ETV Bharat / state

ಎಡಿಜಿಪಿ ಅಲೋಕ್ ಕುಮಾರ್ ವಿರುದ್ಧದ ಲಂಚ ಪ್ರಕರಣ; 'ಬಿ' ರಿಪೋರ್ಟ್ ತಿರಸ್ಕೃತ, ನೇರ ವಿಚಾರಣೆಗೆ ಆದೇಶ

author img

By

Published : Dec 22, 2022, 7:06 PM IST

2014ರಲ್ಲಿ ವೈಯಾಲಿಕಾವಲ್ ವ್ಯಾಪ್ತಿಯ ಆರೆಂಜ್ ಬಾರ್ ಅಂಡ್ ರೆಸ್ಟೋರೆಂಟ್‌ನಲ್ಲಿ ನಡೆದಿದ್ದ ಗಲಾಟೆಗೆ ಸಂಬಂಧಿಸಿದ ಪ್ರಕರಣದಲ್ಲಿ ಅಲ್ಲಿನ ಪೊಲೀಸ್ ಕಾನ್‌ಸ್ಟೇಬಲ್ ಚಂದ್ರು ಅಲಿಯಾಸ್ ಚಂದ್ರಶೇಖರ್ 5 ಲಕ್ಷ ಲಂಚ ಪಡೆದಿದ್ದು, ಆಗ ಬೆಂಗಳೂರಿನ ಕಾನೂನು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತರ ಹುದ್ದೆಯಲ್ಲಿದ್ದ ಅಲೋಕ್ ಕುಮಾರ್ ಶೇಷಾದ್ರಿಪುರಂ ಉಪವಿಭಾಗದ ಎಸಿಪಿ ದಾನೇಶ್ವರ್ ರಾವ್ ಹಾಗೂ ವೈಯಾಲಿಕಾವಲ್ ಠಾಣಾ ಇನ್​ಸ್ಪೆಕ್ಟರ್ ಶಂಕರಾಚಾರಿ ಮೂಲಕ 1 ಕೋಟಿ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಲಾಗಿತ್ತು.

ಎಡಿಜಿಪಿ ಅಲೋಕ್ ಕುಮಾರ್ ವಿರುದ್ಧದ ಲಂಚ ಪ್ರಕರಣ
ಎಡಿಜಿಪಿ ಅಲೋಕ್ ಕುಮಾರ್ ವಿರುದ್ಧದ ಲಂಚ ಪ್ರಕರಣ

ಬೆಂಗಳೂರು: ಒಂದು ಕೋಟಿ ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟ ಪ್ರಕರಣದಲ್ಲಿ ಎಡಿಜಿಪಿ ಅಲೋಕ್ ಕುಮಾರ್ ಸೇರಿದಂತೆ ಮೂವರು ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಪೊಲೀಸರು ಸಲ್ಲಿಸಿದ್ದ 'ಬಿ' ರಿಪೋರ್ಟ ಅನ್ನು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಪ್ರಕರಣಗಳ ವಿಶೇಷ ನ್ಯಾಯಾಲಯ ತಿರಸ್ಕರಿಸಿದ್ದು, ನೇರ ವಿಚಾರಣೆ ಆರಂಭಿಸಲು ನಿರ್ಧರಿಸಿದೆ.

