ಕರ್ನಾಟಕ

karnataka

ಬೀದರ್ ಜಿಲ್ಲಾಧಿಕಾರಿಯ ಅಸಡ್ಡೆಯ ನುಡಿಗಳಿಂದ ಕನ್ನಡದ ಸಮ್ಮೇಳನಕ್ಕೆ ಅವಮಾನ: ಡಾ. ಮಹೇಶ ಜೋಶಿ

By

Published : Dec 22, 2022, 9:18 PM IST

ದುರಂತವೆಂದರೆ ಕನ್ನಡ ಸಾಹಿತ್ಯ ಪರಿಷತ್ತಿನ ಮನವಿಯನ್ನು ಧಿಕ್ಕರಿಸಿದ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಹಾವೇರಿಯಲ್ಲಿ ಜರುಗಲಿರುವ ಸಾಹಿತ್ಯ ಸಮ್ಮೇಳನಕ್ಕೆ ಬೀದರ್ ಜಿಲ್ಲೆಯಿಂದ 100 ಜನರೂ ಹೋಗುವುದಿಲ್ಲ. ಹಾಗಾಗಿ ಸಾಹಿತ್ಯ ಸಮ್ಮೇಳನಕ್ಕೆ ಯಾವುದೇ ಅಡ್ಡಿಯಾಗುವುದಿಲ್ಲ ಎಂಬ ಅಸಡ್ಡೆಯ ನುಡಿಗಳನ್ನಾಡುವ ಮೂಲಕ ಕನ್ನಡದ ಸಮ್ಮೇಳನವನ್ನು ಅವಮಾನ ಮಾಡಿದ್ದಾರೆ. ಈ ಅಸಡ್ಡೆಯ ಮನೋಭಾವನೆಯನ್ನು ಕನ್ನಡ ಸಾಹಿತ್ಯ ಪರಿಷತ್ತು ಅತ್ಯಂತ ತೀವ್ರವಾಗಿ ಖಂಡಿಸುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಹೇಳಿದ್ದಾರೆ.

President of Kannada Sahitya Parishad Dr. Nadoja. Mahesh Joshi
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ

ಬೆಂಗಳೂರು : ಬೀದರ್ ಜಿಲ್ಲಾ ಉತ್ಸವವನ್ನು 2023ರ ಜನವರಿ 6, 7 ಹಾಗೂ 8 ರಂದು ಆಯೋಜಿಸಿರುವುದರಿಂದ ಅದೇ ಸಮಯದಲ್ಲಿ ಹಾವೇರಿಯಲ್ಲಿ ಆಯೋಜಿಸಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಬೀದರ್ ಜಿಲ್ಲಾಡಳಿತಕ್ಕೆ ಜಿಲ್ಲಾ ಉತ್ಸವವನ್ನು ಮುಂದೂಡುವಂತೆ ಸೂಚಿಸಬೇಕೆಂದು ಅನೇಕ ಕನ್ನಡಪರ ಸಂಘ-ಸಂಸ್ಥೆಗಳು, ಕನ್ನಡಾಭಿಮಾನಿಗಳು, ಸಾಹಿತ್ಯಾಸಕ್ತರು ಕನ್ನಡ ಸಾಹಿತ್ಯ ಪರಿಷತ್ತಿಗೆ ಕೋರಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ನಾನು ಬೀದರ್ ಜಿಲ್ಲಾಧಿಕಾರಿ ಗೋವಿಂದರೆಡ್ಡಿಯವರೊಡನೆ ಇಂದು ದೂರವಾಣಿ ಮೂಲಕ ಮಾತನಾಡಿ, ಕನ್ನಡಿಗರೆಲ್ಲರ ಅಸ್ಮಿತೆಯ ಪ್ರತೀಕವಾಗಿರುವ ಸಾಹಿತ್ಯ ಸಮ್ಮೇಳನ ನಡೆದು ಎರಡು ವರ್ಷಗಳಾಗಿವೆ. 2023ರಲ್ಲಿ ನಡೆಸಬೇಕಾಗಿದ್ದ ಹಾವೇರಿ ಸಮ್ಮೇಳನವು ಕೊರೋನಾ ಹಿನ್ನೆಲೆಯಲ್ಲಿ ಮುಂದೂಡುತ್ತಾ ಬರಲಾಗಿತ್ತು. ಇದೀಗ ಜನಜೀವನ ಸಹಜ ಸ್ಥಿತಿಗೆ ಮರಳಿದ್ದು, ಕನ್ನಡದ ಉತ್ಸವವಾದ ಸಾಹಿತ್ಯ ಸಮ್ಮೇಳನದಲ್ಲಿ ಸಮಗ್ರ ಕನ್ನಡಿಗರು ಪಾಲ್ಗೊಳ್ಳಲು ಉತ್ಸುಕರಾಗಿದ್ದಾರೆ.

