ಕರ್ನಾಟಕ

karnataka

ಒಂದು ಸೀಟಿಗಾಗಿ ಅಲೆಮಾರಿಯಂತೆ ಸಿದ್ದರಾಮಯ್ಯ ಓಡಾಟ: ಕಾರಜೋಳ ವ್ಯಂಗ್ಯ

By

Published : Jan 11, 2023, 12:24 PM IST

ಕೋಲಾರದಲ್ಲೂ ಸಿದ್ದರಾಮಯ್ಯ ಸೋಲುತ್ತಾರೆ - ಕಾಂಗ್ರೆಸ್​ನವರದ್ದು ವ್ಯರ್ಥ ಕಸರತ್ತು- ಚುನಾವಣೆಯಲ್ಲಿ ಕಾಂಗ್ರೆಸ್​ 40 ಸ್ಥಾನವನ್ನು ಗೆಲ್ಲಲ್ಲ- ಕಾರಜೋಳ ಭವಿಷ್ಯ

ಒಂದು ಸೀಟಿಗಾಗಿ ಅಲೆಮಾರಿಯಂತೆ ಸಿದ್ದರಾಮಯ್ಯ ಓಡಾಟ: ಕಾರಜೋಳ ವ್ಯಂಗ್ಯ
irrigation-minister-govind-karjol-mocks-opposition-leader-siddaramaiah

ಬೆಂಗಳೂರು:ಐದು ವರ್ಷ ರಾಜ್ಯವನ್ನು ಆಳಿದ ಹಿರಿಯ ರಾಜಕಾರಣಿ,ಪ್ರತಿಪಕ್ಷ ನಾಯಕರಾಗಿರುವ ಸಿದ್ದರಾಮಯ್ಯ ಒಂದು ಸೀಟು ಹುಡುಕಲು ಅಲೆಮಾರಿಯ ರೀತಿ ಓಡಾಡುತ್ತಿದ್ದಾರೆ. ಈಗ ಅವರು, ಕೋಲಾರದಲ್ಲೂ ಸೋತು ಮನೆಗೆ ಹೋಗುತ್ತಾರೆ. 2024ರ ಚುನಾವಣೆ ನಂತರ ದೆಹಲಿಯ ಕಾಂಗ್ರೆಸ್ ಕಚೇರಿಯಲ್ಲಿ ದೀಪ ಹಚ್ಚೋಕು ಯಾರೂ ಇರಲ್ಲ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ವ್ಯಂಗ್ಯವಾಡಿದ್ದಾರೆ.

ಸಿಎಂ ಅಧಿಕೃತ ನಿವಾಸದಲ್ಲಿ ಸ್ಮಶಾನ ಕಾರ್ಮಿಕರ ಜೊತೆ ಉಪಹಾರ ಕೂಟದಲ್ಲಿ ಪಾಲ್ಗೊಂಡ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚಾಮುಂಡೇಶ್ವರಿಯಿಂದ ವರುಣಾಗೆ ಹೋಗಿ ಅಲ್ಲಿಂದ ಮತ್ತೆ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಬಂದು ಅಲ್ಲಿ ಸೋಲಿನ ಭಯ ಇದ್ದ ಕಾರಣಕ್ಕೆ ಬಾದಾಮಿಯನ್ನು ಎರಡನೇ ಕ್ಷೇತ್ರವಾಗಿ ಆಯ್ಕೆ ಮಾಡಿಕೊಂಡಿದ್ದರು. ಚಾಮುಂಡೇಶ್ವರಿ ಜನ ಕೈಬಿಟ್ಟರೂ ಬಾದಾಮಿ ಜನ ಸಿದ್ದರಾಮಯ್ಯ ಅವರ ಕೈಹಿಡಿದಿದ್ದರು. ಆದರೂ ಈ ಬಾರಿ ಬಾದಾಮಿ ಜನರ ಮೇಲೆ ಸಿದ್ದರಾಮಯ್ಯಗೆ ವಿಶ್ವಾಸವಿಲ್ಲ, ಸೋಲಿನ ಭಯ ಕಾಡುತ್ತಿದೆ. ಹಾಗಾಗಿ ಅವರು ಹುಟ್ಟಿ ಬೆಳೆದ ಚಾಮುಂಡೇಶ್ವರಿ, ಕೈಹಿಡಿದಿದ್ದ ಬಾದಾಮಿ ಬಿಟ್ಟು ಈ ಬಾರಿ ಕೋಲಾರ ಆಯ್ಕೆ ಮಾಡಿಕೊಂಡಿದ್ದಾರೆ. ಆದರೆ ಅವರಿಗೆ ಕೋಲಾರನೂ ಸೇಫ್ ಅಲ್ಲ. ಅಲ್ಲಿಯೂ ಸೋತು ಮನೆಗೆ ಹೋಗುತ್ತಾರೆ ಎಂದು ಭವಿಷ್ಯ ನುಡಿದರು.

