ಕರ್ನಾಟಕ

karnataka

ಸ್ವಗ್ರಾಮಕ್ಕೆ ಬಂದ ಯೋಧ ನಾಗರಾಜ್ ಪಾರ್ಥಿವ ಶರೀರ​.. ಕಣ್ಣೀರಿನ ವಿದಾಯ ಹೇಳಿದ ಗ್ರಾಮಸ್ಥರು

By

Published : Apr 4, 2023, 5:57 PM IST

ಹರಿಯಾಣದ ಸೆಕ್ರೆಟರಿಯೇಟ್​ನಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಯೋಧ ನಾಗರಾಜ್​ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಯೋಧರ ಪಾರ್ಥಿವ ಶರೀರವನ್ನು ದಾವಣಗೆರೆ ತಾಲೂಕಿನ ಹದಡಿ ಗ್ರಾಮಕ್ಕೆ ತರಲಾಗಿದೆ.

ಯೋಧ ನಾಗರಾಜ್
ಯೋಧ ನಾಗರಾಜ್

ಯೋಧನ ತಾಯಿ ಹನುಮಕ್ಕ ಅವರು ಮಾತನಾಡಿದರು

ದಾವಣಗೆರೆ:ದೇಶ ಸೇವೆಯೇ ಈಶ ಸೇವೆ ಎಂದು ನಂಬಿ 12 ವರ್ಷಗಳಿಂದ ನಿಷ್ಠಾವಂತ ಯೋಧನಾಗಿ ದೇಶದ ಸೇವೆ ಮಾಡಿದ್ದ ಯೋಧ ನಾಗರಾಜ್ ಆತ್ಮಹತ್ಯೆ ಸುದ್ದಿ ಕುಟುಂಬಕ್ಕೆ ಬರಸಿಡಿಲಿನಂತೆ ಅಪ್ಪಳಿಸಿತ್ತು. ಇಡೀ ಕುಟುಂಬಕ್ಕೆ ಯೋಧನ ಸಾವಿನ ಸುದ್ದಿ ದಿಕ್ಕು ತೋಚದಂತೆ ಮಾಡಿತ್ತು. ಛಂಡಿಗಢದಿಂದ ನೇರವಾಗಿ ತನ್ನ ಊರಿಗೆ ಬರಲು ವಿಮಾನದ ಟಿಕೆಟ್ ಬುಕ್ ಮಾಡಿಸಿದ್ದ ಸಿಐಎಸ್ಎಫ್ ಯೋಧ ನಾಗರಾಜ್ ಸ್ವಗ್ರಾಮಕ್ಕೆ ಶವವಾಗಿ ಆಗಮಿಸಿದ್ದನ್ನು ಕಂಡ ಇಡೀ ಕುಟುಂಬದ ಆಕ್ರಂಧನ ಮುಗಿಲು ಮುಟ್ಟಿತ್ತು. ಇಂದು ಗ್ರಾಮಕ್ಕೆ ಆಗಮಿಸಿದ ಯೋಧ ನಾಗರಾಜ್​ ಪಾರ್ಥಿವ ಶರೀರವನ್ನು ಗ್ರಾಮಸ್ಥರು ಇಡೀ ಹದಡಿ ಗ್ರಾಮದಲ್ಲಿ ಮೆರವಣಿಗೆ ಮಾಡುವ ಮೂಲಕ ಯೋಧ ನಾಗರಾಜ್​ಗೆ ಕಣ್ಣೀರಿನ ವಿದಾಯ ಹೇಳಿದ್ರು.

ಚಿಕ್ಕ ವಯಸ್ಸಿಯನಲ್ಲೇ ತಂದೆಯನ್ನು ಕಳೆದುಕೊಂಡ ಬಳಿಕ ಇಡೀ ಕುಟುಂಬಕ್ಕೆ ಆಧಾರವಾಗಿದ್ದ ಯೋಧ ನಾಗರಾಜ್ ಅವರು ಬಾರದಲೋಕಕ್ಕೆ ಪಯಣ ಬೆಳೆಸಿದ್ದಾರೆ. ಬಡ ಕುಟುಂಬದಲ್ಲಿ ಬೆಳೆದು ಕಷ್ಟಪಟ್ಟು ಶಿಕ್ಷಣ ಪಡೆದಿದ್ದ ನಾಗರಾಜ್ ಬಳಿಕ ಸೇನೆಗೆ ಸೇರಿದ್ದರು. ಒಬ್ಬನೆ ಮಗನಾದ ಸಿಐಎಸ್​ಎಫ್ (ಕೇಂದ್ರ ಕೈಗಾರಿಕಾ ಭದ್ರತಾಪಡೆ) ಯೋಧ ನಾಗರಾಜ್ ಕೆಲ ದಿನಗಳ ಹಿಂದೆ ತನ್ನ ಊರಿಗೆ ಬರಲು ವಿಮಾನದ ಟಿಕೆಟ್ ಬುಕ್ ಮಾಡಿಸಿದ್ದರು. ಇತ್ತೀಚಿಗೆ ಹರಿಯಾಣದ ಸೆಕ್ರೆಟರಿಯೇಟ್​ನಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದರು. ದುರಂತ ಅಂದ್ರೆ ಊರಿಗೆ ಬರುವ ಮುನ್ನವೇ ಅದು ಏನಾಯಿತೊ ಗೊತ್ತಿಲ್ಲ, ಯೋಧ ನಾಗರಾಜ್ ಅವರು ಭಾನುವಾರ ಬೆಳಗ್ಗೆ ಆತ್ಮಹತ್ಯೆ ಮಾಡಿಕೊಂಡಿದ್ದರು.

