ಕರ್ನಾಟಕ

karnataka

ಕಲ್ಲು ಗಣಿಗಾರಿಕೆಯಲ್ಲಿ ಅಕ್ರಮ ತಡೆಗೆ ಶಾಸಕರ ಒತ್ತಾಯ: ಆಡಳಿತ ಪಕ್ಷದ ಶಾಸಕರಿಂದ ಪ್ರಾಣ ಬೆದರಿಕೆ ಆರೋಪ

By

Published : Jul 14, 2023, 7:54 PM IST

ನಿಗದಿತ ಪ್ರದೇಶ ಮೀರಿ ಅಕ್ರಮವಾಗಿ ಗಣಿಗಾರಿಕೆ ನಡೆಸಲಾಗುತ್ತಿದೆ ಎಂದು ಬಿಜೆಪಿ ಮತ್ತು ಕಾಂಗ್ರೆಸ್​ ಶಾಸಕರು ವಿಧಾನಸಭೆಯಲ್ಲಿ ಆರೋಪಿಸಿದರು.

ವಿಧಾನಸಭೆ
ವಿಧಾನಸಭೆ

ಕಲ್ಲು ಗಣಿಗಾರಿಕೆಯಲ್ಲಿ ಅಕ್ರಮ ತಡೆಗೆ ಬಿಜೆಪಿ ಮತ್ತು ಕಾಂಗ್ರೆಸ್​ ಶಾಸಕರು ಒತ್ತಾಯ

ಬೆಂಗಳೂರು : ಯಶವಂತಪುರ ವಿಧಾನಸಭಾ ಕ್ಷೇತ್ರದ ದೊಡ್ಡೇರಿ ಸಮೀಪ ಇರುವ ಕಲ್ಲು ಗಣಿಗಾರಿಕೆಯಲ್ಲಿ ಅಕ್ರಮಗಳು ನಡೆಯುತ್ತಿದ್ದು, ಅದನ್ನು ತಡೆಗಟ್ಟಬೇಕು ಎಂದು ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ ಒತ್ತಾಯಿಸಿದರು. ಇದೇ ಸಂದರ್ಭದಲ್ಲಿ ಆಡಳಿತ ಪಕ್ಷದ ಶಾಸಕ ಶ್ರೀನಿವಾಸಯ್ಯ ಅವರು ಗಣಿ ಮಾಲೀಕರು ತಮಗೆ ಪ್ರಾಣ ಬೆದರಿಕೆ ಹಾಕುತ್ತಿದ್ದಾರೆ ಎಂದು ವಿಧಾನಸಭೆಯಲ್ಲಿ ಆರೋಪಿಸಿದರು.

ಇಂದು ಪ್ರಶ್ನೋತ್ತರ ವೇಳೆ ವಿಷಯ ಪ್ರಸ್ತಾಪಿಸಿದ ಎಸ್.ಟಿ. ಸೋಮಶೇಖರ್, ಕಲ್ಲು ಗಣಿಗಾರಿಕೆಗಾಗಿ ಪರವಾನಗಿ ಪಡೆದ ಗುತ್ತಿಗೆದಾರರು ಸಂಜೆ 6 ಗಂಟೆ ಮೇಲೆ ಗಣಿ ಸ್ಫೋಟ ಮಾಡುತ್ತಿದ್ದಾರೆ. ಇದರಿಂದ ಅಕ್ಕಪಕ್ಕದ ಗ್ರಾಮಗಳಿಗೆ ತೊಂದರೆಯಾಗುತ್ತಿದ್ದು, ಗಣಿಗಾರಿಕೆಗಾಗಿ ಆಳವಾದ ಗುಂಡಿ ತೋಡಲಾಗುತ್ತಿದೆ. ಅದರಿಂದ ಗುಂಡಿಗಳನ್ನು ವೈಜ್ಞಾನಿಕವಾಗಿ ಮುಚ್ಚದೇ ಇರುವುದರಿಂದ ಜಾನುವಾರುಗಳು ಬಿದ್ದು ಸಾಯುತ್ತಿವೆ. ನಿಗದಿತ ಪ್ರದೇಶ ಮೀರಿ ಅಕ್ರಮವಾಗಿ ಗಣಿಗಾರಿಕೆ ನಡೆಸಲಾಗುತ್ತಿದೆ ಎಂದು ದೂರಿದರು.

