ETV Bharat / assembly-elections

ಗೋಕಾಕ್ ಕ್ಷೇತ್ರದಲ್ಲಿ‌ ಪಂಚಮಸಾಲಿ‌ ಸಮುದಾಯಕ್ಕೆ ಕಾಂಗ್ರೆಸ್ ಮಣೆ: ರಮೇಶ್​ ಜಾರಕಿಹೊಳಿ‌ ವಿರುದ್ಧ ಡಾ.ಮಹಾಂತೇಶ ಕಡಾಡಿ‌ ಕಣಕ್ಕೆ!

author img

By

Published : Apr 6, 2023, 9:49 PM IST

ಕಾಂಗ್ರೆಸ್ ಇಂದು​ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಗೋಕಾಕ್ ವಿಧಾನಸಭೆ ಕ್ಷೇತ್ರದಲ್ಲಿ ಲಿಂಗಾಯತ ಪಂಚಮಸಾಲಿ ಅಸ್ತ್ರ ಪ್ರಯೋಗಿಸುವ ಮೂಲಕ ಕಾಂಗ್ರೆಸ್​ ಪಕ್ಷ, ಹಾಲಿ‌ ಶಾಸಕ ರಮೇಶ್​ ಜಾರಕಿಹೊಳಿ‌ ಅವರನ್ನು ಕಟ್ಟಿಹಾಕುವ ತಂತ್ರ ರೂಪಿಸಿದೆ.

Ramesh Jarakiholu vs Dr  Mahantesh Kadadi
Ramesh Jarakiholu vs Dr Mahantesh Kadadi

ಅಶೋಕ‌ ಪೂಜಾರಿ

ಬೆಳಗಾವಿ: ಜಿಲ್ಲೆಯ ಪ್ರತಿಷ್ಠಿತ ಕ್ಷೇತ್ರಗಳಲ್ಲಿ‌ ಒಂದಾದ ಗೋಕಾಕ್ ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಎರಡನೇ ಪಟ್ಟಿಯಲ್ಲಿ ಅಚ್ಚರಿಯ ಅಭ್ಯರ್ಥಿ‌ ಘೋಷಣೆ ಮಾಡಿದ್ದು, ಪಂಚಮಸಾಲಿ ಸಮುದಾಯದ ಡಾ.ಮಹಾಂತೇಶ ಕಡಾಡಿ ಅವರಿಗೆ ಈ ಬಾರಿ ಕೈ ಪಕ್ಷ ಮಣೆ ಹಾಕಿದೆ. ಈ ಮೂಲಕ ಹಾಲಿ‌ ಶಾಸಕ ರಮೇಶ್​ ಜಾರಕಿಹೊಳಿ‌ ಮಣಿಸಲು ಕಾಂಗ್ರೆಸ್ ಈ ಬಾರಿ ಲಿಂಗಾಯತ ಪಂಚಮಸಾಲಿ ಅಸ್ತ್ರ ಪ್ರಯೋಗಿಸಿದೆ. ಬಿಜೆಪಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರ ಸಂಬಂಧಿ ಡಾ. ಮಹಾಂತೇಶ ಅವರಿಗೆ ಟಿಕೆಟ್​ ಘೋಷಿಸಿದ್ದು ತೀವ್ರ ಕುತೂಹಲ‌ ಮೂಡಿಸಿದೆ. ಮಹಾಂತೇಶ ವೃತ್ತಿಯಲ್ಲಿ ಚಿಕ್ಕ ಮಕ್ಕಳ ವೈದ್ಯರಾಗಿದ್ದು, ಮೊದಲ ಬಾರಿಗೆ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.

