ಕರ್ನಾಟಕ

karnataka

ಸಿದ್ದರಾಮಯ್ಯ ನಿವಾಸಕ್ಕೆ ಟಿಕೆಟ್ ಆಕಾಂಕ್ಷಿಗಳ ಪರೇಡ್, ಟಿಕೆಟ್​ಗಾಗಿ ಲಾಬಿ

By

Published : Apr 7, 2023, 2:14 PM IST

Updated : Apr 8, 2023, 8:20 AM IST

ಕಾಂಗ್ರೆಸ್​ ಟಿಕೆಟ್​ ಆಕಾಂಕ್ಷಿಗಳು ಹಾಗೂ ಟಿಕೆಟ್ ಕೈ ತಪ್ಪುವ ಆತಂಕದಲ್ಲಿರುವ ಹಾಲಿ ಶಾಸಕರು ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಟಿಕೆಟ್​ಗಾಗಿ ಲಾಬಿ ನಡೆಸುತ್ತಿದ್ದಾರೆ.

siddaramaiah
ಸಿದ್ದರಾಮಯ್ಯ

ಸಿದ್ದರಾಮಯ್ಯ ನಿವಾಸಕ್ಕೆ ಆಗಮಿಸಿದ ಟಿಕೆಟ್​ ಆಕಾಂಕ್ಷಿಗಳು

ಬೆಂಗಳೂರು: ಕಾಂಗ್ರೆಸ್ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಆಗ್ತಾ ಇದ್ದಂತೆ, ಬಂಡಾಯದ ಬಿಸಿ ಹೆಚ್ಚಾಗಿದೆ. ಟಿಕೆಟ್ ಮಿಸ್ ಆಗಿದ್ದಕ್ಕೆ ಹತ್ತಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಆಕಾಂಕ್ಷಿಗಳು ಬೀದಿಗಿಳಿದಿದ್ದಾರೆ. ಆಕಾಂಕ್ಷಿಗಳು ಸಿದ್ದರಾಮಯ್ಯ ಹಾಗೂ ಡಿಕೆಶಿ ನಿವಾಸಕ್ಕೆ ದೌಡಾಯಿಸಿ, ಟಿಕೆಟ್​ಗಾಗಿ ಲಾಬಿ ನಡೆಸಿದರು. ಇತ್ತ ಟಿಕೆಟ್ ಘೋಷಣೆಯಾಗದೇ ಉಳಿದುಕೊಂಡ ಹಾಲಿ ಶಾಸಕರು ಆತಂಕಕ್ಕೊಳಗಾಗಿದ್ದಾರೆ. ಹೀಗಾಗಿ ಟಿಕೆಟ್ ಲಾಬಿ ನಡೆಸಲು ತಮ್ಮ ನಾಯಕರು ಮನೆಗೆ ದೌಡಾಯಿಸಿದರು. ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಡಿಕೆಶಿ ನಿವಾಸಕ್ಕೆ ತೆರಳಿ ಇನ್ನೂ ಟಿಕೆಟ್ ಘೋಷಣೆಯಾಗದಿರುವ ಬಗ್ಗೆ ಚರ್ಚೆ ನಡೆಸಿದರು.

