ಕರ್ನಾಟಕ

karnataka

ದೇವನೂರ ಮಹಾದೇವ, ಪುಟ್ಟಣ್ಣಯ್ಯ ಸ್ಥಾಪಿಸಿದ್ದ 'ಸರ್ವೋದಯ ಕರ್ನಾಟಕ' ಪಕ್ಷಕ್ಕೆ ಮರು ಚಾಲನೆ

By

Published : Jan 23, 2023, 7:25 PM IST

ಸರ್ವೋದಯ ಕರ್ನಾಟಕ ಪಕ್ಷಕ್ಕೆ ಮರು ಚಾಲನೆ - ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ - ರೈತರು ದಲಿತರು ಒಗ್ಗೂಡಿ ಸ್ಥಾಪಿಸಿದ್ದ ಮೊದಲ ಪಕ್ಷ

relaunch-of-sarvodaya-karnataka-party
ದೇವನೂರು ಮಹಾದೇವ, ಪುಟ್ಟಣ್ಣಯ್ಯ ಸ್ಥಾಪಿಸಿದ್ದ 'ಸರ್ವೋದಯ ಕರ್ನಾಟಕ' ಪಕ್ಷಕ್ಕೆ ಮರು ಚಾಲನೆ

ಬೆಂಗಳೂರು: ನಗರದ ಕೊಂಡಜ್ಜಿ ಬಸಪ್ಪ ಸಮುದಾಯ ಭವನದಲ್ಲಿ ಶ್ರೀಸಾಮಾನ್ಯನ ಸರ್ವಾಂಗೀಣ ಅಭಿವೃದ್ಧಿಗೆ ಎನ್ನುವ ಧ್ಯೇಯ ವಾಕ್ಯದೊಂದಿಗೆ ಸರ್ವೋದಯ ಕರ್ನಾಟಕ ಪಕ್ಷದ ಮರು ಚಾಲನಾ ಸಮಾರಂಭ ನಡೆಯಿತು. ಪಕ್ಷಕ್ಕೆ ಚಾಲನೆ ನೀಡಿ ಮಾತನಾಡಿದ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಅವರು, ಸರ್ವೋದಯ ಕರ್ನಾಟಕ ಪಕ್ಷದ ಮರು ಚಾಲನೆ ಪಡೆದಿದೆ. 2005 ರಲ್ಲಿ ಈ ಪಕ್ಷವನ್ನು ಹುಟ್ಟು ಹಾಕಲಾಗಿತ್ತು. ರೈತ ದಲಿತ ಚಳವಳಿ ಪರ ಈ ಪಕ್ಷ ಕೆಲಸ ಮಾಡಿದೆ. ಪ್ರಾರಂಭದ ದಿನಗಳಲ್ಲಿ ಸಕಾರಾತ್ಮಕ ಪ್ರತಿಕ್ರಿಯೆಗಳು ಬಂದಿದ್ದವು ಎಂದು ಹೇಳಿದರು.

ರೈತರು ದಲಿತರು ಒಗ್ಗೂಡಿ ಸ್ಥಾಪಿಸಿದ್ದ ಮೊದಲ ಪಕ್ಷ: ಪ್ರಾರಂಭದ ದಿನಗಳಲ್ಲಿ ಪುಟ್ಟಣ್ಣಯ್ಯ, ದೇವನೂರ ಮಹಾದೇವ ಮುಂತಾದವರು 21 ರಿಂದ 22 ಜಿಲ್ಲೆಗಳಲ್ಲಿ ಪ್ರವಾಸ ಮಾಡಿದ್ದರು. ದೇಶದಲ್ಲಿ ರೈತರು ದಲಿತರು ಒಟ್ಟುಗೂಡಿ ಸ್ಥಾಪಿಸಿದ ಮೊದಲ ಪಕ್ಷ ಎನ್ನುವ ಹೆಗ್ಗಳಿಕೆಗೆ ಇದು ಪಾತ್ರವಾಗಿತ್ತು. ಜನತಾ ಪರಿವಾರ ಒಡೆದಾಗ ಹಲವು ಮುಖಂಡರು ನಮ್ಮ ಜೊತೆ ಕೈಜೋಡಿಸಲು ಮುಂದಾಗಿದ್ದರು. ಮಿತ್ರ ಸಂಘಟನೆಯಾದ ಸ್ವರಾಜ್ ಇಂಡಿಯಾ ಚುನಾವಣಾ ಕಣದಿಂದ ಹಿಂದೆ ಸರಿದಿತ್ತು. ಆದರೆ ಈ ಬಾರಿ ಚುನಾವಣೆಗೆ ಸ್ಪರ್ಧಿಸಲು ಮುಂದಾಗಿದ್ದೇವೆ ಎಂದು ಹೇಳಿದರು.

