ವಿಧಾನಸಭೆಯಲ್ಲಿ ನಾಲ್ಕು ವಿಧೇಯಕಗಳ ಮಂಡಿಸಿದ ಸಚಿವ ಗೋವಿಂದ ಕಾರಜೋಳ

author img

By

Published : Sep 13, 2022, 6:52 PM IST

Updated : Sep 13, 2022, 8:24 PM IST

ಸಚಿವ ಗೋವಿಂದ ಕಾರಜೋಳ

ಸಿಎಂ ಬಸವರಾಜ ಬೊಮ್ಮಾಯಿ ಅವರ ಪರವಾಗಿ ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರು ನಾಲ್ಕು ವಿಧೇಯಕಗಳನ್ನು ಮಂಡನೆ ಮಾಡಿದರು.

ಬೆಂಗಳೂರು: ವಿಧಾನಸಭೆಯಲ್ಲಿ ನಾಲ್ಕು ವಿಧೇಯಕಗಳನ್ನು ಮಂಡನೆ ಮಾಡಲಾಯಿತು. ಸಿಎಂ ಪರವಾಗಿ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರು ವಿಧೇಯಕಗಳನ್ನು ಮಂಡನೆ ಮಾಡಿದರು.

2022 ನೇ ಸಾಲಿನ ಹಣಕಾಸು ಸಂಸ್ಥೆಗಳಿಗೆ ಠೇವಣಿದಾರರ ಹಿತಾಸಕ್ತಿ ಸಂರಕ್ಷಣೆ (ತಿದ್ದುಪಡಿ) ವಿಧೇಯಕ, ಕರ್ನಾಟಕ ಭೂ ಕಂದಾಯ ತಿದ್ದುಪಡಿ ವಿಧೇಯಕ 2022, ಕರ್ನಾಟಕ ಮುನಿಸಿಪಾಲಿಟಿಗಳ ತಿದ್ದುಪಡಿ ವಿಧೇಯಕ 2022 ಮತ್ತು ಕರ್ನಾಟಕ ರೇಷ್ಮೆ ಹುಳು ಬಿತ್ತನೆ, ರೇಷ್ಮೆಗೂಡು ಮತ್ತು ರೇಷ್ಮೆನೂಲು ( ಉತ್ಪಾದನೆ, ಸರಬರಾಜು, ವಿತರಣೆ ಮತ್ತು ಮಾರಾಟ ವಿನಿಮಯ) ( ತಿದ್ದುಪಡಿ) ವಿಧೇಯಕಗಳನ್ನು ಮಂಡನೆ ಮಾಡಿದರು.

ಸಚಿವ ಗೋವಿಂದ ಕಾರಜೋಳ ಅವರು ವಿಧೇಯಕಗಳನ್ನು ಮಂಡಿಸಿದರು

ಹಣಕಾಸು ಸಂಸ್ಥೆಗಳಲ್ಲಿ ಠೇವಣಿದಾರರ ಹಿತಾಸಕ್ತಿ ಸಂರಕ್ಷಣೆ (ತಿದ್ದುಪಡಿ) ವಿಧೇಯಕ: ಗುರು ರಾಘವೇಂದ್ರ ಸಹಕಾರಿ ಬ್ಯಾಂಕ್ ಸೇರಿ ಹಣಕಾಸು ಸಂಸ್ಥೆಗಳ ವಂಚನೆಗಳಿಂದ ಠೇವಣಿದಾರರನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಈ ವಿಧೇಯಕ ಮಂಡಿಸಲಾಗುತ್ತಿದೆ. ಇದರಂತೆ ಹಣಕಾಸು ಸಂಸ್ಥೆಗಳಲ್ಲಿ ಹೂಡಿಕೆ ಮಾಡಿರುವ ಠೇವಣಿದಾರರಿಗೆ ವಂಚನೆ ಮಾಡುವ ಬ್ಯಾಂಕ್, ಸಂಸ್ಥೆಗಳ ಮುಖ್ಯಸ್ಥರು, ನಿರ್ದೇಶಕರ ವಿರುದ್ಧದ ಪ್ರಕರಣಗಳಲ್ಲಿನ ಅಪರಾಧವು ಇನ್ನು ಮುಂದೆ ಜಾಮೀನು ರಹಿತ ಎಂದು ಪರಿಗಣಿತವಾಗಲಿದೆ.

ಈ ವಿಧೇಯಕದ ಪ್ರಕಾರ, ಒಂದು ಹಣಕಾಸು ಸಂಸ್ಥೆಯ ವಿರುದ್ಧ ಹಲವು ಕಡೆ ಎಫ್ಐಆರ್​ಗಳು ದಾಖಲಾಗಿದ್ದರೆ ಅದನ್ನು ಒಂದೇ ಪ್ರಕರಣವಾಗಿ ವಿಲೀನಗೊಳಿಸಲು ಈ ವಿಧೇಯಕದಲ್ಲಿ ಅವಕಾಶ ಮಾಡಿಕೊಡಲಾಗಿದೆ. ಈ ಪ್ರಕರಣಗಳ ವಿರುದ್ಧ ಸಾಮಾನ್ಯ ತನಿಖೆ ಕೈಗೊಳ್ಳಲು ಆದೇಶಿಸಬಹುದಾಗಿದೆ. ಇದಕ್ಕಾಗಿ ಒಬ್ಬ ಅಧಿಕಾರಿಯನ್ನು ನೇಮಕ ಮಾಡುವ ಅಧಿಕಾರವನ್ನು ರಾಜ್ಯ ಸರ್ಕಾರಕ್ಕೆ ನೀಡಬಹುದು ಎಂದು ತಿದ್ದುಪಡಿ ವಿಧೇಯಕದಲ್ಲಿ ಅವಕಾಶ ಕಲ್ಪಿಸಲಾಗಿದೆ.