ಶಿಕಾರಿಪುರ ಕಾರ್ಯಕರ್ತರ ಹೈಡ್ರಾಮ:ಶಿಕಾರಿಪುರದಲ್ಲಿ ಮ್ಯಾಚ್ ಫಿಕ್ಸಿಂಗ್ ಆಗಿದೆಯೆಂದು ಸಿದ್ದರಾಮಯ್ಯ ನಿವಾಸದ ಬಳಿ ಕಾರ್ಯಕರ್ತರು ಹೈಡ್ರಾಮಾ ಮಾಡಿದ್ರು. ವಿಜಯೇಂದ್ರ ಗೆಲ್ಲಿಸುವುದಕ್ಕೆ ಕಾಂಗ್ರೆಸ್ ಪ್ರಬಲ ಅಭ್ಯರ್ಥಿಯನ್ನ ಹಾಕ್ತಿಲ್ಲ ಅಂತಾ ಕಾಂಗ್ರೆಸ್ ಕಾರ್ಯಕರ್ತರು ಗದ್ದಲ ಎಬ್ಬಿಸಿದ್ರು. ಶಿಕಾರಿಪುರ ಟಿಕೆಟ್ ನಾಗರಾಜ್ ಗೌಡಗೆ ಕೊಡಬೇಕು. ಗೋಣಿ ಮಹಾಂತೇಶ್​ಗೆ ಟಿಕೆಟ್ ಕೊಟ್ಟರೆ ಕಾಂಗ್ರೆಸ್ ನೆಲಕಚ್ಚುತ್ತೆ ಅಂತಾ ಆಕ್ರೋಶ ಹೊರಹಾಕಿದ್ರು.

ಸಿದ್ದರಾಮಯ್ಯ ಭೇಟಿಯಾದ ಅಖಂಡ:ಇನ್ನು ಪುಲಕೇಶಿನಗರ ಟಿಕೆಟ್​ಗಾಗಿ ಮೂವರ ನಡುವೆ ಬಿಗ್ ಫೈಟ್ ನಡೀತಾ ಇದೆ. ಹಾಲಿ ಶಾಸಕ ಅಖಂಡ ಶ್ರೀನಿವಾಸಮೂರ್ತಿಗೆ ಎರಡೂ ಲಿಸ್ಟ್​​ನಲ್ಲಿ ಟಿಕೆಟ್ ಅನೌನ್ಸ್ ಆಗಿಲ್ಲ. ದಲಿತ ಮತಗಳು ಹೆಚ್ಚಿವೆ ಅನ್ನೋ ಕಾರಣಕ್ಕೆ ಮಾಜಿ ಡಿಸಿಎಂ ಜಿ ಪರಮೇಶ್ವರ್ ಕೂಡ ಪುಲಕೇಶಿನಗರದ ಮೇಲೆ ಕಣ್ಣಾಕಿದ್ದಾರೆ. ಡಿ.ಕೆ.ಶಿವಕುಮಾರ್ ಅತ್ಯಾಪ್ತರಾದ ಸಂಪತ್ ರಾಜ್, ಪ್ರಸನ್ನ ಕುಮಾರ್ ಕೂಡ ಲಾಬಿ ನಡೆಸ್ತಾ ಇದ್ದಾರೆ.

ಟಿಕೆಟ್ ಘೋಷಣೆಯಾಗದೇ ಇರುವ ಕಾರಣ ಹಾಲಿ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮತ್ತೊಮ್ಮೆ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು. ನಿಮ್ಮನ್ನೇ ನಂಬಿ ಪಕ್ಷಕ್ಕೆ ಬಂದು ಅತಿ ಹೆಚ್ಚು ಅಂತರದಿಂದ ಗೆದ್ದವನು. ಅಲ್ಪಸಂಖ್ಯಾತರು ಯಾರೂ ನನ್ನ ಮೇಲೆ ಮುನಿಸಿಕೊಂಡಿಲ್ಲ. ಬೇಕಿದ್ದರೆ ಮನೆಮನೆಗೆ ಹೋಗಿ ಅಭಿಪ್ರಾಯ ಸಂಗ್ರಹಿಸಿ ನೀವೇ ನಿರ್ಧರಿಸಿ. ಸ್ಥಳೀಯರು ಕೆಲವರು ಅನಗತ್ಯವಾಗಿ ಗೊಂದಲ ಸೃಷ್ಟಿ ಮಾಡಿದ್ದಾರೆ ಎಂದು ಸಿದ್ದರಾಮಯ್ಯಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.