ಜೊತೆಗೆ ಭಾವೈಕ್ಯತೆ, ಸಂಸ್ಕೃತಿ, ಪರಂಪರೆಗೆ ಹೆಸರುವಾಸಿಯಾದ ಹಾಗೂ ಮುಖ್ಯಮಂತ್ರಿಗಳ ಮತ್ತು ನನ್ನ ತವರು ಜಿಲ್ಲೆಯಾದ ಹಾವೇರಿಯಲ್ಲಿ ಜರುಗಲಿರುವ ಈ ಅಕ್ಷರ ಜಾತ್ರೆಯನ್ನು ಐತಿಹಾಸಿಕ ದಾಖಲೆಯಾಗಿ ಉಳಿಯುವಂತೆ ಮಾಡುವ ಉದ್ದೇಶವನ್ನು ಪರಿಷತ್ತು ಹೊಂದಿದ್ದು, 2023ರ ಜನವರಿ 6, 7 ಹಾಗೂ 8 ರಂದು ಮೂರು ದಿನಗಳ ಕಾಲ ಸಮ್ಮೇಳನವನ್ನು ನಡೆಸಲು ದಿನಾಂಕಗಳನ್ನು ಸರ್ಕಾರದ ವತಿಯಿಂದಲೇ ಘೋಷಿಸಿ, ಆಚರಣೆಗಾಗಿ ಸರ್ವ ಸಿದ್ಧತೆಗಳನ್ನು ಕೈಗೊಂಡಿದ್ದು, ನಾಡಿನ ಮೂಲೆ ಮೂಲೆಯಿಂದ ಲಕ್ಷಾಂತರ ಕನ್ನಡಾಭಿಮಾನಿಗಳು ಸಮ್ಮೇಳನದಲ್ಲಿ ಭಾಗವಹಿಸುತ್ತಿರುವುದರಿಂದ ಬೀದರ್ ಜಿಲ್ಲಾದ್ಯಂತ ಭಾಗವಹಿಸುವ ಕನ್ನಡಾಭಿಮಾನಿಗಳಿಗೆ ಅನುಕೂಲವಾಗುವಂತೆ ಬೀದರ್ ಜಿಲ್ಲಾ ಉತ್ಸವನ್ನು ಮುಂದೂಡಿ ಸಹಕರಿಸಬೇಕು ಎಂದು ಕೋರಿಕೊಂಡಿರುವುದಾಗಿ ನಾಡೋಜ ಡಾ. ಮಹೇಶ ಜೋಶಿ ತಿಳಿಸಿದ್ದಾರೆ.

ದುರಂತವೆಂದರೆ ಕನ್ನಡ ಸಾಹಿತ್ಯ ಪರಿಷತ್ತಿನ ಮನವಿಯನ್ನು ಧಿಕ್ಕರಿಸಿದ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಹಾವೇರಿಯಲ್ಲಿ ಜರುಗಲಿರುವ ಸಾಹಿತ್ಯ ಸಮ್ಮೇಳನಕ್ಕೆ ಬೀದರ್ ಜಿಲ್ಲೆಯಿಂದ 100 ಜನರೂ ಹೋಗುವುದಿಲ್ಲ. ಹಾಗಾಗಿ ಸಾಹಿತ್ಯ ಸಮ್ಮೇಳನಕ್ಕೆ ಯಾವುದೇ ಅಡ್ಡಿಯಾಗುವುದಿಲ್ಲ ಎಂಬ ಅಸಡ್ಡೆಯ ನುಡಿಗಳನ್ನಾಡುವ ಮೂಲಕ ಕನ್ನಡದ ಸಮ್ಮೇಳನವನ್ನು ಅವಮಾನ ಮಾಡಿದ್ದಾರೆ. ಈ ಅಸಡ್ಡೆಯ ಮನೋಭಾವನೆಯನ್ನು ಕನ್ನಡ ಸಾಹಿತ್ಯ ಪರಿಷತ್ತು ಅತ್ಯಂತ ತೀವ್ರವಾಗಿ ಖಂಡಿಸುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಹೇಳಿದ್ದಾರೆ.

ಮನಸ್ಸುಗಳು ಮುಖ್ಯ:ಸಮ್ಮೇಳನಕ್ಕೆ ಬರುವವರ ಸಂಖ್ಯೆ ಮುಖ್ಯ ಅಲ್ಲ, ಮನಸ್ಸುಗಳು ಮುಖ್ಯ. ಅದರಲ್ಲೂ ಬೀದರ್ ಜಿಲ್ಲೆಯೂ ಗಡಿಭಾಗದಲ್ಲಿರುವುದರಿಂದ ಪ್ರಚಲಿತ ಸಮಸ್ಯೆಗಳ ಕುರಿತಂತೆ ಸಮ್ಮೇಳನದಲ್ಲಿ ಬೆಳಕು ಚೆಲ್ಲಲಿರುವುದರಿಂದ ಬೀದರ್ ಜಿಲ್ಲೆಯಿಂದ ಭಾಗವಹಿಸುವವರು ಬಹಳ ಉತ್ಸುಕರಾಗಿದ್ದಾರೆ. ಈಗಾಗಲೇ ಸಮ್ಮೇಳನದ ದಿನಾಂಕಗಳಂದೇ ಹಂಪಿ ಉತ್ಸವವನ್ನು ಜರುಗಿಸಲು ಉದ್ದೇಶಿಸಲಾಗಿದ್ದನ್ನು, ಅಲ್ಲಿನ ಜಿಲ್ಲಾಡಳಿತಕ್ಕೆ ಮನವರಿಕೆ ಮಾಡಿಕೊಟ್ಟ ಹಿನ್ನೆಲೆಯಲ್ಲಿ ಸಮಗ್ರ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸುವ ಈ ಅಕ್ಷರ ಜಾತ್ರೆಗೆ ಗೌರವ ಕೊಟ್ಟು, ಹಂಪಿ ಉತ್ಸವವನ್ನು ಮುಂದೂಡಲಾಗಿದೆ.

