ಕರ್ನಾಟಕ

karnataka

ಪಕ್ಷ ಯಾವುದೇ ಜವಾಬ್ದಾರಿ ನೀಡಿದರೂ ನಿರ್ವಹಿಸಲು ತಯಾರಿದ್ದೇನೆ: ಶಾಸಕ ಶರತ್ ಬಚ್ಚೇಗೌಡ

By ETV Bharat Karnataka Team

Published : Dec 19, 2023, 4:34 PM IST

ನಾನು ಅತೃಪ್ತನೂ ಅಲ್ಲ, ಅಸಮಾಧಾನಿತನೂ ಅಲ್ಲ. ಹಾಗಾಗಿ ಪಕ್ಷ ನೀಡುವ ಯಾವುದೇ ಜವಬ್ದಾರಿಯನ್ನು ನಿರ್ವಹಿಸಲು ತಯಾರಿದ್ದೇನೆ ಎಂದು ಶಾಸಕ ಶರತ್ ಬಚ್ಚೇಗೌಡ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.

ಶಾಸಕ ಶರತ್ ಬಚ್ಚೇಗೌಡ
ಶಾಸಕ ಶರತ್ ಬಚ್ಚೇಗೌಡ

ಹೊಸಕೋಟೆ (ಬೆಂಗಳೂರು ಗ್ರಾಮಾಂತರ) :ನಿಗಮ ಮಂಡಳಿಗಳಿಗೆ ಅಧ್ಯಕ್ಷರನ್ನು ನೇಮಕ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಶಾಸಕ ಶರತ್ ಬಚ್ಚೇಗೌಡ ಅವರು, ಕಾಂಗ್ರೆಸ್​ ಹೈಕಮಾಂಡ್, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್​ ಅವರು ಯಾವುದೇ ಜವಾಬ್ದಾರಿ ನೀಡಿದರೂ, ನಿರ್ವಹಿಸಲು ತಯಾರಿದ್ದೇನೆ ಎಂದು ಹೇಳಿದರು

ಹೊಸಕೋಟೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೂರು ವರ್ಷದಿಂದ ಜನರ ಮಧ್ಯೆ ಶಾಸಕನಾಗಿದ್ದೇನೆ. ಇನ್ನಷ್ಟು ಜನರ ಸಮಸ್ಯೆ ಪರಿಹಾರ ಮಾಡಬೇಕು. ಹಲವಾರು ಕಾರ್ಯಕ್ರಮಗಳನ್ನು ರೂಪಿಸಬೇಕು. ನಾನು ಅತೃಪ್ತನಲ್ಲ ಅಸಮಾಧಾನಿತನಲ್ಲ. ಪಕ್ಷ ಕೊಡುವ ಜವಾಬ್ದಾರಿ ನಿರ್ವಹಿಸುತ್ತೇನೆ. ಗೃಹ ಮಂಡಳಿ ಸೇರಿದಂತೆ ಯಾವುದೇ ಜವಾಬ್ದಾರಿ ನಿರ್ವಹಿಸಲು ನಾನು ತಯಾರಿದ್ದೇನೆ ಎಂದರು.

ಹೊಸಕೋಟೆಯ ಎಸ್​ಪಿಜಿ ಆಸ್ಪತ್ರೆಯಲ್ಲಿ, ನಡೆಯುತ್ತಿದ್ದ ಭ್ರೂಣ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಶರತ್ ಬಚ್ಚೇಗೌಡ, ಈ ಒಂದು ಘಟನೆಯನ್ನು ಯಾರು ಸಮರ್ಥನೆ ಮಾಡಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ಹಾಗೂ ಭ್ರೂಣ ಹತ್ಯೆ ಸಮರ್ಥಿಸುವ ಪ್ರಶ್ನೆಯಿಲ್ಲ. ಅತ್ಯಂತ ಕ್ರೂರವಾದ ಪ್ರಕರಣವನ್ನು ನಾನು ಖಂಡಿಸುತ್ತೇನೆ. ಈಗಾಲೇ ಆಸ್ಪತ್ರೆ ನಡೆಸುತ್ತಿದ್ದ ಪ್ರಮುಖ ಆರೋಪಿ ಡಾ. ಶ್ರೀನಿವಾಸ್ ಮತ್ತು ಆತನ ಜೊತೆಯಲ್ಲಿರುವವರನ್ನು ಬಂಧಿಸಿದ್ದಾರೆ. 15 ದಿನಗಳ ಕಾಲ‌ ಅವರನ್ನು ವಶಕ್ಕೆ ಪಡೆದು ವಿಚಾರಣೆ ಸಹ ನಡೆಸುತ್ತಿದ್ದಾರೆ. ಈ‌ ಬಗ್ಗೆ ಎಸ್ಪಿ, ಎಎಸ್ಪಿ ಜೊತೆ ನಾನು ನಿರಂತರ ಸಂಪರ್ಕದಲ್ಲಿದ್ದು, ಮಾಹಿತಿ ಪಡೆದುಕೊಳ್ತಿದ್ದೇನೆ.