ಬಳಿಕ ಮಾತನಾಡಿದ ಅವರು, ಮೂರನೇ ಪಟ್ಟಿಯಲ್ಲಿ ಟಿಕೆಟ್ ಸಿಗಲಿದೆ. ಸಿದ್ದರಾಮಯ್ಯ, ಜಮೀರ್ ಅಣ್ಣ, ಅಧ್ಯಕ್ಷರು ನನ್ನ ಬೆನ್ನಿಗೆ ನಿಂತಿದ್ದಾರೆ. ಮೂರನೇ ಪಟ್ಟಿಯಲ್ಲಿ ಬಿಡುಗಡೆ ಆಗುವ ವಿಶ್ವಾಸವಿದೆ. ನಾನು ಯಾವುದೇ ಪಕ್ಷಾಂತರ ಮಾಡಲು ಯೋಚನೆ ಮಾಡಿಲ್ಲ. ಕಾಣದ ಕೈಗಳ ಕೈವಾಡದ ಬಗ್ಗೆ ಮಾಹಿತಿಯಿಲ್ಲ. ಅವಕಾಶ ಸಿಕ್ಕರೆ ಹೈಕಮಾಂಡ್ ನಾಯಕರನ್ನು ಭೇಟಿ ಮಾಡುತ್ತೇನೆ ಎಂದರು.

ಬೆಂಗಳೂರಿನಲ್ಲಿ ಲಿಂಗಾಯತರಿಗೆ ಟಿಕೆಟ್ ಬೇಡಿಕೆ ಹಿನ್ನೆಲೆ ಸಿದ್ದರಾಮಯ್ಯ ನಿವಾಸಕ್ಕೆ ಆಗಮಿಸಿದ ಎಂಬಿ ಪಾಟೀಲ್ ಚರ್ಚೆ ನಡೆಸಿದರು. ಚಿಕ್ಕಪೇಟೆ ಟಿಕೆಟ್ ಆಕಾಂಕ್ಷಿಯಾಗಿರುವ ಮಾಜಿ ಮೇಯರ್ ಗಂಗಾಂಭಿಕೆ ಪತಿ ಮಲ್ಲಿಕಾರ್ಜುನ ಜೊತೆಗೆ ಆಗಮಿಸಿ, ಚರ್ಚೆ ನಡೆಸಿದರು. ಇನ್ನು ಯಶವಂತಪುರ ಟಿಕೆಟ್ ಆಕಾಂಕ್ಷಿ ನಟಿ ಭಾವನ ಟಿಕೆಟ್ ಕೈ ತಪ್ಪಿದ ಹಿನ್ನೆಲೆ ಸಿದ್ದರಾಮಯ್ಯರನ್ನು ಭೇಟಿಯಾಗಿ ಚರ್ಚೆ ನಡೆಸಿದರು.

ಹಾಲಿ ಶಾಸಕರಾದ ಡಿಎಸ್‌ ಹುಲಗೇರಿ,‌ ಹರಿಹರ ರಾಮಪ್ಪ ಅವರು ಸಿದ್ದರಾಮಯ್ಯ ನಿವಾಸಕ್ಕೆ ಆಗಮಿಸಿ ಟಿಕೆಟ್ ವಿಚಾರವಾಗಿ ಚರ್ಚೆ ನಡೆಸಿದರು. ಡಿಎಸ್ ಹುಲಗೇರಿ ಪರವಾಗಿ ಭೋವಿ ಸಮಾಜದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಕೂಡ ಆಗಮಿಸಿದ್ದರು. ಡಿಎಸ್ ಹುಲಗೇರಿ ಅವರು ಲಿಂಗಸುಗೂರು ಕ್ಷೇತ್ರದ ಪ್ರಬಲ ಟಿಕೆಟ್ ಆಕಾಂಕ್ಷಿ ಆಗಿದ್ದಾರೆ. ಹಾಲಿ ಶಾಸಕರು ಆಗಿರುವ ಅವರ ಕ್ಷೇತ್ರಕ್ಕೆ ಟಿಕೆಟ್ ಘೋಷಣೆ ಮಾಡಿಲ್ಲ. ಕ್ಷೇತ್ರದಲ್ಲಿ ವಿರೋಧ ಇರುವ ಹಿನ್ನೆಲೆಯಲ್ಲಿ ಟಿಕೆಟ್ ಘೋಷಣೆ ಮಾಡಲು ವಿಳಂಬವಾಗಿದೆ. ಈ ಸಂಬಂಧ ಸ್ವಾಮಿಗಳ ಮೂಲಕ ಟಿಕೆಟ್​ಗಾಗಿ ಲಾಬಿ ನಡೆಸುತ್ತಿದ್ದಾರೆ.

