ಕರ್ನಾಟಕ

karnataka

ತುಂಗಭದ್ರಾ ಎಡದಂಡೆ ಕಾಲುವೆ ರೈತರ ಸಮಸ್ಯೆ ಪರಿಹರಿಸಲು ಸೂಚಿಸಿದ್ದೇನೆ: ಸಚಿವ ಕಾರಜೋಳ

By

Published : Sep 22, 2022, 9:18 AM IST

ತುಂಗಭದ್ರಾ ಎಡದಂಡೆ ಕಾಲುವೆಯ ಕೆಳಗಿನ ರೈತರು ಸಹೋದರರಿದ್ದಂಗೆ. ಅವರಿಗೆ ನೀರು ಬಿಡ್ಬೇಕು ಎನ್ನುವ ಮನಸ್ಥಿತಿ ಇಲ್ಲದ ಕಾರಣ ಕೊನೆ ಹಂತದ ರೈತರಿಗೆ ನೀರು ಮುಟ್ಟುತ್ತಿಲ್ಲ. ಕೆಲವರು ಪಂಪ್‌ಸೆಟ್ ಹಾಕಿಕೊಂಡು ತೊಂದರೆ ಕೊಡ್ತಾ ಇದ್ದಾರೆ. ಅದಕ್ಕಾಗಿ ಸಮಸ್ಯೆ ಪರಿಹಾರ ಮಾಡಲು ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇನೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದರು.

govinda karajola
ಗೋವಿಂದ ಕಾರಜೋಳ

ಬೆಂಗಳೂರು: ತುಂಗಭದ್ರಾ ಎಡದಂಡೆ ಕಾಲುವೆಯ ಕೊನೆ ಹಂತದ ರೈತರಿಗೆ ನೀರು ತಲುಪಬೇಕಾದ್ರೆ ಮೇಲ್ಭಾಗದಲ್ಲಿರುವ ರೈತರ ಸಹಕಾರ ಬಹಳ ಮುಖ್ಯ. ಮೇಲ್ಭಾಗದಲ್ಲಿ ಕೆಲವರು ಪಂಪ್‌ಸೆಟ್‌ ಹಾಕಿಕೊಂಡು ತೊಂದರೆ ಕೊಡುತ್ತಿದ್ದಾರೆ. ಆ ಸಮಸ್ಯೆ ಪರಿಹರಿಸಲು ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇನೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದರು.

ವಿಧಾನಸಭೆಯಲ್ಲಿ ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಯ 69 ಮೈಲ್‌ನಲ್ಲಿ ಗೇಜ್ ನಿರ್ವಹಣೆ ಕುರಿತು ಗಮನ ಸೆಳೆದ ವೆಂಕಟಪ್ಪ ನಾಯಕ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, 69 ರಿಂದ 104ರ ವರೆಗೂ ರೈತರಿಗೆ ನೀರು ಬರ್ತಾ ಇಲ್ಲ. ಅದಕ್ಕಾಗಿ ಎರಡು ಗೇಜ್ ನಿರ್ವಹಣೆ ಮಾಡಬೇಡಿ. ಸಿಂಗಲ್ ಗೇಜ್ ಮಾಡಿ ಅಂತಾ ವೆಂಕಟಪ್ಪ ನಾಯಕರು ಕೇಳಿದ್ದಾರೆ. ಆದ್ರೆ, ಕೊನೆ ಹಂತದ ರೈತರಿಗೆ ನೀರು ಮುಟ್ಟಬೇಕಾದ್ರೆ ಮೇಲ್ಭಾಗದಲ್ಲಿರುವ ರೈತರ ಸಹಕಾರ ಬಹಳ ಮುಖ್ಯ ಎಂದರು.

