ಕರ್ನಾಟಕ

karnataka

ಹೊಸ ಹುದ್ದೆ ಸೃಜಿಸಲು ಅನುಮೋದನೆ: ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವಾಲಯಕ್ಕೆ ಮತ್ತಷ್ಟು ಬಲ

By ETV Bharat Karnataka Team

Published : Nov 23, 2023, 8:15 AM IST

Updated : Nov 23, 2023, 12:55 PM IST

Karnataka ST Welfare Secretariat: 14 ಹೊಸ ಹುದ್ದೆಗಳನ್ನು ಸೃಜಿಸಲು ಅನುಮೋದನೆ ನೀಡುವ ಮೂಲಕ ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವಾಲಯಕ್ಕೆ ಸರ್ಕಾರ ಬಲ ತುಂಬಿದೆ.

ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವಾಲಯ
ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವಾಲಯ

ಬೆಂಗಳೂರು: ಪರಿಶಿಷ್ಟ ಪಂಗಡಗಳ ಶ್ರೇಯೋಭಿವೃದ್ಧಿ ಕಾರ್ಯಕ್ರಮಗಳ ತ್ವರಿತ, ಪರಿಣಾಮಕಾರಿ ಅನುಷ್ಠಾನಕ್ಕೆ ಸ್ಥಾಪಿಸಿದ ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವಾಲಯಕ್ಕೆ ರಾಜ್ಯ ಸರ್ಕಾರ ಮತ್ತಷ್ಟು ಶಕ್ತಿ ತುಂಬಿದೆ. ಸಮಾಜ ಕಲ್ಯಾಣ ಇಲಾಖೆಯಿಂದ 10 ಹುದ್ದೆಗಳ ಸ್ಥಳಾಂತರ, ವಿವಿಧ ವೃಂದದ 14 ಹುದ್ದೆಗಳನ್ನು ಹೊಸದಾಗಿ ಸೃಜಿಸುವ ಮೂಲಕ ಒಟ್ಟು 24 ಹುದ್ದೆಗಳನ್ನು ಎಸ್‌ಟಿ ಕಲ್ಯಾಣ ಸಚಿವಾಲಯಕ್ಕೆ ಒದಗಿಸಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆಗಳ ಇಲಾಖೆ ಆದೇಶಿಸಿದೆ.

ಸಚಿವಾಲಯಕ್ಕೆ ಪ್ರಧಾನ ಕಾರ್ಯದರ್ಶಿ ಸೇರಿ ವಿವಿಧ ಶ್ರೇಣಿಯ 35 ಹುದ್ದೆಗಳನ್ನು ಹೊಸದಾಗಿ ಸೃಜಿಸಲು ಕೋರಿದ ಪ್ರಸ್ತಾವನೆಗೆ ಆರ್ಥಿಕ ಇಲಾಖೆ ಅಭಿಪ್ರಾಯ ಕೇಳಲಾಗಿತ್ತು. ಆದರೆ ಸಮಾಜ ಕಲ್ಯಾಣ ಇಲಾಖೆಯಿಂದ 10 ಹುದ್ದೆಗಳ ಸ್ಥಳಾಂತರ ಮತ್ತು 14 ಹುದ್ದೆಗಳನ್ನು ಹೊಸದಾಗಿ ಸೃಜಿಸುವುದಕ್ಕೆ ಹಣಕಾಸು ಇಲಾಖೆ ಅನುಮೋದಿಸಿದೆ.

