ಕರ್ನಾಟಕ

karnataka

ಬೆಂಗಳೂರು: ಪ್ರಿಯಕರನ ಜೊತೆ ಸೇರಿ ಗಂಡನ ಹತ್ಯೆ ಮಾಡಿದ ಪತ್ನಿ, ಆರೋಪಿಗಳ ಬಂಧನ

By ETV Bharat Karnataka Team

Published : Jan 13, 2024, 2:00 PM IST

Updated : Jan 13, 2024, 3:04 PM IST

ಮೃತನ ತಂದೆ ನೀಡಿದ ದೂರು ಆಧರಿಸಿ ಪೊಲೀಸರು ತನಿಖೆ ಕೈಗೊಂಡಾಗ ಅಸಲಿ ವಿಚಾರ ಬಯಲಾಗಿದೆ. ಕೊಲೆ ಮಾಡಿದ ಮಹಿಳೆ ಮತ್ತು ಆಕೆಯ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದಾರೆ.

ವೆಂಕಟರಮಣ ನಾಯಕ್ (35)
ವೆಂಕಟರಮಣ ನಾಯಕ್ (35)

ಬೆಂಗಳೂರು: ಗಂಡನನ್ನ ಹತ್ಯೆಗೈದು, ಅಸಹಜ ಸಾವು ಎಂದು ಪೊಲೀಸರ ಎದುರು ನಾಟಕವಾಡಿದ್ದ ಹೆಂಡತಿ ಮತ್ತು ಆಕೆಯ ಪ್ರಿಯಕರನನ್ನು ಹೆಚ್ಎಸ್ಆರ್ ಲೇಔಟ್ ಠಾಣಾ ಪೊಲೀಸರು ಬಂಧಿಸಿದ್ದಾರೆ. ವೆಂಕಟರಮಣ ನಾಯಕ್ (35) ಎಂಬಾತನನ್ನು ಹತ್ಯೆ ಮಾಡಿದ್ದ ಆತನ ಪತ್ನಿ ನಂದಿನಿ ಹಾಗೂ ಪ್ರಿಯಕರ ನಿತೀಶ್ ಕುಮಾರ್ ಬಂಧಿತ ಆರೋಪಿಗಳು.

ಹೆಚ್ಎಸ್ಆರ್ ಲೇಔಟ್ ಎರಡನೇ ಸೆಕ್ಟರ್​ನ ಮನೆಯೊಂದರಲ್ಲಿ ರಾತ್ರಿ ಸೆಕ್ಯುರಿಟಿ ಕೆಲಸ ಮಾಡಿಕೊಂಡು ವಾಸವಿದ್ದ ವೆಂಕಟರಮಣನನ್ನು ಮಂಗಳವಾರ ರಾತ್ರಿ ತಲೆ ಮೇಲೆ ಕಲ್ಲು ಎತ್ತಿಹಾಕಿ ಹತ್ಯೆಗೈಯ್ಯಲಾಗಿತ್ತು. ಮನೆಯ ಬಾತ್ ರೂಮ್ ಬಳಿ ಶವ ಪತ್ತೆಯಾಗಿತ್ತು.

ಬಂಧಿತ ಆರೋಪಿಗಳು

ವೆಂಕಟರಮಣ ಸೆಕ್ಯುರಿಟಿ ಗಾರ್ಡ್ ಕೆಲಸ ಮಾಡಿಕೊಂಡು ಕುಟುಂಬದೊಂದಿಗೆ ಅಲ್ಲಿಯೇ ವಾಸವಿದ್ದ. ಆದರೆ, ಬುಧವಾರ ಬೆಳಗ್ಗೆ ಬಾತ್​ರೂಮ್ ಬಳಿ ಅನುಮಾನಾಸ್ಪದವಾಗಿ ತನ್ನ ಗಂಡನ ಶವ ಪತ್ತೆಯಾಗಿದೆ ಎಂದು ಆತನ ಪತ್ನಿ ಹೆಚ್ಎಸ್ಆರ್ ಲೇಔಟ್ ಪೊಲೀಸರಿಗೆ ಮಾಹಿತಿ ನೀಡಿದ್ದಳು. ಘಟನಾ ಸ್ಥಳಕ್ಕೆ ಭೇಟಿ ನೀಡಿ ಪೊಲೀಸರು ಪರಿಶೀಲಿಸಿದಾಗ, ಆತ ಹತ್ಯೆಯಾಗಿರುವುದು ತಿಳಿದು ಬಂದಿತ್ತು. ಮೃತನ ತಂದೆಯಿಂದ ದೂರು ಪಡೆದಿದ್ದ ಪೊಲೀಸರು, ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.

