ಕರ್ನಾಟಕ

karnataka

ಆರ್.ವಿ.ದೇಶಪಾಂಡೆ ವಿಧಾನಸಭೆ ಹಂಗಾಮಿ ಸ್ಪೀಕರ್

By

Published : May 21, 2023, 11:05 AM IST

Updated : May 21, 2023, 12:04 PM IST

ರಾಜ್ಯ ವಿಧಾನಸಭೆಯ ಹಂಗಾಮಿ ಸ್ಪೀಕರ್ ಆಗಿ ಆರ್.ವಿ.ದೇಶಪಾಂಡೆ ನೇಮಕಗೊಂಡಿದ್ದಾರೆ.

deshpande
ಆರ್ ವಿ ದೇಶಪಾಂಡೆ

ಬೆಂಗಳೂರು: ಕಾಂಗ್ರೆಸ್ ಹಿರಿಯ ಶಾಸಕ ಆರ್.ವಿ.ದೇಶಪಾಂಡೆ ಅವರನ್ನು ಹಂಗಾಮಿ ವಿಧಾನ ಸಭಾಧ್ಯಕ್ಷರನ್ನಾಗಿ ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಸದನದಿಂದ ಹೊಸ ಸಭಾಧ್ಯಕ್ಷರು ಆಯ್ಕೆಯಾಗುವವರೆಗೆ ಕರ್ತವ್ಯ ನಿರ್ವಹಿಸುವಂತೆ ತಿಳಿಸಲಾಗಿದೆ. ಸೋಮವಾರದಿಂದ ಬುಧವಾರದವರೆಗೆ ಮೂರು ದಿನಗಳ ಕಾಲ ಅಧಿವೇಶನ ನಡೆಯಲಿದೆ. ನೂತನ ಶಾಸಕರು ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ಪ್ರಮಾಣ ವಚನದ ಕಾರ್ಯ ಕಲಾಪ ನಿರ್ವಹಿಸಲು ಆರ್.ವಿ.ದೇಶಪಾಂಡೆಯವರನ್ನು ವಿಧಾನಸಭೆಯ ಹಂಗಾಮಿ ಸ್ಪೀಕರ್ ಆಗಿ ನೇಮಕ ಮಾಡಲಾಗಿದೆ.

ಇದೇ ಅಧಿವೇಶನದಲ್ಲಿ ಪೂರ್ಣಾವಧಿ ಸ್ಪೀಕರ್ ಆಯ್ಕೆ ಮಾಡಲಾಗುವುದು. ವಿಧಾನಸಭೆ ಸ್ಪೀಕರ್ ಸ್ಥಾನಕ್ಕೆ ಟಿ.ಬಿ.ಜಯಚಂದ್ರ, ಹೆಚ್.ಕೆ.ಪಾಟೀಲ್, ಬಸವರಾಜ ರಾಯರೆಡ್ಡಿ ಸೇರಿದಂತೆ ಕೆಲವರ ಹೆಸರು ಕೇಳಿ ಬರುತ್ತಿದೆ. ಆದರೆ, ಕಾಂಗ್ರೆಸ್ ಪಕ್ಷ ಯಾರನ್ನು ಸ್ಪೀಕರ್ ಹುದ್ದೆಗೆ ಆಯ್ಕೆ ಮಾಡುತ್ತೆ? ಎಂಬುದು ಕುತೂಹಲ ಕೆರಳಿಸಿದೆ. ಸ್ಪೀಕರ್ ಹುದ್ದೆಗೆ ಹೆಸರು ಕೇಳಿ ಬರುತ್ತಿರುವ ಶಾಸಕರು ಮಂತ್ರಿಗಿರಿಯ ಮೇಲೂ ಕಣ್ಣಿಟ್ಟಿದ್ದಾರೆ.

ಇದನ್ನೂ ಓದಿ :ಮೋದಿಯಿಂದ ರಾಜ್ಯಕ್ಕೆ 5,495 ಕೋಟಿ ರೂ. ನಷ್ಟ: ಸಿಎಂ ಸಿದ್ದರಾಮಯ್ಯ

ಮೂರು ದಿನಗಳ ವಿಧಾನಸಭೆ ಅಧಿವೇಶನದಲ್ಲಿ ಎಲ್ಲ ನೂತನ ಶಾಸಕರು ಪ್ರತಿಜ್ಞಾವಿಧಿ ಸ್ವೀಕರಿಸಲಿದ್ದಾರೆ. ಜುಲೈಯಲ್ಲಿ ನೂತನ ಸರ್ಕಾರದ ಬಜೆಟ್ ಮಂಡಿಸುವುದಾಗಿ ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗಾಗಲೇ ತಿಳಿಸಿದ್ದಾರೆ. ಅಷ್ಟರೊಳಗೆ ಸಿಎಂ ಸಂಪುಟ ವಿಸ್ತರಣೆ ಮಾಡಲಿದ್ದಾರೆ. ಸದ್ಯಕ್ಕೆ 8 ಸಚಿವರು ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಖಾತೆ ಹಂಚಿಕೆ ಇನ್ನೆರಡು ದಿನಗಳಲ್ಲಿ ನಡೆಯುವ ಸಾಧ್ಯತೆ ಇದೆ.