ಪಂಚಮಸಾಲಿ‌ ಹೋರಾಟದ ಎಫೆಕ್ಟ್: ಗೋಕಾಕ್ ಕ್ಷೇತ್ರದಲ್ಲಿ 1957 ಮತ್ತು‌ 1962ರ ವಿಧಾನಸಭೆ ಚುನಾವಣೆಯಲ್ಲಿ ಪಂಚಮಸಾಲಿ ಸಮುದಾಯದ ನಿಂಗಪ್ಪ ಅಪ್ಪಯ್ಯ ಕರಲಿಂಗನವರ ಶಾಸಕರಾಗಿ ಆಯ್ಕೆಯಾಗಿದ್ದರು. ಇದಾದ ಬಳಿಕ 1967ರಿಂದ 2008ರ ವರೆಗೆ ಗೋಕಾಕ್ ಮೀಸಲು‌ ಕ್ಷೇತ್ರವಾಗಿತ್ತು. 1999, 2004, 2008, 2013, 2018ರ ಸಾರ್ವತ್ರಿಕ ಚುನಾವಣೆ ಮತ್ತು 2019ರ ಉಪಚುನಾವಣೆಯಲ್ಲಿ ಸತತವಾಗಿ ರಮೇಶ್ ಜಾರಕಿಹೊಳಿ ಗೆಲ್ಲುವ ಮೂಲಕ ತಮ್ಮ ಪಾರುಪತ್ಯ ಮುಂದುವರಿಸಿದ್ದರು.

Ramesh Jarakiholu vs Dr  Mahantesh Kadadi
ರಮೇಶ್​ ಜಾರಕಿಹೊಳಿ‌

ಕ್ಷೇತ್ರ ಸಾಮಾನ್ಯವಾದ ಬಳಿಕವೂ ಅತೀ ಹೆಚ್ಚು ಮತದಾರರನ್ನು ಹೊಂದಿರುವ ಪಂಚಮಸಾಲಿ ಸಮುದಾಯಕ್ಕೆ ಈವರೆಗೂ ಪ್ರಾಧಾನ್ಯತೆ ಸಿಕ್ಕಿರಲಿಲ್ಲ. ಆದರೆ, ಪಂಚಮಸಾಲಿ‌ ಸಮಾಜಕ್ಕೆ 2ಎ ಮೀಸಲಾತಿಗಾಗಿ ದೊಡ್ಡ ಪ್ರಮಾಣದಲ್ಲಿ ಹೋರಾಟ ನಡೆದಿದ್ದರಿಂದ ಸಮುದಾಯದ ಜನ ಜಾಗೃತಿಗೊಂಡಿದ್ದು, ರಾಜಕೀಯ ಅಸ್ತಿತ್ವಕ್ಕಾಗಿ ಕಾದು ಕುಳಿತಿದ್ದರು. ಇದನ್ನೆ ಸರಿಯಾಗಿ ಬಳಸಿಕೊಂಡಿರುವ ಕಾಂಗ್ರೆಸ್ ನಾಯಕರು ಈ ಬಾರಿ ಪಂಚಮಸಾಲಿ ಸಮುದಾಯದ ಡಾ. ಮಹಾಂತೇಶ ಕಡಾಡಿ ಅವರಿಗೆ ಟಿಕೆಟ್​ ಘೋಷಿಸಿದ್ದು, ಕಾಂಗ್ರೆಸ್ ಪಕ್ಷಕ್ಕೆ ಎಷ್ಟರ ಮಟ್ಟಿಗೆ ವರ್ಕೌಟ್ ಆಗುತ್ತೆ ಎಂದು ಕಾದು‌ ನೋಡಬೇಕಿದೆ.