ಈ ವೇಳೆ ಮಧ್ಯಪ್ರವೇಶಿಸಿದ ಸಚಿವ ಕೃಷ್ಣ ಭೈರೇಗೌಡ, ಈ ಹಿಂದೆ ಎಸ್.ಟಿ.ಸೋಮಶೇಖರ್ ಅವರು ಮೂರೂವರೆ ವರ್ಷ ಸಚಿವರಾಗಿದ್ದರು. ಆಗಲೂ ಈ ಗಣಿಗಾರಿಕೆ ನಡೆಯುತ್ತಿತ್ತು. ಪರಿಹಾರ ಕ್ರಮಗಳ ಬಗ್ಗೆ ಸಲಹೆ ನೀಡುವಂತೆ ಮನವಿ ಮಾಡಿದರು. ನೆಲಮಂಗಲ ಶಾಸಕ ಶ್ರೀನಿವಾಸಯ್ಯ ಅವರು ಮಧ್ಯಪ್ರವೇಶಿಸಿ, ತಮ್ಮ ಗ್ರಾಮದಲ್ಲೇ ಈ ಗಣಿಗಾರಿಕೆ ನಡೆಯುತ್ತಿದೆ ಪ್ರಶ್ನೆ ಮಾಡಿದರೆ ದೌರ್ಜನ್ಯ ಮಾಡುತ್ತಾರೆ. ನಮಗೂ ಬೆದರಿಕೆ ಹಾಕಿದ್ದಾರೆ. ಬ್ಲಾಕ್ ಮೇಲ್ ಮಾಡುವುದು ಸೇರಿದಂತೆ ಅನೇಕ ಬಲಪ್ರಯೋಗಗಳು ನಡೆಯುತ್ತಿವೆ ಎಂದು ಆಕ್ಷೇಪಿಸಿದರು. ಇದಕ್ಕೆ ಉತ್ತರಿಸಿದ ಗಣಿ ಸಚಿವ ಪರವಾಗಿ ಕಂದಾಯ ಸಚಿವ ಕೃಷ್ಣಭೈರೇಗೌಡ, ಗಣಿ ಇಲಾಖೆಯ ನಿರ್ದೇಶಕರನ್ನು ಸ್ಥಳಕ್ಕೆ ಕಳುಹಿಸಿ ವರದಿ ಪಡೆಯಲಾಗುವುದು. ಬಳಿಕ ಸಚಿವರ ಸಮ್ಮುಖದಲ್ಲಿ ಸಭೆ ನಡೆಸಿ ಪರಿಹಾರ ಕಂಡುಕೊಳ್ಳಲು ಚರ್ಚಿಸುವುದಾಗಿ ಭರವಸೆ ನೀಡಿದರು.

ಜಲ್ಲಿ ಕ್ರಷರ್​ನ ಜಿಎಸ್​ಟಿ ಸೋರಿಕೆ ತಡೆಯಲು ಡ್ರೋಣ್ ಸರ್ವೇಗೆ ಒತ್ತಾಯ : ಜಲ್ಲಿ ಕ್ರಷರ್ ಜಿಎಸ್​ಟಿ ಸೋರಿಕೆಯಾಗುವುದನ್ನು ತಡೆಯಲು ಡ್ರೋಣ್ ಸರ್ವೇ ಮಾಡಬೇಕೆಂದು ಮಾಜಿ ಸಚಿವ ಹೆಚ್.ಡಿ ರೇವಣ್ಣ ವಿಧಾನಸಭೆಯಲ್ಲಿ ಒತ್ತಾಯಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪರವಾಗಿ 2023ನೇ ಸಾಲಿನ ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ ತಿದ್ದುಪಡಿ ವಿಧೇಯಕದ ಪರ್ಯಾಲೋಚನೆ ಸಂದರ್ಭದಲ್ಲಿ ಮಾತನಾಡಿದ ಅವರು, ಜಲ್ಲಿ ಕ್ರಷರ್ ಮಾಲೀಕರು ಲೂಟಿ ಹೊಡೆಯುತ್ತಿದ್ದಾರೆ. ಕೋಟ್ಯಂತರ ರೂ. ಸರ್ಕಾರಕ್ಕೆ ಜಿಎಸ್​ಟಿ ರೂಪದಲ್ಲಿ ಬರುತ್ತದೆ ಎಂದರು.

