ಕರ್ನಾಟಕ

karnataka

ಕಾರಂತ ಬಡಾವಣೆ ರಚನೆ ವಿರುದ್ಧ ಪ್ರತಿಭಟಿಸಿದರೆ ಸುಪ್ರೀಂ ತೀರ್ಪಿನ ವಿರುದ್ಧ ಹೋದಂತೆ: ಬಿಡಿಎ ಎಚ್ಚರಿಕೆ

By

Published : Mar 24, 2021, 6:43 AM IST

ಶಿವರಾಮ ಕಾರಂತ ಬಡಾವಣೆ ನಿರ್ಮಾಣ ಯೋಜನೆಯಿಂದ ರೈತರಿಗೆ, ಮನೆ ಮಾಲೀಕರಿಗೆ ಭಾರಿ ನಷ್ಟವಾಗ್ತಿದೆ ಎಂದು ಆರೋಪಿಸಿ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ನಾಳೆ ಬೃಹತ್ ಪ್ರತಿಭಟನೆಗೆ ಕರೆ ನೀಡಲಾಗಿದೆ. ಆದರೆ ಇದಕ್ಕೆ ಸ್ಪಷ್ಟನೆ ನೀಡಿರುವ ಬಿಡಿಎ ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಡಾ. ಕೆ. ಶಿವರಾಮಕಾರಂತ ಬಡಾವಣೆ ರಚನೆಯ ಕಾರ್ಯವು ಪ್ರಗತಿಯಲ್ಲಿದ್ದು, ಬಡಾವಣೆಯ ರೂಪುರೇಷೆಗಳನ್ನು ಪೂರ್ಣಗೊಳಿಸುವ ಕಾರ್ಯವು ಶೀಘ್ರದಲ್ಲಿಯೇ ಅಂತಿಮಗೊಳ್ಳಲಿದೆ ಎಂದಿದ್ದಾರೆ.

Bengaluru Development Authority
ಬಿಡಿಎ

ಬೆಂಗಳೂರು:ಕಳೆದ ಹನ್ನೆರಡು ವರ್ಷಗಳಿಂದ ಜಾರಿಯಲ್ಲಿರುವ ಶಿವರಾಮ ಕಾರಂತ ಬಡಾವಣೆ ನಿರ್ಮಾಣ ಯೋಜನೆಯಿಂದ ರೈತರಿಗೆ, ಮನೆ ಮಾಲೀಕರಿಗೆ ಭಾರಿ ನಷ್ಟವಾಗ್ತಿದೆ. ಇದಕ್ಕೆ ಬಿಡಿಎ ಭ್ರಷ್ಟಾಚಾರವೇ ಕಾರಣವಾಗಿದೆ ಎಂದು ಬಿಡಿಎ ವಿರುದ್ಧ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ನಾಳೆ ಬೃಹತ್ ಪ್ರತಿಭಟನೆಗೆ ಕರೆ ನೀಡಲಾಗಿದೆ.

ಆದರೆ, ಇದಕ್ಕೆ ಸ್ಪಷ್ಟನೆ ನೀಡಿರುವ ಬಿಡಿಎ, ಈಗಾಗಲೇ ಪ್ರತಿಭಟನೆ ಕೈಬಿಡುವಂತೆ ವಿಸ್ತ್ರತ ಸಭೆ ನಡೆಸಿ ಮನವಿ ಮಾಡಲಾಗಿದೆ. ಜಮೀನು ಕಳೆದುಕೊಳ್ಳಲಿರುವ ಭೂಮಾಲೀಕರಿಗೆ ಅಭಿವೃದ್ಧಿ ಪಡಿಸಿದ ನಿವೇಶನ ಅಥವಾ ಹಣದ ರೂಪದಲ್ಲಿ ಪರಿಹಾರವನ್ನು ಕಾಲಮಿತಿಯೊಳಗೆ ಕೊಡುವುದಾಗಿ ಭರವಸೆ ನೀಡಿದ್ದರೂ ಪ್ರತಿಭಟಿಸುತ್ತಿರುವುದು ಸರಿಯಲ್ಲ ಎಂದು ಪ್ರಕಟಣೆ ಹೊರಡಿಸಿದೆ.

ಬಿಡಿಎ ಎಚ್ಚರಿಕೆ

ಈ ಬಗ್ಗೆ ಸೂಚನೆ ಹೊರಡಿಸಿರುವ ಬಿಡಿಎ, "ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಡಾ. ಕೆ. ಶಿವರಾಮಕಾರಂತ ಬಡಾವಣೆ ರಚನೆಯ ಕಾರ್ಯವು ಪ್ರಗತಿಯಲ್ಲಿದ್ದು, ಬಡಾವಣೆಯ ರೂಪುರೇಷೆಗಳನ್ನು ಪೂರ್ಣಗೊಳಿಸುವ ಕಾರ್ಯವು ಶೀಘ್ರದಲ್ಲಿಯೇ ಅಂತಿಮಗೊಳ್ಳಲಿದೆ. ಈ ಹಂತದಲ್ಲಿ ಬಡಾವಣೆಯ ರಚನೆಯ ಕಾರ್ಯವನ್ನು ಕೈಬಿಡುವ ಯಾವುದೇ ಪ್ರಸ್ತಾವಗಳು ಪ್ರಾಧಿಕಾರದ ಮುಂದೆ ಇರುವುದಿಲ್ಲ" ಎಂದಿದ್ದಾರೆ.