ಪ್ರಕರಣದ ಹಿನ್ನೆಲೆ: 2014ರಲ್ಲಿ ವೈಯಾಲಿಕಾವಲ್ ವ್ಯಾಪ್ತಿಯ ಆರೆಂಜ್ ಬಾರ್ ಅಂಡ್ ರೆಸ್ಟೋರೆಂಟ್‌ನಲ್ಲಿ ನಡೆದಿದ್ದ ಗಲಾಟೆಗೆ ಸಂಬಂಧಿಸಿದ ಪ್ರಕರಣದಲ್ಲಿ ಅಲ್ಲಿನ ಪೊಲೀಸ್ ಕಾನ್‌ಸ್ಟೇಬಲ್ ಚಂದ್ರು ಅಲಿಯಾಸ್ ಚಂದ್ರಶೇಖರ್ 5 ಲಕ್ಷ ಲಂಚ ಪಡೆದಿದ್ದು, ಆಗ ಬೆಂಗಳೂರಿನ ಕಾನೂನು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತರ ಹುದ್ದೆಯಲ್ಲಿದ್ದ ಅಲೋಕ್ ಕುಮಾರ್ ಶೇಷಾದ್ರಿಪುರಂ ಉಪವಿಭಾಗದ ಎಸಿಪಿ ದಾನೇಶ್ವರ್ ರಾವ್ ಹಾಗೂ ವೈಯಾಲಿಕಾವಲ್ ಠಾಣಾ ಇನ್​ಸ್ಪೆಕ್ಟರ್ ಶಂಕರಾಚಾರಿ ಮೂಲಕ 1 ಕೋಟಿ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ. 48 ಗಂಟೆಗಳೊಳಗೆ ಹಣ ಹೊಂದಿಸುವಂತೆ ಒತ್ತಡ ಹೇರಲಾಗಿದ್ದು, ಲಂಚ ನೀಡದಿದ್ದರೆ ಶಸ್ತ್ರಾಸ್ತ್ರ ಕಾಯೆ ಹಾಗೂ ಐಪಿಸಿ ಅಡಿಯಲ್ಲಿ ತೀವ್ರ ಸ್ವರೂಪದ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಒಡ್ಡಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿತ್ತು.

ಆರೋಪಿತ ಕಾನ್‌ಸ್ಟೆಬಲ್ ಜತೆಗಿನ ಮಾತುಕತೆಯ ಆಡಿಯೊ ರೆಕಾರ್ಡಿಂಗ್ ತುಣುಕುಗಳಿದ್ದ ಮೂರು ಸಿಡಿಗಳನ್ನೂ ದೂರುದಾರರು ತನಿಖಾ ಸಂಸ್ಥೆಗೆ ಸಲ್ಲಿಸಿದ್ದರು. ಮಾತ್ರವಲ್ಲದೇ ತಮ್ಮ ಸಂಬಂಧಿ ಪುಟ್ಟೇಗೌಡ ಎಂಬುವರು ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಸಬ್ ಇನ್‌ಸ್ಪೆಕ್ಟರ್ ಹುದ್ದೆಯಲ್ಲಿದ್ದು ತನ್ನಿಂದ 1 ಕೋಟಿ ಲಂಚ ಪಡೆಯಲು ಒತ್ತಡ ಸೃಷ್ಟಿಸುವುದಕ್ಕಾಗಿ ಪುಟ್ಟೇಗೌಡ ಅವರನ್ನು ಅಮಾನತು ಮಾಡಲಾಗಿತ್ತು ಎಂದು ಮಲ್ಲಿಕಾರ್ಜುನ್ ಎಂ.ಬಿ ಎಂಬುವವರು 2015ರ ಮೇ 30ರಂದು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಅದರನ್ವಯ ಪುಟ್ಟೇಗೌಡ ಕೂಡ ಲೋಕಾಯುಕ್ತ ಪೊಲೀಸರ ಎದುರು ಹಾಜರಾಗಿ ಹೇಳಿಕೆ ದಾಖಲಿಸಿದ್ದರು. ಪ್ರಕರಣದ ತನಿಖೆ ನಡೆಸಿದ್ದ ಲೋಕಾಯುಕ್ತ ಪೊಲೀಸ್ ಇನ್‌ಸ್ಪೆಕ್ಟರ್ ಮೊಹಮ್ಮದ್ ಮುಖಾರಾಂ ನ್ಯಾಯಾಲಯಕ್ಕೆ 'ಬಿ' ರಿಪೋರ್ಟ್ ಸಲ್ಲಿಸಿದ್ದರು.