ಇದನ್ನೂ ಓದಿ:ವಿಧಾನಸಭೆಯಲ್ಲಿ ನಾಲ್ಕು ವಿಧೇಯಕಗಳ ಮಂಡಿಸಿದ ಸಚಿವ ಗೋವಿಂದ ಕಾರಜೋಳ

ನಮ್ಮ ಕೆಳಗಿನ ರೈತರು ಸಹೋದರರಿದ್ದಂಗೆ, ಅವರಿಗೆ ನೀರು ಬಿಡ್ಬೇಕು ಎನ್ನುವ ಮನಸ್ಥಿತಿ ಇಲ್ಲದ ಕಾರಣ ಕೊನೆ ಹಂತದ ರೈತರಿಗೆ ನೀರು ಮುಟ್ಟುತ್ತಿಲ್ಲ. ಕೆಲವರು ಪಂಪ್‌ಸೆಟ್ ಹಾಕಿಕೊಂಡು ತೊಂದರೆ ಕೊಡ್ತಾ ಇದ್ದಾರೆ. ಅದಕ್ಕಾಗಿ ನಾನು ಆ ಸಮಸ್ಯೆ ಪರಿಹಾರ ಮಾಡಲು ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇನೆ. ಕಳೆದ ಸೀಸನ್‌ನಲ್ಲಿ ಆನ್, ಆಫ್ ಸಿಸ್ಟಂ ಮಾಡಿದ್ದೇವೆ. ಅದನ್ನು ಮುಂದುವರೆಸುತ್ತೇವೆ. ಅವರ ಬೇಡಿಕೆಯನ್ನ ಖಂಡಿತವಾಗಿಯೂ ಈಡೇರಿಸುತ್ತೇವೆ ಎಂದು ಹೇಳಿದರು.

ನನಗೆ ತಪ್ಪು ಮಾಹಿತಿ ಬಂದಿಲ್ಲ, ಸರಿಯಾದ ಮಾಹಿತಿಯೇ ಬಂದಿದೆ. ಮೇಲಿನ ರೈತರ ಸಹಕಾರ ಬಹಳ ಮುಖ್ಯ. ನಾವು ಈಗಾಗಲೇ ಕೆಆರ್‌ಎಸ್‌ನವರಿಂದ ವರದಿ ತರಿಸಿದ್ದೇವೆ. ಅದರಲ್ಲಿ ಏನೂ ತಪ್ಪು ಮಾಹಿತಿ ಇಲ್ಲ ಎಂದರು.

ಇದನ್ನೂ ಓದಿ:ಬೆಳಗಾವಿಯಲ್ಲಿ ಅತಿವೃಷ್ಟಿಯಿಂದ 400 ಕೋಟಿ ರೂ. ಹಾನಿ: ಸಚಿವ ಗೋವಿಂದ ಕಾರಜೋಳ

ಸಿಪೇಜ್‌ ಡ್ರೈನ್‌ ಮಾಡಲು ತೀರ್ಮಾನ: ನಮ್ಮ ಕ್ಷೇತ್ರದಲ್ಲಿರುವ ಯಗಚಿ ಜಲಾಶಯ ಭಾದಿತ ಪ್ರದೇಶ ಎಂದು ಮಾಸವಳ್ಳಿ ಹಾಗೂ ನಾರಾಯಣಪುರ ಎಂಬ ಗ್ರಾಮಗಳಿವೆ. 2008 ರಿಂದ ಪ್ರಯತ್ನ ಪಟ್ಟರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಶಾಸಕ ಲಿಂಗೇಶ್‌ ಅವರು ಗಮನ ಸೆಳೆದ ವಿಚಾರಕ್ಕೆ ಪ್ರತಿಕ್ರಿಯಿಸಿ, ಈಗಾಗಲೇ ಸರ್ಕಾರ ಸಿಪೇಜ್ ಡ್ರೈನ್‌ಗಳನ್ನು ಮಾಡಲು ತೀರ್ಮಾನ ಮಾಡಿದೆ. ಸೈಟ್ ಕಂಡಿಷನ್ ಸರಿ ಇಲ್ಲದಕ್ಕಾಗಿ, ಮಳೆ ಹೆಚ್ಚಾಗಿರುವುದರಿಂದ ಮಾಡಲು ಸಾಧ್ಯವಾಗಿಲ್ಲ. ಖಂಡಿತವಾಗಿಯೂ ಮಾಡಿಕೊಡಲು ವ್ಯವಸ್ಥೆ ಮಾಡುತ್ತೇವೆ ಎಂದು ಹೇಳಿದರು.