ಇದನ್ನು ಓದಿ: ಶಿವರಾಮಕಾರಂತ ಬಡಾವಣೆ ಕಟ್ಟಡಗಳ ಪರಿಶೀಲನೆ: 3 ಸಹಾಯ ಕೇಂದ್ರಗಳು ಆರಂಭ

ಅಲ್ಲದೆ ಕೆಲವೊಂದು ಸಂಘಟನೆಗಳು ಸಾರ್ವಜನಿಕರನ್ನು ಒಗ್ಗೂಡಿಸಿ, ಡಾ. ಕೆ. ಶಿವರಾಮಕಾರಂತ ಬಡಾವಣೆಯ ಭೂಸ್ವಾಧೀನ ಪ್ರಕ್ರಿಯೆಯನ್ನು ರದ್ದುಗೊಳಿಸುವಂತೆ ಹಾಗೂ ಬಡಾವಣೆಯ ರಚನೆ ಕಾರ್ಯಕ್ಕೆ ತೊಡಕು ಉಂಟುಮಾಡುವ ಉದ್ದೇಶದಿಂದ ಬಿಡಿಎ ವಿರುದ್ಧ ಹೋರಾಟ ನಡೆಸಲು ಮುಂದಾಗಿವೆ ಎಂದು ತಿಳಿದು ಬಂದಿರುತ್ತದೆ. ಒಂದೊಮ್ಮೆ ಇಂತಹ ಹೋರಾಟವನ್ನು ಯಾವುದೇ ಸಂಘಟನೆ ನಡೆಸಲು ಮುಂದಾದರೆ ಮಾನ್ಯ ಸರ್ವೋಚ್ಛ ನ್ಯಾಯಾಲಯವು ನೀಡಿರುವ ತೀರ್ಪಿಗೆ ವಿರುದ್ಧವಾಗಿರುತ್ತದೆ ಎಂಬ ಅಂಶವನ್ನು ಗಮನಕ್ಕೆ ತರಬಯಸುತ್ತಾ, ಹೋರಾಟಗಳನ್ನು ಕೈಬಿಟ್ಟು, ಬಡಾವಣೆಯ ರಚನೆಯ ಕಾರ್ಯಕ್ಕೆ ಸಹಕರಿಸಬೇಕೆಂದು ಸಾರ್ವಜನಿಕರಲ್ಲಿ ಬಿಡಿಎ ಮನವಿ ಮಾಡಿದೆ.

ಮುಂದುವರಿದಂತೆ, " ಸರ್ವೋಚ್ಛ ನ್ಯಾಯಾಲಯವು ಡಾ. ಕೆ. ಶಿವರಾಮಕಾರಂತ ಬಡಾವಣೆಗೆ ಸಂಬಂಧಪಟ್ಟಂತೆ, ದಿನಾಂಕ 03.08.2018ಕ್ಕೆ ಮುಂಚಿತವಾಗಿ ನಿರ್ಮಿಸಲಾದ ಕಟ್ಟಡ ಮತ್ತು ಮನೆಗಳ ಬಗ್ಗೆ ವರದಿಯನ್ನು ನೀಡಲು ರಚಿಸಿರುವ ನ್ಯಾಯಮೂರ್ತಿ ಎ.ವಿ. ಚಂದ್ರಶೇಖರ್ ಸಮಿತಿಯು ಸಹಾಯ ಕೇಂದ್ರಗಳನ್ನು ತೆರೆದು ದಾಖಲೆಗಳನ್ನು ಸಂಗ್ರಹಿಸುತ್ತಿದೆ. ಈ ಕಾರ್ಯಕ್ಕೂ ಕೆಲವೊಂದು ವ್ಯಕ್ತಿಗಳು ಹಾಗೂ ಸಂಘಟನೆಗಳು ತೊಡಕು ಉಂಟು ಮಾಡುತ್ತಿರುವುದು ಕಂಡುಬಂದಿದ್ದು, ಸಮಿತಿಯು ಈಗಾಗಲೇ ಇಂತಹವರ ವಿರುದ್ಧ ಕಾನೂನು ಕ್ರಮ ಜರುಗಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಎಚ್ಚರಿಕೆ ನೀಡಿದೆ.

ABOUT THE AUTHOR

...view details