ಕರ್ನಾಟಕ

karnataka

ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ರೋಮಾಂಚಕ ಬೈಕ್ ಸ್ಟಂಟ್; ಗಮನ ಸೆಳೆದ ಮತ ಜಾಗೃತಿ ಸ್ತಬ್ಧಚಿತ್ರ

By

Published : Jan 26, 2023, 1:07 PM IST

Updated : Jan 27, 2023, 6:36 AM IST

ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿಂದು ಗಣತಂತ್ರ ದಿನದ ಅಂಗವಾಗಿ ಮೈ ನವಿರೇಳಿಸುವ ಸ್ಟಂಟ್‌ಗಳು ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಮೇಳೈಸಿದವು.

Bike stunt held at Manik Shah Parade ground
ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ನಡೆದ ಬೈಕ್ ಸ್ಟಂಟ್

ಬೆಂಗಳೂರು:74ನೇ ಗಣರಾಜ್ಯೋತ್ಸವದ ಅಂಗವಾಗಿ ನಗರದ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಆಕರ್ಷಕ ಪಥಸಂಚಲನ ನಡೆಯಿತು. ಶಾಲಾ ಮಕ್ಕಳು ದೇಶಭಕ್ತಿ ಪ್ರತಿಬಿಂಬಿಸುವ ಮನಮೋಹಕ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶಿಸಿದರು. ಇದರ ಜೊತೆಗೆ, ಚುನಾವಣಾ ವರ್ಷವಾಗಿರುವ ಹಿನ್ನೆಲೆಯಲ್ಲಿ ಮೂಡಿಬಂದ ಮತದಾನದ ಜಾಗೃತಿ ಮೂಡಿಸುವ ಟ್ಯಾಬ್ಲೋ ಗಮನ ಸೆಳೆಯಿತು.

ಇದಕ್ಕೂ ಮುನ್ನ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಧ್ವಜಾರೋಹಣ ನೆರವೇರಿಸಿದರು. ನಂತರ ತೆರೆದ ವಾಹನದಲ್ಲಿ ಪರೇಡ್ ಮೈದಾನದಲ್ಲಿ ಸಂಚರಿಸಿ ವಿವಿಧ ತುಕಡಿಗಳಿಂದ ಗೌರವ ವಂದನೆ ಸ್ವೀಕರಿಸಿದರು. ಇದಾದ ಬಳಿಕ ಆಕರ್ಷಕ ಪಥ ಸಂಚಲನ ಜರುಗಿತು. ಸೇನೆ, ಪೊಲೀಸ್, ಅಗ್ನಿಶಾಮಕದಳ, ಎನ್​ಸಿಸಿ ಸೇರಿದಂತೆ ವಿವಿಧ ಪಡೆಗಳಿಂದ ಪಥಸಂಚಲನ ಮೂಡಿಬಂತು.

ಪಥಸಂಚಲನದ ಕೊನೆಗೆ ಸಾಗಿ ಬಂದ ಟ್ಯಾಬ್ಲೋ ವಿಶೇಷವಾಗಿತ್ತು. ಪ್ರಸ್ತುತ ವರ್ಷ ರಾಜ್ಯ ವಿಧಾನಸಭೆಗೆ ಚುನಾವಣೆಯ ನಡೆಯಲಿದ್ದು ಮತದಾನ ಜಾಗೃತಿ ಮೂಡಿಸುವ ಸ್ತಬ್ಧ ಚಿತ್ರ ಪ್ರದರ್ಶನ ಕಂಡುಬಂತು. ಯಾರೂ ಕೂಡಾ ಮತದಾನದಿಂದ ಹೊರಗುಳಿಯಬಾರದು. ಮತದಾನಕ್ಕಿಂತ ಶ್ರೇಷ್ಟವಾದುದು ಮತ್ತೊಂದಿಲ್ಲ ಎನ್ನುವ ಸಂದೇಶವನ್ನು ಭಾರತ ಚುನಾವಣಾ ಆಯೋಗದ ವತಿಯಿಂದ ವಿಶೇಷ ಟ್ಯಾಬ್ಲೋ ಮೂಲಕ ನೀಡಲಾಯಿತು.

ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ನಡೆದ ಬೈಕ್ ಸ್ಟಂಟ್

ಉತ್ತರ ಹಳ್ಳಿಯ ಕರ್ನಾಟಕ ಪಬ್ಲಿಕ್​ ಶಾಲಾ ಮಕ್ಕಳು ಡಾ.ಬಿ.ಆರ್.ಅಂಬೇಡ್ಕರ್ ಜೀವನ ಕುರಿತು ಸಾಂಸ್ಕೃತಿಕ ಕಾರ್ಯಕ್ರಮ ನೀಡಿದರು. 750 ಮಕ್ಕಳು ಅಂಬೇಡ್ಕರ್ ನಡೆದುಬಂದ ಹಾದಿಯನ್ನು ಪ್ರಸ್ತುತಪಡಿಸಿದರು. ವಿಜಯನಗರದಲ್ಲಿರುವ ಬಿಬಿಎಂಪಿ ಪ್ರೌಢಶಾಲೆ ಮತ್ತು ಪಿಯು ಕಾಲೇಜಿನ ವಿದ್ಯಾರ್ಥಿಗಳಿಂದ ರೈತರಿಗೆ ನಮನ ಸಲ್ಲಿಸುವ ನಮಗಮ ಭಾರತ ಭಾಗ್ಯವಿದಾತ ಕಾರ್ಯಕ್ರಮ ನಡೆಯಿತು. 650 ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ದೇಶದ ಬೆನ್ನೆಲುಬಾಗಿರುವ ರೈತನಿಗೆ ಕಾಯಕಯೋಗಿಗೆ ನಮ್ಮ ಭಾರತ ಭಾಗ್ಯವಿದಾತ ಎನ್ನುವ ಕಾರ್ಯಕ್ರಮದ ಮೂಲಕ ನೃತ್ಯ ನಮನ ಸಲ್ಲಿಸಿದರು.

ಲಗ್ಗೆರೆಯ ಸಿರಿ ಸ್ಕೂಲ್​ ಮತ್ತು ವಿಷ್ಣು ಸ್ಕೂಲ್ ವಿದ್ಯಾರ್ಥಿಗಳು ಭಾರತಾಂಬೆ ನಿನ್ನ ಜನ್ಮದಿನ ಎನ್ನುವ ನೃತ್ಯ ರೂಪಕ ಪ್ರಸ್ತುತಪಡಿಸಿದರು. 600 ವಿದ್ಯಾರ್ಥಿಗಳು ದೇಶಭಕ್ತಿ ಮೊಳಗಿಸುವ, ಸ್ವಾತಂತ್ರ್ಯದ ಕಿಚ್ಚು ಹೊತ್ತಿಸುವ ರೂಪಕದಲ್ಲಿ ಪಾಲ್ಗೊಂಡಿದ್ದರು. ಎಂಇಜಿ ಆ್ಯಂಡ್​ ಸೆಂಟರ್ ವತಿಯಿಂದ ಕೇರಳದ ಸಮರ ಕಲೆ ಕಲರಿಯಪಯಟ್ಟು ಪ್ರಸ್ತುತಪಡಿಸಲಾಯಿತು. 10 ನಿಮಿಷಗಳ ಕಾಲ ನಡೆದ ಪ್ರದರ್ಶನ ನೋಡುಗರ ಗಮನ ಸೆಳೆಯಿತು‌.

ಕೊನೆಯದಾಗಿ, ದಿ ಆರ್ಮಿ ಸರ್ವೀಸ್ ಕಾರ್ಪ್ಸ್ ವತಿಯಿಂದ ಎ.ಎಸ್.ಸಿ ದಿ ಟೋರ್ನಾಡಸ್ ತಂಡ ಮೋಟಾರ್ ಬೈಕ್ ಸಾಹಸ ಪ್ರದರ್ಶನ ಪ್ರಸ್ತುತಪಡಿಸಿತು. ಮೈ ನವಿರೇಳಿಸುವಂತೆ ಮೂಡಿಬಂದ ಸಾಹಸಕ್ಕೆ ನೋಡುಗರು ಮೂಕವಿಸ್ಮಿತರಾದರು. 10 ನಿಮಿಷಗಳ ಕಾಲ ನಡೆದ ಬೈಕ್ ಸ್ಟಂಟ್‌ ಪ್ರದರ್ಶನ ಆಕರ್ಷಣೆಯ ಕೇಂದ್ರ ಬಿಂದುವಾಗಿತ್ತು. ಸಾಂಸ್ಕೃತಿಕ ಕಾರ್ಯಕ್ರಮ, ಸಾಹಸ ಪ್ರದರ್ಶನ, ಪಥಸಂಚಲನ ಮಾಡಿದ ತಂಡಗಳಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಬಹುಮಾನ ವಿತರಿಸಿದರು.

ಇದನ್ನೂ ಓದಿ:ದೇಶದ ಸಾರ್ವಭೌಮತ್ವ, ಅಖಂಡತೆ ಬಲಿಷ್ಠಗೊಳಿಸುವ ಸಂಕಲ್ಪ ಮಾಡೋಣ: ರಾಜ್ಯಪಾಲ ಗೆಹ್ಲೋಟ್

Last Updated : Jan 27, 2023, 6:36 AM IST

ABOUT THE AUTHOR

...view details