40ಕ್ಕಿಂತ ಹೆಚ್ಚು ಸ್ಥಾನ ಗೆಲ್ಲಲ್ಲ: ಬೆಳಗಾವಿಯಿಂದ ಕಾಂಗ್ರೆಸ್ ನಾಯಕರು ಬಸ್ ಯಾತ್ರೆ ಆರಂಭಿಸುತ್ತಿದ್ದಾರೆ. ಕಾಂಗ್ರೆಸ್​​ನವರು ಸುಮ್ಮನೇ ವ್ಯರ್ಥ ಕಸರತ್ತು ಮಾಡುತ್ತಿದ್ದಾರೆ. ರಾಹುಲ್ ಗಾಂಧಿಯವರು ಸ್ವಂತ ಜಿಲ್ಲೆಯಲ್ಲೇ ಸೋತು ಓಡಿ ಬಂದಿದ್ದಾರೆ. ಮುಖ್ಯಮಂತ್ರಿ ಆಗಿದ್ದ ಸಿದ್ದರಾಮಯ್ಯ ಮೈಸೂರಿನಲ್ಲಿ ಹುಟ್ಟಿ ಬೆಳೆದವರು ಅಲ್ಲಿಂದ ಬಾದಾಮಿಗೆ ಬಂದು ಕೊನೆಗೆ ಅಲ್ಲಿ ಸೋಲುತ್ತೇನೆ ಎಂದು ಅಲ್ಲಿಂದ ಪಲಾಯನ ಮಾಡಿದ್ದಾರೆ. ಅವರಿಗೆ ರಕ್ಷಣೆ ಇಲ್ಲ, ಇನ್ನೂ ಅವರ ಕಾರ್ಯಕರ್ತರಿಗೆ ಎಲ್ಲಿದೆ ರಕ್ಷಣೆ..?. ಅವರು ಇವತ್ತೇ ಬರೆದಿಟ್ಟುಕೊಳ್ಳಲಿ, ಅವರು 40 ಕ್ಕಿಂತ ಹೆಚ್ಚು ಸ್ಥಾನ ಗೆಲ್ಲೋದಿಲ್ಲ ಎಂದು ಅಭಿಪ್ರಾಯಪಟ್ಟರು.

ಗುಜರಾತ್​​ಗಿಂತಲೂ ಕರ್ನಾಟಕದಲ್ಲಿ ಕಾಂಗ್ರೆಸ್ ಸ್ಥಾನ ಕಡಿಮೆ ಆಗುತ್ತದೆ. ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಯ್ಯನನ್ನು ಇಟ್ಟುಕೊಂಡು ಭ್ರಷ್ಟಾಚಾರ ಆರೋಪ ಮಾಡಿಸುತ್ತಿದ್ದಾರೆ. ಆದರೆ, ಅದೆಲ್ಲಾ ನಿರಾಧಾರ ಆರೋಪ, ಜನತೆಗೆ ಎಲ್ಲವೂ ಗೊತ್ತಿದೆ. ನಮ್ಮ ಮೇಲೆ ಆರೋಪ ಮಾಡುವ ಕಾಂಗ್ರೆಸ್ ನಾಯಕರು ಎಲ್ಲರೂ ಬೇಲ್ ಮೇಲೆ ಓಡಾಡುತ್ತಿದ್ದಾರೆ ಎಂದು ಕಾರಜೋಳ ತಿವಿದರು.