ಪ್ರಾಥಮಿಕ ತನಿಖೆ ಬಳಿಕ ಕಾನ್‌ಸ್ಟೇಬಲ್ ಚಂದ್ರಶೇಖರ್ ವಿರುದ್ಧ ಮಾತ್ರ ಎಫ್‌ಐಆರ್ ದಾಖಲಿಸಿದ್ದ ಲೋಕಾಯುಕ್ತ ಪೊಲೀಸರು ತನಿಖೆ ನಡೆಸಿದ್ದರು. 2022ರ ಮಾರ್ಚ್ 19ರಂದು ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದ ತನಿಖಾಧಿಕಾರಿ ಮೊಹಮ್ಮದ್ ಮುಖಾರಾಂ 'ದೂರುದಾರರು ದಾನೇಶ್ವರ್ ರಾವ್ ಮತ್ತು ಶಂಕರಾಚಾರಿ ಅವರಿಗೆ 5 ಲಕ್ಷ ಲಂಚ ನೀಡಿರುವುದನ್ನು ಪುಷ್ಟೀಕರಿಸುವ ಸಾಕ್ಷ್ಯಗಳು ಲಭ್ಯವಾಗಿಲ್ಲ. ಅಂತಹ ಸಾಕ್ಷ್ಯಗಳನ್ನು ಹಾಜರುಪಡಿಸುವಲ್ಲಿ ದೂರುದಾರರು ವಿಫಲವಾಗಿದ್ದಾರೆ' ಎಂದು ಉಲ್ಲೇಖಿಸಿದ್ದಲ್ಲದೇ ಸಾಕ್ಷಿಯಾಗಿರುವ ಸಬ್ ಇನ್‌ಸ್ಪೆಕ್ಟರ್ ಪುಟ್ಟೇಗೌಡ ನೀಡಿದ್ದ ಹೇಳಿಕೆಯನ್ನ ಅಲ್ಲಗಳೆದಿದ್ದರು.

ಆದರೆ ಲೋಕಾಯುಕ್ತ ಪೊಲೀಸರ ವರದಿಯು ದುರುದ್ದೇಶದಿಂದ ಕೂಡಿದೆ ಎಂದು ಅಭಿಪ್ರಾಯಪಟ್ಟಿರುವ ನ್ಯಾಯಾಲಯ, 'ಸಾಕ್ಷಿಯಾಗಿದ್ದ ಪುಟ್ಟೇಗೌಡ ಅವರ ಹೇಳಿಕೆಯನ್ನು ತನಿಖಾಧಿಕಾರಿ ನಂಬಿಲ್ಲ. ಸಾಕ್ಷಿಯ ಹೇಳಿಕೆಯ ಕುರಿತು ಅಭಿಪ್ರಾಯ ನೀಡಬೇಕಿರುವುದು ನ್ಯಾಯಾಲಯವೇ ಹೊರತು ತನಿಖಾಧಿಕಾರಿಯಲ್ಲ. ಪುಟ್ಟೇಗೌಡರ ಹೇಳಿಕೆಯನ್ನು ಪುಷ್ಟೀಕರಿಸುವಂತಹ ಸಾಕ್ಷ್ಯಗಳು ಲಭಿಸಿಲ್ಲ ಎಂಬ ತನಿಖಾಧಿಕಾರಿಯ ತೀರ್ಮಾನವು ಸಮರ್ಥನೀಯವಲ್ಲ. ನೇರವಾದ ಸಾಕ್ಷ್ಯಗಳು ಲಭ್ಯವಿರುವಾಗ ಆರೋಪ ಪುಷ್ಟೀಕರಿಸುವಂತಹ ಇತರ ಸಾಕ್ಷ್ಯಗಳ ಅಗತ್ಯವಿಲ್ಲ.

ತನಿಖಾಧಿಕಾರಿಯು ಲಭ್ಯ ಸಾಕ್ಷ್ಯಗಳನ್ನು ನ್ಯಾಯಾಲಯದ ಮುಂದಿಡುವ ಬದಲಿಗೆ ಆರೋಪಿಗಳನ್ನು ರಕ್ಷಿಸುವ ಪ್ರಯತ್ನ ಮಾಡಿದ್ದಾರೆ' ಎಂದಿದೆ. ಮಾತ್ರವಲ್ಲ, ಅಲೋಕ್ ಕುಮಾರ್, ದಾನೇಶ್ವರ್ ರಾವ್, ಶಂಕರಾಚಾರಿ ಹಾಗೂ ವೈಯಾಲಿಕಾವಲ್ ಪೊಲೀಸ್ ಠಾಣೆಯ ಆಗಿನ ಕಾನ್‌ಸ್ಟೇಬಲ್ ಚಂದ್ರು ಅಲಿಯಾಸ್ ಚಂದ್ರಶೇಖರ್ ವಿರುದ್ಧ ವಿಚಾರಣೆ ನಡೆಯಲಿದ್ದು, 2023ರ ಜನವರಿ 31ರಂದು ದೂರುದಾರರ ಪ್ರಮಾಣೀಕೃತ ಹೇಳಿಕೆ ದಾಖಲಿಸಲು ಸಮಯ ನಿಗದಿಮಾಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.