ಕರ್ನಾಟಕ

karnataka

ಮುಂದಿನ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುತ್ತಾ ಜೆಡಿಎಸ್?:​ ಯಾರಿಗಿಲ್ಲ ಟಿಕೆಟ್​?

By

Published : Jan 14, 2022, 4:49 PM IST

ಮುಂದಿನ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುತ್ತಾ ಜೆಡಿಎಸ್?

ಮುಂದಿನ ಚುನಾವಣೆಗೆ ಜೆಡಿಎಸ್​ ಎಲ್ಲಾ ರೀತಿಯಲ್ಲೂ ಸಿದ್ಧವಾಗಿದೆ. ಮೊದಲ ಪಟ್ಟಿ ಬಿಡುಗಡೆ ಮಾಡಿದ ನಂತರ ಸಂಭಾವ್ಯ ಅಭ್ಯರ್ಥಿಗಳಿಗೆ ತರಬೇತಿ ನಡೆಸುವ ಆಲೋಚನೆ ವರಿಷ್ಠರಲ್ಲಿ ಇದೆ. ಆದರೆ, ಕೋವಿಡ್ ಹೆಚ್ಚಳದಿಂದ ಸಭೆ ಸಮಾರಂಭ ನಡೆಸುವುದಕ್ಕೆ ನಿರ್ಬಂಧ ಇರುವ ಕಾರಣ ಮತ್ತು ಅಭ್ಯರ್ಥಿಗಳ ಆಯ್ಕೆ ಮಾಡುವ ಕಸರತ್ತು ಅಂತಿಮ ಹಂತದಲ್ಲಿರುವುದರಿಂದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯನ್ನು ಸ್ವಲ್ಪ ದಿನಗಳ ಕಾಲ ಮುಂದಕ್ಕೆ ಹಾಕಲು ವರಿಷ್ಠರು ಚಿಂತನೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ..

ಬೆಂಗಳೂರು: 2023ಕ್ಕೆ 123 ಕ್ಷೇತ್ರಗಳಲ್ಲಿ ಜಾತ್ಯಾತೀತ ಜನತಾದಳ ಬಾವುಟ ಹಾರಬೇಕು. ಯಾರ ಹಂಗೂ ಇಲ್ಲದ ಪೂರ್ಣ ಜಾತ್ಯಾತೀತ ಜನತಾ ದಳ ಪಟ್ಟಕ್ಕೇರಬೇಕು. ಇದು ಜೆಡಿಎಸ್‍ ಶಾಸಕಾಂಗ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಕನಸು. ಇದು ಕೇವಲ ಕನಸಷ್ಟೇ ಅಲ್ಲ, ಕರ್ನಾಟಕವನ್ನು ಸಮಗ್ರವಾಗಿ ಸಮೃದ್ಧಗೊಳಿಸುವ ಮಹಾ ಸಂಕಲ್ಪ ಕೂಡ ಹೌದು.