ಈ ಅಪರಾಧವನ್ನು ಜಾಮೀನು ರಹಿತ ಎಂದು ಪರಿಗಣಿಸಲಾಗುವುದು. ಹಣಕಾಸು ಸಂಸ್ಥೆಗಳ ವಿರುದ್ಧ ಒಂದಕ್ಕಿಂತ ಹೆಚ್ಚು ಜಿಲ್ಲೆಗಳಲ್ಲಿ ಮೊಕದ್ದಮೆ ದಾಖಲಾಗಿದ್ದರೆ, ಹೈಕೋರ್ಟ್ ಸಮ್ಮತಿಯೊಂದಿಗೆ ವಿಶೇಷ ನ್ಯಾಯಾಲಯ ಸ್ಥಾಪಿಸಬಹುದಾಗಿದೆ.

ಕರ್ನಾಟಕ ಭೂ ಕಂದಾಯ (ತಿದ್ದುಪಡಿ) ವಿಧೇಯಕ 2022: ಸರ್ಕಾರಿ ಭೂಮಿಗಳಲ್ಲಿನ ಅನಧಿಕೃತ ಸಾಗುವಳಿ ಭೂಮಿಗಳನ್ನು ಸಕ್ರಮಗೊಳಿಸುವ ಕೊನೆಯ ದಿನಾಂಕವನ್ನು ಮತ್ತೊಂದು ವರ್ಷಕ್ಕೆ ವಿಸ್ತರಿಸಲು ಈ ವಿಧೇಯಕ ಮಂಡಿಸಲಾಗಿದೆ.

ಜನವರಿ 1, 2005ರ ಹಿಂದಿನಿಂದ ಸಾಗುವಳಿ ಮಾಡಲಾಗುತ್ತಿರುವ 17.3.2018 ರಿಂದ 16.03.2019ರವರೆಗೆ ಅನಧಿಕೃತವಾಗಿ ಸಾಗುವಳಿ ಮಾಡುತ್ತಿರುವ ಸರ್ಕಾರಿ ಭೂಮಿಗಳನ್ನು ಸಕ್ರಮಗೊಳಿಸಲು ನಮೂನೆ-57 ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಆದರೆ, ಸಂಸತ್ ಚುನಾವಣೆ ನೀತಿ ಸಂಹಿತೆ ಇದ್ದ ಕಾರಣ ಮಾರ್ಚ್ 10, 2019ರಿಂದ ಅರ್ಜಿಗಳನ್ನು ಸ್ವೀಕರಿಸಿರಲಿಲ್ಲ. ಹೀಗಾಗಿ, ಕರ್ನಾಟಕ ಭೂ ಕಂದಾಯ ಅಧಿನಿಯಮ 1964ರ 94ಎಗೆ ತಿದ್ದುಪಡಿ ಮಾಡುವುದರ ಮೂಲಕ ನಮೂನೆ 57 ಸಲ್ಲಿಸಲು ಸಮಯವನ್ನು ವಿಸ್ತರಿಸಲು ಸಾರ್ವಜನಿಕರು, ಶಾಸಕರು ಮನವಿ ಸಲ್ಲಿಸಿದ್ದರು.

ಕರ್ನಾಟಕ ರೇಷ್ಮೆ ಹುಳು ಬಿತ್ತನೆ, ರೇಷ್ಮೆಗೂಡು ಮತ್ತು ರೇಷ್ಮೆನೂಲು ವಿಧೇಯಕ: ರೇಷ್ಮೆಗೂಡಿನ ಮಾರುಕಟ್ಟೆಯಲ್ಲಿ ರೇಷ್ಮೆಗೂಡುಗಳ ಮಾರಾಟ ಅಥವಾ ಖರೀದಿಯನ್ನೊಳಗೊಂಡ ಎಲ್ಲ ವ್ಯವಹಾರವನ್ನು ಬಹಿರಂಗ ಹರಾಜಿನ ಮೂಲಕ ಅಥವಾ ಇ- ಹರಾಜಿನ ಮೂಲಕ ಮತ್ತು ಮಾರಾಟದ ಬೆಲೆಯ ನಗದು ರೂಪದಲ್ಲಿ ಇಸಿಎಸ್, ಆರ್​ಟಿಜಿಎಸ್, ಎನ್​ಇಎಫ್​ಟಿ ಮೂಲಕ ಪಾವತಿ ಮಾಡಲು ಈ ತಿದ್ದುಪಡಿ ತರಲಾಗುತ್ತಿದೆ.

ಓದಿ: ಒಂದೂವರೆ ಅಡಿ ನೀರಲ್ಲಿ ಬೋಟ್​ನಲ್ಲಿ ಹೋದರಲ್ಲ ಪುಣ್ಮಾತ್ಮರು ಎಂದ ಸಿಎಂ: ನನ್ನ ಸ್ವಂತ ಬೋಟ್​ನಲ್ಲಿ ಹೋಗಿಲ್ಲ ಎಂದ ಸಿದ್ದು

Last Updated :Sep 13, 2022, 8:24 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.