ETV Bharat / state

ಪಿಎಸ್​ಐ ಪರೀಕ್ಷೆಯಲ್ಲಿ ಅಕ್ರಮ.. ಮರು ಪರೀಕ್ಷೆಗೆ ದಿನಾಂಕ ನಿಗದಿಪಡಿಸಿದ ಕೆಇಎ

author img

By ETV Bharat Karnataka Team

Published : Nov 22, 2023, 8:41 PM IST

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಪಿಎಸ್​ಐ ಮರು ಪರೀಕ್ಷೆಗೆ ದಿನಾಂಕ ನಿಗದಿಪಡಿಸಿದೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರ
ಕರ್ನಾಟಕ ಪರೀಕ್ಷಾ ಪ್ರಾಧಿಕಾರ

ಬೆಂಗಳೂರು : ಅಕ್ರಮ ನಡೆದಿದೆ ಎಂಬ ಆರೋಪದಿಂದ ರದ್ದಾಗಿದ್ದ ಪೊಲೀಸ್​ ಸಬ್​​ಇನ್​ಸ್ಪೆಕ್ಟರ್​(ಪಿಎಸ್​ಐ) ಮರು ಪರೀಕ್ಷೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಡಿಸೆಂಬರ್​ 23ರಿಂದ ನಡೆಸಲು ನಿರ್ಧರಿಸಿದೆ. ಹೈಕೋರ್ಟ್ ಆದೇಶದ ಹಿನ್ನೆಲೆ ಪಿಎಸ್ಐ‌ ಮರು ಪರೀಕ್ಷೆ ನಡೆಸುತ್ತಿದ್ದು, ಈ ಹಿಂದಿನ ಪರೀಕ್ಷೆಗೆ ಅರ್ಹತೆ ಪಡೆದವರು ಈ ಮರು‌ ಪರೀಕ್ಷೆಗೂ ಅರ್ಹತೆ ಪಡೆಯುತ್ತಾರೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್. ರಮ್ಯಾ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇದೇ ಡಿಸೆಂಬರ್ 23 ರಂದು ಮರು ಪರೀಕ್ಷೆ ನಡೆಯಲಿದ್ದು, ಬೆಂಗಳೂರಿನಲ್ಲಿ ಮಾತ್ರ ಪರೀಕ್ಷಾ ಕೇಂದ್ರಗಳು ಇರಲಿವೆ ಎಂದು ಅವರು ವಿವರಿಸಿದ್ದಾರೆ.

ಪಿಎಸ್‌ಐ ಹುದ್ದೆಗಳ ನೇಮಕಾತಿಗೆ ರಾಜ್ಯ ಸರ್ಕಾರ ಸ್ವತಂತ್ರ ಸಂಸ್ಥೆಯಿಂದ ಹೊಸದಾಗಿ ಪರೀಕ್ಷೆ ನಡೆಸಬಹುದು ಎಂದು ಹೈಕೋರ್ಟ್ ನವೆಂಬರ್ 10 ರಂದು ನೀಡಿದ್ದ ತೀರ್ಪಿನ ಅನ್ವಯ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. 545 ಹುದ್ದೆಗಳ ನೇಮಕಾತಿಗೆ ಈ ಮೊದಲು 2021ರ ಜನವರಿ 21ರಂದು ಸರ್ಕಾರ ಅಧಿಸೂಚನೆ ಹೊರಡಿಸಿತ್ತು. ಅರ್ಜಿ ಸಲ್ಲಿಸಿದ್ದ 1.42,636 ಅಭ್ಯರ್ಥಿಗಳಲ್ಲಿ ದೈಹಿಕ ಸಾಮರ್ಥ್ಯ ಪರೀಕ್ಷೆಯಲ್ಲಿ ಆಯ್ಕೆಯಾಗಿದ್ದ 54,104 ಅಭ್ಯರ್ಥಿಗಳಿಗೆ 2021 ಆ.3ರಂದು 92 ಕೇಂದ್ರಗಳಲ್ಲಿ ಲಿಖಿತ ಪರೀಕ್ಷೆ ನಡೆಸಲಾಗಿತ್ತು. 2022ರ ಜ. 19ರಂದು ತಾತ್ಕಾಲಿಕ ಪಟ್ಟಿಯನ್ನು ಪ್ರಕಟಿಸಲಾಗಿತ್ತು. ಲಿಖಿತ ಪರೀಕ್ಷೆಯಲ್ಲಿ ಅಕ್ರಮ ಕಂಡುಬಂದ ಹಿನ್ನೆಲೆಯಲ್ಲಿ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿತ್ತು. ಸಿಐಡಿ ನೀಡಿದ್ದ ಮಧ್ಯಂತರ ವರದಿ ಆಧರಿಸಿ ಸರ್ಕಾರವು 2021 ಅ.3ರಂದು ನಡೆಸಿದ್ದ ಲಿಖಿತ ಪರೀಕ್ಷೆಯನ್ನು ರದ್ದುಪಡಿಸಿ, ಹೊಸತಾಗಿ ಪರೀಕ್ಷೆ ನಡೆಸಲು 2023ರ ಏಪ್ರಿಲ್ 29 ರಂದು ಆದೇಶಿಸಿತ್ತು.