ಇದು ಭಾಷಣ ಮಾಡುವ ಕೆಲಸವಲ್ಲ. ಪಂಚಾಯತ್ ರಾಜ್ ಇಲಾಖೆ ಮತ್ತು ನಮ್ಮ ಇಲಾಖೆ ಅಧಿಕಾರಿಗಳಿಗೆ ಸೂಚನೆ ಕೊಡುತ್ತೇನೆ. ಅವರು ವರದಿ ರೆಡಿ ಮಾಡಲಿ. ಶಾಸಕರು ಗ್ರಾಮ ಸ್ಥಳಾಂತರ ಆಗ್ಬೇಕು ಅಂತಾರೆ. ಆದ್ರೆ, ಹಾಗೆ ಮಾಡಲು ಆಗುವುದಿಲ್ಲ. ಪ್ರಾಜೆಕ್ಟ್ ಹಿನ್ನೀರಿನಿಂದ ಮುಳುಗಡೆಯಾಗಿದ್ದರೆ ಸ್ಥಳಾಂತರ ಮಾಡಬಹುದಾಗಿತ್ತು. ಸಿಪೇಜ್ ಡ್ರೈನ್‌ಗಳನ್ನು ಸರಿ ಮಾಡಿ ಕೊಡ್ತೀವಿ ಎಂದು ತಿಳಿಸಿದರು.

ಇದನ್ನೂ ಓದಿ:ಮಹದಾಯಿ ಯೋಜನೆ ಜಾರಿಗೆ ಬದ್ಧ: ಸಚಿವ ಗೋವಿಂದ ಕಾರಜೋಳ

ಇನ್ನು ಮಂಗಳೂರು ನಗರ ಹಾಗೂ ಸುರತ್ಕಲ್ ವ್ಯಾಪ್ತಿಯ ಆಟೋ ರಿಕ್ಷಾ ಮೀಟರ್​ಗಳ ಪ್ರಮಾಣ ಪತ್ರಗಳನ್ನ ಹಿಂದಿನಂತೆ ಮಂಗಳೂರು ಕಾನೂನು ಮಾಪನ ಶಾಸ್ತ್ರ ಕಚೇರಿಯಲ್ಲಿ ಮುದ್ರಿಸುವ ನಿಟ್ಟಿನ ಕುರಿತು ವೇದವ್ಯಾಸ್‌ ಕಾಮತ್‌ ಅವರು ಗಮನ ಸೆಳೆದ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವ ಗೋವಿಂದ ಕಾರಜೋಳ, ನಿಮ್ಮ ಸಮಸ್ಯೆ ಪರಿಹಾರವಾಗಿದೆ. ಹೊರಡಿಸಿರುವ ಆದೇಶವನ್ನ ಹಿಂಪಡೆದಿದ್ದು, ಈ ಹಿಂದಿನಂತೆ ಮಂಗಳೂರಿನಲ್ಲೇ ನಡೆಯುತ್ತದೆ. ಸದಸ್ಯರಿಗೆ ಆತಂಕ ಬೇಡ, ಸರ್ಕಾರ ಸೂಚನೆ ಕೊಟ್ಟಿದೆ. ಈ ಹಿಂದಿನಂತೆ ವ್ಯವಸ್ಥಿತವಾಗಿ ಸರ್ಕಾರ ಕ್ರಮ ತೆಗೆದುಕೊಳ್ಳುತ್ತದೆ ಎಂದು ಹೇಳಿದರು.

ABOUT THE AUTHOR

...view details