ಇದನ್ನೂ ಓದಿ :ಕಾಂಗ್ರೆಸ್ 2ನೇ ಪಟ್ಟಿ: ಬೆಳಗಾವಿ ಜಿಲ್ಲೆಯ 4 ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ

ಜೊತೆಗೆ, ಬಾದಾಮಿಯಲ್ಲಿ ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾದ ಭೀಮಸೇನ ಚಿಮ್ಮನಕಟ್ಟಿ ಅವರು ಸಿದ್ದರಾಮಯ್ಯಗೆ ಅಭಿನಂದನೆ ಸಲ್ಲಿಸಲು ಆಗಮಿಸಿದ್ದರು. ಕಾಂಗ್ರೆಸ್ ಟಿಕೆಟ್ ಎರಡನೇ ಪಟ್ಟಿ ಬಿಡುಗಡೆ ಬೆನ್ನಲ್ಲೇ ಸಿದ್ದರಾಮಯ್ಯ ನಿವಾಸ ಚಟುವಟಿಕೆಗಳ ಕೇಂದ್ರ ಬಿಂದುವಾಗಿದೆ. ಟಿಕೆಟ್ ಆಕಾಂಕ್ಷಿಗಳು ಸಿದ್ದು ನಿವಾಸಕ್ಕೆ ಆಗಮಿಸಿ ಟಿಕೆಟ್​ಗಾಗಿ ಸಾಕಷ್ಟು ಒತ್ತಡ, ಲಾಬಿ ನಡೆಸುತ್ತಿದ್ದಾರೆ.

ಇದನ್ನೂ ಓದಿ :ಗೋಕಾಕ್ ಕ್ಷೇತ್ರದಲ್ಲಿ‌ ಪಂಚಮಸಾಲಿ‌ ಸಮುದಾಯಕ್ಕೆ ಕಾಂಗ್ರೆಸ್ ಮಣೆ: ರಮೇಶ್​ ಜಾರಕಿಹೊಳಿ‌ ವಿರುದ್ಧ ಡಾ.ಮಹಾಂತೇಶ ಕಡಾಡಿ‌ ಕಣಕ್ಕೆ!

ಚುನಾವಣೆ ಯಾವಾಗ? : ರಾಜ್ಯ ವಿಧಾನಸಭೆ ಚುನಾವಣೆಗೆ ಈಗಾಗಲೇ ದಿನಾಂಕ ಘೋಸಿಸಲಾಗಿದೆ. 224 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಚುನಾವಣೆ​ ನಡೆಯಲಿದೆ. ನಾಮಪತ್ರ ಸಲ್ಲಿಕೆಗೆ ಏಪ್ರಿಲ್​ 20 ಕೊನೆಯ ದಿನ ಆಗಿದ್ದು, ನಾಮಪತ್ರ ಪರಿಶೀಲನೆ ಏಪ್ರಿಲ್​ 21 ರಂದು ನಡೆಯಲಿದೆ. ಮತ್ತು ಏಪ್ರಿಲ್​ 24 ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿದೆ. ಮೇ 10 ರಂದು ಮತದಾನ ನಡೆಯಲಿದ್ದು, ಮೇ 13 ಕ್ಕೆ ಫಲಿತಾಂಶ ಪ್ರಕಟವಾಗಲಿದೆ.

Last Updated :Apr 8, 2023, 8:20 AM IST

ABOUT THE AUTHOR

...view details