2023ರ ಸಾರ್ವತ್ರಿಕ ಚುನಾವಣೆಗೆ ಒಂದೂವರೆ ವರ್ಷ ಬಾಕಿ ಇರುವಾಗಲೇ ಜೆಡಿಎಸ್ ಪಕ್ಷ ಚುನಾವಣಾ ತಯಾರಿ ಮಾಡಿಕೊಳ್ಳುತ್ತಿದೆ. ಮುಂದಿನ ಚುನಾವಣೆಯಲ್ಲಿ 123 ಕ್ಷೇತ್ರಗಳನ್ನು ಗೆದ್ದು ರಾಜ್ಯದಲ್ಲಿ ಅಧಿಕಾರ ಹಿಡಿಯಲು ಈಗಾಗಲೇ ರೂಪುರೇಷೆ ಸಿದ್ಧಪಡಿಸಿರುವ ಜೆಡಿಎಸ್‍ ವರಿಷ್ಠರು, ಸಂಕ್ರಾಂತಿ ಹಬ್ಬಕ್ಕೆ 110 ಕ್ಷೇತ್ರಗಳ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ಕುಮಾರಸ್ವಾಮಿ ಅವರು ಈ ಹಿಂದೆ ಹೇಳಿದ್ದರು. ಆದರೆ, ಮೊದಲ ಪಟ್ಟಿ ಬಿಡುಗಡೆ ಮಾಡುವುದು ವಿಳಂಬವಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಮೊದಲ ಪಟ್ಟಿ ಬಿಡುಗಡೆ ಮಾಡಿದ ನಂತರ ಸಂಭಾವ್ಯ ಅಭ್ಯರ್ಥಿಗಳಿಗೆ ತರಬೇತಿ ನಡೆಸುವ ಆಲೋಚನೆ ವರಿಷ್ಠರಲ್ಲಿದೆ. ಆದರೆ, ಕೋವಿಡ್ ಹೆಚ್ಚಳದಿಂದ ಸಭೆ, ಸಮಾರಂಭ ನಡೆಸುವುದಕ್ಕೆ ನಿರ್ಬಂಧವಿರುವ ಕಾರಣ ಮತ್ತು ಅಭ್ಯರ್ಥಿಗಳ ಆಯ್ಕೆ ಮಾಡುವ ಕಸರತ್ತು ಅಂತಿಮ ಹಂತದಲ್ಲಿರುವುದರಿಂದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಸ್ವಲ್ಪ ದಿನಗಳ ಕಾಲ ಮುಂದಕ್ಕೆ ಹಾಕಲು ವರಿಷ್ಠರು ಚಿಂತಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಈಗಾಗಲೇ ಮಿಷನ್ 123 ಹೆಸರಿನಲ್ಲಿ ಚುನಾವಣಾ ತಂತ್ರಗಾರಿಕೆ ಯೋಜನೆಯ ನೀಲಿ ನಕ್ಷೆಯನ್ನು ಸಿದ್ಧಪಡಿಸಲಾಗಿದೆ. ರಾಜ್ಯದ ಜನರ ಸಮಸ್ಯೆಗಳು, ಅದಕ್ಕೆ ಇರುವ ಪರಿಹಾರ, ದೇವೇಗೌಡರು ಸಿಎಂ ಹಾಗೂ ಪ್ರಧಾನಿಯಾಗಿದ್ದ ವೇಳೆ ಜಾರಿಗೆ ತಂದಿದ್ದ ಯೋಜನೆಗಳು.

ಜೆಡಿಎಸ್ ಮೈತ್ರಿ ಸರ್ಕಾರಗಳ ವೇಳೆ ಜಾರಿಗೆ ತಂದ ಯೋಜನೆಗಳು, ಅದರ ಜೊತೆಗೆ ಕೇಂದ್ರ ಸರ್ಕಾರಗಳಿಂದ ರಾಜ್ಯಕ್ಕಾಗುತ್ತಿರುವ ಅನ್ಯಾಯಗಳು, ಎರಡೂ ರಾಷ್ಟ್ರೀಯ ಪಕ್ಷಗಳಿಂದ ಪ್ರಾದೇಶಿಕ ಪಕ್ಷದ ಅಸ್ಮಿತೆ, ಅಗತ್ಯತೆ ಮತ್ತು ಅನಿವಾರ್ಯತೆಗಳ ಕುರಿತು ಸಂಭಾವ್ಯ ಅಭ್ಯರ್ಥಿಗಳಿಗೆ ಮನವರಿಕೆ ಮಾಡಿಕೊಡುವುದರ ಜೊತೆಗೆ ಕ್ಷೇತ್ರಗಳಲ್ಲಿ ಪ್ರವಾಸ ಮಾಡಿ ಪ್ರಚಾರ ಮಾಡುವುದು ಮತ್ತು ಬಿಜೆಪಿ ಸರ್ಕಾರದ ವೈಫಲ್ಯಗಳನ್ನು ಜನತೆಯ ಮುಂದಿಟ್ಟು ಮತದಾರರನ್ನು ಸೆಳೆಯುವ ಕುರಿತು ಜೆಡಿಎಸ್ ಪೂರ್ವ ತಯಾರಿ ಮಾಡಿಕೊಂಡಿದೆ.

ಇದನ್ನೂ ಓದಿ:ರಾಮನಗರದಿಂದಲೇ ಇನ್ನು ಹತ್ತು ಬಾರಿ ಪಾದಯಾತ್ರೆ ಬರಲಿ.. ಅಂತಾರಾಜ್ಯ ನದಿ ವಿವಾದ ಹೋರಾಟದಿಂದ ಗೆಲ್ಲಲಾಗಲ್ಲ.. HDD