Mahantesh Kadadi will compete against Ramesh Jarakiholi
ಡಾ. ಮಹಾಂತೇಶ ಕಡಾಡಿ‌

ಅಶೋಕ‌ ಪೂಜಾರಿ ಅಭಿಮಾನಿಗಳಿಂದ ಪ್ರತಿಭಟನೆ: ಕಾಂಗ್ರೆಸ್ ಪಕ್ಷದ ಟಿಕೆಟ್​ ನಿರೀಕ್ಷೆಯಲ್ಲಿದ್ದ ಅಶೋಕ ಪೂಜಾರಿಗೆ ಟಿಕೆಟ್ ಕೈ ತಪ್ಪಿದ ಹಿನ್ನೆಲೆ ಅವರ ಅಭಿಮಾನಿಗಳು ಅಸಮಾಧಾನಗೊಂಡಿದ್ದು, ನಗರದ ಬಸವೇಶ್ವರ ವೃತ್ತದಲ್ಲಿ ಅವರ ಬೆಂಬಲಿಗರು ಪ್ರತಿಭಟನೆ ನಡೆಸಿದರು. ಕಾಂಗ್ರೆಸ್ ಪಕ್ಷದ ಹೈಕಮಾಂಡ್ ವಿರುದ್ಧ ದಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ನನ್ನ ಅಭಿಮಾನಿಗಳು, ಬೆಂಬಲಿಗರು ಹಾಗೂ ಹಿತೈಷಿಗಳಲ್ಲಿ ಆತಂಕ ಮನೆ ಮಾಡಿದೆ. ಹೀಗಾಗಿ ಎಪ್ರಿಲ್ 10ರಂದು ಗೋಕಾಕ್ ಪಟ್ಟಣದ ಜ್ಞಾನಮಂದಿರದಲ್ಲಿ ಬೆಳಗ್ಗೆ 11ಕ್ಕೆ ಸಭೆ ಕರೆಯಲಾಗಿದ್ದು, ಅಲ್ಲಿ ಎಲ್ಲರ ಜೊತೆಗೆ ಸಮಾಲೋಚನೆ ಮಾಡಿ‌, ಅಭಿಪ್ರಾಯ ಪಡೆದು ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದು ಅಶೋಕ‌ ಪೂಜಾರಿ ತಿಳಿಸಿದ್ದಾರೆ.

ಇದನ್ನೂ ಓದಿ: ಅಳೆದು ತೂಗಿ ಪ್ರಕಟವಾಯ್ತು ಕಾಂಗ್ರೆಸ್ ಎರಡನೇ ಪಟ್ಟಿ..! ಹೀಗಿದೆ ಟಿಕೆಟ್​ ಹಂಚಿಕೆ ಹಿಂದಿನ ಲೆಕ್ಕಾಚಾರ!

ವಿಧಾನಸಭೆ ಚುನಾವಣೆಗೆ 42 ಅಭ್ಯರ್ಥಿಗಳನ್ನು ಒಳಗೊಂಡ ಎರಡನೇ ಪಟ್ಟಿಯನ್ನು ಕಾಂಗ್ರೆಸ್ ಹೈಕಮಾಂಡ್ ಇಂದು (ಗುರುವಾರ) ಬಿಡುಗಡೆ ಮಾಡಿದ್ದು, ಎರಡು ದಿನದಿಂದ ನಿರಂತರವಾಗಿ ನಡೆಸಿದ ಪ್ರಯತ್ನಕ್ಕೆ ಫಲ ಸಿಕ್ಕಿದೆ. ಮೊದಲ ಪಟ್ಟಿಯಲ್ಲಿ 124 ಮಂದಿಯ ಹೆಸರು ಪ್ರಕಟವಾಗಿತ್ತು. ಎರಡನೇ ಪಟ್ಟಿಗಾಗಿ 100 ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ಯತ್ನದಲ್ಲಿ ರಾಜ್ಯ ನಾಯಕರು ರಾಷ್ಟ್ರೀಯ ನಾಯಕರ ಜತೆ ಚರ್ಚಿಸಿ 42 ಸ್ಥಾನಗಳನ್ನು ಅಂತಿಮಗೊಳಿಸಿಕೊಳ್ಳುವಲ್ಲಿ ಸಫಲವಾಗಿದ್ದಾರೆ. ಇನ್ನು ಅಂತಿಮ ಹಾಗೂ ಮೂರನೇ ಪಟ್ಟಿಯಲ್ಲಿ 58 ಘಟಾನುಘಟಿಗಳ ಹೆಸರು ಪ್ರಕಟವಾಗಬೇಕಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.