪಿಗಳು ಕಾನ್ಸ್ಟೇಬಲ್ ಮಯೂರ್ ಚೌಹಾಣ್ ಮೈ ಮೇಲೆ ಟ್ರ್ಯಾಕ್ಟರ್ ಹರಿಸಿ ಹತ್ಯೆ ಮಾಡಿದ್ದರು. ಘಟನೆ ಬಗ್ಗೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಎಸ್ಪಿ ಇಶಾ ಪಂತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
ಉಸ್ತುವಾರಿ ಸಚಿವರಿಂದ ಪರಿಹಾರದ ಭರವಸೆ: ಟ್ರ್ಯಾಕ್ಟರ್ ಹರಿದು ಹುಲ್ಲೂರು ಚೆಕ್ ಪೋಸ್ಟ್ ಬಳಿ ಕರ್ತವ್ಯ ನಿರತ ಪೊಲೀಸ್ ಕಾನ್ಸ್ಟೇಬಲ್ ಸಾವನ್ನಪ್ಪಿರುವ ಘಟನೆ ನಡೆದಿರುವುದು ಅತ್ಯಂತ ನೋವಿನ ಸಂಗತಿ" ಎಂದು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ ಸಂತಾಪ ವ್ಯಕ್ತಪಡಿಸಿದ್ದರು. ಮೃತರ ಕುಟುಂಬಕ್ಕೆ ಪರಿಹಾರ ಒದಗಿಸುತ್ತೇವೆ ಎಂದು ಭರವಸೆ ನೀಡಿದರು. ಮೃತ ಪತಿಯ ಸಾವಿಗೆ ನ್ಯಾಯ ದೊರಕಿಸಿಕೊಡುವಂತೆ ಪತ್ನಿ ನಿರ್ಮಲಾ ಆಗ್ರಹಿಸಿದ್ದಾರೆ.
ಇದನ್ನೂ ಓದಿ : ಅಕ್ರಮ ಮರಳು ಸಾಗಾಟ ಮಾಡುತ್ತಿದ್ದ ಟ್ರ್ಯಾಕ್ಟರ್ ಹರಿದು ಹೆಡ್ ಕಾನ್ಸ್ಟೇಬಲ್ ಸಾವು - ಕೊಲೆ ಶಂಕೆ