ಇದನ್ನು ಪ್ರಶ್ನಿಸಿ ಹಲವು ಅಭ್ಯರ್ಥಿಗಳು ಕೆಎಟಿಗೆ ಅರ್ಜಿ ಸಲ್ಲಿಸಿದ್ದರು. ಅಭ್ಯರ್ಥಿಗಳ ಅರ್ಜಿಯನ್ನು ಕೆಎಟಿ 2022ರ ಜುಲೈ 19 ಮತ್ತು ಡಿ. 14ರಂದು ವಜಾಗೊಳಿಸಿತ್ತು. ಕೆಎಟಿ ಆದೇಶದ ವಿರುದ್ಧ ಅಭ್ಯರ್ಥಿಗಳು ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಆ ಅರ್ಜಿಗಳನ್ನು ವಜಾಗೊಳಿಸಿದ ಹೈಕೋರ್ಟ್, ಲಿಖಿತ ಪರೀಕ್ಷೆಯನ್ನು ರದ್ದುಪಡಿಸಿ ಹೊಸದಾಗಿ ಪರೀಕ್ಷೆ ನಡೆಸಲು ಸರ್ಕಾರದ ಆದೇಶವನ್ನು ಎತ್ತಿ ಹಿಡಿದಿತ್ತು. ಜತೆಗೆ, ಎಲ್ಲ ಅಭ್ಯರ್ಥಿಗಳಿಗೆ ಉಚಿತವಾಗಿ, ಪ್ರಾಮಾಣಿಕವಾಗಿ ಪರೀಕ್ಷೆ ನಡೆಸುವ ಸಂಬಂಧ ಭರವಸೆ ನೀಡಬೇಕು ಎಂದು ಹೈಕೋರ್ಟ್ ನಿರ್ದೇಶನ ನೀಡಿತ್ತು.

ಹಲವು ಅಭ್ಯರ್ಥಿಗಳು ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್​ಗೆ ಮೇಲ್ಮನವಿ ಅರ್ಜಿ ಸಲ್ಲಿಸುವುದಾಗಿ ತಿಳಿಸಿದ್ದರು. ಆದರೆ, ಈ ನಡುವೆ ಪರೀಕ್ಷೆ ನಡೆಸಲು ಸರ್ಕಾರ ನಿರ್ಧರಿಸಿದೆ.

ಇದನ್ನೂ ಓದಿ: ಪಿಎಸ್ಐ ಪರೀಕ್ಷಾ ಅಕ್ರಮ: ಮತ್ತೋರ್ವ ರ‍್ಯಾಂಕ್ ಅಭ್ಯರ್ಥಿ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.