ಸಫಾಯಿ ಕರ್ಮಚಾರಿ ಆಂದೋಲನದ ಬೇಜವಾಡ ವಿಲ್ಸನ್ ಮಾತನಾಡಿ, ದೇವನೂರ ಅವರ ಪುಸ್ತಕ ಹೊರ ಬಂದಿದೆ. ರಾಜಕೀಯದಲ್ಲಿ ತಿರುಚುವ ಕಾರ್ಯ ನಡೆಯುತ್ತಿರುವುದರ ಬಗ್ಗೆ ಅವರ ಮನಸ್ಸು ಕುದಿಯುತ್ತಿದೆ. ಯಾಕೆ ಈಗಲೂ ಅಸ್ಪೃಶ್ಯತೆ, ಮಲ ಹೊರುವ ಪದ್ಧತಿ ಇದೆ ಎನ್ನುವ ಬಗ್ಗೆ ಆಕ್ರೋಶ ನನ್ನಲ್ಲೂ ಇದೆ. ಭಾರತ ಸರ್ಕಾರ ಇನ್ನೂ ಕಠೋರವಾದ ನಿರ್ಧಾರ ಕೈಗೊಂಡಿಲ್ಲ. ಸಂಸತ್ತಿನಲ್ಲಿ ಸುಳ್ಳು ಹೇಳುವ ಕೆಲಸ ನಡೆಯುತ್ತಿದೆ. ಇಂದಿಗೂ ಮಲ ಹೊರಲು ಯಾವುದೇ ಯಂತ್ರಗಳನ್ನು ಸರಿಯಾಗಿ ತರಲಾಗಿಲ್ಲ. ಪ್ರಧಾನಿ ಮೋದಿ ಏನೇನೂ ಮಾತನಾಡುತ್ತಿದ್ದಾರೆ ಎಂದು ಅಸಮಾಧಾನ ಹೊರಹಾಕಿದರು.

ಹಿರಿಯ ಚಿಂತಕರಾದ ಮೈಕೆಲ್ ಫರ್ನಾಂಡಿಸ್ ಮಾತನಾಡಿ, ಮುಂದಿನ ಜನ್ಮವಿದ್ದರೆ ರೈತ ಕುಟುಂಬದಲ್ಲಿ ಹುಟ್ಟಬೇಕು. 40ರಷ್ಟು ಆಸ್ತಿ ಕೇವಲ 3 ರಷ್ಟು ಜನರಲ್ಲಿ ಇರುವುದು ದುರದೃಷ್ಟಕರ. ಅಂಬಾನಿ, ಅದಾನಿಯಂತವರು ಸಾಕಷ್ಟು ಶ್ರೀಮಂತರಾಗುತ್ತಿದ್ದಾರೆ. ಕೇಂದ್ರ ಸರ್ಕಾರದಿಂದ ಅಸಂವಿಧಾನಿಕ ಪ್ರಕ್ರಿಯೆಗಳು ನಡೆಯುತ್ತಿವೆ. ಸಮಾನ ಮನಸ್ಕ ಪಕ್ಷಗಳು ಒಕ್ಕೂಟ ಮಾಡಿಕೊಂಡು ಚುನಾವಣೆಗೆ ಸ್ಪರ್ಧಿಸಬೇಕಿದೆ ಎಂದು ಕರೆ ನೀಡಿದರು.