ನಿಜಾಮರ ಆಡಳಿತಕ್ಕೆ ಒಳಪಟ್ಟಿದ್ದ ಅಂದಿನ ಬೀದರ್ ಪ್ರಾತ್ಯಂತದಲ್ಲಿ ಉರ್ದು ಆಡಳಿತ ಭಾಷೆಯಾಗಿದ್ದರಿಂದ ಹೊರಗೆ ಉರ್ದು ಪಾಠಶಾಲೆ ಎಂದು ನಾಮಫಲಕ ಬರೆಸಿ, ಒಳಗೆ ಕನ್ನಡ ಕಲಿಸುವ ಮೂಲಕ ಕನ್ನಡತನವನ್ನು ಮರೆದು ಕನ್ನಡದ ಪಟ್ಟದೇವರು ಎಂದೇ ಖ್ಯಾತಿ ಹೊಂದಿದ್ದ ಪೂಜ್ಯಶ್ರೀ ಡಾ. ಚೆನ್ನಬಸವ ಪಟ್ಟದೇವರ ಜಿಲ್ಲೆಯಲ್ಲಿ ಇಂತಹ ಅಧಿಕಾರಿಗಳಿಂದ ಕನ್ನಡದ ವಿರುದ್ಧ ಧೋರಣೆಯನ್ನು ಹೊಂದಿರುವುದು ಅತ್ಯಂತ ಖೇದಕರ ಸಂಗತಿಯಾಗಿದೆ ಎಂದು ಬೆಸರ ವ್ಯಕ್ತಪಡಿಸಿದ್ದಾರೆ.

ಹಿಂದಿನಿಂದ ಬೇರಾವುದೇ ಉತ್ಸವ ಜರುಗಿಲ್ಲ: ಕನ್ನಡ ಸಾಹಿತ್ಯ ಪರಿಷತ್ತಿನ ಪರಂಪರೆಯಲ್ಲಿ ರಾಜ ಮಹಾರಾಜರ ಕಾಲದಿಂದಲೂ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಜರುಗುವ ಸಮಯದಲ್ಲಿ ನಾಡಿನಲ್ಲಿ ಬೇರಾವುದೇ ಉತ್ಸವಗಳಾಗಲೀ, ಸಮ್ಮೇಳನಾಗಳಾಗಲೀ ಜರುಗುವುದಿಲ್ಲ. ಕಾರಣ ಸಾಹಿತ್ಯ ಸಮ್ಮೇಳನ ಎಲ್ಲ ಕನ್ನಡಿಗರ ಹಬ್ಬ ಆಗಿದೆ. ಆದರೆ ಬೀದರ್ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಸಮ್ಮೇಳನಕ್ಕೆ ಕೇವಲ ಒಂದು ನೂರು ಜನ ಬೀದರ್ ಜಿಲ್ಲೆಯಿಂದ ಭಾಗವಹಿಸಲಿದ್ದಾರೆ ಎಂಬ ಅಸಡ್ಡೆಯ ಮಾತುಗಳನ್ನು ಆಡಿದ್ದಾರೆ. ಅವರ ಈ ಕನ್ನಡ ವಿರೋಧಿ ಧೋರಣೆಯನ್ನು ಕನ್ನಡ ಸಾಹಿತ್ಯ ಪರಿಷತ್ತು ತೀವ್ರವಾಗಿ ಖಂಡಿಸುತ್ತದೆ. ಜೊತೆಗೆ ಬೀದರ್ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಸಾಂಕೇತಿಕವಾಗಿ ಧರಣಿ ನಡೆಸಲಿದ್ದೇವೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಎಚ್ಚರಿಸಿದ್ದಾರೆ.

ಇದನ್ನೂ ಓದಿ:ಎಡಿಜಿಪಿ ಅಲೋಕ್ ಕುಮಾರ್ ವಿರುದ್ಧದ ಲಂಚ ಪ್ರಕರಣ; 'ಬಿ' ರಿಪೋರ್ಟ್ ತಿರಸ್ಕೃತ, ನೇರ ವಿಚಾರಣೆಗೆ ಆದೇಶ

ABOUT THE AUTHOR

...view details