ಆಗ ಆಡಳಿತ ಪಕ್ಷದ ಶಾಸಕ ಶಿವಲಿಂಗೇಗೌಡರು ನನ್ನದೊಂದು ಜಲ್ಲಿ ಕ್ರಷರ್ ಇದೆ. ಅದಕ್ಕೆ ಹೇಳುತ್ತಿದ್ದಾರೆ. ಲೋಕೋಪಯೋಗಿ ಇಲಾಖೆ ರಾಯಲ್ಟಿ ಹಾಗೂ ಜಿಎಸ್​ಟಿಯನ್ನು ಪಡೆಯುತ್ತದೆ. ಕ್ರಷರ್ ನಿಂದ ಬರುವ ಜಿಎಸ್​ಟಿಯನ್ನು ಪ್ರತ್ಯೇಕಿಸಿದರೆ ಎಷ್ಟು ಬರುತ್ತದೆ ಎಂಬುದು ಗೊತ್ತಾಗುತ್ತದೆ ಎಂದಾಗ, ಎದ್ದು ನಿಂತ ರೇವಣ್ಣ ಅವರು, ಡ್ರೋಣ್ ಮೂಲಕ ಸರ್ವೇ ಮಾಡಿಸಿದರೆ ವಾಸ್ತಾಂಶ ಗೊತ್ತಾಗುತ್ತದೆ. ನಾನು ಶಿವಲಿಂಗೇಗೌಡರ ಹೆಸರು ಪ್ರಸ್ತಾಪಿಸಿಲ್ಲ. ಹಾಗಿದ್ದರೂ ಅವರಿಗೇಕೆ ಅಳಕು. ಅವರಷ್ಟು ಪ್ರಾಮಾಣಿಕರು ಯಾರೂ ಇಲ್ಲ. ಕಾಂಗ್ರೆಸ್​ನಲ್ಲಿ ಮಾತನಾಡುವ ಶಕ್ತಿ ಕಳೆದುಕೊಂಡಿದ್ದು, ಎಲ್ಲವನ್ನೂ ಇವರಿಗೆ ಬಿಟ್ಟಿದ್ದಾರೆ ಎಂದರು. ಈ ಹಂತದಲ್ಲಿ ಅವರಿಬ್ಬರ ಮಧ್ಯೆ ಮಾತಿನ ಚಕಮಕಿ ನಡೆದಾಗ ವೈಯಕ್ತಿಕ ವಿಚಾರದ ಪ್ರಸ್ತಾಪ ಮಾಡುವುದು ಸರಿಯಲ್ಲ ಎಂದು ಆಡಳಿತ ಪಕ್ಷದ ಶಾಸಕ ಟಿ.ಬಿ ಜಯಚಂದ್ರ ಹೇಳಿದಾಗ ಮಾತಿನ ಚಕಮಕಿ ತೆರೆ ಕಂಡಿತು.

ಇದನ್ನೂ ಓದಿ :ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಸ್ವತ್ತುಗಳಿಗೆ ಬಿ ಖಾತ ನೀಡುವ ಪ್ರಸ್ತಾವನೆ ಸರ್ಕಾರಕ್ಕೆ ಸಲ್ಲಿಕೆ: ಸಚಿವ ಭೈರತಿ ಸುರೇಶ್

ABOUT THE AUTHOR

...view details