ಬಿಡದಿಯ ತೋಟದ ಮನೆಯಲ್ಲಿ ಕೆಲ ತಿಂಗಳ ಹಿಂದೆ ನಡೆದ 'ಜನತಾ ಪರ್ವ 1.0', 'ಮಿಷನ್ -123' ಕಾರ್ಯಾಗಾರದಲ್ಲಿ ಪ್ರಚಲಿತ ರಾಜಕೀಯ ಸನ್ನಿವೇಶದ ಕುರಿತು ಮಾತನಾಡುತ್ತಲೇ ಮುಂದಿನ ಚುನಾವಣೆಯಲ್ಲಿ ಕಣಕ್ಕಿಳಿಯಲಿರುವ ಪಕ್ಷದ ಅಭ್ಯರ್ಥಿಗಳಿಗೆ ಗುರಿ ನಿಗದಿಪಡಿಸಿ, ಗೆಲುವಿನ ದಾರಿಯನ್ನೂ ತೋರಿಸಿರುವ ಹೆಚ್.ಡಿ. ಕುಮಾರಸ್ವಾಮಿ ಅವರು, ಗೆಲುವು ಸುಲಭವಲ್ಲ. ಹಾಗಂತಾ, ಸುಮ್ಮನಿರುವುದು ಕೂಡ ಸಾಧ್ಯವಿಲ್ಲ ಎನ್ನುತ್ತಲೇ ನಾಯಕರಿಗೆ ದಿಕ್ಸೂಚಿ ನಿಗದಿ ಮಾಡಿ, ಕೆಲ ಎಚ್ಚರಿಕೆಯ ಮಾತುಗಳು ಹಾಗೂ ವಾಸ್ತವ ಸಂಗತಿಗಳನ್ನು ಮನದಟ್ಟು ಮಾಡಿಕೊಟ್ಟಿದ್ದಾರೆ.

ಮೂಲಗಳ ಪ್ರಕಾರ, ಜೆಡಿಎಸ್​​ನ ಹಾಲಿ ಮತ್ತು ಮಾಜಿ ಶಾಸಕರ ಪೈಕಿ 10 ರಿಂದ 15 ಮಂದಿಗೆ ಟಿಕೆಟ್ ಕೈತಪ್ಪುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಹಾಲಿ ಶಾಸಕರ ಕ್ಷೇತ್ರಗಳಿಗೂ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗಿದೆಯೇ? ಅಥವಾ ಇಲ್ಲವೇ ಯಾರಿಗೆಲ್ಲಾ ಟಿಕೆಟ್ ಕೈ ತಪ್ಪಲಿದೆ ಎಂಬುದು ಮೊದಲ ಪಟ್ಟಿ ಬಿಡುಗಡೆಗೊಂಡ ನಂತರವಷ್ಟೇ ಸ್ಪಷ್ಟವಾಗಲಿದೆ.

ಮೈಸೂರು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ, ತುಮಕೂರು ಗುಬ್ಬಿ ಶಾಸಕ ಶ್ರೀನಿವಾಸ್ ( ವಾಸು), ಕೋಲಾರ ಕ್ಷೇತ್ರದ ಶಾಸಕ ಶ್ರೀನಿವಾಸ್ ಗೌಡ ಸೇರಿದಂತೆ ಹಲವರು ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ಕಡೆ ಒಲವು ತೋರಿದ್ದಾರೆ. ಈಗಾಗಲೇ ಮಾಜಿ ಶಾಸಕರಾದ ಕೋನರೆಡ್ಡಿ, ಸಿ.ಆರ್. ಮನೋಹರ್ ಕಾಂಗ್ರೆಸ್‌ಗೆ ಸೇರಿದ್ದಾರೆ.

ಪರಿಷತ್‌ನ ಮಾಜಿ ಸದಸ್ಯರಾದ ಸಂದೇಶ್ ನಾಗರಾಜ್, ಕಾಂತರಾಜ್ ಕಾಂಗ್ರೆಸ್ ಸೇರುವ ಸಿದ್ದತೆಯಲ್ಲಿದ್ದಾರೆ. ಇನ್ನೂ ಕೆಲವು ಜೆಡಿಎಸ್‍ ಮಾಜಿ ಶಾಸಕರು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜೊತೆ ಹಲವು ಸುತ್ತಿನ ಮಾತುಕತೆ ನಡೆಸಿದ್ದಾರೆ. ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸಿರುವ ಜೆಡಿಎಸ್‍ ವರಿಷ್ಠರು ತಮ್ಮದೇ ಆದ ಕಾರ್ಯತಂತ್ರ ಹೆಣೆಯುತ್ತಿದ್ದಾರೆ.

TAGGED:

ABOUT THE AUTHOR

...view details