ಇದನ್ನೂ ಓದಿ :ಕಾಂಗ್ರೆಸ್ ಕುಂಟು ನೆಪಗಳ ವಿರುದ್ಧ ಅಧಿವೇಶನದಲ್ಲಿ ಧ್ವನಿ ಎತ್ತುತ್ತೇವೆ: ಮಾಜಿ ಸಿಎಂ ಬೊಮ್ಮಾಯಿ‌..!

ಮೊದಲ ಸಚಿವ ಸಂಪುಟ ಸಭೆ : ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ನಿನ್ನೆ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ವಿಧಾನಸೌಧಕ್ಕೆ ಆಗಮಿಸಿ ಮೊದಲ ಸಚಿವ ಸಂಪುಟ ಸಭೆ ನಡೆಸಿದರು. ಇದಾದ ನಂತರ ಸುದ್ದಿಗೋಷ್ಠಿ ನಡೆಸಿದ ಅವರು ಸೋಮವಾರದಿಂದ ವಿಶೇಷ ಅಧಿವೇಶನ ನಡೆಸುವ ಕುರಿತು ಮಾಹಿತಿ ನೀಡಿದರು. "ಶಾಸಕರಿಗೆ ಪ್ರಮಾಣ ವಚನ ಬೋಧಿಸಲು ನಾವು ಸೋಮವಾರ, ಮಂಗಳವಾರ ಮತ್ತು ಬುಧವಾರ ಮೂರು ದಿನಗಳ ಕಾಲ ವಿಧಾನಸಭೆಯ ಅಧಿವೇಶನವನ್ನು ಕರೆಯುತ್ತಿದ್ದೇವೆ. ಮೇ 24 ಕ್ಕೂ ಮುನ್ನಾ ಹೊಸ ವಿಧಾನಸಭೆಯನ್ನು ರಚಿಸಬೇಕು. ಹಾಗಾಗಿ, ನಾವು ರಾಜ್ಯಪಾಲರಿಗೆ ಮನವಿ ಮಾಡುತ್ತಿದ್ದೇವೆ. ಹಿರಿಯ ಶಾಸಕ ಆರ್.ವಿ. ದೇಶಪಾಂಡೆ ಅವರನ್ನು ಹಂಗಾಮಿ ಸ್ಪೀಕರ್ ಮಾಡಲು ವಿನಂತಿಸಲಾಗಿದೆ. ಅಧಿವೇಶನದಲ್ಲಿ ನೂತನ ಸ್ಪೀಕರ್ ಆಯ್ಕೆ ನಡೆಯಲಿದೆ" ಎಂದು ತಿಳಿಸಿದ್ದರು.

ಇದನ್ನೂ ಓದಿ :ಎರಡನೇ ಬಾರಿಗೆ ರಾಜ್ಯದ ಗದ್ದುಗೆ ಏರಿದ ಅಹಿಂದಾ ರಾಜಕಾರಣಿ: ಪಂಚ ಭರವಸೆ ಈಡೇರಿಸುವತ್ತ ಕಾಂಗ್ರೆಸ್​ ನೂತನ ಸಿಎಂ ಚಿತ್ತ..

ಸಿಎಂ ಸಿದ್ದರಾಮಯ್ಯ ನೇತೃತ್ವದ ಸಂಪುಟ ಸಭೆಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಡಾ.ಜಿ.ಪರಮೇಶ್ವರ್​, ಕೆ.ಹೆಚ್.​ಮುನಿಯಪ್ಪ, ಕೆ.ಜೆ.ಜಾರ್ಜ್, ಎಂ.ಬಿ.ಪಾಟೀಲ್, ಸತೀಶ್ ಜಾರಕಿಹೊಳಿ, ರಾಮಲಿಂಗಾ ರೆಡ್ಡಿ, ಪ್ರಿಯಾಂಕ್ ಖರ್ಗೆ ಹಾಗೂ ಜಮೀರ್​ ಅಹ್ಮದ್ ಖಾನ್ ಉಪಸ್ಥಿತರಿದ್ದರು.

Last Updated :May 21, 2023, 12:04 PM IST

ABOUT THE AUTHOR

...view details