ಆಂಧ್ರಪ್ರದೇಶ ಮೂಲದ ನಂದಿನಿ ಹಾಗೂ ನಿತೀಶ್ ಕುಮಾರ್ ಬಾಲ್ಯದಿಂದಲೂ ಪರಿಚಯವಿದ್ದವರು. ನಂದಿನಿ ಮದುವೆಯಾದ ಬಳಿಕವೂ ನಿತೀಶ್ ಕುಮಾರ್ ಆಗಾಗ ಆಕೆಯನ್ನು ಭೇಟಿಯಾಗುತ್ತಿದ್ದ‌. ಜನವರಿ‌ 6ರಂದು ಗಂಡ ಮನೆಯಲ್ಲಿರದಿದ್ದಾಗ ನಿತೀಶ್ ಕುಮಾರನಿಗೆ ಕರೆ ಮಾಡಿ ನಂದಿನಿ ಮನೆಗೆ ಕರೆಸಿಕೊಂಡಿದ್ದಳು. ಇಬ್ಬರೂ ಮನೆಯಲ್ಲಿದ್ದಾಗ ದಿಢೀರ್​ನೇ ಗಂಡ ವೆಂಕಟರಮಣ ಮನೆಗೆ ಬಂದಿದ್ದ. ಈ ವೇಳೆ ಇಬ್ಬರು ಸೇರಿ ವೆಂಕಟರಮಣನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದರು. ಬಳಿಕ ಮೃತದೇಹವನ್ನು ಮನೆಯ ಹೊರಗಿರುವ ಶೌಚಾಲಯದ ಬಳಿ ಇಟ್ಟು, ಪಕ್ಕದಲ್ಲಿ ಚೂಪಾದ ಕಲ್ಲು ಇಟ್ಟು ಕಲ್ಲಿನ ಮೇಲೆ ಬಿದ್ದಿದ್ದಾನೆ ಎನ್ನುವಂತೆ ಬಿಂಬಿಸಿದ್ದರು ಎಂದು ಪೊಲೀಸ್​ ಮೂಲಗಳು ತಿಳಿಸಿವೆ.

ಘಟನಾ ಸ್ಥಳ ಪರಿಶೀಲಿಸಿದ ಪೊಲೀಸರು, ಪರಿಚಿತರಿಂದಲೇ ಹತ್ಯೆಯಾಗಿದೆ ಎಂಬ ಶಂಕೆ ವ್ಯಕ್ತಪಡಿಸಿದ್ದರು. ಮೃತದೇಹದ ಮರಣೋತ್ತರ ಪರೀಕ್ಷೆ ವರದಿ ಆಧರಿಸಿ ತನಿಖೆ ನಡೆಸಿದಾಗ ಆರೋಪಿಗಳ ಸಂಚಿನ ಅಸಲಿ ವಿಚಾರ ಬಯಲಿಗೆ ಬಂದಿದೆ. ಸದ್ಯ ನಂದಿನಿ ಹಾಗೂ ಆಕೆಯ ಪ್ರಿಯಕರ ನಿತೀಶ್ ಕುಮಾರನನ್ನು ಹೆಚ್ಎಸ್ಆರ್ ಲೇಔಟ್ ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ:ಮಗು ಕೊಲೆ ಕೇಸ್: ಪ್ರಮುಖ ಪುರಾವೆಯಾಗಿ ಐಲೈನರ್ ನಿಂದ ಗೀಚಲಾದ ಟಿಪ್ಪಣಿ ಪತ್ತೆ

Last Updated :Jan 13, 2024, 3:04 PM IST

ABOUT THE AUTHOR

...view details