ಕವಿಯತ್ರಿ ಕೆ ಷರೀಫಾ ಮಾತನಾಡಿ, ಈ ಮರು ಚಾಲನಾ ಸಮಾರಂಭ ನಡೆಯುತ್ತಿರುವುದು ಸಂತಸ ತಂದಿದೆ. ಸ್ವರಾಜ್ ಇಂಡಿಯಾ ಜೊತೆಗೆ ಈ ಪಾರ್ಟಿ ವಿಲೀನಗೊಂಡಿತ್ತು. ಪುಟ್ಟಣ್ಣಯ್ಯ ಈ ಪಕ್ಷದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ಸಾಕಷ್ಟು ಮಹಿಳೆಯರು ಪ್ರಾದೇಶಿಕ ಪಕ್ಷ ಸ್ಥಾಪಿಸಿ ಮುನ್ನಡೆಸಿದ್ದಾರೆ. ಕರ್ನಾಟಕದಲ್ಲಿ ಸಾಕಷ್ಟು ಪ್ರಾದೇಶಿಕ ಪಕ್ಷಗಳು ಹುಟ್ಟಿಕೊಂಡಿದ್ದವು. ಆದರೆ ಅವಕ್ಕೆ ಸೈದ್ಧಾಂತಿಕ ನಿಲುವುಗಳು ಇಲ್ಲದೆ ಸೋತವು ಎಂದು ಅಭಿಪ್ರಾಯಪ್ಟರು.

ಸಂಸ್ಥಾಪನಾ ಸದಸ್ಯರಲ್ಲಿ ಒಬ್ಬರಾದ ಇಂದೂಧರ ಹೊನ್ನಾಪುರ ಮಾತನಾಡಿ, ಮುಖ್ಯವಾಗಿ ದಲಿತ, ರೈತ ಚಳವಳಿ ಒಂದೇ ಮುಖದ ಎರಡು ಕಣ್ಣುಗಳಿದ್ದಂತೆ. ದಲಿತರು ರೈತರು ಒಗ್ಗೂಡಿದರೆ ಸಾಕಷ್ಟು ಬದಲಾವಣೆಗಳನ್ನು ತರಬಹುದು ಎನ್ನುವುದು ಧ್ಯೇಯೋದ್ದೇಶವಾಗಿತ್ತು. ಪರ್ಯಾಯ ರಾಜಕಾರಣಕ್ಕೆ ಅತ್ಯುತ್ತಮ ಬೆಂಬಲ ಪ್ರಾರಂಭಿಕ ಸಮಯದಲ್ಲಿ ವ್ಯಕ್ತವಾಗಿತ್ತು. ಅಂಬೇಡ್ಕರ್ ಭವನದಲ್ಲಿ ಚಾಲನೆ ಸಿಕ್ಕಾಗ ಕಿಕ್ಕಿರಿದು ಜನ ಬಂದಿದ್ದರು. ಆದರೆ ಇಂದು ತಾಳ್ಮೆ ಮತ್ತು ವಿವೇಕದಿಂದ ಪಕ್ಷವನ್ನು ಮತ್ತೆ ಸ್ಥಾಪಿಸುವ ಕೆಲಸವಾಗಬೇಕಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ರೈತ ಗೀತೆಯನ್ನು ಹಾಡಲಾಯಿತು. ಕಾರ್ಯಕ್ರಮದಲ್ಲಿ ಪಕ್ಷದ ಸಂಸ್ಥಾಪಕ ದೇವನೂರ ಮಹಾದೇವ, ಸರ್ವೋದಯ ಕರ್ನಾಟಕ ಪಕ್ಷದ ಅಧ್ಯಕ್ಷ ಮಾಲಿಪಾಟೀಲ್, ಕಾರ್ಯಾಧ್ಯಕ್ಷ ಅಮ್ಜದ್ ಪಾಷಾ, ಖಜಾಂಚಿ ಶಿವರಾಜ್, ಸುನೀತಾ ಪುಟ್ಟಣ್ಣಯ್ಯ ಸೇರಿದಂತೆ ಹಲವು ಚಿಂತಕರು, ರೈತ ಮುಖಂಡರು ಉಪಸ್ಥಿತರಿದ್ದರು.

ಇದನ್ನೂ ಓದಿ :40 ಕ್ಷೇತ್ರಕ್ಕೆ ಶೀಘ್ರ ಕೆಆರ್​ಪಿಪಿ ಅಭ್ಯರ್ಥಿಗಳು ಪ್ರಕಟ: ಜನಾರ್ದನ ರೆಡ್ಡಿ

ABOUT THE AUTHOR

...view details