ಯೋಧನ ಈ ಆತ್ಮಹತ್ಯೆ ಸುದ್ದಿ ಇಡೀ ಹದಡಿ ಗ್ರಾಮಕ್ಕೆ ಹಾಗು ಕುಟುಂಬಸ್ಥರಿಗೆ ಬರಸಿಡಿಲಿನಂತೆ ಅಪ್ಪಳಿಸಿತ್ತು. ಯೋಧ ನಾಗರಾಜ್ ಕರ್ತವ್ಯಕ್ಕೆ ನಿಯೋಜನೆಗೊಂಡು 12 ವರ್ಷಗಳೇ ಉರುಳಿದ್ರು ಕೂಡಾ ಶ್ರದ್ಧಾಭಕ್ತಿಯಿಂದ ಕೆಲಸ ಮಾಡ್ತಿದ್ದರು. ಈ ವಿಚಾರವನ್ನು ಮೃತ ಯೋಧ ನಾಗರಾಜ್ ಸ್ನೇಹಿತರು ಸಾವಿನ ವಿಚಾರವನ್ನು ಕುಟುಂಬಕ್ಕೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದರು.

ಇದನ್ನೂ ಓದಿ :ಮನೆ ಮನೆಗೆ ಡಿಡಿ ತಲುಪಿಸುತ್ತಿದ್ದ ಆರೋಪ: ಕೆಜಿಎಫ್ ಬಾಬು ವಿರುದ್ಧ ಎಫ್ಐಆರ್ ದಾಖಲು

ಯೋಧ ಆರ್. ಎಂ ನಾಗರಾಜ್ (32) ಅವರಿಗೆ ಪತ್ನಿ ಶಿಲ್ಪಾ ಮತ್ತು 2, 11 ತಿಂಗಳ ಇಬ್ಬರು ಹೆಣ್ಣು ಮಕ್ಕಳಿದ್ದು, ತಂದೆ ಮಾರುತೆಪ್ಪ ಹಾಗೂ ತಾಯಿ ಹನುಮಕ್ಕ ದಂಪತಿಯ ಏಕೈಕ ಪುತ್ರನಾಗಿದ್ದ ನಾಗರಾಜ್ 12 ವರ್ಷಗಳಿಂದ ಪಂಜಾಬ್, ಹರಿಯಾಣದಲ್ಲಿ ಯೋಧರಾಗಿ ಸೇವೆ ಸಲ್ಲಿಸುತ್ತಿದ್ದರು.

3 ತಿಂಗಳ ಹಿಂದಷ್ಟೇ ಸ್ವಗ್ರಾಮಕ್ಕೆ ಬಂದು ಹೋಗಿದ್ದರು. ಕೆಲವೇ ಕುಟುಂಬದವರಿಗೆ ದಿನಗಳಲ್ಲಿ ಗ್ರಾಮಕ್ಕೆ ಬರಲು ಫ್ಲೈಟ್​ ಟಿಕೆಟ್ ಬುಕ್ ಮಾಡಿದ್ದರು. ಈ ವೇಳೆ ಮಾತನಾಡಿದ ಯೋಧನ ತಾಯಿ ಹನುಮಕ್ಕ, ತನ್ನ ಮಗನಂತೆ ಯುವಕರು ದೇಶ ಸೇವೆ ಮಾಡ್ಬೇಕು. ಈ ವಿಚಾರ ಭಾನುವಾರ ಬೆಳಗ್ಗೆ ಗೊತ್ತಾಗಿದ್ದು, ಏನೂ ಯಾರಿಗೆ ಹೇಳದ ನನ್ನ ಮಗ ನನ್ನ ಬಳಿ ಏನೂ ಹೇಳಿಕೊಂಡಿದ್ದಿಲ್ಲ. ದೂರವಾಣಿ ಕರೆ ಮಾಡಿದ್ದಾಗ ಚೆನ್ನಾಗಿದ್ದೇನೆ ಅಮ್ಮ ಎಂದು ಮಾತನಾಡಿದ್ದೇ ಕೊನೆ. ಕೆಲಸ ಒತ್ತಡದ ಬಗ್ಗೆಯೂ ಏನೂ ಹೇಳಿಕೊಂಡಿದ್ದಿಲ್ಲ. ನಮ್ಮಿಂದ ಕೂಡ ಯಾವುದೇ ಟಾರ್ಚರ್ ಆಗಿಲ್ಲ ಎಂದು ಅಳಲನ್ನು ತೋಡಿಕೊಂಡ್ರು.