ಅಧಿಸೂಚನೆ ಹೊರಡಿಸುವ ವಿಶ್ವಾಸ: ಸುಪ್ರೀಂಕೋರ್ಟ್‌ನಲ್ಲಿ ಕೃಷ್ಣಾ ಅಧಿಸೂಚನೆ ವಿಚಾರಣೆ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಸಚಿವ ಗೋವಿಂದ ಕಾರಜೋಳ, 2013 ರಿಂದ ಇಲ್ಲಿಯವರೆಗೂ ಗೆಜೆಟ್ ನೋಟೀಫಿಕೆಷನ್ ನಿಲ್ಲಿಸಿದ್ದರು. ನಿನ್ನೆ ನಮ್ಮ ಪರ ವಕೀಲರು ವಾದ ಮಂಡನೆ ಮಾಡಿದ್ದಾರೆ. ಕಾವೇರಿ ವಿಚಾರ ಬಂದಾಗ ಗೆಜೆಟ್ ನೋಟಿಫಿಕೇಷನ್ ಮಾಡಿರುವ ಉದಾಹರಣೆ ಇದೆ. ನಾವು 15 ಸಾವಿರ ಕೋಟಿ ಹಣವನ್ನು ಮೂಲಸೌಕರ್ಯಕ್ಕೆ ವೆಚ್ಚ ಮಾಡಿದ್ದೇವೆ. ಅದು ಉಪಯೋಗ ಆಗಬೇಕು ಎಂದು ವಕೀಲರು ವಾದ ಮಂಡಿಸಿದ್ದಾರೆ. ಆಲಮಟ್ಟಿ ಜಲಾಶಯದಲ್ಲಿ ನೀರು ಹಿಡಿದಿಡುವ ಸಾಮರ್ಥ್ಯವಿದೆ ಎಂದು ವಾದ ಮಾಡಿದ್ದಾರೆ. 5.9 ಲಕ್ಷ ಹೆಕ್ಟೇರ್ ನೀರಾವರಿ ಮಾಡುವುದಕ್ಕೆ ಅವಕಾಶ ಮಾಡಿಕೊಡಬೇಕು, ಮಹಾರಾಷ್ಟ್ರ ಸರ್ಕಾರದ ಜೊತೆಗೆ ಜಂಟಿಯಾಗಿ ನಾವು ಮಾಡಿದ್ದೇವೆ. ಸುಪ್ರೀಂಕೋರ್ಟ್ ಅಧಿಸೂಚನೆ ಹೊರಡಿಸಲಿದೆ ಎಂಬ ವಿಶ್ವಾಸವಿದೆ ಎಂದರು.

ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಳ ಕಾಯ್ದೆಯನ್ನು ಸಂವಿಧಾನದ 9ನೇ ಶೆಡ್ಯೂಲ್ ಸೇರಿಸಲು ಗಡುವು ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವರು, ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹೆಚ್ಚಳವಾಗಬೇಕು ಎಂದು ಹೋರಾಟ ಮಾಡಿದ್ದರು. ಕಾಂಗ್ರೆಸ್ ಮೀಸಲಾತಿ ನೀಡಲಿಲ್ಲ. ಮೂಗಿಗೆ ತುಪ್ಪ ಹಚ್ಚುವ ಕೆಲಸ ಮಾಡಿತ್ತು, ನಮ್ಮ ಸರ್ಕಾರ ಆ ರೀತಿ ಮಾಡಲ್ಲ, ಕಾನೂನು ಸಚಿವರ ನೇತೃತ್ವದಲ್ಲಿ ಉಪಸಮಿತಿ ರಚಿಸಿ ಸಭೆ ನಡೆಸಿದ್ದೇವೆ. ಎಲ್ಲವೂ ಆಗಲಿದೆ ಕಾದು ನೋಡಿ ಎಂದು ಹೇಳಿದರು.

ಇದನ್ನೂ ಓದಿ: ನಾಳೆ ಹುಬ್ಬಳ್ಳಿಗೆ ಪ್ರಧಾನಿ ಆಗಮನ ಹಿನ್ನೆಲೆ ಕೆಲವೆಡೆ ಸಂಚಾರ ನಿಷೇಧ, ಮಾರ್ಗ ಬದಲಾವಣೆ

ABOUT THE AUTHOR

...view details