ಕೆಲವೊಂದು ಗೌಪ್ಯ ಮಾಹಿತಿಗಳನ್ನ ಹಂಚಿಕೊಳ್ಳಲು ಸಾಧ್ಯವಿಲ್ಲ. ಹೊಸಕೋಟೆ ಕಾಡುಗೋಡಿ ಹಾಗೂ ತಿರುಮಲಶೆಟ್ಟಿಹಳ್ಳಿಯಲ್ಲೂ ಶ್ರೀನಿವಾಸ್ ಆಸ್ವತ್ರೆ ಇತ್ತು ಎಂಬುದು ಗೊತ್ತಾಗಿದೆ. ಹೀಗಾಗಿ ಆ ಬಗ್ಗೆಯು ಅಧಿಕಾರಿಗಳು ಕುಲಂಕಷವಾಗಿ ತನಿಖೆ ನಡೆಯುತ್ತಿದ್ದಾರೆ. ಭ್ರೂಣಹತ್ಯೆಯಾದ ತಾಯಂದಿರು ಯಾರು ಅಂತ ಅವರ ಬಗ್ಗೆಯೂ ತನಿಖೆ ನಡೆಯುತ್ತಿದೆ ಎಂದು ತಿಳಿಸಿದರು.

ಪ್ರಕರಣವನ್ನು ಸಿಐಡಿಗೆ ವಹಿಸಿರುವ ಸರ್ಕಾರ : ಮಂಡ್ಯ ಜಿಲ್ಲೆಯ ಹಾಡ್ಯ ಗ್ರಾಮದ ಆಲೆಮನೆಯಲ್ಲಿ ನಡೆಯುತ್ತಿದ್ದ ಭ್ರೂಣ ಹತ್ಯೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ, ಮೈಸೂರು ಸೇರಿದಂತೆ ರಾಜ್ಯದ ಬೇರೆ ಬೇರೆ ಸ್ಥಳಗಳಲ್ಲೂ ಇದರ ಜಾಲ ಹರಡಿಕೊಂಡಿರುವುದು ಬಯಲಾಗಿತ್ತು. ಬಳಿಕ ರಾಜ್ಯಾದ್ಯಂತ ಭ್ರೂಣ ಲಿಂಗ ಪತ್ತೆ ಪರೀಕ್ಷೆ ಮತ್ತು ಭ್ರೂಣ ಹತ್ಯೆ ಪ್ರಕರಣ ಭಾರೀ ಸದ್ದು ಮಾಡಿತ್ತು. ಇದರಿಂದ ಎಚ್ಚೆತ್ತುಕೊಂಡ ಸರ್ಕಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಸಿಐಡಿ ತನಿಖೆಗೆ ವಹಿಸಿದೆ.

ಹಾಡ್ಯ ಗ್ರಾಮಕ್ಕೆ ಸ್ವತಃ ಆರೋಗ್ಯ ಸಚಿವ ದಿನೇಶ್​ ಗುಂಡೂರಾವ್​ ಅವರು ಭೇಟಿ ನೀಡಿ, ಪರಿಶೀಲಿಸಿದ್ದರು. ಅಲ್ಲದೇ, ಇಂತಹ ಪ್ರಕರಣಗಳಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಎಲ್ಲ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದರು.

ಇದನ್ನೂ ಓದಿ :ತುರ್ತು ಪರಿಸ್ಥಿತಿ ಹೇರಿದ್ದ ಕಾಂಗ್ರೆಸ್​ಗೆ ಸದನದಲ್ಲಿ ನಡೆದುಕೊಳ್ಳುವ ರೀತಿ ಗೊತ್ತಿಲ್ಲ: ಸಿಟಿ ರವಿ ವಾಗ್ದಾಳಿ

ABOUT THE AUTHOR

...view details