ಇದನ್ನೂ ಓದಿ :ಪುತ್ತೂರು: ವಿವಾಹಿತೆಯೊಂದಿಗಿನ ಪ್ರೇಮ ವಿಚಾರ, ಮರ್ಯಾದೆಗೆ ಅಂಜಿ ವಿವಾಹಿತ ಆತ್ಮಹತ್ಯೆ

ಇನ್ನು ಗ್ರಾಮಕ್ಕೆ ರಜೆ ಮೇಲೆ ಬರುತ್ತಿದ್ದ ಯೋಧ ನಾಗರಾಜ್ ಇಡೀ ಗ್ರಾಮಸ್ಥರೊಂದಿಗೆ ಅನ್ಯೋನ್ಯವಾಗಿದ್ದರು. ಸಾಕಷ್ಟು ಸ್ನೇಹಿತರನ್ನು ಹೊಂದಿದ್ದ ಅವರು ಇಡೀ ಗ್ರಾಮಕ್ಕೆ ಮನೆ ಮಗನಂತಿದ್ದರು. ಇನ್ನು ಇಂದು ಗ್ರಾಮಕ್ಕಾಗಮಿಸಿದ ಯೋಧನ ಪಾರ್ಥಿವ ಶರೀರವನ್ನು ಕಂಡ ಗ್ರಾಮಸ್ಥರು ಕಣ್ಣೀರು ಹಾಕಿ ವಿದಾಯ ಹೇಳಿದ್ರು. ಇನ್ನು ಗ್ರಾಮದಾದ್ಯಂತ ಮೃತ ಯೋಧ ನಾಗರಾಜ್ ಅವರ ಪಾರ್ಥಿವ ಶರೀರವನ್ನು ಅದ್ಧೂರಿಯಾಗಿ ಮೆರವಣಿಗೆ ಮಾಡಿ ಸಿಐಎಸ್​ಎಫ್​ನ ಯೋಧರು ಸರ್ಕಾರಿ ಗೌರವಗಳನ್ನು ಸಲ್ಲಿಸುವ ಮೂಲಕ ಗ್ರಾಮ ಸರ್ಕಾರಿ ಶಾಲೆಯ ಆವರಣದಲ್ಲಿ ದಫನ್ ಮಾಡಲಾಯಿತು.

ಯೋಧನ ಅಂತಿಮ ದರ್ಶನ ಪಡೆದ ಗ್ರಾಮಸ್ಥರು: ಈ ವೇಳೆ ಪಾರ್ಥಿವ ಶರೀರದ ಮೇಲೆ ಇದ್ದ ರಾಷ್ಟ್ರಧ್ವಜವನ್ನು ಯೋಧನ ತಾಯಿಗೆ ಮರಳಿಸುವ ವೇಳೆ ಹೆತ್ತ ತಾಯಿಯ ಆಕ್ರಂದನ ಕರಳು ಕಿತ್ತು ಬರುವಂತಿತ್ತು. ಇಡೀ ಕುಟುಂಬದ ರೋಧನ ಮುಗಿಲುಮುಟ್ಟಿತ್ತು. ಗ್ರಾಮಸ್ಥರು ಗುಂಪು ಗುಂಪಾಗಿ ಶಾಲೆಯತ್ತ ಆಗಮಿಸಿ ಯೋಧನ ಅಂತಿಮ ದರ್ಶನ ಪಡೆದರು. ಇಬ್ಬರು ಪುಟ್ಟ ಕಂದಮ್ಮಗಳು ತಮ್ಮ ತಂದೆಯನ್ನು ಕೊನೆಯಬಾರಿ ಮುಖ ನೋಡುವ ವೇಳೆ ನೆರೆದಿದ್ದ ಅಲ್ಲಿ ನೆರೆದಿದ್ದ ಜನರ ಕಣ್ಣಂಚಿನಲ್ಲಿ ದುಃಖ ಮಡುಗಟ್ಟಿತ್ತು. ಅದೇನೆ ಆಗಲಿ ದಾವಣಗೆರೆಯ ಹೆಮ್ಮೆ ಯೋಧ ನಾಗರಾಜ್ ಆತ್ಮಹತ್ಯೆ ಮಾಡಿಕೊಂಡಿದ್ದಾದ್ರು ಏಕೆ? ಎಂಬುದು ಮಾತ್ರ ಯಕ್ಷಪ್ರಶ್ನೆಯಾಗಿಯೇ ಉಳಿದಿದೆ.

ಇದನ್ನೂ ಓದಿ :ಸಾಲದ ಶೂಲಕ್ಕೆ ರೈತ ಆತ್ಮಹತ್ಯೆ, ಅನಾರೋಗ್ಯದಿಂದ ಮಹಿಳಾ ಪಿಎಸ್​ಐ ಸಾವು.. ಕಾರವಾರದ ಇನ್ನಿತರ ಸುದ್ದಿಗಳು

ABOUT THE AUTHOR

...view details