ಬೆಂಗಳೂರು:ನಗರದಲ್ಲಿ ಸಾರ್ವಜನಿಕ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಲು ಅನುಮತಿ ನೀಡುವ ಬಗ್ಗೆ ಸಂಬಂಧಪಟ್ಟ ಇಲಾಖೆಗಳೆಲ್ಲ ಸೇರಿ ಪಾಲಿಕೆಯ 63 ಉಪ ವಿಭಾಗಗಳಲ್ಲಿ ಏಕಗವಾಕ್ಷಿ ಕೇಂದ್ರ ತೆರೆಯಲು ಸೂಚಿಸಲಾಗಿದೆ. ರಾಸಾಯನಿಕ ಬಣ್ಣಗಳು, ಥರ್ಮಕೋಲ್ ಹಾಗೂ ಪಿಒಪಿ ಗಣೇಶ ಮೂರ್ತಿ ತಯಾರಿಕೆ ನಿಷೇಧ ಮಾಡಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.
ನಗರದಲ್ಲಿ ಸಾರ್ವಜನಿಕ ಗಣೇಶೋತ್ಸವ ಅಂಗವಾಗಿ ಪಾಲಿಕೆಯ ಸಿದ್ಧತೆ ಕುರಿತು ತುಷಾರ್ ಗಿರಿನಾಥ್ ಮಾತನಾಡಿ, ಕೋವಿಡ್ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷ ವಾರ್ಡ್‌ಗೆ ಒಂದೇ ಗಣೇಶ ಕೂರಿಸಲು ಅನುಮತಿ ನೀಡಲಾಗಿತ್ತು. ಈ ವರ್ಷ ವಿಜೃಂಭಣೆಯ ಗಣೇಶೋತ್ಸವ ಮಾಡಲು ಸಾರ್ವಜನಿಕರು ಉತ್ಸುಕರಾಗಿದ್ದಾರೆ. ಹೀಗಾಗಿ, ಗಣೇಶ ಪ್ರತಿಷ್ಠಾಪನೆಗೆ ಅನುಮತಿ ನೀಡಬೇಕಾದ ಬಿಬಿಎಂಪಿ, ಪೊಲೀಸ್ ಇಲಾಖೆ, ಬೆಸ್ಕಾಂ ಮತ್ತು ಅಗ್ನಿಶಾಮಕ ಠಾಣೆಯ ಅಧಿಕಾರಿಗಳು ಒಟ್ಟಿಗೆ ಸೇರಿ ಪಾಲಿಕೆಯ 63 ಉಪ ವಿಭಾಗಗಳಲ್ಲಿ ಏಕಗವಾಕ್ಷಿ ಕೇಂದ್ರ ಆರಂಭಿಸಲಾಗುವುದು. ಅನುಮತಿ ನೀಡುವ ವೇಳೆ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡುವವರಿಗೆ ಪಾಲನೆ ಮಾಡಬೇಕಾದ ನಿಯಮಾವಳಿ ಬಗ್ಗೆ ತಿಳಿಸಲಾಗುವುದು. ಜೊತೆಗೆ ಗಣೇಶ ನಿಮಜ್ಜನ ಮಾಡುವ ಸ್ಥಳದ ಬಗ್ಗೆಯೂ ಮಾಹಿತಿ ನೀಡಲಿದ್ದೇವೆ ಎಂದು ಹೇಳಿದ್ದಾರೆ.
ಪಾಲಿಕೆ ವತಿಯಿಂದ ಗಣೇಶ ವಿಸರ್ಜನೆಗೆ ನಗರದ ಕೇಂದ್ರ ಭಾಗದಲ್ಲಿರುವ 4 ಕೆರೆಗಳಾದ ಸ್ಯಾಂಕಿ ಕೆರೆ, ಹಲಸೂರು, ಯಡಿಯೂರು ಮತ್ತು ಹೆಬ್ಬಾಳ ಕೆರೆಯನ್ನು ಮೀಸಲಿಟ್ಟಿದ್ದೇವೆ. ಸಣ್ಣ ಕೆರೆ ಮತ್ತು ಕಲ್ಯಾಣಿಗಳಲ್ಲಿಯೂ ವ್ಯವಸ್ಥೆ ಮಾಡಿದ್ದೇವೆ. ವಾರ್ಡ್‌ವಾರು ಸಂಚಾರಿ ನಿಮಜ್ಜನ ಘಟಕ (ಮೊಬೈಲ್ ಟ್ಯಾಂಕ್) ಸ್ಥಾಪಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.