ಸಮಾಜ ಕಲ್ಯಾಣ ಇಲಾಖೆಯಿಂದ ಉಪ ಕಾರ್ಯದರ್ಶಿ, ಅಧೀನ ಕಾರ್ಯದರ್ಶಿ, ಶಾಖಾಧಿಕಾರಿ, ಹಿರಿಯ ಸಹಾಯಕರು, ಸಹಾಯಕರು, ಕಿರಿಯ ಸಹಾಯಕರು, ಡಿಇಒ ದರ್ಜೆ ತಲಾ ಒಂದು ಹುದ್ದೆ, ಗ್ರೂಪ್ ಡಿ ಮೂರು ಹುದ್ದೆಗಳು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವಾಲಯಕ್ಕೆ ಸ್ಥಳಾಂತರವಾಗಲಿವೆ. ಹೊಸದಾಗಿ ಸೃಜಿಸಿದ 14 ಹುದ್ದೆಗಳ ಪೈಕಿ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಐಎಎಸ್ ಅಧಿಕಾರಿ ನಿಯೋಜನೆಯಾಗಲಿದ್ದಾರೆ. ಎಂಟು ಹುದ್ದೆಗಳನ್ನು ವೃಂದ ಮತ್ತು ನೇಮಕ ನಿಯಮಗಳನ್ವಯ ಭರ್ತಿ ಮಾಡಿಕೊಳ್ಳಲಿದ್ದು, ಡಿಇಒ ಹಾಗೂ ಗ್ರೂಪ್ ಡಿ ತಲಾ ಎರಡು ಮತ್ತು ಒಂದು ವಾಹನ ಚಾಲಕ ಹುದ್ದೆ ಹೊರಗುತ್ತಿಗೆ ಆಧಾರದಲ್ಲಿ ಭರ್ತಿ ಮಾಡಲಾಗುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಆರ್ಥಿಕ ಇಲಾಖೆ ಅಭಿಪ್ರಾಯದಂತೆ ಸಚಿವಾಲಯದ ವೃಂದ ಮತ್ತು ನೇಮಕ ನಿಯಮಗಳಲ್ಲಿ ಸೂಕ್ತ ತಿದ್ದುಪಡಿ ಮಾಡುವ ಬಗ್ಗೆ ಸೂಕ್ತ ಕ್ರಮವಹಿಸಬೇಕು ಎಂದು ಸಿಬ್ಬಂದಿ ಮತ್ತು ಆಡಳಿತ ಇಲಾಖೆ ಸೇವಾ ನಿಯಮ ವಿಭಾಗಕ್ಕೆ ಸೂಚಿಸಲಾಗಿದೆ.

ಇದನ್ನೂ ಓದಿ: ಪಿಎಸ್​ಐ ಪರೀಕ್ಷೆಯಲ್ಲಿ ಅಕ್ರಮ.. ಮರು ಪರೀಕ್ಷೆಗೆ ದಿನಾಂಕ ನಿಗದಿಪಡಿಸಿದ ಕೆಇಎ

ಮುಂದಿನ ಆರು ತಿಂಗಳಲ್ಲಿ ವಿವಿಧ ಹುದ್ದೆಗಳ ಭರ್ತಿ:ಪಿಎಸ್​ಐ ಸೇರಿ ವಿವಿಧ ಹುದ್ದೆಗಳಿಗೆ ಮುಂದಿನ ಆರು ತಿಂಗಳಲ್ಲಿ ನೇಮಕಾತಿ ಮಾಡಿಕೊಳ್ಳಲಾವುದು ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ವಿಧಾನಸೌಧದಲ್ಲಿ ಬುಧವಾರ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದರು. 1547 ಪೊಲೀಸ್ ಸಬ್​ಇನ್ಸ್​ಪೆಕ್ಟರ್, 3000 ಕಾನ್ಸ್​ಟೇಬಲ್​ಗಳು ಸೇರಿ 4547 ಮಂದಿಯನ್ನು ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು. ಇನ್ನು ಹೈಕೋರ್ಟ್​ ಆದೇಶದ ಹಿನ್ನೆಲೆಯಲ್ಲಿ 545 ಮಂದಿ ಪೊಲೀಸ್ ಸಬ್​ಇನ್ಸ್​ಪೆಕ್ಟರ್​ಗಳನ್ನು ಡಿಸೆಂಬರ್ ಅಂತ್ಯದೊಳಗಾಗಿ ನೇಮಕಾತಿಗೆ ಮಾಡಲಾಗುವುದು. ನಂತರ 402 ಪೊಲೀಸ್ ಸಬ್​ಇನ್ಸ್​​ಪೆಕ್ಟರ್​ಗಳ ಹುದ್ದೆ ಭರ್ತಿಗೆ ಚಾಲನೆ ನೀಡಲಾಗುವುದು ಎಂದು ಹೇಳಿದ್ದರು.

Last Updated : Nov 23, 2023, 12:55 PM IST

ABOUT THE AUTHOR

...view details